IMG 20211103 WA0024

ಬಿಟ್ ಕಾಯಿನ್ ಹಗರಣ ಇಡಿಗೆ ವಹಿಸಲು ರಾಜ್ಯ ಸರ್ಕಾರ ಬರೆದಿರುವ ಪತ್ರ ಬಿಡುಗಡೆ ಮಾಡಲಿ

POLATICAL STATE

*ಬಿಟ್ ಕಾಯಿನ್ ಹಗರಣ ಇಡಿಗೆ ವಹಿಸಲು ರಾಜ್ಯ ಸರ್ಕಾರ ಬರೆದಿರುವ ಪತ್ರ ಬಿಡುಗಡೆ ಮಾಡಲಿ: ಡಿ.ಕೆ. ಶಿವಕುಮಾರ್ ಆಗ್ರಹ*

ಬೆಂಗಳೂರು:ಅಂತಾರಾಷ್ಟ್ರೀಯ ಮಟ್ಟದ ಬಿಟ್ ಕಾಯಿನ್ ಹಗರಣ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದ್ದು, ಪ್ರಕರಣದ ತನಿಖೆಗೆ ಇಡಿಗೆ ಬರೆದಿರುವ ಪತ್ರವನ್ನು ಬಹರಂಗಪಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಿವಕುಮಾರ್ ಅವರು, ‘ರಾಜ್ಯ ಸರ್ಕಾರ ಈ ಪ್ರಕರಣ ಕುರಿತು ಆರೋಪಪಟ್ಟಿ ಸಲ್ಲಿಸಿರುವುದಾಗಿ ಹೇಳಿದೆ. ಆರೋಪ ಪಟ್ಟಿ ಸಲ್ಲಿಸಿದ್ದರೆ, ಈ ಪ್ರಕರಣದ ತನಿಖೆಯನ್ನು ಇಡಿಗೆ ನೀಡುವ ಅಗತ್ಯ ಏನಿತ್ತು?’ ಎಂದು ಪ್ರಶ್ನಿಸಿದರು.

ಬಿಟ್ ಕಾಯಿನ್ ವಿಚಾರವಾಗಿ ಸರ್ಕಾರ ಗೊಂದಲದ ಹೇಳಿಕೆ ನೀಡುತ್ತಿದೆ. ವಿರೋಧ ಪಕ್ಷವಾಗಿ ನೀವು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಮಾಧ್ಯಮಗಳು ಪ್ರಸ್ತಾಪಿಸಿದಾಗ, ‘ಈ ಪ್ರಕರಣವನ್ನು ಇಡಿ ತನಿಖೆಗೆ ನೀಡಲಾಗಿದೆ ಎಂದು ಸಿಎಂ ಹೇಳಿಕೆ ಕೊಟ್ಟಿದ್ದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ರಾಜ್ಯ ಸರ್ಕಾರ ಕಳೆದ 15 ದಿನಗಳಲ್ಲಿ ಈ ಪ್ರಕರಣದ ತನಿಖೆ ಮಾಡುವಂತೆ ತನಿಖಾ ಸಂಸ್ಥೆಗೆ ಬರೆದಿರುವ ಪತ್ರವನ್ನು ಬಹಿರಂಗಪಡಿಸಲಿ. ಮುಖ್ಯಮಂತ್ರಿಗಳು ಹೇಳಿದ ಮಾತ್ರಕ್ಕೆ ನಂಬಲು ಸಾಧ್ಯವಿಲ್ಲ. ಅವರು ದಾಖಲೆ ಬಿಡುಗಡೆ ಮಾಡಲಿ. ಜತೆಗೆ ಈ ಪ್ರಕರಣದ ಬಗ್ಗೆ ಈ ಹಿಂದೆ ಯಾವ ತನಿಖಾ ಸಂಸ್ಥೆ ತನಿಖೆ ಮಾಡಿತ್ತು, ಯಾವ ಹಂತದಲ್ಲಿ ತನಿಖೆ ಇತ್ತು, ಯಾರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು, ಎಷ್ಟು ಜನರನ್ನು ಬಂಧಿಸಲಾಗಿದೆ, ತನಿಖೆ ಮಾಡಿದ ಅಧಿಕಾರಿಗಳು ಯಾರು? ಯಾವ ವರದಿ ನೀಡಲಾಗಿತ್ತು, ಆ ತನಿಖೆಯಲ್ಲಿ ಸಿಕ್ಕ ಮಾಹಿತಿ ಏನು? ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ದಾಖಲೆಗಳನ್ನು ಸಿಎಂ ಬಿಡುಗಡೆ ಮಾಡಲಿ ಎಂದು ಆಗ್ರಹಿಸುತ್ತೇನೆ.
ಈ ಬಿಟ್ ಕಾಯಿನ್ ಅಂದರೆ ಏನು, ಇದರ ಮಾಲೀಕರು ಯಾರು, ಯಾವ ಕಾಯ್ದೆ, ಸೆಕ್ಷನ್ ಅಡಿ ಪ್ರಕರಣವನ್ನು ತನಿಖಾ ಸಂಸ್ಥೆಗೆ ನೀಡಲಾಗಿದೆ? ಎಂಬ ಮಾಹಿತಿ ನೀಡಲಿ. ಈ ಪ್ರಕರಣದ ಬಗ್ಗೆ ಆರೋಪಪಟ್ಟಿ ಸಲ್ಲಿಸಿದ್ದೇವೆ ಎಂದು ಹೇಳುತ್ತಾರೆ. ಆರೋಪಪಟ್ಟಿ ಸಲ್ಲಿಸಿದ ಮೇಲೆ ಇಡಿಗೆ ಯಾಕೆ ಹೋಗಬೇಕು? ಹೀಗಾಗಿ ಈ ಬಗ್ಗೆ ಜನರಿಗೆ ಸ್ಪಷ್ಟ ಚಿತ್ರಣ ನೀಡಬೇಕು. ಯಾರು ಡ್ರಗ್ ನಲ್ಲಿ, ಬಿಟ್ ಕಾಯಿನ್ ನಲ್ಲಿ ಈಜಿದ್ದಾರೋ ಗೊತ್ತಿಲ್ಲ. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಈ ಪ್ರಕರಣ ಇರುವುದರಿಂದ ಈ ಕುರಿತ ಮಾಹಿತಿಯನ್ನು ಸರ್ಕಾರವೇ ನೀಡಬೇಕು. ವಿರೋಧ ಪಕ್ಷದ ಕೆಲಸ ತನಿಖೆ ಮಾಡಿ ಎಂದು ಆಗ್ರಹಿಸುವುದಾಗಿದೆ. ಮೊದಲು ಅವರು ತನಿಖೆಗೆ ಕೊಟ್ಟಿರುವ ವಿವರಗಳನ್ನು ಬಹಿರಂಗಪಡಿಸಲಿ, ಆ ಮೇಲೆ ವಿರೋಧ ಪಕ್ಷವಾಗಿ ಏನು ಮಾಡಬೇಕು ಎಂದು ನಮಗೆ ಗೊತ್ತಿದೆ’ ಎಂದು ಉತ್ತರಿಸಿದರು.

2018ರಲ್ಲಿ ಈ ಪ್ರಕರಣ ದಾಖಲಾಗಿದ್ದು, ಆಗ ಯಾರು ಮುಖ್ಯಮಂತ್ರಿಗಳಿದ್ದರು, ಆಗ ಶಿವಕುಮಾರ್ ಅವರು ಯಾವ ಸಚಿವರಾಗಿದ್ದರು ಎಂದು ಬಿಜೆಪಿ ನಾಯಕರು ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಅವರು ನನ್ನ ಹೆಸರು ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ನನ್ನ ಹೇಸರನ್ನೂ ಸೇರಿಸಿ ತನಿಖೆಗೆ ಆದೇಶಿಸಲಿ. ನಾನು ತಪ್ಪು ಮಾಡಿದ್ದರೆ ನನ್ನ ತನಿಖೆಯೂ ಆಗಬೇಕಲ್ಲವೇ? ನನ್ನ ಮೇಲೆ ಕೇಸ್ ದಾಖಲಿಸುವಾಗ ಆದಾಯ ಇಲಾಖೆ ಪತ್ರ ಪಡೆದು, ಜಾರಿ ನಿರ್ದೇಶನಾಲಯದ ಮಾಹಿತಿ ಪಡೆದು ನಂತರ ಸಿಬಿಐಗೆ ಸರ್ಕಾರ ಪ್ರಕರಣವನ್ನು ವಹಿಸಿತ್ತು. ಅದೇ ರೀತಿ ಈಗಲೂ ಇಡಿಗೆ ತನಿಖೆಗೆ ಆದೇಶಿಸಿರುವ ಪತ್ರ ಅಥವಾ ದಾಖಲೆ ನೀಡಲಿ’ ಎಂದರು.

ಕಾಂಗ್ರೆಸ್ ಕೇವಲ ಆರೋಪ ಮಾಡುತ್ತಿದ್ದು, ಯಾರ ಹೆಸರನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ ಯಾಕೆ? ಎಂದು ಕೇಳಿದಾಗ, ‘ನಾನು ಯಾವುದೇ ಆರೋಪ ಮಾಡುತ್ತಿಲ್ಲ. ಕೇವಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡಬೇಕಿರುವ ಮಾಹಿತಿ ಬಹಿರಂಗ ಪಡಿಸುವಂತೆ ಆಗ್ರಹಿಸುತ್ತಿದ್ದೇನೆ, ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಶಿವಕುಮಾರ್ ಅವರು ಹೇಳಿದ್ದಿಷ್ಟು:

‘ಕಾಂಗ್ರೆಸ್ ಮುಳುಗಿದ ಹಡಗು, ಇಬ್ಬಾಗ ಆಗಿದೆ ಎಂದು ವ್ಯಾಖ್ಯಾನ ಮಾಡಿದ್ದ ಸ್ನೇಹಿತರಿಗೆ ಹಾನಗಲ್, ಸಿಂದಗಿ ಹಾಗೂ ಅನೇಕ ರಾಜ್ಯಗಳ ಉಪ ಚುನಾವಣೆಯಲ್ಲಿ ಮತದಾರರ ತೀರ್ಪು ಉತ್ತರವಾಗಿದೆ.

ನಾವು ಸೋತಾಗ ಸೋಲು ಒಪ್ಪಿದ್ದೇವೆ. ಕಳೆದ ಸಂಸತ್ ಚುನಾವಣೆಯಲ್ಲಿ ಸೋತಾಗ ನಮ್ಮ ಸೋಲು ಒಪ್ಪಿಕೊಂಡಿದ್ದೇವೆ. ಆದರೆ ಈಗ ದೇಶದಾದ್ಯಂತ ನಡೆದಿರುವ ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಕ್ಕೂ ನಷ್ಟವಾಗಿದೆ. ದೇಶದ ಹಲವೆಡೆ ಕಾಂಗ್ರೆಸ್ ಗೆ ಜನ ಆಶೀರ್ವಾದ ಮಾಡಿದ್ದು, ಬಿಜೆಪಿ ಕೆಲವೆಡೆ ಸ್ಥಾನ ಉಳಿಸಿಕೊಂಡಿದ್ದರೂ ಮುಖಭಂಗ ಅನುಭವಿಸಿದೆ.

ಸಿಂದಗಿಯಲ್ಲಿ ನಾವು 3ನೇ ಸ್ಥಾನದಲ್ಲಿದ್ದೆವು. ಈಗ 30 ಸಾವಿರ ಅಂತರದಲ್ಲಿ ಸೋತರೂ ಮತಗಳ ಏರಿಕೆಯಿಂದ ನಾವು ಬೆಳವಣಿಗೆ ಕಂಡಿದ್ದೇವೆ. ಜೆಡಿಎಸ್ ಕ್ಷೇತ್ರ ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದೆವು, ವಿಫಲವಾಗಿದ್ದೇವೆ. ಬಿಜೆಪಿ ಅದನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕರು, ಸಂಸತ್ ಸದಸ್ಯರಿದ್ದು, ಮುಖ್ಯಮಂತ್ರಿಗಳ ಪಕ್ಕದ ಕ್ಷೇತ್ರ. ಸಿಎಂ ಈ ಕ್ಷೇತ್ರದ ಅಳಿಯಂದಿರು. ಇಡೀ ಸರ್ಕಾರ ಎರಡೂ ಕ್ಷೇತ್ರಗಳಲ್ಲಿ ಕೂತಿತ್ತು. ಚುನಾವಣೆ ಸಂದರ್ಭದಲ್ಲಿ ಯಾವೆಲ್ಲ ಪ್ರಯೋಗ ಮಾಡಬಹುದೋ ಎಲ್ಲವನ್ನು ಮಾಡಿದ್ದರು. ಆದರೂ ಆ ಕ್ಷೇತ್ರದ ಮತದಾರರು ದಿಟ್ಟ ತೀರ್ಮಾನ ತೆಗೆದುಕೊಂಡರು. ಅವರು ಅನುಭವಿಸಿದ ನೋವು, ಸಮಸ್ಯೆಯಿಂದ ಸರ್ಕಾರ ಎಷ್ಟೇ ಒತ್ತಡ, ಆಮೀಷ ಒಡ್ಡಿದ್ದರೂ ಕ್ಷೇತ್ರದ ಮತದಾರರು ಕಾಂಗ್ರೆಸ್ ಕೈ ಹಿಡಿದು ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದಾರೆ. ಕ್ಷೇತ್ರದ ಮತದಾರರು, ಕಾರ್ಯಕರ್ತರು, ಜಿಲ್ಲಾ ಮಟ್ಟದ ನಾಯಕರು, ಅಲ್ಲಿ ಕಾರ್ಯಕರ್ತರಂತೆ ಕೆಲಸ ಮಾಡಿದ ರಾಜ್ಯ ನಾಯಕರಿಗೆ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.

ಇದು ನನ್ನ ಗೆಲುವಲ್ಲ. ಮತದಾರರು ಹಾಗೂ ಕಾರ್ಯಕರ್ತರ ಗೆಲುವು. ಬಿಜೆಪಿ ಆಡಳಿತ ವಿರುದ್ಧ ಕೊಟ್ಟ ತೀರ್ಪು. ಯಾರು ಜನರ ಮಧ್ಯೆ ಇರುತ್ತಾರೋ, ಸ್ಪಂದಿಸುತ್ತಾರೋ, ಕಷ್ಟಕಾಲದಲ್ಲಿ ಭಾಗಿಯಾಗುವವರಿಗೆ ಮತದಾರ ಆಶೀರ್ವಾದ ನೀಡುತ್ತಾನೆ. ನಾನು ಚುನಾವಣಾ ಭಾಷಣ ಮಾಡುವಾಗ ನಾವು ಜನರನ್ನೇ ಪ್ರಸ್ತುತ ಪರಿಸ್ಥಿತಿ ಬಗ್ಗೆ ಕೇಳುತ್ತಿದ್ದೆವು. ಸರ್ಕಾರ ಘೋಷಿಸಿದ್ದು ನಿಮಗೆ ತಲುಪಿದೆಯಾ ಎಂದು ಕೇಳಿದೆವು. ಇದಕ್ಕೆ ಮತದಾನದ ದಿನ ಉತ್ತರ ನೀಡಬೇಕು ಎಂದು ಕೇಳಿದ್ದೆವು. ಅದರಂತೆ ಮತದಾರರು ತೀರ್ಪು ಕೊಟ್ಟಿದ್ದಾರೆ.

ಹಾನಗಲ್ ನಲ್ಲಿ ನಾಮಪತ್ರ ಸಲ್ಲಿಸುವಾಗ ಅಲ್ಲಿನ ಗ್ರಾಮದೇವತೆ ದೇವಾಲಯ ಹಾಗೂ ದರ್ಗಾಕ್ಕೆ ಹೋಗಿದ್ದೆ. ಆಗ ನನಗೆ ಸಮಾಧಾನ ಆಗಿರಲಿಲ್ಲ. ನಂತರ ಆ ದೇವಾಲಯಕ್ಕೆ ಹೋಗಿ ಹರಕೆ ಮಾಡಿಕೊಂಡು ನನ್ನ ಪ್ರಚಾರ ಆರಂಭಿಸಿದ್ದೆ. ಈಗ ನನ್ನ ಹರಕೆಯಂತೆ ಇದೇ 5ರಂದು ಅಲ್ಲಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತೇನೆ.IMG 20211103 WA0025

ಇನ್ನು ಸಿಂದಗಿ ಚುನಾವಣೆಯಲ್ಲಿ ಹಲವು ನಾಯಕರು ಒಟ್ಟಾಗಿ ಕೆಲಸ ಮಾಡಿದ್ದು, ಅಲ್ಲಿ ಕೆಲವು ಲೆಕ್ಕಾಚಾರ ಬದಲಾಗಿದ್ದರೂ ಸಮಾಧಾನ ತಂದಿದೆ. ಅಲ್ಲಿನ ಕಾರ್ಯಕರ್ತರು ನಾಯಕರನ್ನು ಕೈ ಬಿಡುವುದಿಲ್ಲ. ನಮ್ಮ ತಪ್ಪು ತಿದ್ದುಕೊಂಡು 2023ರ ಚುನಾವಣೆಗೆ ಸಿದ್ಧರಾಗಲು ಮಾರ್ಗದರ್ಶನ ನೀಡುತ್ತೇವೆ.

ಇತ್ತೀಚೆಗೆ ಎಐಸಿಸಿ ಕಾರ್ಯಕಾರಿ ಸಭೆ ನಡೆದಿದ್ದು, ಚುನಾವಣೆ ಹಾಗೂ ನನ್ನ ಕುಟುಂಬದಲ್ಲಿನ ಕೆಲವು ವಿಚಾರದಿಂದ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ರಾಷ್ಟ್ರ ಮಟ್ಟದಲ್ಲಿ ಬೆಲೆ ಏರಿಕೆ ವಿಚಾರವಾಗಿ ಬೃಹತ್ ಜನ ಜಾಗೃತಿ ಅಭಿಯಾನ ಮಾಡಲು ಈ ಸಭೆಯಲ್ಲಿ ತೀರ್ಮಾನಿಸಿದ್ದು, ಸದಸ್ಯತ್ವ ನೋಂದಣಿ ಪ್ರಾರಂಭವಾಗಿದೆ. ಈ ಅಭಿಯಾನಗಳ ಜವಾಬ್ದಾರಿಯನ್ನು ಯಾರಿಗೆ ನೀಡಬೇಕು, ಹೇಗೆ ನಡೆಸಬೇಕು ಎಂದು ಇದೇ 7ರಂದು ಜಿಲ್ಲಾಧ್ಯಕ್ಷರುಗಳ ಜತೆ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆಗಳನ್ನು ತೀರ್ಮಾನ ಮಾಡುತ್ತೇವೆ.’

ಮನಗೂಳಿ ಅವರು ಜೆಡಿಎಸ್ ನಿಂದ ಬಂದಿದ್ದಕ್ಕೆ ಕಾರ್ಯಕರ್ತರಲ್ಲಿ ಸಮನ್ವಯತೆ ಕೊರತೆಯಿಂದ ಸೋಲಾಯಿತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ನಿಮ್ಮ ಅಭಿಪ್ರಾಯ ಅಷ್ಟೇ, ಅವರು ಜೆಡಿಎಸ್ ನಲ್ಲಿ ಇದ್ದಾಗ ಉತ್ತಮ ಮತ ಪಡೆದಿದ್ದರು. ಜೆಡಿಎಸ್ ನವರು ತಮ್ಮ ಅಭ್ಯರ್ಥಿ ಕಣಕ್ಕಿಳಿಸಿದ್ದರು. ಬಿಜೆಪಿಯ ಅಭ್ಯರ್ಥಿ ಮಾಜಿ ಶಾಸಕರಿದ್ದರು, ಸರ್ಕಾರದ ನೆರವಿತ್ತು. ನಮ್ಮಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ನಾವು ಎಲ್ಲರು ಒಗ್ಗಟ್ಟಿನಿಂದ ಚುನಾವಣೆ ಮಾಡಿದ್ದೇವೆ.

ಸಿಂದಗಿಯಲ್ಲಿ ಭಾರಿ ಪ್ರಮಾಣದ ಅಂತರದಲ್ಲಿ ಸೋಲು ಅನುಭವಿಸಿದ್ದು ಏಕೆ? ಎಂಬ ಪ್ರಶ್ನೆಗೆ, ‘ಕ್ಷೇತ್ರ ನೋಡಿದರೆ ಬೇಸರವಾಗುತ್ತದೆ. ತೀರಾ ಹಿಂದುಳಿದ ಕ್ಷೇತ್ರದಂತೆ ಕಾಣುತ್ತದೆ. ಅಲ್ಲಿನ ಜನ ಸರ್ಕಾರದಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಮತ ಹಾಕಿದ್ದಾರೆ ಎಂದು ಭಾವಿಸುತ್ತೇವೆ’ ಎಂದರು.

ಸಿಂದಗಿಯಲ್ಲಿ ಸಿದ್ದರಾಮಯ್ಯ ಅವರು ದಲಿತರ ವಿರುದ್ಧ ಮಾತನಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ದಲಿತರು ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ದಲಿತರು. ನಾವು ಅವರಿಗಾಗಿ ಕೊಟ್ಟ ಕಾರ್ಯಕ್ರಮ ಅನೇಕ. ದೇಶದಲ್ಲಿ ಮಾಡಲಾಗದನ್ನು ರಾಜ್ಯದಲ್ಲಿ ನಾವು ಕಾನೂನು ತಂದು ಜನಸಂಖ್ಯೆ ಆಧಾರದ ಮೇಲೆ ಅನುದಾನ ನೀಡಿದ್ದೇವೆ. ನಾವು ಎಲ್ಲ ವರ್ಗದ ಜನರ ಹಿತ ಕಾಪಾಡಲು ಬೇಕಾದ ಕಾರ್ಯಕ್ರಮ ರೂಪಿಸಿದ್ದೇವೆ. ಹೀಗಾಗಿ ಶೇ.90ರಷ್ಟು ದಲಿತರು ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಸಿದ್ದರಾಮಯ್ಯ ಅವರು ಯಾವ ರೀತಿ ಹೇಳಿದ್ದಾರೋ, ಅದನ್ನು ಯಾವ ರೀತಿ ಅರ್ಥೈಸಲಾಗಿದೆಯೋ ನನಗೆ ಗೊತ್ತಿಲ್ಲ’ ಎಂದರು.

ಇನ್ನು ಪದಾಧಿಕಾರಿಗಳ ನೇಮಕ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾಳೆ ಬೆಂಗಳೂರು ನಗರ ಸಂಬಂಧಿಸಿದಂತೆ ದೊಡ್ಡ ಸುದ್ದಿ ಬರಲಿದೆ. ಚುನಾವಣೆ ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಎಲ್ಲ ಘೋಷಣೆಯಾಗುತ್ತಿತ್ತು. ಪದಾಧಿಕಾರಿಗಳ ಪಟ್ಟಿ ಸಿದ್ಧವಾಗಿದೆ. ಆದಷ್ಟು ಬೇಗ ಎಲ್ಲರ ನೇಮಕವಾಗಲಿದೆ’ ಎಂದು ಉತ್ತರಿಸಿದರು.

*ಪುನೀತ್ ಗೆ ಪದ್ಮಶ್ರೀ, ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು*

ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ನಗರದ ಪ್ರಮುಖ ರಸ್ತೆಗೆ ಇಡಬೇಕು, ಅವರಿಗೆ ಕರ್ನಾಟಕ ರತ್ನ ಹಾಗೂ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿರುವ ವಿಚಾರವಾಗಿ, ‘ಪುನೀತ್ ಅವರು, ರಸ್ತೆಗೆ ಹೆಸರಿಡುವುದರಿಂದ ಕರ್ನಾಟಕ ರತ್ನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿವರೆಗೂ ಎಲ್ಲದಕ್ಕೂ ಅರ್ಹರು. ಅವರಿಗೆ ಈ ಗೌರವ ನೀಡಬೇಕು’ ಎಂದು ಪ್ರತಿಕ್ರಿಯಿಸಿದರು.

ಹಿಂದೆ ನಮ್ಮ ಬಂಗಾರಪ್ಪನವರ ಸರಕಾರವಿದ್ದಾಗ ಪುನೀತ್ ಅವರ ತಂದೆ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. ಈಗ ಅದೇ ರೀತಿ ಅವರ ಪುತ್ರ ಪುನೀತ್ ಅವರಿಗೂ ಕರ್ನಾಟಕ ರತ್ನ, ಪದ್ಮಶ್ರೀ ಪ್ರಶಸ್ತಿ ನೀಡಲು ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ.

*ದೀಪಾವಳಿ ಶುಭಾಶಯಗಳು*

ಪುನೀತ್ ರಾಜಕುಮಾರ್ ಅವರ ನಿಧನದಿಂದ ರಾಜ್ಯ ಈ ಬಾರಿ ಬಹಳ ಕೆಟ್ಟ ಕನ್ನಡ ರಾಜ್ಯೋತ್ಸವ ಕಂಡಿದೆ. ಬೆಳಕಿನ ಹಬ್ಬ ದೀಪಾವಳಿ ಆಗಮಿಸುತ್ತಿದ್ದು, ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಪರಿಣಾಮ ರಾಜ್ಯ ಹಾಗೂ ದೇಶ ಕತ್ತಲೆಯಲ್ಲಿ ಮುಳುಗಿದ್ದು, ಈ ಹಬ್ಬದ ಮೂಲಕ ಎಲ್ಲರೂ ಬೆಳಕು ಪಡೆಯಲಿ ಎಂದು ವೈಯಕ್ತಿಕವಾಗಿ ಹಾಗೂ ಪಕ್ಷದ ಪರವಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ನಮ್ಮ ಧರ್ಮದ ಬಗ್ಗೆ ಕೆಲವರಿಗೆ ನಂಬಿಕೆ ಇಲ್ಲದಿರಬಹುದು. ಆದರೆ ಇಡೀ ಪ್ರಪಂಚದುದ್ದಗಲಕ್ಕೂ ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ದೀಪಾವಳಿಯನ್ನು ಬೆಳಕಿನ ಹಬ್ಬ ಎಂದು ಆಚರಿಸುತ್ತಾರೆ. ಈ ಹಬ್ಬವನ್ನು ಅಮೆರಿಕದ ಶ್ವೇತಭವನದಲ್ಲೂ ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು ಲಕ್ಷ್ಮಿ ಪೂಜೆಯಿಂದ ಬಲಿಪಾಡ್ಯಮಿವರೆಗೂ ಆಚರಿಸುತ್ತೇವೆ. ಈ ಸಙದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರುತ್ತೇನೆ.