*ಪ್ರವಾಸಿಗರಿಂದ ಸೋಂಕು ಹರಡದಂತೆ ನೋಡಿಕೊಳ್ಳಲು ಮಾರ್ಗಸೂಚಿ ರಚನೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್*
*ದಸರಾ ಆಚರಣೆಗೆ ಕಟ್ಟುನಿಟ್ಟಿನ ನಿರ್ಬಂಧ, ಸದ್ಯಕ್ಕೆ ಶಾಲೆ ಆರಂಭ ಇಲ್ಲ*
*ಕೊಡಗು ಜಿಲ್ಲೆಯ ಆರೋಗ್ಯ ಸೌಲಭ್ಯಗಳ ಗುಣಮಟ್ಟ ಸುಧಾರಣೆಗೆ ಭರವಸೆ*
ಮಡಿಕೇರಿ, ಅಕ್ಟೋಬರ್ 6, ಮಂಗಳವಾರ*ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಂದ ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ನೂತನ ಮಾರ್ಗಸೂಚಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮಡಿಕೇರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
“ದಸರಾ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವಾಸಿಗರು ಬರುತ್ತಾರೆ. ಎಲ್ಲ ಪ್ರವಾಸಿಗರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಬೇಕು. ಪ್ರವಾಸಿ ತಾಣಗಳಲ್ಲಿ ಪೊಲೀಸ್, ಕಂದಾಯ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಿ ಆರೋಗ್ಯ ತಪಾಸಣೆ ಸಹಿತ ಇತರೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಮಾರ್ಗಸೂಚಿ ಸಿದ್ಧಪಡಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ” ಎಂದು ಸಚಿವರು ತಿಳಿಸಿದರು.
“ಜಿಲ್ಲೆಯ ಆರೋಗ್ಯ ಸೇವೆಯಲ್ಲಿ ಕೆಲ ನ್ಯೂನತೆಗಳಿವೆ. ಬೆಂಗಳೂರಿಗೆ ಹಿಂತಿರುಗಿದ ತಕ್ಷಣ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ವೈದ್ಯರ ಕೊರತೆ ನೀಗಿಸಲು ಕೂಡ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
“ಮೊದಲು ಕೊಡಗು ಜಿಲ್ಲೆ ಹಸಿರು ವಲಯದಲ್ಲಿತ್ತು. ಅನ್ ಲಾಕ್ ಬಳಿಕ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣ ಹೆಚ್ಚಿದೆ. ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕೆಲ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಮುಂದಿನ ವಾರ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಬಂದು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಕಟ್ಟುನಿಟ್ಟಾಗಿ ಮಾರ್ಗಸೂಚಿ ಜಾರಿಗೊಳಿಸಲು ಸ್ಥಳಿಯ ಶಾಸಕರು ಸಲಹೆ ನೀಡಿದ್ದಾರೆ. ಇದು ಸ್ವಾಗತಾರ್ಹ” ಎಂದರು.
*ಶಾಲೆ ಪುನರಾರಂಭ ಇಲ್ಲ*
*”ಅ.15 ರಿಂದ ಶಾಲೆಗಳ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆದರೆ ನಮ್ಮ ರಾಜ್ಯದಲ್ಲಿ ಸೋಂಕು ಏರುಗತಿಯ ಮಧ್ಯದಲ್ಲಿದೆ. ಇಂತಹ ಸಂದರ್ಭದಲ್ಲಿ ಶಾಲೆ ಆರಂಭಿಸುವುದು ಸಮಂಜಸವಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುತ್ತಿಲ್ಲ,” ಎಂದು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.*
*ದಸರಾ ಮನರಂಜನಾ ಕಾರ್ಯಕ್ರಮ ಇಲ್ಲ*
*ಕೇರಳದಲ್ಲಿ ಓಣಂ ಸಂದರ್ಭದಲ್ಲಿ ಆದ ಲೋಪ ದಸರಾ ಸಂದರ್ಭದಲ್ಲಿ ಮರುಕಳಿಸಬಾರದು. ಉತ್ಸವ ಸಂದರ್ಭದಲ್ಲಿ 50 ಜನರಿಗಿಂತ ಹೆಚ್ಚು ಮಂದಿ ಸೇರಬಾರದು, ಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಸ್ನಾನ ಮಾಡುವುದು ಮತ್ತು ದಸರಾ ಮನರಂಜನಾ ಕಾರ್ಯಕ್ರಮಗಳನ್ನು ಈ ವರ್ಷ ನಿರ್ಬಂಧಿಸಲಾಗುವುದು.*
ಸಭೆಯಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.
*ಸಭೆಯಲ್ಲಿ ಸಚಿವರು ನೀಡಿದ ಸೂಚನೆಗಳು*
*ಜಿಲ್ಲೆಯಲ್ಲಿ 100 ಮಂದಿಗೆ ಪರೀಕ್ಷೆ ಮಾಡಿದಾಗ 20 ಮಂದಿಗೆ ಸೋಂಕು ತಗುಲಿರುವುದು ಆತಂಕದ ಸಂಗತಿ. 70% ಮಂದಿ ಹೋಮ್ ಐಸೋಲೇಶನ್ ನಲ್ಲಿ ಇದ್ದಾರೆ. ಈ ಪೈಕಿ 30% ಮಂದಿಯನ್ನು ಮಾತ್ರ ಸಿಬ್ಬಂದಿ ಭೇಟಿ ಮಾಡಿ ವಿಚಾರಿಸಿದ್ದಾರೆ. ಉಳಿದವರನ್ನು ವಿಚಾರಿಸದಿರುವುದು ದುರದೃಷ್ಟಕರ. ಪ್ರತಿದಿನ ಅವರ ಸ್ಥಿತಿಗತಿ ವಿಚಾರಿಸಬೇಕು.
*ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸ ಆಗಲೇಬೇಕು. ಕನಿಷ್ಠ 9 ರಿಂದ 10 ಮಂದಿ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಹುಡುಕಿ ಪರೀಕ್ಷೆಗೊಳಪಡಿಸಬೇಕು.
*ಪ್ರತಿದಿನ ಸಾವಿನ ಆಡಿಟ್ ಮಾಡಿ, ಚಿಕಿತ್ಸೆಯಲ್ಲಿನ ನ್ಯೂನತೆ ಮತ್ತು ಸಾವಿನ ನಿಖರ ಕಾರಣ ತಿಳಿದುಕೊಳ್ಳಬೇಕು.
*ಜಿಲ್ಲೆಯಲ್ಲಿ 22% ರಷ್ಟು ಹಿರಿಯ ನಾಗರಿಕರು ಬೇರೆ ಬೇರೆ ರೋಗಗಳಿಂದ ಬಳಲುತ್ತಿದ್ದು, ಅವರಿಗೆ ಕೊರೊನಾ ಪರೀಕ್ಣೆ ಮಾಡಿ, ರಿವರ್ಸ್ ಕ್ವಾರಂಟೈನ್ ಗೆ ಒಳಪಡಿಸಬೇಕು.
*ಬೂತ್ ಮಟ್ಟದ ಸಮಿತಿಗಳಿಗೆ ಸ್ಥಳೀಯ ಜನರನ್ನು ಸೇರಿಸಿಕೊಳ್ಳಬೇಕು. ಎಲ್ಲಾ ಪಿಎಚ್ ಸಿ, ಸಿಎಚ್ ಸಿ ಮತ್ತು ಆಸ್ಪತ್ರೆಯಲ್ಲಿ ಮಾದರಿ ಸಂಗ್ರಹಿಸಬೇಕು.
*ದಿನಕ್ಕೆ 500 ಅಥವಾ 600 ಮಾದರಿ ಪರೀಕ್ಷಿಸಬೇಕು. ಹೊಸ ಯಂತ್ರ ಅಳವಡಿಸಿದ ಬಳಿಕ ಆ ಪ್ರಮಾಣ 1,000 ಕ್ಕೆ ಹೆಚ್ಚಿಸಬೇಕು. ಸಿಬ್ಬಂದಿ ಕೊರತೆ ಇದ್ದಲ್ಲಿ ಗುತ್ತಿಗೆ ಆಧಾರದಲ್ಲಿ ತಕ್ಷಣ ನೇಮಕ ಮಾಡಿಕೊಳ್ಳಬೇಕು.
*ಚೆಸ್ಕಾಂನಿಂದ ಮೆಡಿಕಲ್ ಕಾಲೇಜಿನಲ್ಲಿ ಆಗಬೇಕಾದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. 17 ಮಂದಿ ಹೆಚ್ಚುವರಿಯಾಗಿ ಬಂದಿರುವ ರೆಸಿಡೆಂಟ್ ಡಾಕ್ಟರ್ ಗಳನ್ನು ಕೊರತೆ ಇರುವ ತಾಲೂಕು ಆಸ್ಪತ್ರೆಗೆ ನಿಯೋಜಿಸಬೇಕು.
*ಗೋಣಿಕೊಪ್ಪ, ನಾಪೋಕ್ಲು, ಸುಂಟಿಕೊಪ್ಪ, ಕುಶಾಲನಗರ ಮುಂತಾದ ಕಡೆ ಸೋಂಕಿನ ಪ್ರಮಾಣ ಹೆಚ್ಚಲು ಕಾರಣ ಏನು ಎಂಬುದನ್ನು ಪತ್ತೆಹಚ್ಚಿ ಹೆಚ್ಚು ಪರೀಕ್ಷೆ ಮಾಡಬೇಕು. ಪ್ರತಿವಾರ ಅದನ್ನು ಮೌಲ್ಯಮಾಪನ ಮಾಡಬೇಕು.
*ಹೆಚ್ಚು ಜನ ಸೇರುವ ಪ್ರದೇಶದಲ್ಲಿ ನಿರ್ಬಂಧ ವಿಧಿಸಿ ಸಂತೆಗಳನ್ನು ವಿಶಾಲವಾದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲು ಶಾಸಕರ ಸಲಹೆ ಮೇರೆಗೆ ಕ್ರಮ ಕೈಗೊಳ್ಳಬೇಕು. ವ್ಯಾಪಾರ ವಹಿವಾಟುಗಳಲ್ಲಿ ನಿರತರಾದವರನ್ನು ನಿಯಮಿತವಾಗಿ ಟೆಸ್ಟ್ ಗೆ ಒಳಪಡಿಸಬೇಕು. ಹೋಮ್ ಸ್ಟೇಗಳಿಗೆ ಭೇಟಿ ನೀಡುವವರ ಮೇಲೆ ನಿಗಾ ಇರಿಸಬೇಕು.
*ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರದೇಶಗಳಲ್ಲಿ ಪೊಲೀಸ್ ನಿಗಾ ವಹಿಸಬೇಕು. ಕೊಡಗಿಗೆ ಆಗಮಿಸುವ ಪ್ರವಾಸಿಗರಿಗೆ ಕೋವಿಡ್ ಪರೀಕ್ಷೆ ವರದಿ ಕಡ್ಡಾಯ ಮಾಡುವ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ನಡೆಸಬೇಕು.
*ಜನರಲ್ಲಿ ರೋಗ ನಿಯಂತ್ರಣದ ಬಗ್ಗೆ, ಸೋಂಕು ಹರಡುವಿಕೆ ಕಡಿತಗೊಳಿಸಲು ನಾನಾ ಮಾಧ್ಯಮಗಳ ಮೂಲಕ ಅರಿವು ಮೂಡಿಸುವ ಕೆಲಸ ಆಗಬೇಕು. ಸಂತೆ ದಿನಗಳಂದು ಆಟೊಗಳ ಮೂಲಕ ಪ್ರಚಾರ ಮಾಡಬೇಕು. ದಂಡದ ಬಗ್ಗೆಯೂ ತಿಳಿ ಹೇಳಬೇಕು. ಸರ್ಕಾರಕ್ಕೆ ಜನರಿಂದ ದಂಡ ವಸೂಲಿ ಮಾಡುವ ಉದ್ದೇಶ ಇಲ್ಲ. ಎಂಟು ತಿಂಗಳಾದರೂ ಜನ ನಿರ್ಲಕ್ಷ್ಯ ತೋರಿಸಿದರೆ ಏನೂ ಮಾಡಲು ಆಗುವುದಿಲ್ಲ.
*ಮೃತದೇಹಗಳ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಕುಟುಂಬ ಸದಸ್ಯರು ಪಿಪಿಇ ಕಿಟ್ ಧರಿಸಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು.