ಪಾವಗಡ : ಪಟ್ಟಣದ ಬ್ರಿಟಿಷರು ಸ್ಥಾಪಿಸಿದ್ದ ಸರ್ಕಾರಿ ಶಾಲೆಯನ್ನು 65 ಲಕ್ಷ ಕ್ಕೆ ಮಾರಾಟ ಮಾಡುವ ನಿರ್ಣಯವನ್ನು ತಾಲ್ಲೂಕು ಪಂಚಾಯತಿಯಲ್ಲಿ ತೆಗೆದು ಕೊಂಡಿತ್ತು. ಈ ನಿರ್ಣದ ವಿರುದ್ಧ ಕಳೆದ ವರ್ಷ ಆಗಸ್ಟ್ ನಲ್ಲಿ ಸಪ್ತಸ್ವರ ದಲ್ಲಿ ಸುದ್ದಿ ಪ್ರಕಟಿಸಿದ್ದೆವು.
ಈ ಶಾಲೆಯ ಜಾಗ ತಾಲ್ಲೂಕು ಪಂಚಾಯತಿ ಹೆಸರಿನಲ್ಲಿ ಖಾತೆ ಇದೆ ಇದನ್ನು ಶಿಕ್ಷಣ ಇಲಾಖೆ ಗೆ ವರ್ಗಾವಣೆ ಆಗಬೇಕು. ಜಿಲ್ಲಾಪಂಚಾಯತಿ ಸಿಇಓ ವಿಧ್ಯಾಕುಮಾರಿ ಯವರು ಈ ಪ್ರಕರಣದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದರೆ ತಾಲ್ಲೂಕು ಪಂಚಾಯತಿ ಇಓ ಶಾಲೆ ವರ್ಗಾವಣೆಗೆ ಸ್ಪಂದಿಸುತ್ತಿಲ್ಲ ಮತ್ತು ಮುಜಾಪರ್ ಖಾನ ಸೇರಿದ ಜಾಗ ವನ್ನುಅಕ್ರಮವಾಗಿ ಪುರಸಭೆಯಲ್ಲಿ ಖಾತೆ ಮಾಡಿಸಿಕೊಂಡು ಬಹಳಷ್ಟು ಸ್ಥಳವನ್ನು ಕಬಳಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಗಳನ್ನು ಸಪ್ತಸ್ವರ ಮಾಧ್ಯಮ ದಿಂದ ಭೇಟಿಯಾಗಿ ಪತ್ರಿಕೆ ನೀಡಿ ಘಟನೆಯನ್ನು ವಿವರಿಸಿದಾಗ ನ್ಯಾಯ ಮೂರ್ತಿಗಳು ಸಪ್ತಸ್ವರ ಮಾದ್ಯಮ ದ ವರದಿ ಪ್ರಶಂಸಿದ್ದರು. ದೂರು ದಾಖಲಾಗಿತ್ತು.
ಜಿಲ್ಲಾ ಪಂಚಾಯತಿ ಸಿಇಓ ಮತ್ತು ತಾಲ್ಲೂಕುಪಂಚಾಯತಿ ಇಓ ಶಿವರಾಜಯ್ಯ ನವರ ವಿರುಧ್ಧ ದೂರು ದಾಖಲಾಗಿದೆ.ಜೂನ್ ತಿಂಗಳಿಂದ ವಿಚಾರಣೆ ಆರಂಭವಾಗಲಿದೆ.
ಈ ವಿಚಾರಣೆಯನ್ನು ಲೋಕಾಯುಕ್ತ ನ್ಯಾಯಮೂರ್ತಿ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
ಸಂಪೂರ್ಣ ವರದಿ ಇಲ್ಲಿದೆ ಓದಿ
ಅಮೃತ ಮಹೋತ್ಸವ ವರ್ಷ ದ ವಿಶೇಷ ಲೇಖನ
ಪಾವಗಡ ಕಾಂಗ್ರೆಸ್ ಪಕ್ಷದ ಕೊಡುಗೆ ಸರ್ಕಾರಿ ಶಾಲೆ 65 ಲಕ್ಷ ಕ್ಕೆ ಮಾರಾಟ…?
ಪಾವಗಡ : – ದೇಶದ ಸಮಗ್ರ ಅಭಿವೃದ್ಧಿಗೆ ಶಿಕ್ಷಣ ಪ್ರಮುಖ ಸಾಧನ. ಅದಕ್ಕಿಂತ ಮಾನವೀಯ ಜಗತ್ತಿಗೂ ಶಿಕ್ಷಣ ವೇ ಆಧಾರ. ಹೀಗಾಗಿ ಅದರ ಮಹತ್ವವನ್ನು ಎಷ್ಟು ಹೇಳಿದರೂ ಬಹಳ ಕಡಿಮೆ. ಶಿಕ್ಷಣದ ಮಹತ್ವವನ್ನು ಜಗತ್ತಿನ ಎಲ್ಲಾ ಆಡಳಿತಗಾರರು ಅರಿತುಕೊಂಡಿದ್ದಾರೆ. ಹೀಗಾಗಿಯೇ ಬಡ ಮತ್ತು ಸಿರಿವಂತ ಎಂಬ ತಾರತಮ್ಯವಿಲ್ಲದೆ ಎಲ್ಲಾ ದೇಶಗಳು ಶಿಕ್ಷಣಕ್ಕೆ ಪ್ರಮುಖ್ಯತೆ ನೀಡುತ್ತಿವೆ. ಅದರಲ್ಲೂ ಸುಮಾರು ಇನ್ನೂರು ವರ್ಷಗಳಿಗೂ ಹೆಚ್ಚು ಕಾಲ ಭಾರತವನ್ನು ಆಳಿದ ಬ್ರಿಟಿಷರು ಶಿಕ್ಷಣಕ್ಕೆ ಮಹತ್ವ ನೀಡಿದ್ದರು. ಆ ಕಾಲದಲ್ಲಿ “ಹೋಬಳಿಗೊಂದು ಶಾಲೆ” ಆಲೋಚನೆ ಮಾಡಿ ಮಕ್ಕಳು ಮನೆಯ ಸಮೀಪದಲ್ಲಿ ಕಲಿಯಲಿ ಎಂದು ಶಾಲೆ ಆರಂಭಿಸಿದ್ದರು.ಈಗಲೂ ದೇಶದ ಅನೇಕ ಹಳ್ಳಿಗಳಲ್ಲಿ ಬ್ರಿಟಿಷರು ಕಟ್ಟಿರುವ ಹೋದ ಶಾಲೆಗಳು ಜೀವಂತವಾಗಿದೆ.
ಬ್ರಿಟಿಷರು ಕಟ್ಟಿ ಹೋದ ಶಾಲೆಯನ್ನು ಕಬಳಿಸಲು ಬಲಾಢ್ಯರು, ವಂದಿಮಾಗಧರು ನಡೆಸಿರುವ ತಂತ್ರ-ಕುತಂತ್ರ ನೋಡಿದರೆ ಮನಸ್ಸಿಗೆ ಕಸಿವಿಸಿಯಾಗುತ್ತದೆ. ರಕ್ತ ಕುದಿಯುತ್ತದೆ . ನೂರಾರು ಮಕ್ಕಳ ಭವಿಷ್ಯಕ್ಕಿಂತ ಬೇರೇ ಏನು ಬೇಕು ಶಾಲೆಯೆಂದರೆ ದೇವಸ್ಥಾನ, ಶಾಲೆ ಅಭಿವೃದ್ಧಿ ಪಡಿಸಿದರೆ ದೇವಸ್ಥಾನ ಅಧಿವೃದ್ಧಿ ಯಾದಂತೆ ಅಲ್ಲವೆ ಇದನ್ನು ಒಂದು ಭಾರಿ ಅರ್ಥಮಾಡಿಕೊಂಡರೆ ಸಾಕು. ತುಮಕೂರು ಜಿಲ್ಲೆಯ ಶಾಲೆಯ ಕರುಣಾಜಕ ಕತೆ ಈಗ ಲೇಖನ ನೋಡಿ, ಓದಿದ ನಂತರವಾದರೂ ಕೆಟ್ಟ ಹುಳುಗಳ ಮನಸ್ಸು ಪರಿವರ್ತನೆಯಾಗಿ ಶಾಲೆ ಉಳಿಸುವ ಜನರ ಬೆಂಬಲಕ್ಕೆ ನಿಂತರೆ, ಕಣ್ಣು ತೆರೆಸಿದರೆ ಲೇಖನ ಮತ್ತು ಅದರ ಹಿಂದಿನ ಹೋರಾಟಕ್ಕೆ ಕಿಂಚಿತ್ತಾದರೂ ಬೆಲೆ ಬರಬಹುದೆನೋ .!!.
ದೇಶವು ಅಮೃತಮಹೋತ್ಸವ ವರ್ಷವನ್ನು ಆಚರಿಸುತ್ತಿರುವ ಇಂತಹ ಸನ್ನಿವೇಶದಲ್ಲಿ ಪಾವಗಡ ಪಟ್ಟಣದ ಸ್ವಾತಂತ್ರ್ಯಪೂರ್ವ ದ (1939) ಮೊದಲ ಸರ್ಕಾರಿ ಶಾಲೆಯ ಅದೋಗತಿಯನ್ನು ನೋಡಿದರೆ ನಿಜಕ್ಕೂ ನಮ್ಮ ಸರ್ಕಾರಗಳ ಕಾರ್ಯವೈಖರಿಯ ಬಗ್ಗೆ ನಮಗೆ ನಾಚಿಕೆಯಾಗುತ್ತೆ. ನಮ್ಮನ್ನು ಆಳುತ್ತಿರುವ ರಾಜಕೀಯ ನಾಯಕರ ನಿಜ ಸ್ವರೂಪ ಈ ಶಾಲೆಯ ವಿಷಯದಲ್ಲಿ ನಡೆಯುತ್ತಿರುವ ಘಟನೆಗಳೆ ಇದಕ್ಕೆಪ್ರತ್ಯಕ್ಷ್ಯ ಸಾಕ್ಷಿ .
ಸ್ವಾತಂತ್ರ್ಯ ಪೂರ್ವ ಸ್ಥಾಪನೆಯಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು 2019 ರಲ್ಲಿ ತಾಲ್ಲೂಕುಪಂಚಾಯತಿಯಲ್ಲಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷ 65 ಲಕ್ಷರೂಪಾಯಿಗೆ ಮಾರಾಟ ಮಾಡುವ ತೀರ್ಮಾನ ಮಾಡುತ್ತದೆ.
ಶಾಲೆ ದುರಸ್ತಿ ಮಾಡಿಸದೆ ಷಡ್ಯಂತರ
ಈ ಶಾಲೆ ಶಿಥಿಲವಾಗಿದೆ ಎಂಬ ಕಾರಣದಿಂದ ಎಸ್ ಎಸ್ ಕೆ ಎಂಬ ಖಾಸಗಿ ಸಂಘ ದ ಪಾಲು ಮಾಡಬೇಕು ಎಂದು ಪಾವಗಡ ತಾಲ್ಲೂಕಿನ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಪಕ್ಕಾ ಪ್ಲಾನ್ ಮಾಡುತ್ತಾರೆ.
ಸರ್ಕಾರಿ ಅಧಿಕಾರಿಗಳು – ಸ್ಥಳೀಯ ರಾಜಕೀಯ ನಾಯಕರು ಪಣ ತೊಟ್ಟು 80ಕ್ಕೂ ವರ್ಷಕ್ಕೂ ಹಳೆಯ ದಾದ ಶಾಲೆಗೆ ಕಾಲ-ಕಾಲ ಕ್ಕೆ ದುರಸ್ತಿ ಮಾಡಿಸದೆ,ಬೇಗ ಬಿದ್ದು ಹೋದರೆ ಸಾಕು ಎಂದು ಕಾದು ಕೂತಿದ್ದಾರೆ..ಪಾವಗಡ ಪಟ್ಟಣದ ಮೊದಲ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕು ಎಂಬ ಇಂಗಿತ ಜ್ಞಾನವು ಜನಪ್ರತಿನಿಧಿಗಳಿಗೆ ಇಲ್ಲ. ಸರ್ಕಾರಿ ಜಾಗಗಳು ಎಂದರೆ ಎಲ್ಲರು ಕಣ್ಣು ಅದರ ಮೇಲೆ ಇರುತ್ತದೆ.ಹೇಗಾದರು ಮಾಡಿ ಅದನ್ನು ಲಪಟಾಯಿಸಲು ಎಲ್ಲಾ ರೀತಿಯ ತಂತ್ರಗಾರಿಕೆ ಮಾಡುತ್ತಾರೆ.ಈ ಶಾಲೆಯ ವಿಷಯದಲ್ಲು ನಡೆದಿರುವುದು ಇದೆ.
ಶಾಸಕರಿಗೆ ಕಾಣದ ಶಾಲೆ :
ವೆಂಕಟರಮಣಪ್ಪ ನವರು 1989,1999.2008.2018 ನಾಲ್ಕು ಭಾರಿ ಶಾಸಕರು,ಪ್ರಸ್ತುತ ಶಾಸಕರು ಇವರೆ, ಇದರ ಜೊತೆಗೆ ಎರಡು ಬಾರಿ ಸಚಿವರಾಗಿದ್ದಾರೆ. ಆದರೂ ಇವರಿಗೆ ಈ ಶಾಲೆ ಕಾಣಿಸುವುದಿಲ್ಲ ಯಾಕೆಂದರೆ ಈ ಶಾಲೆಯ ಜಾಗ ಲಪಟಾಯಿಸ ಬೇಕೆಂದಿರುವ ಎಸ್ ಎಸ್ ಕೆ ಸಂಘ ದ ಪದಾದಿಕಾರಿಗಳು ತಾಲ್ಲೂಕಿನ ಕಾಂಗ್ರೆಸ್ ನಾಯಕರು ಮತ್ತು ಶಾಸಕರ ಅನುಯಾಯಿಗಳು.
ಶಾಲೆಯ ಅಭಿವೃದ್ಧಿ ಗಿಂತ- ಬಡವರ ಮಕ್ಕಳ ಶಿಕ್ಷಣಕ್ಕಿಂತ ಕಾಂಗ್ರೆಸ್ ಪಕ್ಷದ ನಾಯಕರಿಗೆ ಅನುಕೂಲ ಮಾಡಿಕೊಡುವುದು ಶಾಸಕರ ಆದ್ಯ ಕರ್ತವ್ಯವಾಗಿದೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಜೆಡಿ(ಎಸ್) ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ 2004 ಮತ್ತು 2013 ರಲ್ಲಿ ಶಾಸಕರಾಗುತ್ತಾರೆ ಅವರಿಗೂ ಈ ಸರ್ಕಾರಿ ಶಾಲೆ ಕಾಣಿಸುವುದಿಲ್ಲ ಕಾರಣ ಎಸ್ ಎಸ್ ಕೆ ಸಂಘ ದ ಪ್ರಭಾವ ಎನ್ನಲಾಗುತ್ತಿದೆ,ಅವರನ್ನು ಎದರು ಹಾಕಿಕೊಂಡು ಶಾಲೆ ಅಭಿವೃದ್ಧಿ ಮಾಡುವ ತಾಕತ್ತು ಅವರಿಗೆ ಇರಬೇಕಲ್ಲ.
ಇವರಿಬ್ಬರಿಗಿಂತ ಹಿಂದೆ ಶಾಸಕರಾದ ಉಗ್ರನರಸಿಂಹಪ್ಪ,ಸೋಮ್ಲಾನಾಯಕ್ ಅವರು ಪ್ರಯತ್ನಿಸಲ್ಲ ಯಾರು ಈ ಶಾಲೆಯನ್ನು ಅಭಿವೃದ್ಧಿ ಮಾಡುವುದಿಲ್ಲ ಇದು ಪಾವಗಡ ಜನ ಪ್ರತಿನಿಧಿಗಳ ಕಥೆ….!
ತಾಲ್ಲೂಕು ಪಂಚಾಯತಿ ನಿಯಮ ಬಾಹಿರ ಅನುಮೋದನೆ:
ಸಾಮಾನ್ಯ ಸಭೆಯಲ್ಲಿ ಶಾಲೆಯನ್ನು 65 ಲಕ್ಷಕ್ಕೆ ಮಾರಾಟ ಮಾಡಿದ ಪ್ರತಿ
ಪಾವಗಡ ತಾಲ್ಲೂಕು ಪಂಚಾಯತಿ ಯಲ್ಲಿ 22-02-2019 ರಲ್ಲಿ ಸೊಗಡು ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯತಿ ಸ್ವಾದೀನದಲ್ಲರುವ ಪುರಸಭೆ ಖಾತೆ ಸಂಖ್ಯೆ 2041/1631 ಸರ್ಕಾರಿ ಕಿರಿಯ ಪ್ರಾರ್ಥಮಿಕ ಪಾಠಶಾಲೆ, ಪೂರ್ವ -ಪಶ್ಚಿಮ 120 ಅಡಿ, ಉತ್ತರ- ದಕ್ಷಿಣ 70 ಅಡಿ ಒಟ್ಟು ವಿಸ್ತೀರ್ಣ 8520 ಚದರ ಅಡಿ.ಜಾಗವನ್ನು 65 ಲಕ್ಷಗಳಿಗೆ ಕಿಮ್ಮತ್ತಿಗೆ ನೀಡಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಮಾಡುತ್ತಾರೆ...
ಈ ಬಗ್ಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿ, ತುಮಕೂರು ಇವರಿಂದ ಅನುಮೋದನೆ ಪಡೆದು ಎಸ್ ಎಸ್ ಕೆ ಸಂಘಕ್ಕೆ ಉಪನೊಂದಾಣಿ ಅಧಿಕಾರಿಗಳ ಮೂಲಕ ನೊಂದಾಣಿ ಮಾಡಿಕೊಡಬಹುದೆಂದು ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿ ತೀರ್ಮಾನ ಮಾಡಿದ್ದಾರೆ. 22 ಜನ ಸದಸ್ಯರ ಸಭೆಯಲ್ಲಿ 17 ಜನ ಸದಸ್ಯರು ಹಾಜರಿರುತ್ತಾರೆ.
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993
ಅಧ್ಯಾಯ 8 ರ 145- ತಾಲ್ಲೂಕು ಪಂಚಾಯತಿ ಪ್ರಕಾರ್ಯಗಳು ಮತ್ತು ಕರ್ನಾಟಕ ಪಂಚಾಯತ್ ರಾಜ್ ( ಮೂರನೇ ತಿದ್ದುಪಡಿ) ಅಧಿನಿಯಮ 1997( 1997 ರ ಕರ್ನಾಟಕ ಅಧಿನಿಯಮ ಸಂಖ್ಯೆ 29)
2 ( III ) ಮತ್ತು ಕರ್ನಾಟಕ ಪಂಚಾಯತ್ ರಾಜ್ ( ಮೂರನೇ ತಿದ್ದುಪಡಿ) ಅಧಿನಿಯಮ 1997 , 145 ಪ್ರಕರಣದ ಪ್ರತಿಯೋಜನೆ ಅನ್ವಯ:
- ಪ್ರಾರ್ಥಮಿಕ ಶಾಲಾ ಕಟ್ಟಡಗಳನ್ನು ಸುಸ್ಥಿತಿಯಲ್ಲಿ ಮತ್ತು ಸಾಕಷ್ಟು ಪಾಠದ ಕೊಠಡಿಗಳನ್ನು ಮತ್ತು ನೀರು ಪೂರೈಕೆ ಹಾಗೂ ನೈರ್ಮಲ್ಯ ವ್ಯವಸ್ಥೆಗಳನ್ನು ಒದಗಿಸುವುದು.
ಪಂಚಾಯತ್ ರಾಜ್ ಅಧಿನಿಯಮ ಉಲ್ಲಂಘಿಸಿ ಪ್ರಸ್ತುತ ನಡೆಯುತ್ತಿರುವ ಸರ್ಕಾರಿ ಶಾಲೆಯನ್ನು ಮಾರಾಟ ಮಾಡುತ್ತಾರೆ
ಸರ್ಕಾರಿ ಶಾಲೆ ಮಾರಾಟದ ವಿರುದ್ಧ ಸಾಮಾನ್ಯ ಸಭೆಯಲ್ಲಿ ಧ್ವನಿ ಎತ್ತದಿರುವುದು ಸದಸ್ಯರ ನಡೆ ನಿಜಕ್ಕು ನಾಚಿಕೆ ಗೇಡಿನ ಸಂಗತಿ. ಇಂತವರನ್ನು ಆಯ್ಕೆ ಮಾಡಿ ಕಳುಹಿದ ಪಾವಗಡ ತಾಲ್ಲೂಕಿನ ಮತದಾರರು ತಲೆ ತಗ್ಗಿಸುವ ವಿಷಯ. ಒಂದು ಸರ್ಕಾರಿ ಶಾಲೆ ಮಹತ್ವ- ವಿದ್ಯೆಯ ಅರಿವೇ ಇಲ್ಲದ ಇಂತಹ ತಾಲ್ಲೂಕು ಪಂಚಾಯತಿ ಸದಸ್ಯರನ್ನು ಪಾವಗಡ ಕಂಡಿದೆ ಎಂದರೆ ತಪ್ಪಾಗದು…!
ʻ ಧರ್ಮʼ ಪಾಲರ – ಅ ʻ ಧರ್ಮʼ ಕಥೆ
ಪುರಸಭೆ ದಾಖಲೆ ತಿರುಚಿ ಎಸ್ ಎಸ್ ಕೆ ಸಂಘ ಕ್ಕೆ ಅಕ್ರಮವಾಗಿ ಖಾತೆ…?
ನಮಗೆ ಲಭ್ಯ ವಾಗಿರುವ ದಾಖಲೆಗಳನ್ನು ನೋಡಿದಾಗ – ತಾಲ್ಲೂಕು ಪಂಚಾಯತಿ ಸ್ವಾದೀನದಲ್ಲಿರುವ ಪುರಸಭೆ ಖಾತೆ ಸಂಖ್ಯೆ 2041/1631 ಸರ್ಕಾರಿ ಕಿರಿಯ ಪ್ರಾರ್ಥಮಿಕ ಪಾಠಶಾಲೆ ಯ ಜಾಗವನ್ನು ಎಸ್ ಎಸ್ ಕೆ ಸಂಘ ಕ್ಕೆ ನೀಡಲು ತಾಲ್ಲೂಕು ಪಂಚಾಯತಿಯನ್ನು ಕೊರುವ ಸಂಘದವರು, ಇದಕ್ಕೆ ಮೊದಲೆ 1997-98 ರ ಡಿಮ್ಯಾಂಡ್ ರಿಜಿಸ್ಟಾರ್ ನಲ್ಲಿ ಅದ್ಯಕ್ಷರು ಎಸ್ ಎಸ್ ಕೆ ಸಂಘಕ್ಕೆ ಎಂದು ಇದೇ ಪುರಸಭೆ ಖಾತೆ ಸಂಖ್ಯೆ ಯ 2041/1631, 51.1/2 – 54 ಅಡಿ ವಿಸ್ತೀರ್ಣದ ಜಾಗವನ್ನು ಬಾಡಿಗೆ ಎಂದು ನಮೂದಿಸಿ ಖಾತೆ ಮಾಡಿಕೊಂಡಿದ್ದಾರೆ.
ಮೊದಲೇ ಖಾತೆ ಮಾಡಿಕೊಂಡು ನಂತರ ತಾಲ್ಲೂಕು ಪಂಚಾಯತಿ ಸಮಾನ್ಯಸಭೆ ಗೆ ಶಾಲೆ ಮತ್ತು ಸುತ್ತಲಿನ ಜಾಗ ನೀಡಿ ಎಂಬ ಅಹವಾಲು ಸಲ್ಲಿಸುತ್ತಾರೆ.ತಾಲ್ಲೂಕು ಪಂಚಾಯತಿಗೂ ತಪ್ಪು ಮಾಹಿತಿ ನೀಡಿದ್ದಾರೆ. ಎಲ್ಲಾ ಘಟನೆಗಳು ನಡೆದಾಗ ಎಸ್ ಎಸ್ ಕೆ ಸಂಘ ದ ಅಧ್ಯಕ್ಷರಾಗಿ ಜಿ ಎಸ್ ಧರ್ಮಪಾಲ್ ಅವರು ಇರುತ್ತಾರೆ.
ತಾಲ್ಲೂಕು ಪಂಚಾಯತಿ ಗೆ ತಪ್ಪು ಮಾಹಿತಿ ನೀಡಿದ ಎಸ್ ಎಸ್ ಕೆ ಸಂಘ
- ಯಾರು ಇವರಿಗೆ ಖಾತೆ ಬದಲಾವಣೆ ಮಾಡಿಕೊಳ್ಳಲು ಅನುಮತಿ ಕೊಟ್ಟರು…? ಪಾವಗಡ ಪುರಸಭೆ ಅಧಿಕಾರಿಗಳುಈ ಕೃತ್ಯದಲ್ಲಿ ಭಾಗಿ ಯಾ…?
- ಡಿಮ್ಯಾಂಡ್ ರಿಜಿಸ್ಟಾರ್ ನಲ್ಲಿ 5000 ಬಾಡಿಗೆ ಅಂತ ತೋರಿಸಿ ಖಾತೆ ಬದಲಾವಣೆ ಮಾಡಿಕೊಂಡಿದ್ದಾರೆ. ಬಾಡಿಗೆ ಗೆ ನೀಡಿದರೆ ಯಾರಾದರು ಖಾತೆ ಬದಲಾವಣೆ ಮಾಡುತ್ತಾರ…? ಇಲ್ಲಿಯ ವರಗೆ ಯಾರಿಗೆ ಬಾಡಿಗೆ ನೀಡಿದ್ದಾರೆ….?
- ಎಸ್ ಎಸ್ ಕೆ ಸಂಘ ದ ನಿಕಟಪೂರ್ವ ಅಧ್ಯಕ್ಷರಾದ ಜಿ ಎಸ್ ಧರ್ಮಪಾಲ್ ಅವರು ಕೆಲವು ವರ್ಷ ಪುರಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ ಅವರ ಅವಧಿಯಲ್ಲಿ ಖಾತೆ ಬದಲಾಯಿಸಿದ್ದಾರ ಇಲ್ಲ ಯಾರ ಅವಧಿಯಲ್ಲಿ ನಡೆದಿದೆ ಎಂಬುದು ತನಿಖೆಯಿಂದ ಹೊರಬರಬೇಕಿದೆ.
ಅಸಮರ್ಥ ಕ್ಷೇತ್ರ ಶಿಕ್ಷಣ ಅಧಿಕಾರಗಳು ಗಳು (ಬಿಇಒ) :
ಸುಮಾರು (1939 -ಪ್ರಸ್ತುತ ಲಭ್ಯವಿರುವ ಶಾಲೆ ದಾಖಲೆಗಳ ಪ್ರಕಾರ) 80 ವರ್ಷಕ್ಕೂ ಹಳೆಯದಾದ ಶಾಲೆಯನ್ನು ಶಿಕ್ಷಣ ಇಲಾಖೆ ಗೆ ಯಾಕೆ ವರ್ಗಾವಣೆಯಾಗಿಲ್ಲ,,,? ಇಲ್ಲಿಯ ವರೆಗು ಬಹಳಷ್ಟು ಜನ ಬಿಇಒ ಗಳು ಪಾವಗಡ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಯಾಕೆ ಯಾರು ಖಾತೆ ಮಾಡಿಸಿಲ್ಲ ಕಾರಣ ರಾಜಕೀಯ ಒತ್ತಡ ನಾ….! ಇಲ್ಲ ಹಣ ದ ಆಮಿಷಕ್ಕೆ ಬಲಿಯಾದರ…? ಎಂಬುದು ಇಲ್ಲಿ ಮೇಲ್ನೋಟಕ್ಕೆ ಕಂಡುಬರುತ್ತಿರುವ ಕಟು ಸತ್ಯ ಎಂದರೆ ತಪ್ಪಾಗದು. ಖಾತೆ ಮಾಡಿಸಲು ಸರ್ಕಾರ ಆದೇಶ ನೀಡಿದರು, ಶಿಸ್ತು ಕ್ರಮದ ಬಗ್ಗೆ ಉಲ್ಲೇಖಿಸಿದ್ದಾರೆ ಆದರೂ ಕ್ಯಾರೆ ಎನ್ನದ ಬಿಇಒ ನಡೆಯ ಬಗ್ಗೆ ಸರ್ಕಾರ ತೀರ್ಮಾನಿಸಬೇಕು.

ಪಾವಗಡ ತಾಲ್ಲೂಕು ಶಿಕ್ಷಣ ಇಲಾಖೆಯಲ್ಲಿ ದೊಡ್ಡ ಮಟ್ಟದಲ್ಲಿ ಬ್ರಷ್ಟಾಚಾರ ನಡೆಯುತ್ತಿದೆ ಹಣ ಕೊಡದಿದ್ದರೆ ಯಾವ ಕೆಲಸ ಹಾಗೊಲ್ಲ ಎಂಬುದು ಕೆಲ ಶಿಕ್ಷಕರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಮಂದಿಯ ಮಾತು,ಇದಕ್ಕೆ ಪುಷ್ಠಿ ನೀಡುತ್ತಿದೆ
ಇಲ್ಲಿ ಬಳಷ್ಟು ಅಧಿಕಾರಿಗಳು ಬಹಳ ವರುಷಗಳಿದ ಇಲ್ಲೆ ಠಿಕಾಣಿ ಹೂಡಿದ್ದಾರೆ,ಸರ್ಕಾರಿ ನಿಯಮಗಳಂತೆ ಕಾಲ-ಕಾಲಕ್ಕೆ ವರ್ಗಾವಣೆಯಾಗಬೇಕು ಅದು ನಡೆದಿಲ್ಲ ಇವರೆಲ್ಲಾ ಬ್ರಷ್ಟಾಚಾರಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ ಎಂಬುದು ತಾಲ್ಲೂಕು ಶಿಕ್ಷಕರ ಅಳಲು.
ಬಿಇಒ ಅಶ್ವಥ್ ನಾರಾಯಣ್ ಮತ್ತು ಇತರೆ ಅಧಿಕಾರಿಯ ನಡೆ ನೋಡಿದರೆ ಇವರಿಗೆ ಶಾಲೆಯನ್ನು ಉಳಿಸಿ ಕೊಳ್ಳುವ ಕಾಳಜಿ ಇಲ್ಲ. ನಮ್ಮ ಅಂದರೆ ಸಪ್ತಸ್ವರ ದ ಒತ್ತಡಕ್ಕೆ ಮಣಿದು ಒಂದು ಪತ್ರವನ್ನು ತಾಲ್ಲೂಕು ಪಂಚಾಯತಿ ಇಒ ಗೆ ಬರೆದು ಸುಮ್ಮನಾಗಿರುವುದು ಇದಕ್ಕೆ ನಿದರ್ಶನ
ಶಾಲೆಯ ಇತಿಹಾಸ :
ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಕ್ರಮಬದ್ದವಾದ ಶೈಕ್ಷಣಿಕ ಚಟುವಟಿಕೆ ಪ್ರಾರಂಭವಾದದ್ದು 1854 ರ ಸರ್ ಚಾರ್ಲ್ಸವುಡ್ ರ ವರದಿ ಯ ನಂತರವೇ. ಮೈಸೂರು ಸಂಸ್ಥಾನದಲ್ಲಿ ಹಾಗೂ ಅದೇ ಸಂಸ್ಶಾನಕ್ಕೆ ಸೇರಿದ್ದ ತುಮಕೂರು ಜಿಲ್ಲೆಯಲ್ಲಿಯೂ ಸಹ ಆಕಾಲದಲ್ಲಿ ಆರಂಭವಾಯಿತು.
ಆ ಕಾಲದಲ್ಲಿ (1831-1881) ಮೈಸೂರು ಸಂಸ್ಥಾನವು ಬ್ರಿಟೀಷರ ನೇರ ಆಡಳಿತದಲ್ಲಿತ್ತು ಆಗ ಸಂಸ್ಥಾನದ ಜುಡಿಷಿಯಲ್ ಕಮೀಷನರ್ ಆಗಿದ್ದ ಮಿ,ದೇವರಾ ಅವರು ರಾಜ್ಯದ ಶೈಕ್ಷಣಿಕ ಪ್ರಗತಿಗೆ ಯೋಜನೆಯೊಂದನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದರು ಅದನ್ನು ತುಸು ಮಾರ್ಪಾಟಿನೊಂದಿಗೆ ಬ್ರಿಟೀಷ್ ಸರ್ಕಾರ ಒಪ್ಪಿತು.ಮುಂದೆ ಶಿಕ್ಷಣ ಇಲಾಖೆಯ ಉಚ್ಚ ಅಧಿಕಾರಿಯಾಗಿದ್ದ ಬಿ. ಲೂಯಿರೈಸ್ ಅವರ ಸಲಹೆಯಂತೆ 1868 ರಲ್ಲಿ ಪ್ರತಿ ಹೊಬಳಿಗೊಂದು ಶಾಲೆ ಎಂಬ ಯೋಜನೆಯನ್ನುಜಾರಿಗೆ ತಂದಿತು.
ಈ ಯೋಜನೆಯಂತೆ ಪ್ರತಿ ಹೋಬಳಿಗೊಂದು ಶಾಲೆಯನ್ನು ಅಲ್ಲಿನ ಜನರು ಬಯಸುವ ಕಡೆ ಕಟ್ಟಡ ಕಟ್ಟಿಕೊಡುವ ಮೂಲಕ ಸ್ಥಾಪಿಸಿದರು.ಮುಂದೆ 1871-72 ರಲ್ಲಿ ಪ್ರತಿ ತಾಲ್ಲೂಕಿಗೊಂದರಂತೆ ಉನ್ನತ ಮಟ್ಟದ ʻ ವರ್ನಾಕ್ಯೂಲರ್ ʼ ಶಾಲೆಗಳನ್ನು ಸಹಾ ಪ್ರಾರಂಭಿಸಿದರು.
ಮೈಸೂರು ಸಂಸ್ಥಾನದಲ್ಲಿ ಗಮನಾರ್ಹ ಪ್ರಗತಿ ಆರಂಭವಾದದ್ದು 1911-16 ಅವಧಿಯಲ್ಲಿ ಶಿಕ್ಷಣ ಕ್ಷೇತ್ರದ ವಿಸ್ತರಣೆ ಮತ್ತು ಸುಧಾರಣೆಗಾಗಿ ಕೆಲವು ಹೊಸ ಚಿಂತನೆಗಳನ್ನು ಈ ಅವಧಿಯಲ್ಲಿ ಜಾರಿಗೊಳಿಸಲಾಯಿತು.ಕೆಲವು ಆಯ್ದ ಪ್ರದೇಶದಲ್ಲಿ ಶಿಕ್ಷಣವನ್ನು ಕಡ್ಡಾಯ ಗೊಳಿಸಿತು ಇದೇ ಅವಧಿಯಲ್ಲಿ ಎಸ್.ಎಸ್.ಎಲ್.ಸಿ ಪರಿಕ್ಷಾ ವ್ಯವಸ್ಥೆ ಜಾರಿಗೆ ತರಲಾಯಿತು.
ಶ್ರೀ ಶನಿಮಹಾತ್ಮ ದೇವಸ್ಥಾನದ ಹಿಂಭಾಗ ಈ ಸರ್ಕಾರಿ ಕಿರಿಯ ಪ್ರಾರ್ಥಮಿಕ ಪಾಠಶಾಲೆ ಇದೆ ಪ್ರಸ್ತುತ ಲಭ್ಯ ವಿರುವ ಶಾಲಾ ದಾಖಲಾತಿಗಳ ಪ್ರಕಾರ 1939 ರಲ್ಲಿ ಆರಂಭವಾಗಿದೆ. ಇದು ಸ್ವಾತಂತ್ರ ಪೂರ್ವ ಮೈಸೂರು ಮಹಾರಾಜರ ಕಾಲದಲ್ಲಿ ಮುಸಾಫಿರ್ ಖಾನ ಜಾಗದಲ್ಲಿ ನಿರ್ಮಿಸಿದ ಶಾಲೆ.
(ವಿಷಯ ಸಂಗ್ರಹ;ತುಮಕೂರು ಜಿಲ್ಲಾ ಗ್ಯಾಸೆಟಿಯರ್)
ಮುಸಾಫಿರ್ ಖಾನ:
ಬ್ರಿಟೀಷರ ಕಾಲದಲ್ಲಿ ಪ್ರಯಾಣಿಕರು ಊರಿನಿಂದ -ಊರುಗಳಿಗೆ ತೆರಳುವಾಗ ಅವರಿಗೆ ಉಳಿದು ಕೊಳ್ಳಲು ತಂಗುದಾಣ ಗಳಿರಲಿಲ್ಲ ಆಗ 1931 ರಲ್ಲಿ ಬ್ರಿಟೀಷರು ಮುಸಾಫರ್ ಖಾನ ಗಳನ್ನು ಪ್ರತಿ ತಾಲ್ಲೂಕುಗಳಲ್ಲಿ ನಿರ್ಮಿಸಿದರಂತೆ.ಪಾವಗಡ ಶನಿಮಹಾತ್ಮ ದೇವಸ್ಥಾನ ಹಿಂಬಾಗ ಸುಮಾರು 4 ಎಕರೆ ಪ್ರದೇಶದಲ್ಲಿ ಮುಸಾಫರ್ ಖಾನ ಇತ್ತು. ಒಟ್ಟು 12 ಕೊಠಡಿಗಳಿದ್ದವು ಅವು ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದವು ಎಂದು ಇತಿಹಾಸಕಾರ ರಾದ ಡಾ.ವಿ ಆರ್ ಚಲುವುರಾಜನ್ ತಿಳಿಸಿದ್ದಾರೆ

ಶನಿ ದೇವಾಲಯದ ಹಿಂಭಾಗವನ್ನು ಮುಸಾಫರ್ ಖಾನ ಗೆ ಉಳಿಸಿಕೊಂಡು ಮಿಕ್ಕ ಜಾಗವನ್ನು ಪ್ರಾರ್ಥಮಿಕ ಶಾಲೆ ಉರ್ದು ಶಾಲೆ, ಹೆಣ್ಣು ಮಕ್ಕಳ ಶಾಲೆನಡೆಸಲಾಗುತ್ತಿತ್ತು. ಒಂದು ಭಾಗ ಮಾತ್ರ ಪ್ರಯಾಣಿಕರು ಇತರೆ ಊರುಗಳಿಂದ ಬಂದರೆ ಅವರಿಗೆ ನೀಡುತ್ತಿದ್ದರು. ಶಾಲೆಯ ಮುಂಭಾಗದಲ್ಲಿ ಟೂರಿಂಗ್ ಸಿನಿಮಾ ನಡೆಯುತ್ತಿತ್ತು, ಇಲ್ಲಿ ಒಂದು ಸೇದುವ ಬಾವಿ ಸಹ ಇತ್ತು. ಈ ಕಟ್ಟಡ ದ ಪಶ್ಚಿಮಕ್ಕೆ ಮೈದಾನ ವಿತ್ತು.ಮೈದಾನದ ಕೊನೆಯಲ್ಲಿ ಕನ್ನಡದ ಸಂಖ್ಯೆ (೧೧) ಹನ್ನೊಂದರ ಆಕಾರದಲ್ಲಿ ಕಟ್ಟಡವನ್ನು ಕಟ್ಟಿದ್ದರು ಸಾರೂಟು ಗಾಡಿ,ಕುದರೆ ಗಾಡಿಗಳನ್ನುನಿಲ್ಲಿಸಿಕೊಳ್ಳಲು ಸಾಮಾನುಗಳನ್ನು ಹಾಕಿ ಕೊಳ್ಳಲು ಬಳಸಲಾಗುತ್ತಿತ್ತು.
ಈಗ ಈ ಕಟ್ಟಡ ಕೆಲವು ಕೊಠಡಿಗಳು ಮಾತ್ರ ಇವೆ ಅದುವೆ ಪ್ರಸ್ತುತ ನಡೆಯುತ್ತಿರುವ ಪ್ರಾರ್ಥಮಿಕ ಪಾಠಶಾಲೆ. ಈ ಜಾಗ ದಲ್ಲಿ ಪುರಸಭೆ,ತಾಲ್ಲೂಕು ಪಂಚಾಯತಿಯವರು ಅಂಗಡಿ ಮಳಿಗೆ ಕಟ್ಟಿದ್ದರೆ,ಶ್ರೀ ಶನೈಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಜಾಗವನ್ನು ದೇವಸ್ಥಾನಕ್ಕೆ ಮಾರಲಾಗಿದೆಯಂತೆ. ಇತಿಹಾಸ ಮಹತ್ವವಿರುವ ಕಟ್ಟಡ ಈಗ ಇತಿಹಾಸ ಪುಟಗಳಲ್ಲಿ ಓದಲು ಮಾತ್ರ ಇದೆ ನೋಡಲು ಕಾಣುವುದಿಲ್ಲ.
ಶ್ರೀ ಶನೈಶ್ವರ ದೇವಸ್ಥಾನ :
ಶ್ರೀ ಶನೈಶ್ವರ ದೇವಸ್ಥಾನ ವನ್ನು1955 ರಲ್ಲಿ ಆರಂಭವಾಯ್ತು .ಅದು ಒಂದು ಮಂಟಪ ದ ರೀತಿ ಇತ್ತು ಹನ್ನೆರಡು ಅಡಿ ಗೆ ಹನ್ನೆರಡು ಅಡಿ ಅಗಲದ ವಿಸ್ತೀರ್ಣ ಹೊಂದಿತ್ತು. ತದನಂತರ ಸುತ್ತ ಮುತ್ತಲಿನ ಜಾಗಗಳನ್ನು ಅನಧೀಕೃತ ವಾಗಿ ಆಕ್ರಮಣ ಮಾಡಿಕೊಂಡಿದ್ದಾರೆ ಹೊರತೆ ನ್ಯಾಯಬದ್ಧ ವಾಗಿ ಕೊಂಡು ಕೊಂಡಿಲ್ಲ,ಈಗ ಇರುವ ಪ್ರಸ್ತುತ ಅಳತೆಯಲ್ಲಿ ದೇವಸ್ಥಾನ ಇರಿಸಿಕೊಂಡಿದ್ದಾರೆ.
ನಂತರ ದಿನಗಳಲ್ಲಿ ಮುಸಾಫಿರ್ ಖಾನ ಗೆ ಪ್ರವೇಶ ಮಾಡಿ ಆ ಜಾಗವನ್ನು ಹಣ ಕೊಟ್ಟು ಕೊಂಡಿದ್ದೇವೆ ಎಂದು ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ದೇವಸ್ಥಾನಕ್ಕೆ ಇಂದಿಗೂ ಅಸಸ್ ಮೆಂಟ್ ನಂಬರ್ ಇಲ್ಲ ಎಂದು ಪಾವಗಡ ತಾಲ್ಲೂಕಿನ ಇತಿಹಾಸಕಾರ ರಾದ ಡಾ.ವಿ ಆರ್ ಚಲುವುರಾಜನ್ ಸಪ್ತಸ್ವರ ಕ್ಕೆ ನೀಡಿದ ಸಂದರ್ಶನ ದಲ್ಲಿ ತಿಳಿಸಿದ್ದಾರೆ,
ಬ್ರಿಟೀಷರಿಗಿಂತಲು ಅಪಾಯಕಾರಿ ಪಾವಗಡ ` ಕೈ’ ಪಡೆ….?
ಸ್ವಾತಂತ್ರ ಪೂರ್ವ ಬ್ರಿಟೀಷರ ಕಾಲದ ಶಾಲೆಯನ್ನು ದ್ವಂಸ ಮಾಡಿ ಸ್ವಾದೀನ ಪಡಿಸಿಕೊಳ್ಳಲು ಮುಂದಾಗಿರುವ ಎಸ್ ಎಸ್ ಕೆ ಸಂಘ ಮತ್ತು ವರ್ಗಾಯಿಸಲು ಹೊರಟಿರುವವರಲ್ಲಿ ಹೆಚ್ಚಾಗಿ ಪಾವಗಡ ತಾಲ್ಲೂಕಿನ ಕಾಂಗ್ರೆಸ್ ನಾಯಕರ ಪಾತ್ರ ಇದೆ,
ತಾಲ್ಲೂಕಿನ ರಾಜಕೀಯ ನಾಯಕರು-ಅಧಿಕಾರಗಳೂ ಬ್ರಿಟೀಷರಿಗಿಂತಲು ಅಪಾಯಕಾರಿ ಎಂದರೆ ತಪ್ಪಾಗುವುದಿಲ್ಲ,ಕಾರಣ ಇಷ್ಟೆ ಬ್ರಿಟೀಷರು ಭಾರತೀಯರಿಗೆ ಶಿಕ್ಷಣ ಬೇಕು ಅದರಲ್ಲೂ ಪಾವಗಡ ಜನರಿಗೆ ಶಿಕ್ಷಣ ಕೊಡಬೇಕು ಎಂದು. ಸರ್ಕಾರಿ ಶಾಲೆ ಸ್ಥಾಪಿಸಿದರೆ ಪಾವಗಡ ಕಾಂಗ್ರೆಸ್ ನಾಯಕರು ಧ್ವಂಸ ಮಾಡಲು ಹೊರಟಿರುವುದು ನಮ್ಮ ಈ ಪದಗಳಿಗೆ ಪುಷ್ಠಿ ನೀಡುವುದಿಲ್ಲವೆ…?
ಎಸ್ ಎಸ್ ಕೆ ಸಂಘ ದಲ್ಲಿ ಗುರುತಿಸಿಕೊಂಡಿರುವವರು ಬಹುತೇಕರು ಕಾಂಗ್ರೆಸ್ ನಾಯಕರು.ಅಮೃತ ಮಹೋತ್ಸವ ವರ್ಷ ದ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅದೇ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿ ಕೊಂಡಿರುವವರು ಅಮೃತ ಮಹೋತ್ಸವ ಕಂಡಿರುವ ಶಾಲೆ ದ್ವಂಸಕ್ಕೆ ಪ್ಲಾನ್ ರೂಪಿಸುತ್ತಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಕೊಡುಗೆ ಇದೆನಾ…..? ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಎಂಬ ಗಾದೆ ಮಾತಿನಂತೆ ಇದೆ ಎನ್ನುತ್ತಿದ್ದಾರೆ ಜನರು…
ಎಸ್ ಎಸ್ ಕೆ ಸಂಘದ ಪ್ಲಾನ್ :
ಇತಿಹಾಸ ವುಳ್ಳ ಈ ಸರ್ಕಾರಿ ಶಾಲೆಯನ್ನು ಹೇಗಾದರು ಮಾಡಿ ಎಸ್ ಎಸ್ ಕೆ ಸಂಘ ಪಡೆಯಲು 2016 ರಲ್ಲಿ ಆರಂಭ ಮಾಢಿ 2019 ರಲ್ಲಿ ಪ್ಲಾನ್ ರೂಪಿಸುತ್ತಾರೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇರುವ ಜಾಗ ಮುಸಾಫರ್ ಖಾನೆ ಎಂಬ ಹೆಸರಿನ ಖಾತೆಯಲ್ಲಿ ಇಂದಿಗು ಇದೆ ಈ ಶಾಲೆಯ ಜಾಗದ ಖಾತೆಯನ್ನು ಶಿಕ್ಷಣ ಇಲಾಖೆಗೆ ವರ್ಗಾವಣೆ ಮಾಡುವ ಗೋಜಿಗೆ ಹೋಗಿಲ್ಲ. ಕಾರಣ ಒಮ್ಮೆ ಶಿಕ್ಷಣ ಇಲಾಖೆ ಖಾತೆ ಯಾದರೆ ಆ ಶಾಲೆ ಜಾಗ ಲಪಟಾಯಿಸಲು ಆಗುವುದಿಲ್ಲ ಇದನ್ನು ಅರಿತು ಖಾತೆ ಮಾಡದಂತೆ ಇಂದಿಗು ಸಂಘದವರು ಪ್ರಯತಿಸುತ್ತಿದ್ದಾರೆ
ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠಶಾಲೆ :
.ಮೊದಲು ಪಾವಗಡ ಟೌನ್ ನಲ್ಲಿ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾರ್ಥಮಿಕ ಬಾಲಕಿಯರ ಪಾಠಶಾಲೆಯಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ (ಆಂಗವಿಕಲ ಮಕ್ಕಳ ಶಿಕ್ಷಣ) ಕ್ಕೆ ನೀಡಿರುವ ಮೂರು ಕೊಠಡಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಎಸ್ ಎಸ್ ಕೆ ಸಂಘದ ಅಧ್ಯಕ್ಷ ರಾಗಿದ್ದ ಧರ್ಮಪಾಲ್ ಅವರ ಮಗ ಸುರೇಶ್ ಬಾಬು, ಆಗಿನ ತಾಲ್ಲೂಕು ಪಂಚಾಯತಿ ಅಧ್ಯಕ್ಷರಾದ ಸೊಗಡು ವೆಂಕಟೇಶ್ ಮತ್ತು ಕೆಲವರು ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠಶಾಲೆ ಬಂದು ಆಗ ಮುಖ್ಯ ಶಿಕ್ಷಕ ರಾಗಿದ್ದ ಶ್ರೀರಾಮಯ್ಯ ಭೇಟಿ ಮಾಡಿ ಶ್ರೀ ಶನಿಮಹತ್ಮಾ ದೇವಸ್ಥಾನ ಹಿಂಭಾಗದ ಸ್ವಾತಂತ್ರ್ಯ ಪೂರ್ವದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಯನ್ನು ನಿಮ್ಮ ಶಾಲೆಗೆ ಶಿಪ್ಟ್ ಮಾಡುತ್ತೇವೆ ಅದಕ್ಕಾಗಿ ( ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ – ದುರಸ್ತಿ ಮಾಡಬೇಕಾಗಿರುತ್ತದೆ) ಮೂರು ಕೊಠಡಿ ನೀಡಲು ಕೇಳುತ್ತಾರೆ ಆಗ ಮುಖ್ಯುಉಪಾಧ್ಯಾರು ನಿರಾಕರಿಸುತ್ತಾರೆ. ಆಗ ಬಂದಿದ್ದಂತ ಎಸ್ ಎಸ್ ಕೆ ಸಂಘ ದ ಅಧ್ಯಕ್ಷರ ಮಗ ಮುಖ್ಯೋಪಾಧ್ಯಾರಾದ ಶ್ರೀರಾಮಯ್ಯ ನಡುವೆ ಮಾತಿನ ಚಕಮುಕಿ ನಡೆದಿತ್ತು ಎಂದು ಕೆಲ ಶಿಕ್ಷಕರು ಸಪ್ತಸ್ವರಕ್ಕೆ ಮಾಹಿತಿ ನೀಡಿದರು..
ಶ್ರೀರಾಮಯ್ಯ ನವರು ಪ್ರಾಮಾಣಿಕ – ದಕ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿಯಾಗಿದ್ದಾರೆ. ಸಪ್ತಸ್ವರ ದಿಂದ ಘಟನೆಯ ವಿವರ ಪಡೆಯಲು ಪ್ರಯತ್ನಿಸಿದಾಗ ಅವರ ಅವಧಿಯಲ್ಲಿ ಶಾಲೆಯಲ್ಲಿ ನಡೆದ ಘಟನೆಗಳಿಂದ ತುಂಬಾ ಮನನೊಂದಿರುವ ಅಂಶ ನಮ್ಮ ಗಮನಕ್ಕೆ ಬಂದಿತು.
ಮುಖ್ಯಶಿಕ್ಷಕರ ಮಾತನ್ನು ಲೆಕ್ಕಿಸದೆ ಮೂರು ಕೋಣೆಗಳಿಗೆ ಸುಣ್ಣ ಮತ್ತು ಮಳೆ ಬಂದರೆ ಸೋರುತ್ತಿದ್ದ ಟಾಪ್ ಗೆ ಸಿಮೆಂಟ್ ಸಾರಿಸಿದ್ದಾರೆಯೆ ಹೊರತು ಯಾವ ಕಟ್ಟಡ ಕಟ್ಟಿಸಿ ಕೊಟ್ಟಿಲ್ಲ, ಅದೇ ನೆಲ,ಅವೇ ಗೋಡೆಗಳು ಎಂಬ ಮಾಹಿತಿಯನ್ನು ಮುಖ್ಯಶಿಕ್ಷಕರು ಹಾಗು ಎಸ್ ಡಿಎಂ ಅದ್ಯಕ್ಷರು ತಿಳಿಸಿದರು.
ಸ್ವಾತಂತ್ರ್ಯ ಪೂರ್ವದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ :
ಸ್ಥಳಾಂತರ ಮಾಡಬೇಕೆಂದಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಎಸ್ ಎಸ್ ಕೆ ಸಂಘ ದ ಅಧ್ಯಕ್ಷರಾದ ಧರ್ಮಪಾಲ್ ಅವರ ಮಗ ( 2019 ರಲ್ಲಿ) ಸುರೇಶ್ ಬಾಬು, ಆಗಿನ ತಾಲ್ಲೂಕು ಪಂಚಾಯತಿ ಅಧ್ಯಕ್ಷರಾದ ಸೊಗಡು ವೆಂಕಟೇಶ್ ಮತ್ತೆ ಕೆಲವರು ಬಂದು ಆಗಿನ ಮುಖ್ಯ ಉಪಾಧ್ಯಾಯರಾದ ಚಿಕ್ಕ ಒಭಳಪ್ಪ ಅವರನ್ನು ಭೇಟಿ ಮಾಡಿ ನೀವು ಈ ಶಾಲೆಯನ್ನು ಖಾಲಿ ಮಾಡಿ ಪಕ್ಕದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾರ್ಥಮಿಕ ಬಾಲಕಿಯರ ಪಾಠಶಾಲೆಯಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರವಿರುವ ಮೂರು ಕೊಠಡಿಗಳಿಗೆ ಸ್ಥಳಾಂತರ ವಾಗಬೇಕು ನಾವು ಈ ಶಾಲೆಯನ್ನು ಹೊಡೆದು ಹಾಕುತ್ತೇವೆ ಎನ್ನುತ್ತಾರೆ. ಇದಕ್ಕೆ ಪ್ರತಿಕ್ರಿಸಿದ ಮುಖ್ಯೋಪಾದ್ಯಾಯರು ಇದು ನಮ್ಮ ಶಾಲೆ ನಾವು ಖಾಲಿ ಮಾಡಿಕೊಂಡು ಹೋಗಬೇಕು ಅಂದರೆ ನನಗೆ ಸರ್ಕಾರ ದ ಆದೇಶ ಬೇಕು ಎಂದು ಅವರಿಗೆ ಗಟ್ಟಿಯಾಗಿ ಉತ್ತರಿಸುತ್ತಾರಂತೆ. ಬಂದ ದಾರಿಗೆ ಸುಂಕ ವಿಲ್ಲದಂತೆ ಎಸ್ ಎಸ್ ಕೆ ಸಂಘ ದವರು, ತಾಲ್ಲೂಕು ಪಂಚಾಯತಿ ಅಧ್ಯಕ್ಷರು ವಾಪಸ್ಸು ಹೋಗುತ್ತಾರೆ.
ಮುಖ್ಯಉಪಾಧ್ಯಾಯರ ಶ್ರಮ :
ಶಾಲಾ ಮುಖ್ಯೋಪಾದ್ಯಾರಾದ ಚಿಕ್ಕ ಒಬಳಪ್ಪ ನವರು 30-3- 2019 ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಉಪನಿರ್ದೇಶಕರು, ಆಯುಕ್ತರು ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿಗಳು,ಸಿ ಇ ಒ ,ಜಿಲ್ಲಾಪಂಚಾಯತ್ ತುಮಕೂರು. ಎಲ್ಲಾ ಅಧಿಕಾರಗಳಿಗೆ ಪತ್ರ ಬರೆಯುತ್ತಾರೆ.
ಪತ್ರದ ಸಾರಾಂಶ :
ಸ್ವಾತಂತ್ರ ಪೂರ್ವದಲ್ಲಿನ ಮೈಸೂರು ಮಹಾರಾಜರ ಕಾಲದಿಂದ ಇಂದಿನ ವರೆಗು ಶಾಲೆ ಸ್ಥಗಿತ ಗೊಳ್ಳದೆ ಲಕ್ಷಾಂತರ ಬಡ ಮಕ್ಕಳಿಗೆ ಜಾತಿ-ಬೇಧವಿಲ್ಲದೆ ಶಿಕ್ಣವನ್ನು ನೀಡುತ್ತಾ ಬಂದಿದ್ದು, ಇಂತಹ ಇತಿಹಾಸವುಳ್ಳ ಶಾಲೆಯನ್ನು ಸ್ಥಳಾಂತರಿಸಲು ಖಾಸಗಿ ಸಂಘ ಸಂಸ್ಥೆಯವರು,ಪ್ರಭಾವಿ ವ್ಯಕ್ತಿಗಳು ನಮ್ಮ ಶಾಲೆಯ ಹತ್ತಿರ ಬಂದು ಶಾಲಾ ಜಾಗವನ್ನು ಎಸ್ ಎಸ್ ಕೆ ಸಂಘ ಕ್ಕೆ ಸೇರ್ಪಡೆ ಗೊಳಿಸಿದೆ. ನೀವು ಶಾಲೆಯನ್ನು ಖಾಲಿಮಾಡಬೇಕುಎಂದು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ.ಸರ್ಕಾರದ ಶಾಲೆಯ ಜಾಗವು ಖಾಸಗಿ ವ್ಯಕ್ತಿಗಳಿಗೆ ಸಿಗಬಾರದು ಎಂಬ ಉದ್ದೇಶದಿಂದ ಮತ್ತು ನನ್ನ ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಎಸ್ ಡಿ ಎಂಸಿ ನಡವಳಿಯಂತೆ ಪತ್ರ ಬರೆದಿದ್ದಾರೆ,
ಸುಮಾರು 80-90 ವರ್ಷದ ಇತಿಹಾಸ ವುಳ್ಳ ಸರ್ಕಾರಿ ಶಾಲೆಯನ್ನು ಎಸ್ ಎಸ್ ಕೆ ಎಂಬ ಖಾಸಗಿ ಸಂಘ ಕ್ಕೆ ಪರಭಾರೆ ಮಾಡಲು ಹುನ್ನಾರ ನಡೆಯುತ್ತಿದ್ದು. ಪುರಾತನ ಶಾಲೆಗೆ ದುರಸ್ತಿಗೆ- ಹೊಸ ಕೊಠಡಿಗಳ ನಿರ್ಮಾಣಕ್ಕೆ ಶಾಲೆಯ ವತಿಯಿಂದ ಎಷ್ಟು ಮನವಿ ಸಲ್ಲಿಸಿದರು ಶಾಲೆಯನ್ನು ಸಂಘ ಕ್ಕೆ ಬಿಟ್ಟುಕೊಡುವುದರ ಪಯುಕ್ತ 10-2೦ ವರ್ಷದಿಂದ ಅನುದಾನ ಬಿಡುಗಡೆ ಮಾಡಿರುವುದಿಲ್ಲ.
ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಂದ ಆದೇಶವಿಲ್ಲದೆ ಖಾಸಗಿ ವ್ಯಕ್ತಿಗಳು ಶಾಲೆಯ ಹತ್ತಿರ ಬಂದು ಶಾಲೆ ಬಿದ್ದುಹೋಗುತ್ತಿದೆ, ನೀವು ಬೇರೆ ಶಾಲೆಯಲ್ಲಿ ಹೋಗಿ ಎಂದು ಹೇಳಲು ಅವರು ಯಾರು…?
ಮುಖ್ಯ ಉಪಾಧ್ಯಾರಾದ ಚಿಕ್ಕಒಭಳಪ್ಪ ನವರ ಶ್ರಮದಿಂದ ಇನ್ನು ಶಾಲೆ ಯಥಾಸ್ಥಿಯಲ್ಲಿ ಇದೆ ಇನ್ನು ಶಿಕ್ಷಣ ಇಲಾಖೆಗೆ ವರ್ಗಾವಣೆ ಯಾಗದೆ ತಾಲ್ಲೂಕು ಪಂಚಾಯತಿ ಹೆಸರಿನಲ್ಲಿ ಖಾತ ಇದೆ. ಪಾವಗಡ ತಾಲ್ಲೂಕಿನ ಬಿ.ಇ,ಒ ಮತ್ತು ಇ,ಒ ಪ್ರಯತ್ನ ಮಾಡುತ್ತಿಲ್ಲ.
ಎಸ್ ಎಸ್ ಕೆ ಸಂಘ ದ ದಬ್ಬಾಳಿಕೆ…
ಇಲ್ಲಿ ಗೋಚರಿಸುವ ಪ್ರಮುಖ ಅಂಶ ವೆಂದರೆ ಶಾಲೆ ಶಿಪ್ಟ್ ಮಾಡುವ ಬಗ್ಗೆ ನಿರ್ಧಾರವನ್ನು ಶಿಕ್ಷಣ ಇಲಾಖೆ/ಸರ್ಕಾರ ನಿರ್ಧಾರ ಮಾಡಬೇಕೇ ಹೊರತು ಎಸ್ ಎಸ್ ಕೆ ಸಂಘ ದವರಲ್ಲ. ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993 ರ ಪ್ರಕಾರ ಸರ್ಕಾರಿ ಶಾಲೆಗಳನ್ನು ಅಭಿವೃದ್ಧ ಪಡಿಸುವ ಜವಬ್ದಾರಿ ತಾಲ್ಲೂಕು ಪಂಚಾಯತಿಯದ್ದು
ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿದರೆ ಅದನ್ನು ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಆದೇಶ ಪಡೆದು ಶಾಲೆ ಖಾಲಿ ಮಾಡಿಸಲು ಹೋಗಬೇಕು, ಅದನ್ನು ಬಿಟ್ಟು ಏಕಾ -ಏಕಿ ಶಾಲೆ ಖಾಲಿ ಮಾಡಿ ಎಂದು ಎಸ್ ಎಸ್ ಕೆ ಸಂಘ ದವರು ಹೋಗುತ್ತಾರೆ ಎಂದರೆ ಇಲ್ಲಿ ಯಾವ ಮಟ್ಟದಲ್ಲಿ ದಬ್ಬಾಳಿಕೆ ಪಾವಗಡ ಪಟ್ಟಣದಲ್ಲಿ ಇದೆ ಎಂಬುದು ಈ ಘಟನೆಯಿಂದ ಅರ್ಥವಾಗುತ್ತದೆ.
ಬ್ರಷ್ಟಾಚಾರ
ಶಾಲೆಗೆ ಸುಣ್ಣ- ಬಣ್ಣ ದ ಹೆಸರಿನಲ್ಲಿ 9 ಲಕ್ಷ ಗುಳುಂ
ಎಸ್ ಎಸ್ ಕೆ ಸಂಘ ಮೂರು ಲಕ್ಷ್ಯ ಖರ್ಚು …!
ಶಿಪ್ಟ್ ಮಾಡಿಸಲು ಪ್ಲಾನ್ ಮಾಡಿದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾರ್ಥಮಿಕ ಬಾಲಕಿಯರ ಪಾಠಶಾಲೆಯಲ್ಲಿ ಮೂರು ಕೊಠಡಿ ಕಟ್ಟಿಸಲು ಮೂರು ಲಕ್ಷ ಹಣವನ್ನು ಎಸ್ ಎಸ್ ಕೆ ಸಂಘದಿಂದ ಖರ್ಚು ಮಾಡಿದ್ದೇವೆ ಎಂದು ಅಧ್ಯಕ್ಷ ಕೆ.ವಿ ಶ್ರೀನಿವಾಸ್ ಮೊದಲು ದೂರವಾಣಿ ಮೂಲಕ ಸಂಪರ್ಕಿಸಿದಾಗ ಮಾಹಿತಿ ನೀಡುತ್ತಾರೆ.
ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾರ್ಥಮಿಕ ಬಾಲಕಿಯರ ಪಾಠಶಾಲೆಗೆ ಭೇಟಿ ಮಾಡಿ ಅಲ್ಲಿನ ಮುಖ್ಯಶಿಕ್ಷಕರು ಹಾಗು ಎಸ್ ಡಿಎಂ ಅದ್ಯಕ್ಷರನ್ನು ವಿಚಾರಿಸಿದಾಗ ಅವರು ಹೇಳಿದ್ದು – ಕೇವಲ ಗೋಡೆಗಳಿಗೆ ಸುಣ್ಣ ಮಾತ್ರ ಹೊಡೆದಿದ್ದಾರೆ ಮತ್ತು ಮಳೆ ಬಂದರೆ ಸೋರುತ್ತಿದ್ದ ಟಾಪ್ ಗೆ ಸಿಮೆಂಟ್ ಸಾರಿಸಿ ಹೋಗಿದ್ದಾರೆ ಎಂದು ತಿಳಿಸಿದರು. ನಂತರ ಎಸ್ ಎಸ್ ಕೆ ಸಂಘದ ಅಧ್ಯಕ್ಷರಾದ ಕೆ.ವಿ ಶ್ರೀನಿವಾಸ್ ಅವರನ್ನು ಭೇಟಿಯಾಗಿ ನೀವು ಹೇಳಿದ ಶಾಲೆಯಲ್ಲಿ ಯಾವ ಹೊಸ ಕಟ್ಟಡ ಕಟ್ಟಿಲ್ಲ,ನೀವು ನಮಗೆ ತಪ್ಪು ಮಾಹಿತಿ ನೀಡಿದ್ದೀರ ಎಂದಾಗ, ಅವರು ದರುಸ್ತಿ ಮಾತ್ರ ಮಾಡಿಸಿದ್ದೇವೆ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ.ಸಂಘ ದಿಂದ ಮೂರು ಲಕ್ಷರೂಪಾಯಿ ಯನ್ನು ಚೆಕ್ ರೂಪದಲ್ಲಿ ನೀಡಿದ್ದೇವೆ ಎಂಬ ಮಾಹಿತಿ ನೀಡಿದ್ದಾರೆ.
ತಾಲ್ಲೂಕು ಪಂಚಾಯತಿಯಿಂದ ಆರು ಲಕ್ಷ ಬಿಲ್

ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾರ್ಥಮಿಕ ಬಾಲಕಿಯರ ಪಾಠಶಾಲೆಯಲ್ಲಿನ ಇದೇ ಮೂರು ಕೊಠಡಿ ದುರಸ್ತಿಗೆ ಪಾವಗಡ ತಾಲ್ಲೂಕು ಪಂಚಾಯತಿಯ 2018-19 ಸೇರ್ಪಡೆ ಮತ್ತು ಮಾರ್ಪಾಡು ಎಂಬ ಕಾರ್ಯಕ್ರಮದ ಅಡಿಯಲ್ಲಿ, ಕಟ್ಟಡ 1 ಕ್ಕೆ 2 ಲಕ್ಷ ದಂತೆ ಮೂರು (3) ಕಟ್ಟಡ ದುರಸ್ತಿಗೆ ಆರು( 6) ಲಕ್ಷ ಖರ್ಚು ಮಾಡಿದ್ದೇವೆ ಎಂದು ಬಿಲ್ ಮಾಡಿಕೊಂಡಿದ್ದಾರೆ, ತುಮಕೂರು ಜಿಲ್ಲಾಪಂಚಾಯತಿಯಿಂದ ಅನುಮೋದನೆ ದೊರೆತಿದೆ, ತಾಲ್ಲೂಕು ಪಂಚಾಯತಿ ಅದ್ಯಕ್ಷರಾದ ಸೊಗಡು ವೆಂಕಟೇಶ್, ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹಮೂರ್ತಿ ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿ ಸಿದ್ದಗಂಗಯ್ಯ ನವರ ಅವಧಿಯಲ್ಲಿ ಕೆಲಸ ನಡೆದಿದೆ.
ಈ ಶಾಲೆಯ ಮೂರು ಕೊಠಡಿ ದುರಸ್ತಿ ಕೆಲಸವನ್ನು ಎಸ್ ಎಸ್ ಕೆ ಸಂಘದವರು ನಾವು ಮಾಡಿಸಿಕೊಟ್ಟಿದ್ದೇವೆ ಎನ್ನುತ್ತಿದ್ದರೆ, ತಾಲ್ಲೂಕು ಪಂಚಾಯತಿಯಿಂದ ಇದೆ ಶಾಲೆಯ ಕೊಠಡಿಗಳ ದುರಸ್ತಿಗೆ ಆರು ಲಕ್ಷ ಹಣ ಬಿಲ್ ಮಾಡಿಕೊಂಡಿದ್ದಾರೆ. ಈ ಹಣ ಯಾರ- ಯಾರ ಜೇಬು ಸೇರಿದೆ- ತನಿಖೆಯಿಂದಷ್ಟೆ ಹೊರಬರಬೇಕು.
ಎಸ್ ಎಸ್ ಸಂಘ ದ ಅಧ್ಯಕ್ಷರ ಮಾತುಗಳು
ಎಸ್ ಎಸ್ ಕೆ ಸಂಘ ದ ಅಧ್ಯಕ್ಷರಾದ ಕೆ ವಿ ಶ್ರೀನಿವಾಸ್ ಅವರನ್ನು ಸಪ್ತಸ್ವರ ಡಿಜಿಟಲ್ ಮಾದ್ಯಮ ದಿಂದ ಸಂದರ್ಶನ ಮಾಡಿದಾಗ ಅವರು ಹೇಳಿದ್ದು…..

ಪಾವಗಡ ಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಕೊಠಡಿಗಳಿದ್ದವು ಅವಗಳಲ್ಲಿ ಮೂರು ಕೊಠಡಿ ಬಿದ್ದು ಹೋಗಿದ್ದವು ಒಂದು ಕೊಠಡಿಯಲ್ಲಿ ತರಗತಿಗಳು ನಡೆಯುತ್ತಿದ್ದವು. ಬಿದ್ದು ಹೋಗಿರು ಶಾಲೆಯ ಜಾಗವನ್ನು ಎಸ್ ಎಸ್ ಕೆ ಸಂಘ ಕ್ಕೆ ನೀಡಲು 2016 ರಲ್ಲಿ ಅರ್ಜಿ ಸಲ್ಲಿಸಿದ್ದೆವು.
ತಾಲ್ಲೂಕು ಪಂಚಾಯತಿ ಅಧ್ಯಕ್ಷರು, ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿಗಳು ಮೌಖಿಕವಾಗಿ ನಮಗೆ ಒಂದು ಷರತ್ತನ್ನು ಹಾಕಿದರು. ಸ್ಕೂಲು ಬಿದ್ದುಹೊಗಿದೆ ನಾವು ನೋಡಿದ್ದೇವೆ ತಪಾಸಣೆ ಮಾಡಿದ್ದೇವೆ, ನೀವು ಶಾಲೆ ಗೆ ಮೂರು ಕೊಠಡಿಗಳನ್ನು ಕಟ್ಟಿಸಿಕೊಡಿ ನಾವು ಶಾಲೆಯನ್ನು ಶಿಪ್ಟ್ ಮಾಡುತ್ತೇವೆ, ನಂತರ ಒಂದು ಬೆಲೆ ನಿಗದಿ ಮಾಡುತ್ತೇವೆ ಆಗ ನೀವು ತೆಗೆದುಕೊಳ್ಳಿ ಎಂದರು, ಆಗ ಎಲ್ಲಿ ಕಟ್ಟಿಸಬೇಕು ಎಂದು ಕೇಳಿದಾಗ. ಪಾವಗಡ ಪಟ್ಟಣ ದ ಬಿ ಎಸ್ ಎನ್ ಎಲ್ ಕಚೇರಿಯ ಪಕ್ಕದಲ್ಲಿ ಇರುವ ಕನ್ನಡ ಮಾದರಿ ಹಿರಿಯ ಪ್ರಾರ್ಥಮಿಕ ಬಾಲಕಿಯರ ಪಾಠಶಾಲೆ ಯಲ್ಲಿ ಎಂದು ಹೇಳಿದರು.
ನಾವು ಎರಡು ತಿಂಗಳಲ್ಲಿ ಕಟ್ಟಡ ಕೆಲಸ ಶುರು ಮಾಡಿ ಮೂರು ತಿಂಗಳಲ್ಲಿ ಕಟ್ಟಡ ಮುಗಿಸಿ ಅಸ್ತಾಂತರ ಮಾಡಿದೆವು. ಶಾಲೆ ಶಿಪ್ಟ್ ಆಯಿತು ಮಕ್ಕಳು ಅಲ್ಲಿ ಪಾಠ ಕೇಳಿಕೊಳ್ಳುತ್ತಿದ್ದಾರೆ. ಕಟ್ಟಡ ಕಟ್ಟಿಸಲು ಮೂರು ಲಕ್ಷ ರೂಪಾಯಿ ಹಣವನ್ನು ಸಂಘ ದಿಂದ ಖರ್ಚು ಮಾಡಿದ್ದೇವೆ ಎನ್ನುತಾರೆ,
ಇನ್ನೊಂದು ವಿಷಯವನ್ನು ವರು ಹೇಳುತ್ತಾರೆ ಈ ಶಾಲೆ ದೇವಸ್ಥಾನ ದ ಹಿಂದೆ ಇದೆ, ರಾತ್ರಿ ಆದರೆ ಬೀಯರ್ ಬಾಟಲ್ ವಿಸ್ಕಿ ಕುಡಿಯುತ್ತಾರೆ, ಅನೈತಿಕ ಚಟುವಟಿಕೆಗಳು ಈ ಶಾಲೆಯ ಆವರಣದಲ್ಲಿ ನಡೆಯುತ್ತಿವೆ.
ಎಸ್ ಎಸ್ ಸಂಘ ಅಧ್ಯಕ್ಷರಾದ ಕೆ ವಿ ಶ್ರೀನಿವಾಸ್ ಅವರು ಸಹ ಓದಿದ ಶಾಲೆ ಇದು. ತಾವು ಓದಿದ ಶಾಲೆಯನ್ನು ಸಂಘ ದ ವತಿಯಿಂದ ನಿವೇ ಅಭಿವೃದ್ಧಿ ಪಡಿಸಬಹುದಲ್ಲವಾ ಎಂದಾಗ ಅವರ ಬಳಿ ಉತ್ತರವೇ ಇಲ್ಲ….
ಎಸ್ ಎಸ್ ಕೆ ಎಂಬುದು ಶನಿ ಮಹಾತ್ಮ ದೇವಸ್ಥಾನ ಮುನ್ನೆಡೆಸುವ ಸಂಘ,ಅದರ ಅದ್ಯಕ್ಷರು ಧರ್ಮಾಧಿಕಾರಿಗಳಿದ್ದಂತೆ ಅವರೇ ತಪ್ಪು ಮಾಹಿತಿ( ಸುಳ್ಳು) ನೀಡಿದರೆ ಹೇಗೆ…?
ವಾಸ್ತವತೆ
- ಇಂದಿಗೂ ಶಾಲೆ ಇತಿಹಾಸ ಪೂರ್ವ ಕಟ್ಟಡ ದಲ್ಲೆ ನಡೆಯುತ್ತಿದೆ.
ಕೇವಲ ಸುಣ್ಣ ಮತ್ತು ಟಾಪ್ ಮೇಲೆ ಸಿಮೆಂಟ್ ಸಾರಿಸಿ ಮೂರು ಕಟ್ಟಡ ಕಟ್ಟಿಕೊಟ್ಟಿದ್ದೇವೆ ಎನ್ನುತ್ತಾರೆ,
ಶಾಲೆ ಸುತ್ತಾ ಕಾಂಪೌಂಡ್ ಇದೆ,ಸಂಜೆ ಶಾಲೆ ಮುಗಿದ ಮೇಲೆ ಶಿಕ್ಷಕರು ಬೀಗ ಹಾಕಿ ಕೊಂಡು ಹೋಗುತ್ತಾರೆ ಯಾವ ಅನೈತಿಕ ಚಟುವಟಿಕೆ ನಡೆಯುವ ಸಾಧ್ಯತೆ ಇಲ್ಲ.ಆದರೆ ಎಸ್ ಎಸ್ ಕೆ ಸಂಘ ದ ಅಧ್ಯಕ್ಷರು ತಪ್ಪು ಮಾಹಿತಿಯನ್ನು ನೀಡುತ್ತಾರ
ಪುರಸಭೆಯಲ್ಲಿ ಶಾಲೆಯಿರುವ ಜಾಗವನ್ನು ವಾಮ ಮಾರ್ಗದ ಮೂಲಕ ಖಾತೆ ಮಾಡಿಸಿಕೊಂಡು, ಆ ವಿಷಯವನ್ನು ತಾಲ್ಲೂಕು ಪಂಚಾಯತಿ ಯ ಗಮನಕ್ಕೆ ತರದೆ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸುವಂತೆ ಮಾಡಿರುವುದು.
ಶಾಲೆ ಮತ್ತು ಸುತ್ತಲಿನ ಜಾಗ ವನ್ನು ಕಬಳಿಸಲು ಬಹಳ ವರ್ಷಗಳಿದ ಹೊಂಚು ಹಾಕಿ ಕುಳಿತ್ತದ್ದರು ಎಂಬುದು ಅವರ ಮಾತುಗಳಿಂದ ಅರ್ಥವಾಗುತ್ತದೆ. ಜೊತೆಗೆ ಅವರು ಹೇಳುವಂತೆ ಸ್ಕೂಲ್ ನ ಪಕ್ಕದ ಜಾಗವನ್ನು ಆಗಲೆ 18 ಲಕ್ಷಕ್ಕೆ ಖರೀದಿಸಿದ್ದೇವೆ ಎನ್ನತ್ತಾರೆ. ಮುಸಾಫಿರ್ ಖಾನ ಸೇರಿದ ನಾಲ್ಕು ಎಕರೆ ಜಾಗ ಇತ್ತು ಎಂದು ಇತಿಹಾಸ ಕಾರರು ಹೇಳುತ್ತಾರೆ.ಈಗ ಜಾಗ ಒತ್ತುವರಿ ಆಗಿ ಪರರ ಪಾಲಾಗಿದೆ,ಈ ಎಲ್ಲಾ ವ್ಯವಹಾರದ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕಿದೆ
ಜಿಲ್ಲಾ ಪಂಚಾಯತಿಯಿಂದ ತನಿಖೆ
ಪಾವಗಡ ತಾಲ್ಲೂಕು 2018-19 ಸಾಲಿನ ಸೇರ್ಪಡೆ ಮತ್ತು ಮಾರ್ಪಾಡು ಕಾರ್ಯಕ್ರಮ ಅಡಿಯಲ್ಲಿ ಆರು ಲಕ್ಷ ರೂಪಾಯಿಯ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕಿದೆ ಮತ್ತು ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993 ನ್ನು ಉಲ್ಲಂಘಿಸಿ ಸಾಮಾನ್ಯ ಸಭೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಸ್ವತಂತ್ರ್ಯ ಪೂರ್ವ ಸರ್ಕಾರಿ ಶಾಲೆ ಮಾರಾಟ ನಿರ್ಣಯವನ್ನು ತಡೆಯದೆ ಕಾನೂನು ಬಾಹಿರವಾಗಿ ಅನುಮೋದನೆ ಅವಕಾಶ ಮಾಡಿಕೊಟ್ಟಅಂದಿನ ಇಒ ನರಸಿಂಹಮೂರ್ತಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕಿದೆ…!
ಜಿಲ್ಲಾಪಂಚಾಯತ್ ನ ಹಿರಿಯ ಅಧಿಕಾರಿಗಳು ಮತ್ತು ಸಿಇಓ ಡಾ. ಕೆ ವಿದ್ಯಾಕುಮಾರಿ ಯವರ ನಡೆ ನೋಡಿದರೆ ಪ್ರಾಮಾಣಿಕವಾಗಿ ತನಿಖೆ ನಡೆಯುತ್ತಾ ಎಂಬುದು ಒಂದು ಮಿಲಿಯನ್ ಡಾರ್ ಪ್ರಶ್ನೆ ಯಾಗಿದೆ…
ಶಾಲೆ ಉಳಿಸಲು ಸಪ್ತಸ್ವರ ಮಾದ್ಯಮದ ಪ್ರಯತ್ನ :
ಮೊದಲು ಪ್ರಧಾನ ಕಾರ್ಯದರ್ಶಿಗಳು ಶಿಕ್ಷಣ ಇಲಾಖೆ,ಬೆಂಗಳೂರು ಇವರಿಗೆ ಮನವಿ ಪತ್ರ
ನಮ್ಮ ಪತ್ರಕ್ಕೆ ಸ್ಪಂದಿಸಿದ ಅಧಿಕಾರಿಗಳು ಮಧುಗಿರಿ ಉಪನಿರ್ದೇಶಕರಿಗೆ ಮತ್ತು ಪಾವಗಡ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ತಕ್ಷಣ ಖಾತೆ ಮಾಡಿಸಿಕೊಳ್ಳಲು ಸೂಕ್ತ ಕ್ರಮವಹಿಸುವಂತೆ ಪತ್ರ.
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಲಾದ ಎಲ್ ಕೆ ಅತೀಕ್ ಅವರನ್ನು ಭೇಟಿ ಮಾಡಿ ಸರ್ಕಾರಿ ಶಾಲೆ ಖಾಸಗಿ ಸಂಘದ ಪಾಲಾಗದಂತೆ ಹಾಗು ಶಿಕ್ಷಣ ಇಲಾಖೆಗೆ ವರ್ಗಾಯಿಸುವಂತೆ ಪತ್ರದ ಮೂಲಕ ವಿನಂತಿ ಮಡಿದಾಗ ಅವರು ನಮ್ಮಪತ್ರವನ್ನು ಸಿಇಒ, ಜಿಲ್ಲಾ ಪಂಚಾಯತಿ ತುಮಕೂರಿ ಗೆ ಕಳುಹಿಸಿಕೊಡುತ್ತಾರೆ, ಸರ್ಕಾರಿ ಶಾಲೆಯ ಜಾಗ ಖಾಸಗಿ ಸಂಘ ಕ್ಕೆ ಕೊಡಲು ಸಾಧ್ಯವಿಲ್ಲ / ಕೊಡಲು ಬರುವುದಿಲ್ಲ ಎಂದು ನಮಗೆ ತಿಳಿಸಿದರು.
ಜೂನ್ 14 ರಂದು ಅಪರ ಮುಖ್ಯ ಕಾರ್ಯದರ್ಶಿಗಲಾದ ಎಲ್ ಕೆ ಅತೀಕ್ ಅವರು ನಮ್ಮ ಪತ್ರವನ್ನು ಜಿಲ್ಲಾ ಪಂಚಾಯತಿಗೆ ಕಳುಹಿಸಿದರೆ, ಜಿಲ್ಲಾಪಂಚಾಯತಿ ಯವರು ಒಂದು ವರೆ ತಿಂಗಳ ನಂತರ ಅಂದರೆ ಆಗಸ್ಟ್ 2 ರಂದು ಮಧುಗಿರಿ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಯವರಿಗೆ ಶಾಲೆಯ ಬಗ್ಗೆ ವರದಿ ನೀಡುವಂತೆ ಪತ್ರ ಬರೆಯುತ್ತಾರೆ,
ಇದು ಜಿಲ್ಲಾಪಂಚಾಯತ್ ಕಾರ್ಯ ವಿಧಾನ ಹೇಗಿದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ, ಜಿಲ್ಲಾ ಪಂಚಾಯತ್ ಸಿಇಒ ವಿಧ್ಯಾಕುಮಾರಿ ಅವರನ್ನು ಬೇಟಿಯಾಗಿ ಶಾಲೆ ಹೆಸರಿಗೆ ಖಾತೆ ಮಾಡಿಕೊಡುವಂತೆ ಮನವಿ ಮಾಡಿಕೊಂಡಾಗ, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ,ಆದರೆ ಅವರ ಕೆಳ ಅಂತದ ಅಧಿಕಾರಿಗಳು ಪ್ರಕ್ರಿಯೆ ಆರಂಭ ಮಾಡಲು ಆಸಕ್ತಿ ತೋರಿಸುತ್ತಿಲ್ಲ.ಕಾರಣ ಕಾಣದ ಕೈ ಗಳ ಕೈವಾಡ ವಿದ್ದಂತಿದೆ
ಸಚಿವರತ್ತ ನಮ್ಮ ಪಯಣ :
ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ಅವರ ಗಮನಕ್ಕೆ ತಂದಾಗ ಅವರು ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ ವಿಧ್ಯಾಕುಮಾರಿ ಯಾವರಿಗೆ ಪೋನ್ ಮಾಡಿ ಶಾಲೆ ಯನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸಿ ಕೊಡುವಂತೆ ತಿಳಿಸಿದರು ಜೊತೆಗೆ ಪತ್ರವನ್ನು ಬರೆದಿದ್ದಾರೆ.
ಪಾವಗಡ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸಂಪೂರ್ಣ ವರದಿ ಕೇಳಿದ್ದು ಬಂದ ನಂತರ ಕ್ರಮ ಜರುಗಿಸುವುದಾಗಿ ಸಚಿವರಿಗೆ ಜಿಲ್ಲಾ ಪಂಚಾಯತಿ ಸಿಇಓ ಡಾ. ಕೆ ವಿದ್ಯಾಕುಮಾರಿ ಯವರು ತಿಳಿಸಿದ್ದಾರೆ.
ಸಪ್ತಸ್ವರ ವರದಿ ಗೆ ಸ್ಪಂದಿಸಿದ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,ಮಧುಗರಿ ಇವರು ಪಾವಗಡ ಬಿಇಓ ಅವರಿಗೆ ನಿಮ್ಮ ಹಂತದಲ್ಲಿ ಕೈಗೊಂಡಿರುವ ಎಲ್ಲಾ ಅಗತ್ಯ ಕ್ರಮಗಳ ವರದಿಯ ದಾಖಲೆಗಳ ಸಮೇತ ಸಲ್ಲಿಸುವಂತೆ 14-7-22 ರಂದು ತಿಳಿಸಿಲಾಗಿತ್ತು.
ಖಾಸಗಿ ಸಂಘ ದ ಪಾಲಾಗದಂತೆ ಸಂಬಂದಿಸಿದ ಅಧಿಕಾರಿಗಳು ತಕ್ಷಣ ಕ್ರಮ ವಹಿಸಲು ಹಾಗೂ ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ವಿಳಂಬಕ್ಕೆ ಅವಕಾಶ ನೀಡದಂತೆ ಮೂರು (3) ದಿನದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಗೃಹಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ ಅವರಿಗೆ ಶಾಲೆ ಯ ವಿಷಯ ತಿಳಿಸಲಾಯಿತು ಅವರು ಶಾಲೆ ಉಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು ಮತ್ತು ಸಿ ಇಓ ಜಿಲ್ಲಾ ಪಂಚಾಯತಿ, ತುಮಕುರು ಇವರಿಗೆ ಪತ್ರವನ್ನು ಬರೆದಿದ್ದಾರೆ.
ಪಾವಗಡ ತಾಲ್ಲೂಕಿನ ಪ್ರತಿಯೋಬ್ಬರು ಓದಲೇ ಬೇಕಾದ ಸ್ಟೋರಿ ಇದು- ನಾವು ಎಂತಹ ಜನಪ್ರತಿನಿಧಿಗಳನ್ನುಆಯ್ಕೆ ಮಾಡಿದ್ದೇವೆ ಅವರು ಎಂತಹ ಅಧಿಕಾರಿಗಳನ್ನು ತಂದು ತಾಲ್ಲೂಕಿನಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂಬುದರ ಒಂದು ಸತ್ಯ ಕಥೆಯನ್ನು ದಾಖಲೆಗಳ ಸಮೇತ ನೀಡುತ್ತಿದ್ದೇವೆ. ಒಬ್ಬ ಜನಪ್ರತಿನಿಧಿಯನ್ನು ಆಯ್ಕೆ ಮಾಡುವಾಗ ಅವರು ಕೊಡುವ ಹಣ-ಹೆಂಡ ಕ್ಕೆ ನಮ್ಮ ಮತ ಮಾರಿಕೊಂಡರೆ ಮುಂದೆ ಅವರು ಸರ್ಕಾರಿ ಶಾಲೆ ಮಾರಾಟ ಮಾಡುತ್ತಾರೆ.ಸಾರ್ವಜನಿಕರ ಹಣ ಲೂಟಿ ಹೊಡೆಯುತ್ತಾರೆ. ಇದು ನಮ್ಮ ಸ್ವಯಂಕೃತ ಅಪರಾಧ ಅಲ್ಲವೆ….?