*ರಾಜ್ಯಕ್ಕೆ ಹೆಲ್ತ್ ವಿಷನ್ ದಾಖಲೆಯನ್ನು ರೂಪಿಸಲಾಗುವುದು : ಸಿಎಂ*
ಬೆಂಗಳೂರು ನವಂಬರ್ 17: ರಾಜ್ಯಕ್ಕೆ ಶಾಶ್ವತವಾದ ಹಾಗೂ ದೂರದೃಷ್ಟಿಯ ಹೆಲ್ತ್ ವಿಷನ್ ದಾಖಲೆಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಶ್ರೀ ಜಯದೇವ ಹೃದ್ರೋಗ ಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ನಿರ‍್ಮಾಣಗೊಂಡಿರುವ ೩೫೦ ಹಾಸಿಗೆ ಸಾರ‍್ಥ್ಯದ ನೂತನ ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಇಂದು ಮಾತನಾಡಿದರು
ಕರ್ನಾಟಕ ಪ್ರಗತಿಪರವಾದ ರಾಜ್ಯ. ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ವೃದ್ಧಿಸಲಾಗುವುದು. ಈ ವರ್ಷ ೨೫೦ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮುಂದಿನ ವರ್ಷ ಕೇಂದ್ರ ಸರ್ಕಾರದ ಸಹಾಯದಿಂದ ೨೫೦ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಕೈಗೊಳ್ಳಲಾಗುವುದು. ಇದಲ್ಲದೆ ಸ್ಪೆಷಲಿಸ್ಟ್ ಆಸ್ಪತ್ರೆ ಹಾಗೂ ಪ್ರಾದೇಶಿಕ ಕೇಂದ್ರಗಳಲ್ಲಿ ಹೃದ್ರೋಗ, ಕ್ಯಾನ್ಸೆರ್ ಆಸ್ಪತ್ರೆಗಳ ನಿರ್ಮಾಣಕ್ಕೆ ಸರ್ಕಾರ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
*ಕನ್ನಡ ನಾಡಿನಲ್ಲಿ ಜ್ಞಾನ ಒಂದು ಶಕ್ತಿ*
ಸುಧಾಮೂರ್ತಿ ಹಾಗೂ ನಾನು ಒಂದೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಟೆಲ್ಕೊ ಸಂಸ್ಥೆಯಲ್ಲಿ ಇಬ್ಬರೂ ಸೇವೆ ಸಲ್ಲಿಸಿದ್ದೇವೆ ಎಂದು ಸ್ಮರಿಸಿದ ಮುಖ್ಯಮಂತ್ರಿಗಳು, ಇನ್‌ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿಯವರ ಬದುಕು ನಮಗೆಲ್ಲಾ ಪ್ರೇರಣೆ. ಅವರ ಹೃದಯ ವೈಶ್ಯಾಲ್ಯತೆ, ದೂರದೃಷ್ಟಿ ಬೇರೆ ಯಾರಿಗೂ ಸಾಧ್ಯವಿಲ್ಲ. ಕನ್ನಡ ನಾಡಿನಲ್ಲಿ ಜ್ಞಾನ ಒಂದು ಶಕ್ತಿ ಎಂದು ಈ ದಂಪತಿ ನಿರೂಪಿಸಿದ್ದಾರೆ ಎಂದು ತಿಳಿಸಿದರು.
೨೧ನೇ ಶತಮಾನ ಜ್ಞಾನದ ಶತಮಾನ. ಜ್ಞಾನಕ್ಕೆ ಬಹಳಷ್ಟು ಮಹತ್ವವಿದೆ. ತಮ್ಮ ಕರ್ತವ್ಯದ ಜೊತೆ ಕರ್ತವ್ಯದ ಲಾಭವನ್ನು ಜನೋಪಯೋಗಕ್ಕೆ ಬಳಸಿದಾಗ ಕರ್ತವ್ಯ ಕಾಯಕವಾಗುತ್ತದೆ. ಕೆರೆಯ ನೀರನ್ನು ಕರೆಗೆ ಚೆಲ್ಲಿ ಎಂಬಂತೆ ಇನ್‌ಫೋಸಿಸ್ ಫೌಂಡೇಷನ್ ೩೫೦ ಹಾಸಿಗೆ ಆಸ್ಪತ್ರೆ ನಿರ್ಮಿಸಿದೆ. ಈ ಆಸ್ಪತ್ರೆಯ ನಿರ್ಮಾಣದಿಂದ ಜಯದೇವ ಆಸ್ಪತ್ರೆಯ ಒತ್ತಡ ತಗ್ಗಲು ಸಹಕಾರಿಯಾಗಿದೆ.
ಜಯದೇವ ಹೃದ್ರೋಗ ಸಂಸ್ಥೆ ಹಂತ ಹಂತವಾಗಿ ಬೆಳೆದಿದೆ. ಅಸಂಖ್ಯಾತ ಜನರಿಗೆ ಚಿಕಿತ್ಸೆ ನೀಡುವುದು ಪ್ರಪಂಚದ ಎಂಟನೇ ಅದ್ಭುತದಂತೆ ಭಾಸವಾಗುತ್ತದೆ. ಡಾ|| ಮಂಜುನಾಥ ಅವರ ಸಮರ್ಥ ನಾಯಕತ್ವದಲ್ಲಿ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜಯದೇವ ಸಂಸ್ಥೆಯನ್ನು ಕಟ್ಟಲು ತಮ್ಮ ಜೀವನವನ್ನೇ ಮುಡುಪಾಗಿಟ್ಟ ಡಾ|| ಮಂಜುನಾಥ್ ಅವರನ್ನು ಅಭಿನಂದಿಸಿದರು.
*ಅಮೇರಿಕದಲ್ಲಿಯೂ ಜಯದೇವ ಆಸ್ಪತ್ರೆ ಮಾದರಿ* :
ಒಮ್ಮೆ ಅಮೇರಿಕದ ಒಬ್ಬ ಪ್ರಜೆ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ೧೦೦ ರೂ. ವೆಚ್ಚದಲ್ಲಿ ಎಲ್ಲಾ ತಪಾಸಣೆಗಳನ್ನು ಪೂರೈಸಿದ್ದನ್ನು ಅಂದಿನ ಅಮೆರಿಕಾ ಅಧ್ಯಕ್ಷ ಒಬಾಮಾ ಅವರಿಗೆ ಜಯದೇವ ಎಂಬ ವ್ಯವಸ್ಥಿತ ಆಸ್ಪತ್ರೆಯ ಬಗ್ಗೆ ಪತ್ರ ಬರೆದಿದ್ದರು . ಅಮೇರಿಕದ ತಂಡ ಜಯದೇವ ಆಸ್ಪತ್ರೆಯ ಅಧ್ಯಯನ ನಡೆಸಿ, ಒಬಾಮಾ ಕೇರ್ ಕೇಂದ್ರಗಳಲ್ಲಿ ಕೆಲವು ರಿಯಾಯಿತಿಗಳನ್ನು ಘೋಷಿಸಿದರು. ಹೀಗೆ, ಅಮೇರಿಕಕ್ಕೂ ಕೂಡ ಈ ಜಯದೇವ ಆಸ್ಪತ್ರೆ ಮಾದರಿ ಆಸ್ಪತ್ರೆಯಾಗಿದ್ದನ್ನು ಮುಖ್ಯಮಂತ್ರಿಗಳು ತಿಳಿಸಿದರು.