ಹೊಸ ರೂಪಾಂತರಿಯ ಹಿನ್ನೆಲೆಯಲ್ಲಿ ಜಾಗರೂಕರಾಗಿರುವುದು ಅಗತ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ:.ಇಂದು ಬೆಳಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್-19 ಕುರಿತಂತೆ ಸಾರ್ವಜನಿಕ ಆರೋಗ್ಯ ಸನ್ನದ್ಧತೆ ಮತ್ತು ಲಸಿಕೆ ಸಂಬಂಧಿತ ಪರಿಸ್ಥಿತಿಯನ್ನು ಪರಾಮರ್ಶಿಸಲು ಸುಮಾರು 2 ಗಂಟೆಗಳ ಕಾಲ ನಡೆದ ಸಮಗ್ರ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕೋವಿಡ್-19 ಸೋಂಕುಗಳು ಮತ್ತು ಪ್ರಕರಣಗಳ ಜಾಗತಿಕ ಸ್ಥಿತಿ ಕುರಿತಂತೆ ಪ್ರಧಾನಮಂತ್ರಿಯವರಿಗೆ ವಿವರಿಸಲಾಯಿತು. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ವಿಶ್ವದಾದ್ಯಂತ ದೇಶಗಳು ಹಲವು ಬಾರಿ ಕೋವಿಡ್-19 ಪ್ರಕರಣಗಳ ಏರಿಕೆಗಳನ್ನು ಅನುಭವಿಸಿವೆ ಎಂದು ಅಧಿಕಾರಿಗಳು ಒತ್ತಿ ಹೇಳಿದರು. ಕೋವಿಡ್-19 ಪ್ರಕರಣಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಪರಿಸ್ಥಿತಿ ಮತ್ತು ಪಾಸಿಟಿವಿಟಿ ದರಗಳನ್ನು ಪ್ರಧಾನಮಂತ್ರಿ ಪರಾಮರ್ಶಿಸಿದರು.
ಲಸಿಕೆಯ ಪ್ರಗತಿ ಮತ್ತು ‘ಹರ್ ಘರ್ ದಸ್ತಕ್’ ಅಭಿಯಾನದಡಿ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಪ್ರಧಾನಮಂತ್ರಿಯವರಿಗೆ ತಿಳಿಸಲಾಯಿತು. ಪ್ರಧಾನಮಂತ್ರಿಯವರು ಎರಡನೇ ಡೋಸ್ ವ್ಯಾಪ್ತಿಯನ್ನು ಹೆಚ್ಚಿಸುವ ಅಗತ್ಯವಿದೆ ಮತ್ತು ಮೊದಲ ಡೋಸ್ ಪಡೆದ ಎಲ್ಲರಿಗೂ ಎರಡನೇ ಡೋಸ್ ಅನ್ನು ಸಕಾಲದಲ್ಲಿ ನೀಡುವುದನ್ನು ಖಾತ್ರಿಪಡಿಸಿಕೊಳ್ಳುವ ಅಗತ್ಯದ ಬಗ್ಗೆ ರಾಜ್ಯಗಳು ಸಂವೇದನಾಶೀಲರಾಗಿರಬೇಕು ಎಂದು ನಿರ್ದೇಶನ ನೀಡಿದರು. ಕಾಲಕಾಲಕ್ಕೆ ದೇಶದ ಸೆರೋ-ಪಾಸಿಟಿವಿಟಿ ಮತ್ತು ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯಲ್ಲಿ ಅದರ ಪರಿಣಾಮಗಳ ಬಗ್ಗೆ ಪ್ರಧಾನಮಂತ್ರಿಗಳಿಗೆ ವಿವರಗಳನ್ನು ನೀಡಲಾಯಿತು.
ಹೊಸ ರೂಪಾಂತರಿ ‘ಒಮಿಕ್ರಾನ್’ ಅದರ ಗುಣಲಕ್ಷಣಗಳು ಮತ್ತು ವಿವಿಧ ದೇಶಗಳಲ್ಲಿ ಕಂಡುಬಂದಿರುವ ಪರಿಣಾಮದ ಬಗ್ಗೆ ಅಧಿಕಾರಿಗಳು ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಭಾರತದ ಮೇಲೆ ಅದರ ಪರಿಣಾಮಗಳ ಬಗ್ಗೆಯೂ ಚರ್ಚಿಸಲಾಯಿತು. ಹೊಸ ಕಾಳಜಿ. ರೂಪಾಂತರಿಯ ಹಿನ್ನೆಲೆಯಲ್ಲಿ ಜಾಗರೂಕರಾಗಿರಬೇಕಾದ ಅಗತ್ಯದ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದರು. ಹೊಸ ಬೆದರಿಕೆಯ ಹಿನ್ನೆಲೆಯಲ್ಲಿ, ಜನರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರದಂತಹ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಎಲ್ಲಾ ಅಂತಾರಾಷ್ಟ್ರೀಯ ಆಗಮನಗಳ ಮೇಲ್ವಿಚಾರಣೆಯ ಅಗತ್ಯವನ್ನು, ಮತ್ತು ಮಾರ್ಗಸೂಚಿಗಳ ಪ್ರಕಾರ ಅವರ ಆರೋಗ್ಯ ತಪಾಸಣೆಯ ಮೇಲ್ವಿಚಾರಣೆ ಮಾಡುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು, ‘ಅಪಾಯದಲ್ಲಿರುವ’ ಎಂದು ಗುರುತಿಸಲಾದ ರಾಷ್ಟ್ರಗಳ ಮೇಲೆ ನಿರ್ದಿಷ್ಟ ಗಮನ ಹರಿಸಬೇಕು. ಹೊರಹೊಮ್ಮುತ್ತಿರುವ ಹೊಸ ರೂಪಾಂತರಿಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸುವ ಯೋಜನೆಗಳನ್ನು ಪರಾಮರ್ಶಿಸುವಂತೆ ಪ್ರಧಾನಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.
ದೇಶದಲ್ಲಿ ಅನುಕ್ರಮಣಿಕೆಯ (ಸೀಕ್ವೆನ್ಸಿಂಗ್) ಪ್ರಯತ್ನಗಳು ಮತ್ತು ದೇಶದಲ್ಲಿ ಹಬ್ಬುತ್ತಿರುವ ರೂಪಾಂತರಿಗಳ ಅವಲೋಕನವನ್ನು ಪ್ರಧಾನಮಂತ್ರಿಯವರಿಗೆ ನೀಡಲಾಯಿತು. ಜಿನೋಮ್ ಅನುಕ್ರಮಣಿಕೆ ಮಾದರಿಗಳನ್ನು ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು ಸಮುದಾಯದಿಂದ ನಿಯಮದ ರೀತ್ಯ ಸಂಗ್ರಹಿಸಬೇಕು, ಐ.ಎನ್.ಎಸ್.ಎ.ಸಿಒಜಿ ಅಡಿಯಲ್ಲಿ ಈಗಾಗಲೇ ಸ್ಥಾಪಿಸಲಾದ ಪ್ರಯೋಗಾಲಯಗಳ ಜಾಲದ ಮೂಲಕ ಪರೀಕ್ಷಿಸಬೇಕು ಮತ್ತು ಕೋವಿಡ್-19 ನಿರ್ವಹಣೆಗೆ ಗುರುತಿಸಲಾದ ಮುನ್ನೆಚ್ಚರಿಕೆ ಸಂಕೇತದ ಮೂಲಕ ಪರೀಕ್ಷಿಸಬೇಕು ಎಂದು ಪ್ರಧಾನಮಂತ್ರಿ ನಿರ್ದೇಶನ ನೀಡಿದರು. ಅನುಕ್ರಮಣಿಕೆ ಪ್ರಯತ್ನಗಳನ್ನು ಹೆಚ್ಚಿಸುವ ಮತ್ತು ಅದನ್ನು ಹೆಚ್ಚು ವಿಶಾಲ-ಆಧಾರಿತಗೊಳಿಸುವ ಅಗತ್ಯದ ಬಗ್ಗೆಯೂ ಪ್ರಧಾನಮಂತ್ರಿ ಮಾತನಾಡಿದರು.
ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸರಿಯಾದ ಜಾಗೃತಿಯನ್ನು ಖಾತ್ರಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಹೆಚ್ಚಿನ ಪ್ರಕರಣಗಳು ವರದಿಯಾಗುವ ಕ್ಲಸ್ಟರ್ ಗಳಲ್ಲಿ ತೀವ್ರ ನಿಯಂತ್ರಣ ಮತ್ತು ಸಕ್ರಿಯ ಕಣ್ಗಾವಲು ಮುಂದುವರಿಯಬೇಕು ಮತ್ತು ಪ್ರಸ್ತುತ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಗಳಿಗೆ ತಾಂತ್ರಿಕ ಬೆಂಬಲವನ್ನು ಒದಗಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ವೈರಾಣು ಗಾಳಿಯಲ್ಲೂ ಹರಡುವ ಸ್ವಭಾವದ್ದಾಗಿದ್ದು, ವಾತಾಯನದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಪ್ರಧಾನಮಂತ್ರಿ ಕೇಳಿದರು.
ಹೊಸ ಔಷಧ ಉತ್ಪನ್ನಗಳ ಬಗ್ಗೆ ಅನುಕೂಲಕರ ವಿಧಾನವನ್ನು ಅನುಸರಿಸುತ್ತಿದ್ದೇವೆ ಎಂದು ಅಧಿಕಾರಿಗಳು ಪ್ರಧಾನಮಂತ್ರಿಯವರಿಗೆ ವಿವರಿಸಿದರು. ವಿವಿಧ ಔಷಧಗಳ ಸಾಕಷ್ಟು ಕಾಪು ದಾಸ್ತಾನು ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ರಾಜ್ಯಗಳೊಂದಿಗೆ ಸಮನ್ವಯ ಸಾಧಿಸುವಂತೆ ಅಧಿಕಾರಿಗಳಿಗೆ ಪ್ರಧಾನಮಂತ್ರಿ ಸೂಚನೆ ನೀಡಿದರು. ಮಕ್ಕಳ ಚಿಕಿತ್ಸಾ ಸೌಲಭ್ಯಗಳೂ ಸೇರಿದಂತೆ ವೈದ್ಯಕೀಯ ಮೂಲಸೌಕರ್ಯಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ರಾಜ್ಯಗಳೊಂದಿಗೆ ಕೆಲಸ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪಿ.ಎಸ್.ಎ ಆಕ್ಸಿಜನ್ ಘಟಕಗಳು ಮತ್ತು ವೆಂಟಿಲೇಟರ್ ಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸಿಕೊಳ್ಳಲು ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು ಅಧಿಕಾರಿಗಳಿಗೆ ಪ್ರಧಾನಮಂತ್ರಿ ಸೂಚಿಸಿದರು.
ಸಭೆಯಲ್ಲಿ ಸಂಪುಟ ಕಾರ್ಯದರ್ಶಿ ಶ್ರೀ. ರಾಜೀವ್ ಗೌಬಾ, ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್, ಗೃಹ ಕಾರ್ಯದರ್ಶಿ ಶ್ರೀ.ಎ.ಕೆ.ಭಲ್ಲಾ, ಕಾರ್ಯದರ್ಶಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ) ಕಾರ್ಯದರ್ಶಿ (ಔಷಧ) ಶ್ರೀ. ರಾಜೇಶ್ ಭೂಷಣ್, ಕಾರ್ಯದರ್ಶಿ (ಜೈವಿಕ ತಂತ್ರಜ್ಞಾನ) ಡಾ. ರಾಜೇಶ್ ಗೋಖಲೆ; ಡಿಜಿ ಐಸಿಎಂಆರ್ ಡಾ. ಬಲರಾಮ್ ಭಾರ್ಗವ; ಕಾರ್ಯದರ್ಶಿ (ಆಯುಷ್) ಶ್ರೀ. ವೈದ್ಯ ರಾಜೇಶ್ ಕೊಟೆಚಾ; ಕಾರ್ಯದರ್ಶಿ (ನಗರಾಭಿವೃದ್ಧಿ) ಶ್ರೀ ದುರ್ಗಾ ಶಂಕರ್ ಮಿಶ್ರಾ; ಸಿಇಒ ಎನ್.ಎಚ್.ಎ. ಶ್ರೀ ಆರ್.ಎಸ್. ಶರ್ಮಾ; ಪ್ರೊ. ಕೆ. ವಿಜಯ್ ರಾಘವನ್ (ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರು) ಮತ್ತು ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು..