ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ಗುರುವಾರ ಸ್ಕಂದ ಷಷ್ಠಿ ಪ್ರಯುಕ್ತ ವಿಶೇಷಾ ಪೂಜಾ ಕೈಂಕರ್ಯಗಳು ನಡೆದವು.
ವರ್ಷದ ಮೂರು ಷಷ್ಠಿಗಳಲ್ಲಿ ದೇಗುಲದಲ್ಲಿ ವಿಶೇಷ ಪೂಜೆ, ರಥೋತ್ಸವ, ಹೋಮ ಹವನಾದಿಗಳು ನಡೆಯುವ ವಾಡಿಕೆ ಇದೆ. ಮೊದಲ ಷಷ್ಠಿ ಪ್ರಯುಕ್ತ ವಿವಿದೆಡೆಗಳಿಂದ ಭ್ತಾದಿಗಳು ಆಗಮಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಬೆಳಗಿನ ಜಾವದಿಂದ ಸುಬ್ರಹ್ಮಣ್ಯ ಸ್ವಾಮಿ ಮೂಲ ವಿಗ್ರಹಕ್ಕೆ ಮಹನ್ಯಾಸ ಪೂರ್ವಕ ಏಕಾದಶವಾರ ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ ಇತ್ಯಾದಿ ಪೂಜಾ ಕೈಂಕರ್ಯಗಳನ್ನುಪ್ರಧಾನ ಅರ್ಚಕ ಪಿ.ಬದರಿನಾಥ್ ನಡೆಸಿದರು.
ಎಂದಿನಂತೆ ಅನ್ನದ ರಾಶಿಯ ಮೇಲೆ ಉತ್ಸವ ಮೂರ್ತಿಯನ್ನು ಇರಿಸಿ ಪೂಜೆ ಸಲ್ಲಿಸಲಾಯಿತು. ಅನ್ನದ ರಾಶಿ ಇಬ್ಬಾಗವಾಗುವುದನ್ನು ವೀಕ್ಷಿಸಲು ಭಕ್ತಾದಿಗಳು ಕಾತುರದಿಂದ ಕಾದಿದ್ದರು
ಉತ್ತರಪಿನಾಕಿನಿ ನದಿಯಲ್ಲಿ ಮಿಂದು ಭಕ್ತಾದಿಗಳು ದೇಗುಲದ ಪ್ರಾಂಗಣ, ಅರಳೀಕಟ್ಟೆ ಬಳಿಯ ನಾಗರಿಗೆ ಹಾಲೆರೆದು ಪೂಜೆ ಸಲ್ಲಿಸಿದರು.
ಪಟ್ಟಣದ ವೇಣುಗೋಪಾಲಸ್ವಾಮಿ ದೇಗುಲ, ಕಣಿವೇನಹಳ್ಳಿ ಗೇಟ್ ಬಳಿಯ ಅಭಯ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
ವರದಿ: ಶ್ರೀನಿವಾಸುಲು ಎ