*ಐತಿಹಾಸಿಕ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚಾಲನೆ*
ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದಲ್ಲಿ ಬೃಹತ್ ಸದಸ್ಯತ್ವ ಅಭಿಯಾನಕ್ಕೆ ಜೂಮ್ ಸಂವಾದದ ಮೂಲಕ ಶನಿವಾರ ಚಾಲನೆ ನೀಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಾಂಕೇತಕವಾಗಿ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡರು. ಎಐಸಿಸಿ ದತ್ತಾಂಶ ವಿಶ್ಲೇಷಣೆ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್ ಅವರು ಡಿ.ಕೆ. ಶಿವಕುಮಾರ್ ಅವರ ಜತೆಗಿದ್ದು, ಅಭಿಯಾನಕ್ಕೆ ಸಾಥ್ ನೀಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಎಂ.ಬಿ ಪಾಟೀಲ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಮಾಜಿ ಸಚಿವರಾದ ಚಕುವರಾಯಸ್ವಾಮಿ ಸೇರಿದಂತೆ ಎಲ್ಲ ಪ್ರಮುಖ ನಾಯಕರು ತಮ್ಮ ತಮ್ಮ ಬೂತ್ ಗಳಿಂದ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ರಾಜ್ಯದ ಮೂಲೆ, ಮೂಲೆಗಳಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಕಡೆಗಳಿಂದ ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ನಾಯಕರು ಈ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಭಾಗವಹಿಸಿದರು. ಈ ಎಲ್ಲರೂ ಜೂಮ್ ಮೂಲಕ ಒಂದೇ ವೇದಿಕೆಗೆ ಸಂಪರ್ಕ ಪಡೆದಿದ್ದರು.
ದೇಶದ ನಿರ್ಮಾಣದಲ್ಲಿ ಕಾಂಗ್ರೆಸ್ ಪಾತ್ರ, ಪ್ರಸ್ತುತ ಸಂದರ್ಭದಲ್ಲಿ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯತೆ ಹಾಗೂ ಪ್ರತಿಯೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಸೇರಬೇಕು ಎಂಬ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ದತ್ತಾಂಶ ಸಮಿತಿ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ ಮಾತನಾಡಿದರು.
ರಾಜಸ್ಥಾನದಲ್ಲಿ ಪಕ್ಷದ ಸಭೆ ಹಾಗೂ ಇದೇ 13 ರಿಂದ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಸಮಯ ಅಭಾವದಿಂದ ಈ ಸದಸ್ಯತ್ವ ನೋಂದಣಿ ಅಭಿಯಾನವನ್ನು ಇಂದೇ ಆರಂಭಿಸಲಾಗುತ್ತಿದೆ.
ಈ ಅಭಿಯಾನದ ನಂತರ ಬ್ಲಾಕ್, ಜಿಲ್ಲಾ ಹಾಗೂ ಕೆಪಿಸಿಸಿಯ ಚುನಾವಣೆ ನಡೆಯಬಹುದು. ಪಕ್ಷದ ಸದಸ್ಯತ್ವ ಪಡೆದ ನಂತರ ನೀವು ಈ ಚುನಾವಣೆಯಲ್ಲಿ ಸ್ಪರ್ಧಿಸಬಹುದು.
ಇಂದು 2 ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ಈ ಅಭಿಯಾನ ನಡೆಯುತ್ತಿದೆ. ಇದೊಂದು ಇತಿಹಾಸದ ಪುಟ ಸೇರುವ ಕ್ಷಣ. ನಮಗೆ ಸಂಖ್ಯೆ ಕಡಿಮೆ ಇದ್ದರೂ ಪರವಾಗಿಲ್ಲ , ಬೋಗಸ್ ಸದಸ್ಯತ್ವ ಮಾತ್ರ ಬೇಡ. ನೀವು ಯಾರನ್ನು ಸದಸ್ಯರನ್ನಾಗಿ ಮಾಡುತ್ತೀರೋ ಅವರ ಬಳಿ ನೀವು ಫೋಟೋ ಪಡೆಯಬೇಕು. ಸಕ್ರಿಯ ಸದಸ್ಯತ್ವ ಪಡೆಯುವವರು ಕನಿಷ್ಠ 25 ಸದಸ್ಯತ್ವ ಮಾಡಿಸಬೇಕು. ಸಕ್ರಿಯ ಸದಸ್ಯರಿಗೆ ಮಾತ್ರ ವಿವಿಧ ಹಂತಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇರುತ್ತದೆ.
ಸದಸ್ಯರಾಗದೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ. “ಪ್ರತಿ ಬೂತ್ ಗೆ ಡಿಜಿಟಲ್ ಯೂತ್” ಎಂದು ಹೇಳಿರುವ ಹಾಗೆ ಅವರ ದೂರವಾಣಿ ಸಂಖ್ಯೆಯನ್ನು ಎಐಸಿಸಿಗೆ ನೀಡಲಿದ್ದು ಅವರುಗಳಿಗೆ ನಾಳೆಯಿಂದ ಆಪ್ ತೆರೆಯಲು ಅವಕಾಶ ನೀಡಲಾಗುತ್ತದೆ. ನಂತರ ಅವರು ಡಿಜಿಟಲ್ ಸದಸ್ಯತ್ವ ಮಾಡಿಸಬಹುದು.
ಈ ಅಭಿಯಾನದಲ್ಲಿ ಭಾಗವಹಿಸುವವರು 1 ನಿಮಿಷದ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಬೇಕು. ದಾಖಲೆ ದೃಷ್ಟಿಯಿಂದ ಇದು ಅಗತ್ಯ.
ನಾವು ಪ್ರತಿ ಬೂತ್ ನಲ್ಲೂ ಡಿಜಿಟಲ್ ಯೂತ್ ನೇಮಕ ಮಾಡಲಿದ್ದು, ಅವರು ಸದಸ್ಯತ್ವ ನೋಂದಣಿ ಮಾಡಿಸಲಿದ್ದಾರೆ. ಇದರ ಮಹತ್ವ ತಿಳಿಸುವ ಉದ್ದೇಶದಿಂದ ಎಲ್ಲ ನಾಯಕರು ತಮ್ಮ ಬೂತ್ ಗಳಲ್ಲೇ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದೆವು. ಅದರಂತೆ ಎಲ್ಲ ನಾಯಕರು ತಮ್ಮ ಬೂತ್ ಗಳಿಂದ ಭಾಗವಹಿಸಿದ್ದಾರೆ.
ಎಲ್ಲ ನಾಯಕರು, ವಿವಿಧ ಘಟಕಗಳ ಮುಖಂಡರು, ಬ್ಲಾಕ್, ಜಿಲ್ಲಾ ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಾವು ರಾಜ್ಯದಲ್ಲಿ ಸದಸ್ಯತ್ವ ಸಂಖ್ಯೆಗಿಂತ ಗುಣಮಟ್ಟದ ಸದಸ್ಯತ್ವದ ಬಗ್ಗೆ ಗಮನಹರಿಸಿದ್ದೇವೆ.
ಇನ್ನು ಮೇಕೆದಾಟು ಪಾದಯಾತ್ರೆ ಸಂಬಂಧ ಜನವರಿ ಮೊದಲ ವಾರ ದಿನಾಂಕ ನಿಗದಿ ಪಡಿಸುತ್ತೇವೆ. ಇದಕ್ಕೆ ಅಗತ್ಯ ತಯಾರಿ ನಡೆಯುತ್ತಿದೆ’.
ಸಿಎಂ ಇಬ್ರಾಹಿಂ ಅವರ ಭೇಟಿ ಹಾಗೂ ಸದಸ್ಯತ್ವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಿ.ಎಂ ಇಬ್ರಾಹಿಂ ಅವರು ಸದಸ್ಯತ್ವ ಪಡೆಯಲು ಆಗಮಿಸಿದ್ದರು. ಆದರೆ ಗುರುತಿನ ಚೀಟಿ ಇಲ್ಲದ ಕಾರಣ ತಮ್ಮ ಬೂತ್ ನಲ್ಲೇ ಸದಸ್ಯತ್ವ ಪಡೆಯುತ್ತಾರೆ. ಜತೆಗೆ ಪಕ್ಷದ ಸಂಘಟನೆ ವಿಚಾರವಾಗಿ ಚರ್ಚೆ ಮಾಡಲು ಆಗಮಿಸಿದ್ದರು’ ಎಂದರು.
ಬಿಜೆಪಿ ಗೆದ್ದು ಬಿಟ್ಟ ಸೀಟುಗಳನ್ನು ನಾವು ಗೆಲ್ಲುತ್ತೇವೆ
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಡಿಯೂರಪ್ಪ ಅವರು ಈಗಾಗಲೇ 15 ಸೀಟು ಗೆಲ್ಲುವುದಾಗಿ ತಿಳಿಸಿದ್ದಾರೆ. ಅವರು ಗೆದ್ದು ಬಿಟ್ಟ ಸೀಟುಗಳನ್ನು ನಾವು ಗೆಲ್ಲುತ್ತೇವೆ. ಅವರಿಗೆ ಬೇಕಾದಷ್ಟು ಇಟ್ಟುಕೊಂಡು ಮಿಕ್ಕಿದ್ದು ನೀಡಲಿ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸುತ್ತೇವೆ’ ಎಂದು ಛೇಡಿಸಿದರು.
ಮುಂದಿನ ಸಿಎಂ ಸಂಬಂಧ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಅವರ ಹೇಳಿಕೆ ನೋಡಿಲ್ಲ. ಯಾರಿಗೆ ಏನೆಲ್ಲಾ ಆಸೆ ಇದೆಯೋ ಅದನ್ನು ಎಐಸಿಸಿ ನೋಡಿಕೊಳ್ಳುತ್ತದೆ’ ಎಂದರು.
ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡಿಸಲು ಸರ್ಕಾರ ತಯಾರಿ ನಡೆಸಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸರ್ಕಾರ ಎರಡು ಯೋಜನೆ ರೂಪಿಸಿದೆ. ಮೊದಲನೆಯದು ಮಸೂದೆಯನ್ನು ಅಧಿಕೃತವಾಗಿ ತರುವುದು, ಮತ್ತೊಂದು ಖಾಸಗಿಯಾಗಿ ತರುವುದು. ಇದು ಕೇವಲ ಇಲ್ಲಿನ ವಿಚಾರವಲ್ಲ, ಇಡೀ ವಿಶ್ವವೇ ಗಮನಿಸುವ ವಿಚಾರ. ಬೆಂಗಳೂರಿನಲ್ಲಿ ಈ ರೀತಿ ನಡೆಯುತ್ತಿದೆಯಲ್ಲ ಎಂದು ಜನ ಉಗಿಯುತ್ತಿದ್ದಾರೆ. ಇದು ಬಂಡವಾಳ ಹೂಡಿಕೆ ಸೇರಿದಂತೆ ಅನೇಕ ವಿಚಾರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ವಿಚಾರವಾಗಿ ಸರ್ಕಾರ ಮಸೂದೆಯಾದರೂ ತರಲಿ, ಖಾಸಗಿಯಾಗಾದರೂ ತರಲಿ ಕಾಂಗ್ರೆಸ್ ಪಕ್ಷ ಇದನ್ನು ವಿರೋಧಿಸಲಿದೆ. ಈಗಾಗಲೇ ಇರುವ ಕಾನೂನಿನಲ್ಲಿ ಯಾರೂ ಒತ್ತಡ ಹಾಕುತ್ತಿಲ್ಲ. ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಒಂದೊಂದೇ ಸಮುದಾಯವನ್ನು ಬಿಜೆಪಿ ಗುರಿ ಮಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದ ಕೊಡುಗೆ ಮರೆಯಲು ಸಾಧ್ಯವಿಲ್ಲ. ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ ಯಾವುದಾದರೂ ಒಬ್ಬ ವಿದ್ಯಾರ್ಥಿ ನಮ್ಮನ್ನು ಮತಾಂತರಕ್ಕೆ ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಿರುವ ಒಂದಾದರೂ ದೂರು ದಾಖಲಾಗಿದೆಯಾ? ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಒತ್ತಾಯ ಮಾಡಿದ್ದಾರೆಯೇ? ಅವರು ಮಾನವೀಯತೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ’ ಎಂದರು.
*ಮೂರು ಸಿಎಂ ಬಿಜೆಪಿ ಸಂಪ್ರದಾಯ*
ಸಿಎಂ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಮೂರು ಸಿಎಂ ನೇಮಕ ಬಿಜೆಪಿಯ ಹಳೆ ಸಂಪ್ರದಾಯ. ಅವರ ಪಕ್ಷದ ಆಂತರಿಕ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಅವರು ಮೂವರು ಸಿಎಂಗಳನ್ನಾದರೂ ಮಾಡಲಿ ಅಥವಾ ಆರು ಜನರನ್ನಾದರೂ ಮಾಡಲಿ. ಬಿಜೆಪಿ ಉತ್ತಮ ಸರ್ಕಾರ ನೀಡಿಲ್ಲ, ಹೀಗಾಗಿ ಜನರು ಸರಕಾರವನ್ನು ಕಿತ್ತೊಗೆಯಲಿ’ ಎಂದರು.