IMG 20200806 WA0059

ಬೆಂಗಳೂರಿಗೆ 665 ಆಂಬ್ಯುಲೆನ್ಸ್….!

STATE Genaral

*ಬೆಂಗಳೂರಿಗೆ 665 ಆಂಬ್ಯುಲೆನ್ಸ್: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್*

*ಮೃತದೇಹ ಹಸ್ತಾಂತರಕ್ಕೆ ಸೂಚನೆ*

ಬೆಂಗಳೂರು:ನಗರದಲ್ಲಿ ಕೊರೊನಾ ರೋಗಿಗಳು ಮತ್ತು ಇತರೆ ರೋಗಿಗಳನ್ನು ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳಿಗೆ ಕರೆದೊಯ್ಯಲು 665 ಆಂಬುಲೆನ್ಸ್ ಗಳನ್ನು ನಿಯೋಜಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

“ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ, ನಗರದಲ್ಲಿ 665 ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗಿದೆ. ಕೊರೊನಾ ಸೋಂಕಿಗೊಳಗಾದ ಮತ್ತು ಇತರೆ ರೋಗಿಗಳನ್ನು ಆಸ್ಪತ್ರೆ ಹಾಗೂ ಕೋವಿಡ್ ಕೇಂದ್ರಕ್ಕೆ ಕೊಂಡೊಯ್ಯಲು ಕ್ರಮ ಕೈಗೊಳ್ಳಲಾಗಿದೆ” ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿಯ ಪೂರ್ವ ವಲಯದಲ್ಲಿ 127, ಪಶ್ಚಿಮ ವಲಯದಲ್ಲಿ 141, ದಕ್ಷಿಣದಲ್ಲಿ 110, ರಾಜರಾಜೇಶ್ವರಿ ನಗರದಲ್ಲಿ 40, ಬೊಮ್ಮನಹಳ್ಳಿಯಲ್ಲಿ 43, ಮಹದೇವಪುರದಲ್ಲಿ 52, ದಾಸರಹಳ್ಳಿಯಲ್ಲಿ 24, ಯಲಹಂಕದಲ್ಲಿ 33 ಆಂಬ್ಯುಲೆನ್ಸ್ ಗಳ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ 11 ಹಾಗೂ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ 84 ಆಂಬ್ಯುಲೆನ್ಸ್ ಗಳನ್ನು ನಿಯೋಜನೆ ಮಾಡಲಾಗಿದೆ.

ಈ ಕುರಿತು ಸಚಿವರು ಟ್ವೀಟ್ ಮಾಡಿದ್ದಾರೆ.

*ಮೃತದೇಹ ಹಸ್ತಾಂತರಕ್ಕೆ ಕ್ರಮ*

ಕುಮಾರಸ್ವಾಮಿ ಲೇಔಟ್ ನ ಸಾಗರ್ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದ ರೋಗಿಯ ಮೃತದೇಹ ಹಸ್ತಾಂತರಕ್ಕೆ ಸಚಿವ ಡಾ.ಕೆ.ಸುಧಾಕರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಎರಡು ದಿನಗಳಿಂದ ಮೃತದೇಹವನ್ನು ಇಟ್ಟುಕೊಂಡಿದ್ದ ಆಸ್ಪತ್ರೆಯ ಸಿಬ್ಬಂದಿ, 9 ಲಕ್ಷ ರೂ. ಶುಲ್ಕ ಪಾವತಿಸಿದ ಬಳಿಕವೇ ಮೃತದೇಹ ಹಸ್ತಾಂತರಿಸುವುದಾಗಿ ಕುಟುಂಬ ಸದಸ್ಯರಿಗೆ ಹೇಳಿದ್ದರು.

“ಹಣ ಪಾವತಿಸಿದ ನಂತರ ಮೃತದೇಹ ಕೊಡುತ್ತೇವೆ ಎಂದು ಹೇಳಿ ಕುಟುಂಬದವರನ್ನು ಹಿಂಸೆ ಮಾಡಿರುವುದು ಖಂಡನೀಯ. ಕೊರೊನಾ ಸಂಕಷ್ಟದ ಕಾಲದಲ್ಲಿ ಹಣ ಗಳಿಸುವುದು ಖಾಸಗಿ ಆಸ್ಪತ್ರೆಗಳಿಗೆ ಮಾನದಂಡವಾಗಬಾರದು. ಆಸ್ಪತ್ರೆ ಮುಖ್ಯಸ್ಥರೊಂದಿಗೆ ಮಾತನಾಡಿ, ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇನೆ’’ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.