*ದಂತ ಕತೆಯಾದ ಜಿ ಎಸ್ ಪರಮಶಿವಯ್ಯನವರು. ಆತ್ಮದಘೋಷ, ಅಗ್ನಿ ಪ್ರಮಾದ*
ನೀರಾವರಿ ತಜ್ಞ ಶ್ರೀ ಜಿ ಎಸ್ ಪರಮಶಿವಯ್ಯ ನವರು ತಮ್ಮ ಕೊನೆಯುಸಿರು ಇರುವವರೆಗೂ ಕರ್ನಾಟಕ ರಾಜ್ಯದ ನೀರಾವರಿ ಸಲಹೆಗಾರರಾಗಿ ಸಲ್ಲಿಸಿದ ಅನನ್ಯವಾದ ನಿಸ್ವಾರ್ಥ ಸೇವೆ ಸ್ಮರಿಸುವಲ್ಲಿ ನಾವು ಕೃತಘ್ನರಾಗಿದ್ದೇವೆ,
ಅವರ ಸೇವಾವಧಿಯಲ್ಲಿ ಯಶಸ್ವಿಯಾಗಿ ರೂಪಿಸಲಾದ ಸುಮಾರು 41 ನೀರಾವರಿ ಯೋಜನೆಗಳಲ್ಲಿ ಬಹುತೇಕ ಯೋಜನೆಗಳು ಅನುಷ್ಠಾನವಾಗಿ ಲಕ್ಷಾಂತರ ಎಕರೆ ಭೂಮಿಗೆ ನೀರಾವರಿಯಾಗಿದೆ. ಹಲವಾರು ಯೋಜನೆಗಳಿಗೆ ಸ್ವತಃ ಅಧ್ಯಯನ ನಡೆಸಿ, ನೂತನ ಆವಿಷ್ಕಾರ ಮಾಡಿದ್ದಲ್ಲದೆ ತಮ್ಮದೇ ಇಲಾಖೆಯ ಸಹ ಅಧಿಕಾರಿಗಳನ್ನು ಬಳಸಿಕೊಂಡು ಡಿ ಪಿ ಆರ್ ಸಹಾ ತಯಾರಿಸಿ,ರಾಜ್ಯದ ಬೊಕ್ಕಸಕ್ಕೆ ಉಳಿತಾಯವನ್ನೂ ಮಾಡಿಕೊಟ್ಟಿದ್ದಾರೆ. (ಇತ್ತೀಚೆಗೆ ಯಾವ ನೀರಾವರಿ ಅಧಿಕಾರಿಗೂ ಡಿಪಿಆರ್ ಮಾಡುವ ವ್ಯವಧಾನವಿಲ್ಲ, ಎಲ್ಲಾ ಡಿಪಿಆರ್ ಗಳು ಗುತ್ತಿಗೆದಾರನು ನೇಮಿಸಿದ ಖಾಸಗಿ ಸಂಸ್ಥೆಗಳೇ ಮಾಡಬೇಕು, ಖಾಸಗಿಯವರಿಗೆ ಡಿಪಿಆರ್ ತಯಾರಿಸಲು ನೂರಾರು ಕೋಟಿ ಕೊಟ್ಟರೂ, ಅವರು ಮಾಡಿಕೊಟ್ಟ ಯೋಜನೆಗೆ ಸಾವಿರಾರು ಕೋಟಿ ನಮ್ಮ ತೆರಿಗೆ ಹಣ ಖರ್ಚು ಮಾಡಿದರೂ ನೀರು ಮಾತ್ರ ನೋಡಲಾಗುವುದಿಲ್ಲ, ಇದಕ್ಕೆ ಜ್ವಲಂತ ಉದಾಹರಣೆ ಎತ್ತಿನಹೊಳೆ.)
ಕರ್ನಾಟಕವನ್ನು ಕಾಡುತ್ತಿರುವ ಒಂದು ಕಡೆ ಮಳೆಗಾಲದ ನೆರೆ, ಮತ್ತೊಂದು ಕಡೆ ಬೇಸಿಗೆಯ ಬರ ಇವುಗಳ ಸಮಗ್ರವಾದ ಅಧ್ಯಯನ ಮಾಡಿ ನೆರೆ ಬರುವ ಪ್ರದೇಶಗಳಿಂದ ಬರ ಇರುವ ಬರಪೀಡಿತ ಬಯಲುಸೀಮೆ ಪ್ರದೇಶಗಳಿಗೆ ನೀರನ್ನು ಹರಿಸುವ ಮಾಸ್ಟರ್ ಪ್ಲಾನ್ ಮಾಡಿಕೊಟ್ಟವರನ್ನು ರಾಜ್ಯಮರೆತಿದೆ, ನಮ್ಮವರೂ ಕ್ರಮೇಣ ಮರೆಯುತ್ತಿದ್ದಾರೆ. ಸುಧೀರ್ಘವಾದ ಸರ್ಕಾರೀ ಸೇವೆಯಿಂದ ನಿವೃತ್ತಿಯಾದ ನಂತರ 2014 ರಲ್ಲಿ ತಮ್ಮ ದೇಹತ್ಯಾಗ ಮಾಡುವ ಕಟ್ಟ ಕಡೆಯ ಕ್ಷಣದವರೆಗೂ ಮಾಡಿದ ಯಜ್ಞ, ರಾಜ್ಯದ ರೈತರಿಗೆ ನೀರೊದಗಿಸುವ, ಜನ ಮತ್ತು ಜಾನುವಾರುಗಳಿಗೆ ಸುರಕ್ಷಿತ ಶುದ್ಧ ಕುಡಿಯುವ ನೀರು ಪೂರೈಸುವ, ಪಾತಾಳ ಸೇರಿರುವ ಅಂತರ್ಜಲ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅವರ 40 ವರ್ಷಗಳ ಅಧ್ಯಯನದ ಅಂಕಿ ಅಂಶಗಳುಳ್ಳ ನೂರಾರು ವರದಿಗಳು, ಸರ್ಕಾರಕ್ಕೆ ಮಾಡಿದ ಶಿಫಾರಸ್ಸುಗಳು,
ಟೊಪೊಶೀಟ್ಗಳು, ರಾಜ್ಯದ ನದಿಗಳು, ಕಾಡುವ ಪ್ರವಾಹಗಳು , ಅಣೆಕಟ್ಟುಗಳು, ಕೆರೆ ಕುಂಟೆಗಳ ಅಭಿವೃದ್ಧಿ, ಜಲಾನಯನ ಪ್ರದೇಶಗಳ ಅಭಿವೃದ್ಧಿ ಸೇರಿದಂತೆ ರಾಜ್ಯದ ಜಲವಿಜ್ಞಾನ ಮತ್ತು ಸಮಗ್ರ ಜಲಸಂಪನ್ಮೂಲದ ವರದಿಗಳು ಅಗ್ನಿ ಪ್ರಮಾದಕ್ಕೆ ತುತ್ತಾಗಿ ಸುಟ್ಟು ಬೂದಿ ಆಗಿಹೋಗಿವೆ.
ರಾಜ್ಯ ಕಂಡಂತೆ ನಿಜಲಿಂಗಪ್ಪನವರ ಕಾಲದಿಂದ ಇಂದಿನ ಯಡಿಯೂರಪ್ಪನವರ ವರೆಗೆ
ಜಿ ಎಸ್ ಪರಮಶಿವಯ್ಯನವರು ಖುದ್ದಾಗಿ ಬೇಟಿಯಾಗದ ಮುಖ್ಯಮಂತ್ರಿಗಳಿಲ್ಲ, ಅವರ ಸಲಹೆ ಪಡೆಯದ ನೀರಾವರಿ ಮಂತ್ರಿಗಳಿಲ್ಲ , ಅನೇಕರು ಜಿ ಎಸ್ ಪರಮಶಿವಯ್ಯನವರ ವರದಿಗಾಗಿ ಹೊರಾಡುತ್ತಲೇ ಅಧಿಕಾರಕ್ಕೇರಿದರು ಮತ್ತೂ ಕೆಲವರು ಆತ್ಮವಂಚನೆ ಮಾಡಿಕೊಂಡು ಹಣಮಾಡಿಕೊಂಡರು. ತಮ್ಮ ತುಂಬು ಜೀವನದ 96 ವಸಂತಗಳನ್ನು ಪೂರೈಸಿದ ಶ್ರೀ ಜಿ ಎಸ್ ಪರಮಶಿವಯ್ಯನವರು ಅಂತ್ಯದ ದಿನಗಳಲ್ಲಿ ಸಾಕಷ್ಟು ಬೇಸರಗೊಂಡಿದ್ದರು, ಯಾವುದೇ ಪಕ್ಷ, ಯಾವುದೇ ಸರ್ಕಾರ ತಮ್ಮ ಜಲ ಯಜ್ಞಕ್ಕೆ ಕಿವಿಗೊಡದಿದ್ದಾಗ ತಮ್ಮೆಲ್ಲಾ ವರದಿಗಳನ್ನು ವಿಧಾನಸೌಧದ ಮುಂದೆ ಸುಟ್ಟು ಹಾಕಿಬಿಡುವುದಾಗಿ ಅವರಲ್ಲಿದ್ದ ಸಾತ್ವಿಕ ಕೋಪವನ್ನು ಹೊರಹಾಕುತ್ತಿದ್ದರು.
ಈಗ ಅದೇ ಆಗಿದೆ, ಅವರ ಆತ್ಮದ ನಿರಂತರ ಘೋಷ, ಅಗ್ನಿ ಪ್ರಮಾದಕ್ಕೆ ಎಡೆಮಾಡಿಕೊಟ್ಟಿದೆ.
ಸಮಾಧಾನಕರ ವಿಷಯವೆಂದರೆ ನಮ್ಮ ಬಯಲುಸೀಮೆಗೆ ಸಂಬಂಧಪಟ್ಟ ವರದಿಗಳನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿಗೆ ಕೊಟ್ಟು ಭದ್ರಪಡಿಸಿದ್ದರು, ಮುಂದಿನ ಪೀಳಿಗೆಗಳಿಗೆ ಅತ್ಯಮೂಲ್ಯವಾದ ವೈಜ್ಞಾನಿಕ ವರದಿಗಳನ್ನು ಕ್ರೂಡೀಕರಿಸಿ ಶ್ರೀ ಜಿ ಎಸ್ ಪರಮಶಿವಯ್ಯನವರ ನೆನಪಿನಲ್ಲಿ ಅಧ್ಯಯನ ಮತ್ತು ಮಾಹಿತಿ ಕೇಂದ್ರವನ್ನು ಸ್ಥಾಪಿಸಿ ಅವರ ಆತ್ಮ ಚಿರಶಾಂತಿಯಿಂದಿರಲು ಪ್ರಯತ್ನಿಸುತ್ತೇವೆ.