20220810 131148

ಜಲಜೀವನ ಮಿಷನ್ ಯೋಜನೆಯಲ್ಲಿ ಗುರಿ ಮೀರಿದ ಸಾಧನೆ….!

Genaral STATE

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ :

ಜಲಜೀವನ ಮಿಷನ್ ಯೋಜನೆಯಲ್ಲಿ ಗುರಿ ಮೀರಿದ ಸಾಧನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಸ

ಬೆಂಗಳೂರು, ಆಗಸ್ಟ್ 9 :

ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ಸಂಪರ್ಕಿಸುವ ಯೋಜನೆಯಡಿ ನಿಗದಿತ ಗುರಿಗಿಂತಲೂ ಹೆಚ್ಚಿನ ಸಾಧನೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ ೮ ರ ವರೆಗೆ ರಾಜ್ಯದಲ್ಲಿ ಒಟ್ಟು 21,63,817 ಮನೆಗಳಿಗೆ ನಳ ಸಂಪರ್ಕದ ಗುರಿ ನಿಗದಿಯಾಗಿತ್ತು. ಆದರೆ 21,81,557 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಇದು ನಿಗದಿತ ಗುರಿಗಿಂತಲೂ ಹೆಚ್ವಿನ ಸಾಧನೆಯಾಗಿದೆ. ಅದರ ಜತೆ
ಬ್ಯಾಚ್ 1 ಕಾಮಗಾರಿಗಳನ್ನು ಸೆಪ್ಟೆಂಬರ್ 15 ರೊಳಗೆ ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ವಾರದಲ್ಲಿ ೩ ದಿನ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಬೇಕೆಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಅವರು ಇಂದು ಬೆಂಗಳೂರಿನ ಆರ್ ಟಿ ನಗರ ನಿವಾಸದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಈ ಸೂಚನೆ ನೀಡಿದರು.

ಜಲಜೀವನ ಮಿಷನ್ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ಯೋಜನೆ. ಜನರಿಗೆ ಕುಡಿಯುವ ನೀರನ್ನು ಒದಗಿಸಲು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು. ಇದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಹೀಗಾಗಿ ಇದು ಕೇವಲ ಪೈಪ್ ಲೈನ್ ಅಳವಡಿಸುವ ಯೋಜನೆಯಾಗದೇ ಮನೆಮನೆಗೂ ನೀರು ಸರಬರಾಜು ಮಾಡುವ ಯೋಜನೆಯಾಗಬೇಕು. ಜನರು ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ ಬದುಕುತ್ತಿದ್ದಾರೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಸಮಸ್ಯೆಯ ಬಗ್ಗೆ ಚರ್ಚಿಸದೇ, ಸ್ಥಳಕ್ಕೆ ತೆರಳಿ ಸಮಸ್ಯೆಯ ಬಗ್ಗೆ ತಿಳಿಯಬೇಕು. ಮುಖ್ಯ ಇಂಜಿನಿಯರ್ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ವಾರದಲ್ಲಿ ಕನಿಷ್ಟ 3 ದಿನ ಸ್ಥಳಕ್ಕೆ ತೆರಳಿ ಕಾಮಗಾರಿಗಳ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು.

ಇಲಾಖೆಯ ಮುಖ್ಯಸ್ಥರು ಈ ಯೋಜನೆಯಡಿ ಜಿಲ್ಲೆಗಳಲ್ಲಿ ಆಗುತ್ತಿರುವ ಪ್ರಗತಿ ಬಗ್ಗೆ ಆಗ್ಗಿಂದಾಗ ಪರಿಶೀಲನೆ ನಡೆಸಬೇಕು. ವಿಳಂಬಕ್ಕೆ ವಿವರಣೆ ಪಡೆದು, ಯೋಜನೆ ನಿಗದಿತ ಅವಧಿಯಲ್ಲಿ ಮುಗಿಸಲು ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಹಲವು ಜಿಲ್ಲೆಗಳಲ್ಲಿ ಓವರ್ ಹೆಡ್ ಟ್ಯಾಂಕ್ಗಳನ್ನು ಕೂಡಲೇ ಸ್ಥಾಪನೆ ಮಾಡಿ. ಈ ಬಗ್ಗೆ ಎಲ್ಲ ಜಿಲ್ಲೆಗಳ ಪ್ರಗತಿ ಪರಿಶೀಲಿಸಲು ಇಂಜಿನೀಯರ್ ಒಬ್ಬರನ್ನು ನಿಯೋಜಿಸಬೇಕು. ಗುತ್ತಿಗೆದಾರರ ಅದಕ್ಷತೆಯನ್ನು ಕಾರಣವಾಗಿಸದೇ, ಜಿಲ್ಲೆಯ ಅಧಿಕಾರಿಗಳು ಕಾಲಕಾಲಕ್ಕೆ ಕಾಮಗಾರಿಯ ಪ್ರಗತಿಪರಿಶೀಲನೆ ನಡೆಸಿ ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು. ಕೆಲವು ಜಿಲ್ಲೆಗಳಲ್ಲಿ ಜಲಜೀವನ್ ಮಿಷನ್ ಅಡಿ ನಿಧಾನಗತಿಯ ಪ್ರಗತಿಯನ್ನು ಗಮನಿಸಲಾಗಿದೆ. ಈ ಯೋಜನೆಯ ಪ್ರಗತಿಯ ವಿವರಗಳನ್ನು ಸಿಎಂ ಡ್ಯಾಶ್ ಬೋರ್ಡ್ ನಲ್ಲಿ ಹಾಕಬೇಕು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಅಭಿವೃದ್ಧಿ ಆಕಾಂಕ್ಷಿ ಜಿಲ್ಲೆಗಳಾದ ರಾಯಚೂರು, ಯಾದಗಿರಿಯಲ್ಲಿ ಜಲಜೀವನ್ ಮಿಷನ್ ಯೋಜನೆ ಗುರಿ ಸಾಧಿಸಿಲ್ಲವಾದ್ದರಿಂದ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಈ ಜಿಲ್ಲೆಗೆ ಖುದ್ದು ಭೇಟಿ ನೀಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಬೇಕು. ಜಲಜೀವನ ಮಿಷನ್ ಬ್ಯಾಚ್ 2 ಅಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಮುಖ್ಯ ಇಂಜಿನಿಯರ್ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ಗಳ ಸಭೆ ಕರೆಯಬೇಕು ಎಂದು ಸೂಚಿಸಿದರು.

ಒಟ್ಟಾರೆ ಬ್ಯಾಚ್ 2 ಕಾಮಗಾರಿಗಳ ಪೂರಕ ಕೆಲಸಗಳನ್ನು ಮುಗಿಸಿ, ಕಾಮಗಾರಿಗಳನ್ನು ಈ ತಿಂಗಳ ಅಂತ್ಯದೊಳಗೆ ಪ್ರಾರಂಭಿಸಬೇಕು. ಜಲಜೀವನ ಮಿಷನ್ ಬ್ಯಾಚ್ 3 ಅಡಿ ಕಾಮಗಾರಿಗಳ ಪ್ರಗತಿ ಶೇ.75ಕ್ಕಿಂತ ಕಡಿಮೆ ಇರುವ ಜಿಲ್ಲೆಗಳ ಅಧಿಕಾರಿಗಳು ವೈಯಕ್ತಿಕ ಗಮನ ಹರಿಸಬೇಕು.

ಸಭೆಯಲ್ಲಿ ಮುಖ್ಯಮಂತ್ರಿಗಳು ನೀಡಿದ ಸಲಹೆ ಸೂಚನೆಗಳು :

ಜಲಜೀವನ ಮಿಷನ್ , ವಸತಿ ಯೋಜನೆ ಸೇರಿದಂತೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅಭಿವೃದ್ಧಿ ಯೋಜನೆಗಳು ಜಿಲ್ಲಾ ವ್ಯಾಪ್ತಿಯದ್ದಾಗಿದ್ದು, ಅದರ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

· ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ ಯೋಜನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು.

· ಮಾನವ ಅಭಿವೃದ್ಧಿ ಸೂಚ್ಯಂಕ ದಡಿ ರಾಜ್ಯ ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಪೌಷ್ಟಿಕತೆ ನಿವಾರಣೆಗೆ ಎಲ್ಲಾ ಜಿಲ್ಲೆಗಳು ಪ್ರಾಮುಖ್ಯತೆಯನ್ನು ನೀಡಬೇಕು.

ಜಿಲ್ಲೆಗಳಲ್ಲಿ ಅಮೃತ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕಾಗಿ ತಲಾ ಇಪ್ಪತ್ತು ಲಕ್ಷ ರೂ.ಗಳನ್ನು ನೀಡಲಾಗಿದೆ. ಇದರಲ್ಲಿ ಪ್ರಗತಿ ಸಾಧಿಸಬೇಕು.

· ಜಿಲ್ಲೆಗಳಲ್ಲಿ ಮೂಲಭೂತಸೌಕರ್ಯ, ರಸ್ತೆ, ಚರಂಡಿ ವ್ಯವಸ್ಥೆಗಳು ಸೇರಿದಂತೆ ಗ್ರಾಮೀಣಾಭಿವೃದ್ಧಿಯ ಕಾರ್ಯಕ್ರಮಗಳು ಕೃಷಿ ಕ್ಷೇತ್ರದ ಅಭಿವೃದ್ಧಿಗೂ ಪೂರಕವಾಗಿರುತ್ತವೆ.

· ಗುಣಮಟ್ಟದ ಬೀಜ, ಗೊಬ್ಬರ ಪೂರೈಕೆ ಮೂಲಕ ಕೃಷಿ ಉತ್ಪಾದನೆಯನ್ನೂ ಹೆಚ್ಚಿಸಲು ಆದ್ಯತೆ ನೀಡಬೇಕು.

· ‘ಒಂದು ಜಿಲ್ಲೆ ಒಂದು ಉತ್ಪನ್ನ’ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸ್ಥಳೀಯ ಉದ್ಯೋಗ ಹಾಗೂ ಸ್ಥಳೀಯ ಉತ್ಪಾದನೆಗೂ ಉತ್ತೇಜನ ನೀಡಬೇಕು.

· ಗ್ರಾಮ ಒನ್, ತಹಶೀಲ್ದಾರ್ ಕಚೇರಿ, ಅಟಲ್ ಕೇಂದ್ರಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ಜಿಲ್ಲಾಡಳಿತ ಜನರಿಗೆ ಹತ್ತಿರವಾಗಬೇಕು.

· ಜಿಲ್ಲಾಡಳಿತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಜನತೆಗೆ ಸ್ಪಂದನಾಶೀಲ ಆಡಳಿತ ನೀಡುವ ಜೊತೆಗೆ ಜನರ ಸುತ್ತ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳಬೇಕು.

· ದಕ್ಷತೆಯಿಂದ ಕಾರ್ಯನಿರ್ವಹಿಸುವ ಮೂಲಕ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಇಂಜಿನೀಯರುಗಳು ತಳಮಟ್ಟದ ಜನರೊಂದಿಗೆ ಸಂವಹಿಸಿ ಆಡಳಿತ ನೀಡಬೇಕು.ಇನ್ನು ಮೂರು ತಿಂಗಳ ಅವಧಿಯೊಳಗೆ ತಳಮಟ್ಟದ ಜನರ ಜೀವನ ಮಟ್ಟ ಸುಧಾರಿಸುವಂತೆ ಕಾರ್ಯನಿರ್ವಹಿಸಬೇಕು.

· ಜಿಲ್ಲೆಯ ಆಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಜನರಲ್ಲಿ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಹೆಚ್ಚಿಸಬೇಕು.

ಸ್ವಚ್ಛಭಾರತ ಅಭಿಯಾನ:

· ಒಳಚರಂಡಿ ಎಲ್ಲ ಗ್ರಾಮದಲ್ಲಿ ಆಗಬೇಕು. ನಿಂತ ನೀರಿನಿಂದ ಕಾಯಿಲೆಗಳಿಗೆ ದಾರಿಯಾಗುತ್ತದೆ. ಒಳಚರಂಡಿ ವ್ಯವಸ್ಥೆಗೆ ಪ್ರಥಮಾದ್ಯತೆ ನೀಡಬೇಕು. ಗ್ರಾಮಗಳ್ಲಿ ರಸ್ತೆಗಳ ಮೇಲೆ ಕೊಳಚೆ ನೀರು ಹರಿಯುತ್ತಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಗ್ರಾಮೀಣ ಭಾಗದ ಸ್ವಚ್ಛತೆಗೆ ಪ್ರಾಶಸ್ತ್ಯನೀಡಬೇಕು.

· ಗ್ರಾಮಗಳ ಸ್ವಚ್ಛತೆ ಹಾಗೂ
· ಘನತ್ಯಾಜ್ಯ ನಿರ್ವಹಣೆಯಡಿ ಹಿಂದಿರುವ ಜಿಲ್ಲೆಗಳು ಆದ್ಯತೆ ಮೇರೆಗೆ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಬೇಕು.

· ಇನ್ನೊಂದು ವಾರದಲ್ಲಿ ಡಿಪಿಆರ್ ಸಿದ್ಧಪಡಿಸುವುದು, ನವೆಂಬರ್ ಮಾಹೆಯಲ್ಲಿ ಮುಖ್ಯ ಚರಂಡಿ ಕಾಮಗಾರಿ ಪೂರ್ಣಗೊಳ್ಳಬೇಕು. ಜನವರಿ ತಿಂಗಳೊಳಗೆ ಗ್ರಾಮದೆಲ್ಲೆಡೆ ಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು.

ಎಂಜಿಎನ್ ಆರ್ ಇ ಜಿ ಎ :

· ಈ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 16 ಕೋಟಿ ಮಾನವ ದಿನಗಳ ಸೃಜನೆ ಪೈಕಿ 16.38 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡಿ ಶೇ.೧೦೦ ಕ್ಕಿಂತಲೂ ಹೆಚ್ಚು ಪ್ರಗತಿ ಸಾಧಿಸಲಾಗಿದೆ. ಶೇ. 100 ಕ್ಕಿಂತಲೂ ಹೆಚ್ಚಿನ ಪ್ರಗತಿ ಸಾಧಿಸಿದ ಜಿಲ್ಲೆಗಳನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು.

· ಅಂಗನವಾಡಿ ಕಟ್ಟಡ, ಗ್ರಾಮಪಂಚಾಯತಿ ಕಟ್ಟಡ, ಶಾಲಾ ಕಟ್ಟಡ, ರಸ್ತೆ ನಿರ್ಮಾಣ,ಒಳಚರಂಡಿ ವ್ಯವಸ್ಥೆ, ಹೀಗೆ ಅಸೆಟ್ ಕ್ರಿಯೇಷನ್ ಗೆ ಹೆಚ್ಚಿನ ಆದ್ಯತೆ ನೀಡುವುದು.

· ಗ್ರಾಮಗಳಲ್ಲಿ ಆರೋಗ್ಯ ಹಾಗೂ ಶಿಕ್ಷಣದ ಮೂಲಸೌಕರ್ಯದ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು.

· ಕಾಮಗಾರಿಗಳಲ್ಲಿ ಬಳಸಲಾದ ಕೂಲಿಕಾರ್ಮಿಕರ ವೇತನವನ್ನು ಯಾವುದೇ ವಿಳಂಬವಿಲ್ಲದೇ ಸಕಾಲದಲ್ಲಿ ಪಾವತಿ ಮಾಡಬೇಕು.

· ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಬೇಕು. ಕಾಮಗಾರಿಗಳ ಗುರಿಯನ್ನು ನಿಗದಿತ ಅವಧಿಯೊಳಗೇ ಸಾಧಿಸಬೇಕು.

· ಈ ಯೋಜನೆಯಡಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಇತರ ಇಲಾಖೆಗಳ ಸಮನ್ವಯವನ್ನೂ ಸಾಧಿಸಿ, ತೊಡಕುಗಳಿದ್ದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರುವುದು.

· ಮಿಷನ್ ಅಮೃತ ಸರೋವರ್ ಯೋಜನೆಯಡಿ ಪ್ರತಿಜಿಲ್ಲೆಯಲ್ಲಿಯೂ ತಲಾ 15 ಟ್ಯಾಂಕ್ ಗಳ ನಿರ್ಮಾಣಕ್ಕೆ ಗುರಿ ನೀಡಲಾಗಿದ್ದು, ಟ್ಯಾಂಕ್ ನಿರ್ಮಾಣವನ್ನು ಆಗಸ್ಟ್ 15ರೊಳಗೆ ಪೂರ್ಣಗೊಳಿಸಿ, ಜನರ ಬಳಕೆಗೆ ಮುಕ್ತಗೊಳಿಸುವುದು.

20220810 131205

ಮಳೆ ಪರಿಹಾರ ಕಾಮಗಾರಿಗಳು :

· ಮಳೆಯಿಂದಾಗಿ ಹಾನಿಯಾಗಿರುವ ಮೂಲಭೂತ ಸೌಕರ್ಯಗಳ ರಿಸ್ಟೋರೇಷನ್ ಕೆಲಸವನ್ನು ಆದ್ಯತೆಯ ಮೇರೆಗೆ ನಿರ್ವಹಿಸಿ. ರಸ್ತೆಗಳನ್ನು ಜನರ ಸಂಚಾರಕ್ಕೆ ಯೋಗ್ಯವಾಗುವಂತೆ ನಿರ್ಮಿಸಲು ಒತ್ತು ನೀಡಿ.

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕಾರ್ಯಕ್ರಮಗಳು :

· ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದರೂ ಕಾಮಗಾರಿಗಳು ಪ್ರಾರಂಭವಾಗಿಲ್ಲ. ಜಿಲ್ಲೆಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದ್ದು, ಜಿಲ್ಲೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು.

ಪಿಎಂಜಿಎಸ್ ವೈ ಗ್ರಾಮ ಸಡಕ್ ಯೋಜನೆ :

· ಈ ಯೋಜನೆಯಡಿ ಬೀದರ್ ಹಾಗೂ ರಾಮನಗರ ಜಿಲ್ಲೆಯಲ್ಲಿ ಪ್ರಗತಿ ಹೇಳಿಕೊಳ್ಳುವಷ್ಟು ಆಗಿಲ್ಲ.
ಈ ಬಗ್ಗೆ ವಿಶೇಷ ಗಮನ ಹರಿಸಿ ಇನ್ನು ಮೂರು ತಿಂಗಳೊಳಗಾಗಿ ಕಳೆದ ವರ್ಷದ ಪ್ರಗತಿಯನ್ನು ಸಾಧಿಸಲು ಸೂಚನೆ ನೀಡಿದರು.

ಅಮೃತ ಗ್ರಾಮ ಪಂಚಾಯತಿ ಯೋಜನೆ :

· ಗ್ರಾಮೀಣ ಪ್ರದೇಶವನ್ನು ಯೋಜನಾಬದ್ಧವಾಗಿ ಅಭಿವೃದ್ಧಿಗೊಳಿಸಿ. ಮಾದರಿ ಗ್ರಾಮಗಳನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

· ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಗ್ರಾಮಗಳ ಸಮಗ್ರ ಅಭಿವೃದ್ಧಿಯನ್ನು ಸಾಧಿಸಿ. ಗ್ರಾಮಗಳನ್ನು ಸ್ಮಾರ್ಟ್ ಗ್ರಾಮಗಳನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ.

· ಸೆಪ್ಟೆಂಬರ್ 15 ರೊಳಗೆ ಮೊದಲ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು.

· 2 ಹಂತದ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮಗಳ ಆಯ್ಕೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವುದು.

· ಜಿಲ್ಲೆಯ ಅಭಿವೃದ್ಧಿಯ ಪ್ರಗತಿ ಪರಿಶೀಲನೆಗೆ ಅನುಕೂಲವಾಗುವಂತೆ , ಜಿಲ್ಲೆಮಟ್ಟದ ಅಭಿವೃದ್ಧಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳು ಕೈಗೊಂಡಿರುವ ಕ್ರಮ, ಆಗಿರುವ ಪ್ರಗತಿ ಬಗ್ಗೆ ಜಿಲ್ಲಾವಾರು ಬುಕ್ ಲೆಟ್ ಮಾಡಿ ಮುಖ್ಯಮಂತ್ರಿಗಳಿಗೆ ಒದಗಿಸುವುದು.