IMG 20220810 WA0001

ಅಕ್ರಮ ವಿದೇಶಿ ವಲಸಿಗರ ದಿಗ್ಬಂಧನ ಕೇಂದ್ರ ವಿಸ್ತರಣೆ ಹಾಗೂ ಬಲವರ್ಧನೆ…!

CRIME Genaral STATE

ಅಕ್ರಮ ವಿದೇಶಿ ವಲಸಿಗರ ದಿಗ್ಬಂಧನ ಕೇಂದ್ರ ವಿಸ್ತರಣೆ ಹಾಗೂ ಬಲವರ್ಧನೆ:
ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.

ಬೆಂಗಳೂರು, ಆಗಸ್ಟ್ ೧೦

ಅಕ್ರಮ ವಿದೇಶಿ ವಲಸಿಗರನ್ನು ಹಿಡಿದಿಡುವ ದಿಗ್ಬಂಧನ ಕೇಂದ್ರದ ಸಾಮರ್ಥ್ಯ ವನ್ನು ಇಮ್ಮಡಿಗೊಳಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವ ಕುರಿತು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು ಉನ್ನತ ಮಟ್ಟದ ಜಂಟಿ ಸಭೆಯನ್ನು, ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀ ಶ್ರೀನಿವಾಸ ಪೂಜಾರಿ, ಅವರೊಂದಿಗೆ ನಡೆಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಅಕ್ರಮ ವಲಸಿಗರು, ವೀಸಾ ಅವಧಿ ಮುಗಿದರೂ, ದೇಶದಲ್ಲಿಯೇ ಉಳಿದುಕೊಳ್ಳುತ್ತಿದ್ದು ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಅಪಾಯ ಇರುವ ದೃಷ್ಟಿಯಿಂದ, ಅವರನ್ನು ಗಡಿಪಾರು ಮಾಡುವ ಅಗತ್ಯವಿದೆ ಎಂದರು.

ಪ್ರಸ್ತುತ ಇರುವ ಅಕ್ರಮ ವಿದೇಶಿ ವಲಸಿಗರಿಗೆ ತಾತ್ಕಾಲಿಕ ವಸತಿ ಕಲ್ಪಿಸುವ ‘ ದಿಗ್ಬಂಧನ ಕೇಂದ್ರ ‘ (detention center) ವನ್ನು ವಿಸ್ತರಿಸಿ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ, ರಾಜ್ಯ ಪೊಲೀಸ್ ಮಹನಿರ್ದೇಶಕ ಶ್ರೀ ಪ್ರವೀಣ್ ಸೂದ್ ಅವರು ಪ್ರಸ್ತಾಪಿಸಿದರು .

ಅಕ್ರಮ ಬಾಂಗ್ಲಾದೇಶಿ ನಾಗರಿಕರೂ ಸೇರಿದಂತೆ ಇತರ ದೇಶದ ವಲಸಿಗರನ್ನು, ದೇಶದ ಕಾನೂನಿನಂತೆ, ಬಂಧಿಸಿ, ಯಾವುದೇ ಕಾರಾಗೃಹ ಗಳಲ್ಲಿ ಇಡದೆ, ಇವರಿಗೆಂದೇ ಇರುವ ದಿಗ್ಬಂಧನ ಕೇಂದ್ರದಲ್ಲಿ ವಸತಿ ಕಲ್ಪಿಸಬೇಕು ಹಾಗೂ ಅದಕ್ಕಾಗಿ ತಕ್ಷಣ ಕ್ರಮ ವಹಿಸಬೇಕಾಗಿದೆ ಎಂದರು.

ಪ್ರಸ್ತುತ ಬೆಂಗಳೂರಿನ ಸಮೀಪ ವಿರುವ ನೆಲಮಂಗಲದ ಸಮೀಪ ದಿಗ್ಬಂಧನ ಕೇಂದ್ರವೊಂದು ಕಾರ್ಯಾಚರಣೆ ನಡೆಸುತ್ತಿದ್ದು, ಅಲ್ಲಿ ಸ್ಥಳಾವಕಾಶ ಕೊರತೆ ಇದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಪ್ರಸ್ತುತ ದಿಗ್ಬಂಧನ ಕೇಂದ್ರದ ಸಾಮರ್ಥ್ಯ ವಿಸ್ತರಣೆಗೆ ಸಮಾಜ ಕಲ್ಯಾಣ ಇಲಾಖೆ ಅನುದಾನ ಒದಗಿಸಬೇಕು ಹಾಗೂ ವಿಳಂಬ ವಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.

ಈ ಕುರಿತು ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಈ ಕುರಿತು ಗೃಹ ಇಲಾಖೆ ಸಲ್ಲಿಸುವ ಪ್ರಸ್ತಾವನೆಯನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಸಮಾಜ ಕಲ್ಯಾಣ ಅಧಿಕಾರಿಗಳಿಗೆ, ಸಚಿವ ಪೂಜಾರಿಯವರು, ಸಭೆಯಲ್ಲಿಯೇ ನಿರ್ದೇಶನ ನೀಡಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಶ್ರೀ ಪ್ರತಾಪ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳೂ ಉಪಸ್ತಿತರಿದ್ದರು.