ಬೀದಿ ಬದಿ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ನೀಡಲು ಸೂಚನೆ-ಜಿಲ್ಲಾಧಿಕಾರಿ
ತುಮಕೂರು (ಕ.ವಾ) ಆ.10: ಕೇಂದ್ರ ಸರ್ಕಾರ ಬೀದಿಬದಿ ವ್ಯಾಪಾರಿಗಳಿಗೆಂದು ಕಲ್ಯಾಣ ಯೋಜನೆಗಳನ್ನು ರೂಪಿಸಿದ್ದು, ಅಧಿಕಾರಿಗಳು ಹೆಚ್ಚಿನ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಕಾರ್ಡುಗಳನ್ನು ವಿತರಿಸಿ ಸಾಲಸೌಲಭ್ಯ ಒದಗಿಸುವತ್ತ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಬದಿಯಲ್ಲಿ, ಕೈಗಾಡಿಗಳಲ್ಲಿ ವ್ಯಾಪಾರ ಮಾಡಿ ತಮ್ಮ ಕುಟುಂಬವನ್ನು ನಿರ್ವಹಿಸುವ ವ್ಯಾಪಾರಿಗಳಿಗೆ ಸಹಾಯ ಮಾಡಲು ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಅರ್ಹರಿಗೆ ಸಾಲದ ವ್ಯವಸ್ಥೆ ಕಲ್ಪಿಸಬೇಕೆಂದು ತಿಳಿಸಿದರು.
ತಮ್ಮ ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಸಮಿತಿ ಸಭೆ ನಡೆಸಿ ಜೂನ್ 2022ರ ಅಂತ್ಯಕ್ಕೆ ಸಾಧಿಸಲಾದ ಕೌಶಲ್ಯ ಸಂಬಂಧಿತ ಇಲಾಖಾವಾರು ಕಾರ್ಯಕ್ರಮಗಳ ಪ್ರಗತಿ ವರದಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ ದೀನ್ ದಯಾಳ್ ಉಪಾಧ್ಯಾಯ್ ಗ್ರಾಮೀಣ ಕೌಶಲ್ಯ ಯೋಜನೆ( ಡಿಡಿಯುಜಿಕೆವೈ) ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ (ಸಿಎಂಕೆಕೆವೈ) ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ ( ಪಿಎಂಕೆವಿವೈ) ಗಳನ್ನು ಜಾರಿಗೊಳಿಸಿದ್ದು ಅರ್ಹರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ವೃತ್ತಿ ಮಾರ್ಗದರ್ಶನ ಮಾಡಲು ಪೂರಕ ಕಾರ್ಯಕ್ರಮಗಳನ್ನು ರೂಪಿಸಬೇಕೆಂದರು.
ಪ್ರಸಕ್ತ ಸಾಲಿನ ಡೇ-ನಲ್ಮ್ ಯೋಜನೆಯ ಪ್ರಗತಿ ಪರಿಶೀಲಿಸಿದ ಅವರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಸಹಾಯ ಗುಂಪುಗಳ ರಚನೆ ಮಾಡಿ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ವಯಕ್ತಿಕ ಸಾಲ, ಗುಂಪುಸಾಲ, ಬ್ಯಾಂಕ್ ಕ್ರೆಡಿಟ್ ಲಿಂಕೇಜ್, ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣೆ ಉದ್ದಿಮೆಯಡಿ ಅರ್ಹರಿಗೆ ಸಾಲಸೌಲಭ್ಯ, ಸಹಾಯಧನ ಒದಗಿಸಿ ಅವರ ಆರ್ಥಿಕ ಸ್ಥಿತಿ ಸುಧಾರಿಸುವತ್ತ ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು.
ಅಂತರರಾಷ್ಟ್ರೀಯ ವಲಸೆ ಕೇಂದ್ರ- ಕರ್ನಾಟಕ ಯೋಜನೆಯಡಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ವಲಸೆ ಮಾಹಿತಿ ಕೇಂದ್ರದಲ್ಲಿ ಕುವೈತ್, ಯು.ಕೆ, ದುಬೈ, ರೋಮಾನಿಯಾ ದೇಶಗಳಲ್ಲಿ ಮನೆ ಕೆಲಸ, ನರ್ಸ್, ಕಟ್ಟಡ ನಿರ್ಮಾಣ ಮೇಸ್ತ್ರಿಗಳು, ಟ್ರೈನ್ ಫ್ಯಾಕ್ಟರಿ, ಟೆಕ್ನಿಷಿಯನ್ ವರ್ಕರ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಲಸೆ ಕಾರ್ಮಿಕರಿಗಿರುವ ಬೇಡಿಕೆ ವಿವರ ಲಭ್ಯವಿದ್ದು, ಈವರೆಗೂ ವಲಸೆಗಾಗಿ ನೋಂದಾಣಿಯಾದ 351 ಅಭ್ಯರ್ಥಿಗಳಿಗೆ ಸಮಾಲೋಚನೆ ನಡೆಸಲಾಗಿದೆ ಎಂದರಲ್ಲದೇ, ವಿದೇಶದಲ್ಲಿ ಉದ್ಯೋಗ ಮಾಡಲು ಬಯಸುವವರು ವಲಸೆ ಮಾಹಿತಿ ಕೇಂದ್ರದಲ್ಲಿ ಅಗತ್ಯ ಮಾಹಿತಿ ಪಡೆಯಬಹುದೆಂದರು.
ಜಿಲ್ಲಾ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ ವಿದ್ಯಾರ್ಥಿಗಳಿಗೆ 2 ತಿಂಗಳ ಕಾಲ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಖSಇಖಿI, ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಎನ್.ಆರ್.ಎಲ್.ಎಂ- ಸಂಜೀವಿನಿ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುವೈದ್ಯಕೀಯ ಇಲಾಖೆಗಳಡಿ ಅಗತ್ಯ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ ವಿದ್ಯಾಕುಮಾರಿ, ಜಿಲ್ಲಾ ಕೌಶಲ್ಯಾಧಿಕಾರಿ ಶ್ರೀನಿವಾಸ್, ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಡಿಡಿಪಿಐ ನಂಜಯ್ಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.