IMG 20211213 WA0043

ವೃದ್ಧಾಪ್ಯ ವೇತನ ಸಮಸ್ಯೆ: ಸದನದಲ್ಲಿ ಧ್ವನಿ

Genaral STATE

ವೃದ್ಧಾಪ್ಯ ವೇತನ ಸಮಸ್ಯೆ: ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್
ಮನೆಮನೆಗೆ ತೆರಳಿ ವೇತನ ತಲುಪಿಸುವ ಭರವಸೆ ನೀಡಿದ ಸಚಿವ ಆರ್. ಅಶೋಕ್

ಬೀದರ್ (ಡಿ.13): ವೃದ್ಧಾಪ್ಯ ವೇತನವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಅದರಿಂದ ಗ್ರಾಮೀಣ ಭಾಗದ ವೃದ್ಧರಿಗೆ ಸಮಸ್ಯೆಯಾಗುತ್ತಿದ್ದು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವೃದ್ಧಾಪ್ಯ ವೇತನ ವಿತರಣೆಯ ಸಮಸ್ಯೆಯನ್ನು ಪರಿಹರಿಸಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಮೊದಲ ದಿನದ ವಿಧಾನಸಭೆ ಕಲಾಪದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

IMG 20211213 WA0011

ವೃದ್ದಾಪ್ಯ ವೇತನಕ್ಕೆ ಸಂಬಂಧಿಸಿದಂತೆ ಚುಕ್ಕೆ ಗುರುತಿನ ಪ್ರಶ್ನೆಯನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಕೇಳಿದ್ದರು. ಶಾಸಕರ ಪ್ರಶ್ನೆಗೆ ಸರ್ಕಾರದಿಂದ ಉತ್ತರವೂ ಬಂದಿತ್ತು. ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಯೋಜನೆಯಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೃದ್ಧಾಪ್ಯ ವೇತನಕ್ಕೆ ಸಂಬಂಧಿಸಿದ ಪ್ರಶ್ನೆ ಅದಾಗಿತ್ತು. ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಪ್ರಶ್ನೆಗೆ ಕಂದಾಯ ಸಚಿವರಾದ ಆರ್ ಅಶೋಕ್ ರವರು ಉತ್ತರ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ವೃದ್ಧಾಪ್ಯ ವೇತನವನ್ನು ಬ್ಯಾಂಕ್ ಖಾತೆಗಳ ಮೂಲಕ, ಅಂಚೆ ಕಛೇರಿಯ ಉಳಿತಾಯ ಖಾತೆಯ ಮೂಲಕ ನೀಡುತ್ತಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ಸಮಸ್ಯೆಯಾಗುತ್ತಿದೆ. ಅವರಿಗೆ ನೀಡುವ ಆರು ನೂರು ರೂ.ಗಳನ್ನು ಪಡೆದುಕೊಳ್ಳಲು ಅವರು ದೂರದ ಊರುಗಳಿಗೆ ಹೋಗಬೇಕಾಗುತ್ತದೆ. ರಾಜ್ಯದ ಅದೆಷ್ಟೋ ಹಳ್ಳಿಗಳಲ್ಲಿ ಬ್ಯಾಂಕ್ ಗಳು, ಅಂಚೆ ಕಛೇರಿಗಳು ಇಲ್ಲ. ಬ್ಯಾಂಕ್ ಅಥವಾ ಅಂಚೆ ಕಛೇರಿಗೆ ಹೋಗಬೇಕೆಂದರೇ ಹತ್ತಾರು ಕಿ.ಮೀ ಪ್ರಯಾಣ ಮಾಡಬೇಕು. ಇದರಿಂದ ಗ್ರಾಮೀಣ ಭಾಗದ ಜನರ ಒಂದು ದಿನದ ಸಮಯ, ವಾಹನ ಖರ್ಚು ವ್ಯರ್ಥವಾಗುತ್ತಿದೆ.
ಅಲ್ಲದೇ ಅದೆಷ್ಟೋ ವೃದ್ಧರಿಗೆ ಕಣ್ಣಿನ ಸಮಸ್ಯೆ, ನಡೆದಾಡಲಾಗದ ಸಮಸ್ಯೆ ಇರುತ್ತವೆ. ಅಂತವರಿಗೂ ಸಮಸ್ಯೆಯಾಗುತ್ತಿದೆ. ಅನಕ್ಷರಸ್ಥರು ಅವರಿವರ ಮೊರೆ ಹೋಗಬೇಕಾಗುತ್ತದೆ. ಇದರಿಂದ ಬಹಳಷ್ಟು ಸಮಸ್ಯೆಗಳಾಗುತ್ತಿವೆ. ನಾವು ಹಳ್ಳಿಗಳಿಗೆ ಪ್ರವಾಸ ಕೈಗೊಂಡಾಗ ಹಳ್ಳಿ ಜನರು ತಮ್ಮ ವೃದ್ಧಾಪ್ಯ ವೇತನದ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡುತ್ತಿದ್ದಾರೆ ಹಾಗಾಗಿ ವೃದ್ಧಾಪ್ಯ ವೇತನವನ್ನು ಅವರವರ ಮನೆಗಳಿಗೆ ತಲುಪಿಸುವ ಕೆಲಸ ಮಾಡುವಂತೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.
ಮರು ಉತ್ತರ ನೀಡಿದ ಸಚಿವ ಆರ್. ಅಶೋಕ್ ರವರು, ನಾವು ಈಗಾಗಲೇ ಅಂಚೆ ಕಛೇರಿಯಲ್ಲಿ ಉಳಿತಾಯ ಖಾತೆ ತೆರೆದವರಿಗೆ ಅಂಚೆ ಕಛೇರಿಯ ಮೂಲಕ ವೃದ್ಧಾಪ್ಯ ವೇತನ ನೀಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ವೃದ್ಧಾಪ್ಯ ವೇತನವನ್ನು ವೃದ್ಧರ ಮನೆಮನೆಗಳಿಗೆ ತಲುಪಿಸುವ ಯೋಜನೆಯನ್ನು ಜಾರಿಗೆ ತರುತ್ತೇವೆಂದು ಸದನದಲ್ಲಿ ಭರವಸೆ ನೀಡಿದರು.