*ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ಬೆಳಗಾವಿ ಅಧಿವೇಶನ : ಸಿಎಂ*
ಬೆಳಗಾವಿ, ಡಿಸೆಂಬರ್ 24 :ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ ಬೆಳಗಾವಿ ಅಧಿವೇಶನವನ್ನು ಸಾರ್ಥಕಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಹಲವಾರು ಜ್ವಲಂತ ಸಮಸ್ಯೆಗಳಿಗೆ ಉತ್ತರ ದೊರೆತಿದೆ. ಉತ್ತರ ಕರ್ನಾಟಕದ ನೀರಾವರಿ ಕ್ಷೇತ್ರದ ಅಭಿವೃದ್ಧಿ ಬದ್ಧವಾಗಿದೆ ಎಂದು ಸರ್ಕಾರದ ನಿರೂಪಿಸಿದೆ. ಈ ನಿಟ್ಟಿನಲ್ಲಿ. ಉತ್ತರ ಕರ್ನಾಟಕದ ಭಾಗಕ್ಕೆ ರೈಲ್ವೆ ಯೋಜನೆಗಳು, ಹೆಸ್ಕಾಂನ ಆರ್ಥಿಕ ಪುನಶ್ಚೇತನ, ಸಸಾಲಟ್ಟಿ ಮತ್ತು ಮಂಟೂರುಗಳಿಗೆ ನೀರಾವರಿ ಯೋಜನೆಗೆ ಅನುಮೋದನೆ, ಗುಲ್ಬರ್ಗಾ ಸೇಡಂ ನಲ್ಲಿ ಏತನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಪೂರಕ ಅಂದಾಜಿನಲ್ಲಿ ಎಸ್‍ಸಿಎಸ್‍ಟಿ ಜನಾಂಗಕ್ಕೆ 500 ಕೋಟಿ , ಕಲ್ಯಾಣ ಕರ್ನಾಟಕ ಶಿಕ್ಷಕರ ನೇಮಕಾತಿ, ಬೆಳಗಾವಿಯಲ್ಲಿ ಮೂಲಸೌಲಭ್ಯಗಳ ವೃದ್ಧಿಗೆ ಆದ್ಯತೆ ನೀಡಲಾಗುವುದು. ಜನವರಿ ತಿಂಗಳಲ್ಲಿ ಜಂಟಿ ಅಧಿವೇಶನವನ್ನು ಕರೆಯುವ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
*ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ:*
ಅಕಾಲಿಕ ಮಳೆ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿದ್ದ ರೈತರು , ಬಡವರ ಪರಿಹಾರ ನೀಡಲು ಸುದೀರ್ಘ ಚರ್ಚೆಯಾಯಿತು. ಬೆಳೆಹಾನಿ ಮತ್ತು ಮನೆಹಾನಿ , ನೀರು ನುಗ್ಗಿರುವ ಮನೆಗಳಿಗೆ ಪರಿಹಾರ ಮತ್ತು ತಂತ್ರಾಂಶದ ಬಳಕೆಯಿಂದ ಸರ್ವೇ ಕಾರ್ಯ ಅಪಲೋಡ್ ಆದ 48 ಗಂಟೆಗಳೊಳಗೆ ಪರಿಹಾರ ನೀಡುವ ಕೆಲಸವಾಗಿದೆ. ಬೆಳೆಹಾನಿಯಾದ ಒಂದೇ ತಿಂಗಳಲ್ಲಿ 700 ಕೋಟಿಗೂ ಹೆಚ್ಚು ಪರಿಹಾರವನ್ನು 14 ಲಕ್ಷ ರೈತರಿಗೆ ಈಗಾಗಲೇ ನೀಡಲಾಗಿದೆ. ಇದು ದೇಶದಲ್ಲೇ ದಾಖಲೆ ನಿರ್ಮಿಸಿದ ಮಾದರಿ ಕಾರ್ಯಕ್ರಮ ಎಂದು ತಿಳಿಸಿದರು.
*ಬೆಳೆಹಾನಿಗೆ ದುಪ್ಪಟ್ಟು ಬೆಳೆಪರಿಹಾರ:*
ರಾಜ್ಯ ಸರ್ಕಾರ ಸಕಾಲದಲ್ಲಿ ರೈತರಿಗೆ ಸ್ಪಂದಿಸಿದೆ. ಒಣಬೇಸಾಯದ ಪ್ರತಿ ಹೆಕ್ಟೇರ್‍ಗೆ 6,800 ರೂ. ಪರಿಹಾರವನ್ನು 13,600 ರೂ.ಗಳಿಗೆ, ನೀರಾವರಿ ಜಮೀನಿನ ಪ್ರತಿ ಹೆಕ್ಟೇರ್ ಬೆಳೆಹಾನಿಗೆ ರೂ.13,500 ಪರಿಹಾರವನ್ನು ರೂ.25,000 ಗಳಿಗೆ ಹಾಗೂ ತೋಟಗಾರಿಕೆ ಬೆಳೆಯ ಪ್ರತಿ ಹೆಕ್ಟೇರ್ ಬೆಳೆಹಾನಿಗೆ 18,000 ರೂ. ಪರಿಹಾರವನ್ನು 28,000 ರೂ.ಗಳಿಗೆ ಹೆಚ್ಚಿಸಿ ನೀಡಲು ತೀರ್ಮಾನಿಸಲಾಗಿದೆ. ಇದು ಐತಿಹಾಸಿಕವಾದ ತೀರ್ಮಾನ. 12 ರಿಂದ 14 ಸಾವಿರ ಹೆಕ್ಟೇರ್ ಪ್ರದೇಶ ನಾಶವಾಗಿದೆ. ಸರ್ಕಾರದ ಆರ್ಥಿಕ ಇತಿಮಿತಿಯೊಳಗೆ ರೈತಪರ ನಿಲುವನ್ನು ತಳೆಯಲಾಗಿದೆ. ರೈತ ಸ್ನೇಹಿ ಸರ್ಕಾರ ಎಂದು ಸದನದಲ್ಲಿ ನಿರೂಪಿಸಲಾಯಿತು.
*ಮತಾಂತರ ನಿಷೇಧ ಕಾಯ್ದೆ :*
ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಸ್ಪಷ್ಟ ನಿಲುವಿನಿಂದ ವಿಧಾನಸಭೆಯಲ್ಲಿ ಪಾಸ್ ಮಾಡಲಾಯಿತು. ಕಾಂಗ್ರೆಸ್ ದ್ವಿಮುಖ ನೀತಿ ಸ್ಪಷ್ಟವಾಗಿ ಗೋಚರಿಸಿತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಪಿಎಂಸಿ ಕಾಯ್ದೆಯಡಿ ಖಾಸಗಿ ಮಾರುಕಟ್ಟೆಗೆ ಅನುಮತಿ ನೀಡಿತ್ತು. ಆದರೆ ವಿರೋಧ ಪಕ್ಷದಲ್ಲಿದ್ದಾಗ ಅದನ್ನು ವಿರೋಧಿಸುತ್ತಿದ್ದಾರೆ. ದ್ವಿಮುಖ ನೀತಿಯನ್ನು ಕಾಂಗ್ರೆಸ್ ನಿರಂತರವಾಗಿ ಮಾಡುತ್ತಿದೆ ಎಂದು ತಿಳಿಸಿದರು.
ವಿಧಾನಪರಿಷತ್ತಿನಲ್ಲಿ ಮತಾಂತರ ನಿಷೇದ ಕಾಯ್ದೆ ಪಾಸ್ ಆಗದ ಬಗ್ಗೆ ಪ್ರತಿಕ್ರಯಿಸಿ, ಕಾಯ್ದೆ ಒಪ್ಪಲು ಯಾವುದೇ ಒತ್ತಾಯ ಒತ್ತಡ ಹೇರುವುದಿಲ್ಲ. ವಿಷಯಗಳನ್ನು ಮನದಟ್ಟು ಮಾಡಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಯ್ದೆಯನ್ನು ಅಂಗೀಕರಿಸಲು ಈ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ಪರಿಗಣಿಸಲಾಗುವುದು ಎಂದು ತಿಳಿಸಿದರು.
*ಜನಪರ ನೀತಿಯಿಲ್ಲದ ವಿರೋಧ ಪಕ್ಷ :*
ವಿಧೇಯಕಗಳನ್ನು ಅಂಗೀಕರಿಸಲು ಅಧಿವೇಶನ ಕರೆಯಲಾಗಿದೆ ಎಂಬ ಕಾಂಗ್ರೆಸ್‍ನ ಆರೋಪಕ್ಕೆ ಪ್ರತಿಕ್ರಯಿಸಿ ವಿಷಯಗಳನ್ನು ಚರ್ಚಿಸಲು ವಿರೋಧ ಪಕ್ಷಗಳಿಗೆ ಸಾಕಷ್ಟು ಕಾಲಾವಕಾಶ ನೀಡಿದ್ದರೂ, ಧರಣಿ ಮಾಡುವುದಷ್ಟೇ ಅವರ ಧ್ಯೇಯವಾಗಿತ್ತು. ಕೇವಲ ಮಾತನಾಡದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿತ್ತು. ವಿರೋಧ ಪಕ್ಷದವರಿಗೆ ಜನಪರ ನೀತಿಯೇ ಇಲ್ಲ. ಜವಾಬ್ದಾರಿಯುತವಾದ ನಡೆಯಲ್ಲ ಎಂದು ತಿಳಿಸಿದರು.