IMG 20211119 WA0042

ಕರ್ನಾಟಕ ಬಂದ್ ನಿಂದ ಕನ್ನಡಿಗರಿಗೇ ಕಷ್ಟ….!

Genaral STATE

*ಕರ್ನಾಟಕ ಬಂದ್ ನಿಂದ ಕನ್ನಡಿಗರಿಗೇ ಕಷ್ಟ; ಬದಲಿಗೆ ಕಾನೂನಾತ್ಮಕವಾಗಿ ಎಂಇಎಸ್ ನಿಷೇಧ ಮಾಡಿ*

*ಸರಕಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ*

ನಿಷೇಧ ಮಾಡಿದ ಮೇಲೆ ಕೋರ್ಟ್ ಗೆ ಹೋಗಿ ತಡೆ ತರುವಂತೆ ಆಗಬಾರದು

ಬೆಳಗಾವಿ ವಿಧಾನ ಕಲಾಪ ವ್ಯರ್ಥವಾಗಿದೆ ಎಂದರು ದಳಪತಿ

ಚನ್ನಪಟ್ಟಣ: ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸಿದ ಎಂಇಎಸ್ ಸಂಘಟನೆಯನ್ನು ಕಾನೂನು ವ್ಯಾಪ್ತಿಯಲ್ಲಿ ಕ್ರಮ ಜರುಗಿಸಿ ನಿಷೇಧ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಇಂದಿಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್ ಮಾಡುವುದಕ್ಕೆ ಕರೆ ನೀಡಲಾಗಿದೆ. ಬಂದ್ ಮಾಡುವುದರಿಂದ ಏನು ಪ್ರಯೋಜನ? ಅನುಕೂಲ ಯಾರಿಗೆ? ಅನನುಕೂಲ ಯಾರಿಗೆ? ಅನ್ನೋದು ಮುಖ್ಯ. ಈ ಬಂದ್ ಕರೆಯಿಂದ ಮಹಾರಾಷ್ಟ್ರಕ್ಕೆ ತೊಂದರೆ ಇಲ್ಲ. ರಾಜ್ಯದ ಜನರಿಗೆ ತೊಂದರೆ ಆಗುತ್ತದೆ ಎಂದು ಅವರು ತಿಳಿಸಿದರು.

ಎಂಇಎಸ್ ಸೇರಿದಂತೆ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ರಾಜ್ಯ ಸರಕಾರ ಮುಲಾಜಿಲ್ಲದೆ ಮುಂದಾಗಬೇಕು. ಕಾನೂನು ವ್ಯಾಪ್ತಿಯಲ್ಲಿ ಕ್ರಮಕ್ಕೆ ಸರ್ಕಾರ ಮೀನಮೇಷ ಇಲ್ಲದೇ ಮುಂದಾಗಬೇಕು. ಕಠಿಣ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಜವಾಬ್ದಾರಿ. ಬಂದ್ ಘೋಷಣೆಯಿಂದ ನಮ್ಮ ಜನರಿಗೆ ತೊಂದರೆ ಆಗುತ್ತದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕೂಲಿ ಕೆಲಸದವರಿಗೆ ಆಗುವ ಕಷ್ಟದ ಬಗ್ಗೆ ಚಿಂತಿಸಬೇಕು. ಬಂದ್ ಗೆ ಕರೆ ನೀಡಿದವರು ಕೂಡ ಈ ಬಗ್ಗೆ ಯೋಚಿಸಬೇಕು ಎಂದರು ಕುಮಾರಸ್ವಾಮಿ ಅವರು.

ಬಂದ್ ನಿಂದ ಕನ್ನಡಿಗರಿಗೆ ಬಹಳ ಅನಾನುಕೂಲವೇ ಆಗುತ್ತದೆ. ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕನ್ನಡ ದ್ರೋಹಿಗಳನ್ನು ಹತ್ತಿಕ್ಕಲು ಏನು ಬೇಕೋ ಆ ಕ್ರಮ ಕೈಗೊಳ್ಳಲು ಒತ್ತಡ ಹೇರಬೇಕು ಎಂದು ಅವರು ಸಲಹೆ ಮಾಡಿದರು.

*ಎಂಇಎಸ್ ಸಂಘಟನೆಯನ್ನು ಕಾನೂನಾತ್ಮಕವಾಗಿ ನಿಷೇಧ ಮಾಡಬೇಕು. ಸರಿಯಾದ ತೀರ್ಮಾನ ಮಾಡಬೇಕು. ಕೋರ್ಟ್ ಗೆ ಹೋಗಿ ತಡೆ ತರುವಂತೆ ನಿಷೇಧ ಹೇರಬಾರದು. ಸರ್ಕಾರ ಈ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳಲಿ ಎಂದು ಅವರು ಸರಕಾರಕ್ಕೆ ಕಿವಿಮಾತು ಹೇಳಿದರು.*

ಪಕ್ಷದ ಯುವ ಜನತಾದಳದ ಅಧ್ಯಕ್ಷರಾದ ನಿಖಿಲ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಂದ್ ನಿಂದ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಾರೆ. ಹೋರಾಟಗಾರರು ಒಮ್ಮೆ ಈ ಬಗ್ಗೆ ಆಲೋಚನೆ ಮಾಡಲಿ ಎಂದು ಅವರು ಹೇಳಿದರು.

ಬೆಳಗಾವಿ ಕಲಾಪ ವ್ಯರ್ಥವಾಗಿದೆ:

ನಾಡಿನ ಜನ ಎದುರಿಸುತ್ತಿರುವ ಸಮಸ್ಯೆಗಳು ಸೇರಿದಂತೆ ಉತ್ತರ ಕರ್ನಾಟಕದ ಜನ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಯಲಿಲ್ಲ. ಸದನ ಕಲಾಪವನ್ನ ಸಂಪೂರ್ಣ ವ್ಯರ್ಥ ಮಾಡಿದ್ದಾರೆ. ಅದರಲ್ಲೂ ಮೊದಲ 5 ದಿನದ ಕಲಾಪ ಸಂಪೂರ್ಣ ವ್ಯರ್ಥವಾಗಿದೆ ಎಂದರು ಮಾಜಿ ಮುಖ್ಯಮಂತ್ರಿಗಳು.

ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿಲ್ಲ. ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆಯೂ ಚರ್ಚಿಸಿಲ್ಲ. ಸಂಡೂರು ತಹಶೀಲ್ದಾರ್, ಬೈರತಿ ಬಸವರಾಜ್ ಪ್ರಕರಣಗಳ ಬಗ್ಗೆ ವೃಥಾ ಚರ್ಚೆ ನಡೆಸಿದ್ದಾರೆ. ಯಾವುದಕ್ಕೆ ಹೆಚ್ಚಿನ ಅದ್ಯತೆ ನೀಡಬೇಕಿತ್ತೋ ಅದಕ್ಕೆ ಪ್ರಾರಂಭಿಕ ಹಂತದಲ್ಲಿ ನೀಡಿಲ್ಲ. ಕೊನೆಯ ಎರಡು ದಿನವೆಂದು ಆಗ ಕೂಡ ಸರಿಯಾದ ಚರ್ಚೆ ನಡೆಯಲಿಲ್ಲ.

ಸರ್ಕಾರದವರು ಕೊನೆಯಲ್ಲಿ ಮತಾಂತರ ವಿಚಾರ ತಂದರು. ಸದನದ ಕಲಾಪ ನಡೆಯಬೇಕೆಂಬ ಆಶಯ ಈಡೇರಲಿಲ್ಲ. ಕೆಲವರು ಈ ನಿಟ್ಟಿನಲ್ಲಿ ಯೋಚಿಸುತ್ತಾರೆ. ಆದರೆ ಅವರ ಆಶಯ ಈಡೇರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.