ಸಮಸ್ಯೆಗಳ ತಾಣವಾದ ಪಾವಗಡದ ಪತಂಜಲಿ ನಗರದ ಹಿಂದುಳಿದ ವರ್ಗಗಳ ವಸತಿ ನಿಲಯ.
ಪಾವಗಡ : ಇಂದು ಪತಂಜಲಿ ನಗರದ ಹಿಂದುಳಿದ ವರ್ಗಗಳ ವಸತಿ ನಿಲಯದ ಮಕ್ಕಳು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ, ಬನಶಂಕರಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಧರಣಿ ನಡೆಸಿದರು. ಹಿಂದುಳಿದ ಪ್ರದೇಶವಾದ ಪಾವಗಡದಲ್ಲಿ ಸರ್ಕಾರವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಒತ್ತನ್ನು ನೀಡಿ, ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದೆ, ಆದರೆ ಹಾಸ್ಟೆಲ್ ನಲ್ಲಿ ಕೆಲಸ ಮಾಡುವ ಅಡುಗೆ ಸಿಬ್ಬಂದಿಯಿಂದ ಅನೇಕ ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ.
ಹಾಸ್ಟೆಲ್ ನಲ್ಲಿ ಸಮರ್ಪಕವಾಗಿ ಆಹಾರ ವಿತರಿಸುತ್ತಿಲ್ಲ, ಸ್ನಾನಗೃಹ, ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿ ಇಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಆಹಾರ ನೀಡುತ್ತಿಲ್ಲ. ಈ ಬಗ್ಗೆ ಅಡುಗೆ ಸಿಬ್ಬಂದಿಯನ್ನು ಕೇಳಿದರೆ ಅಡುಗೆ ತಯಾರಿಸುವ ಮಹಿಳೆಯೋರ್ವರು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ಊಟ ಹಾಕುವುದಿಲ್ಲ ಯಾರಿಗೆ ಹೇಳಿಕೊಳ್ಳುತ್ತೀಯೊ ಹೇಳಿಕೊ ಎಂದು ದೌರ್ಜನ್ಯ ಎಸಗುತ್ತಾರೆ. ಇದರಿಂದ ಸರಿಯಾದ ಸಮಯಕ್ಕೆ ಶಾಲೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡರು. ಸುಮಾರು 75 ಮಂದಿ ವಿದ್ಯಾರ್ಥಿಗಳಿಗೆ ಈಗಿರುವ ಕಟ್ಟಡ ಸಾಕಾಗುತ್ತಿಲ್ಲ. ಶೌಚಾಲಗಳು ಸಾಕಾಗುತ್ತಿಲ್ಲ. ಸ್ನಾನ ಮಾಡಲೂ ವ್ಯವಸ್ಥೆ ಇಲ್ಲ. ಮನೆಗಳಿಗೆ ಹೋಗಿ ವಾರಕ್ಕೊಮ್ಮೆ ಸ್ನಾನ ಮಾಡಿಕೊಂಡು ಬರಬೇಕು. ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ. ಬೇರೆ ಕಟ್ಟಡ ಹುಡುಕಿ ಕೊಡಿ ಸ್ಥಳಾಂತರಿಸೋಣ ಎಂದು ಸಬೂಬು ಹೇಳಿ ಸುಮ್ಮನಾಗುತ್ತಾರೆ ಎಂದು ಪ್ರತಿಭಟನಾ ನಿರತ ಮಕ್ಕಳು ಆರೋಪಿಸಿದರು.ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಅಡುಗೆ ಸಿಬ್ಬಂದಿಯನ್ನು ಬದಲಿಸುವುದಾಗಿ ಈಗಾಗಲೇ ನಾಲ್ಕೈದು ಬಾರಿ ಮೇಲ್ವಿಚಾರಕರು ಹೇಳಿದ್ದಾರೆ. ಆದರೆ ಸಮಸ್ಯೆ ಬಗೆಹರಿಸುವತ್ತ ಗಮನಹರಿಸುತ್ತಿಲ್ಲ. ಸ್ವಚ್ಚತೆ, ಗುಣಮಟ್ಟದ ಆಹಾರ, ಶೌಚಾಲಯ, ಸ್ನಾನಗೃಹ ಇತ್ಯಾದಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದರು.ಈಬಗ್ಗೆ ವಸತಿ ನಿಲಯದ ಮೇಲ್ವಿಚಾರಕ ಮಂಜುನಾಥ್ ಪ್ರತಿಕ್ರಿಯಿಸಿ, `ಮಕ್ಕಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಅಡುಗೆ ಸಿಬ್ಬಂದಿಗೆ ಸೂಚಿಸಲಾಗಿದೆ. ಕಟ್ಟಡ ಸ್ಥಳಾಂತರಿಸಿ ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ವರದಿ: ಶ್ರೀನಿವಾಸುಲು ಎ