ನಾಳೆಯಿಂದ ಪ್ರೌಢಶಾಲೆಗಳ ಪುನರಾರಂಭ:
ತರಗತಿಗಳು ಶಾಂತಿಯುತವಾಗಿ ನಡೆಯುವ ವಿಶ್ವಾಸವಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಫೆಬ್ರವರಿ 13: ನಾಳೆಯಿಂದ ಪ್ರೌಢಶಾಲೆಗಳು ಪ್ರಾರಂಭವಾಗುತ್ತಿವೆ. ತರಗತಿಗಳು ಶಾಂತಿಯುತವಾಗಿ ನಡೆಯುವ ವಿಶ್ವಾಸವಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಪ್ರೌಢಶಾಲೆಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಸೌಹಾರ್ದಯುತ ವಾತಾವರಣ ಮೂಡಿಸಲು ಶಾಲೆಗಳಿಗೆ ಭೇಟಿ ನೀಡಬೇಕು. ಹಾಗೂ ಶಾಂತಿ ಸಭೆಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಪಿಯು, ಪದವಿ ಕಾಲೇಜುಗಳನ್ನು ಪ್ರಾರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಹಿಜಾಬ್ ವಿವಾದದ ಹಿಂದೆ ಇರುವ ಸಂಸ್ಥೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಪೋಲಿಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶಾಲಾ ಕಾಲೇಜುಗಳನ್ನು ಮೊದಲಿದ್ದ ಸ್ಥಿತಿಗೆ ತರಬೇಕು. ಸೌಹಾರ್ದಯುತ ವಾತಾವರಣ ನಿರ್ಮಿಸಿ, ವಿದ್ಯಾರ್ಜನೆಗೆ ಹೆಚ್ಚಿನ ಮಹತ್ವ ನೀಡಬೇಕಿರುವುದು ಸದ್ಯದ ಆದ್ಯತೆ ಎಂದರು.
ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪೂರಕ ಬಜೆಟ್:
ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಚಿಂತನೆ ನಡೆಸಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಎರಡು ಆರ್ಥಿಕ ಹಿಂಜರಿತ ಉಂಟಾಗಿವೆ. ಇತ್ತೀಚೆಗೆ 4-5 ತಿಂಗಳಲ್ಲಿ ಆರ್ಥಿಕತೆಗೆ ಸದೃಢತೆ ದೊರೆಯುತ್ತಿದೆ. ರಾಜಸ್ವ ಸಂಗ್ರಹವೂ ಆಗುತ್ತಿದೆ. ಆದರೆ, ಒಟ್ಟಾರೆ ಆರ್ಥಿಕತೆಯ ಅಭಿವೃದ್ಧಿ, ಜನಕಲ್ಯಾಣ ಹಾಗೂ ಆರ್ಥಿಕ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಆಗಲಿದೆ ಎಂದರು.
ಆರ್ಥಿಕತೆಗೆ ಚೈತನ್ಯ ತುಂಬುವ ಕೆಲಸ ಮಾಡಬೇಕೆಂದಿದ್ದೇವೆ. ಬಡಜನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಸಾರಿಗೆ ನಿಗಮಗಳು ಹಾಗೂ ಎಸ್ಕಾಂಗಳ ಸುಧಾರಣಗೆ ಕ್ರಮ:
ಎನ್.ಡಬ್ಲ್ಯೂ.ಆರ್.ಟಿ.ಸಿ, ಕೆ.ಕೆ.ಆರ್.ಟಿ.ಸಿ ಮತ್ತು ಬಿ.ಎಂಟಿ.ಸಿ ಸೇರಿದಂತೆ ಸಾರಿಗೆ ಇಲಾಖೆ ಸುಧಾರಣೆಗೆ ನಿವೃತ್ತ ಐ.ಎ.ಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಾರಿಗೆ ಸಂಸ್ಥೆಗಳು ಆರ್ಥಿಕ ಸ್ವಾವಲಂಬನೆಯಾಗಲು, ಸೋರಿಕೆ ತಡೆದು ಉಳಿತಾಯ ಮಾಡುವುದರ ಕುರಿತು ಅವರು ಮಧ್ಯಂತರ ವರದಿಯನ್ನು ನೀಡಿ ಸುಧಾರಣಾ ಕ್ರಮಗಳನ್ನು ತಿಳಿಸಲಿದ್ದಾರೆ. ಸಾರಿಗೆ ನಿಗಮಗಳ ಹಾಗೂ ಎಸ್ಕಾಂಗಳ ಸಂರಚನೆಯಲ್ಲಿ ಸುಧಾರಣೆಯ ಜೊತೆಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುವ ನಿಟ್ಟಿನಲ್ಲಿ ಸಮಿತಿಗಳ ರಚನೆಯಾಗಿದೆ. ವಿಶೇಷ ಸುಧಾರಣಾ ಕ್ರಮಗಳನ್ನು ತರಬೇಕೆನ್ನುವ ತೀರ್ಮಾನ ಸರ್ಕಾರ ಮಾಡಿದೆ ಎಂದರು.