20220305 180703

ಜನರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ಒದಗಿಸುವುದು ಎಲ್ಲಾ ರಾಜ್ಯ ಸರ್ಕಾರಗಳ ಕರ್ತವ್ಯ…!

Genaral STATE

ಜನರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ಒದಗಿಸುವುದು ಎಲ್ಲಾ ರಾಜ್ಯ ಸರ್ಕಾರಗಳ ಕರ್ತವ್ಯ
                             –  ಗಜೇಂದ್ರ ಸಿಂಗ್ ಶೇಖಾವತ್


ಬೆಂಗಳೂರು, ಮಾರ್ಚ್ 05 (ಕರ್ನಾಟಕ ವಾರ್ತೆ) : ಜನರಿಗೆ ಆದ್ಯತೆ ಮೇರೆಗೆ ಜಲಜೀವನ್ ಮಿಷನ್ ಅಡಿ ಸ್ವಚ್ಛ ಕುಡಿಯುವ ನೀರು ಹಾಗೂ ಸ್ವಚ್ಛ ಕುಡಿಯುವ ನೀರು ಹಾಗೂ ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ, ಹಾಗೂ ಇತರ ಮೂಲಭೂತ ಸೌಕರ್ಯ ಒದಗಿಸುವುದು ಎಲ್ಲಾ ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಕೇಂದ್ರದ ಜಲಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಯೋಜನೆಯಡಿ 6 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ ಸಚಿವರ ಜೊತೆಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಪ್ರ್ರಾದೇಶಿಕ ಸಮಾವೇಶ ನಡೆಸಿ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಆರು ರಾಜ್ಯಗಳಾದ ಆಂಧ್ರ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ತೆಲಂಗಾಣ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ ಹಾಗೂ ಲಕ್ಷದ್ವೀಪಗಳಿಗೆ ಜಲಜೀವನ್ ಮಿಷನ್ ಅಡಿ 20,487.58 ಕೋಟಿ ಹಾಗೂ ಸ್ವಚ್ಛ ಭಾರತ್ ಮಿಷನ್ ಅಡಿ 1,355.13 ಕೋಟಿ ರೂಗಳನ್ನು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಕೇಂದ್ರ ಹಂಚಿಕೆ ಮಾಡಿದೆ. ಅಲ್ಲದೆ 7,798 ಕೋಟಿಗಳನ್ನು ಈ 6 ರಾಜ್ಯಗಳಿಗೆ ನಿರ್ಬಂಧಿತ ಅನುದಾನ (ಟೈಡ್ ಗ್ರಾಂಟ್) ಅನ್ನು ನೀಡಲಾಗಿದೆ ಎಂದರು.
2022-23 ನೇ ಸಾಲಿನಲ್ಲಿ ಕರ್ನಾಟಕಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 7000 ಕೋಟಿಗಳನ್ನು ಕುಡಿಯುವ ನೀರಿನ ಯೋಜನೆಗಳಿಗೆ ನೀಡಿದ್ದು, ರಾಜ್ಯದ ಅಭಿವೃದ್ಧಿಗೆ ಪೂರಕ ಎಂದರು.
ಬಡವ ಹಾಗೂ ಶ್ರೀಮಂತ ನಡುವಿನ ಬೇಲಿಯನ್ನು ತೆಗೆದು ರಾಜ್ಯಗಳು ಪ್ರತಿ ಮನೆಗೂ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಒದಗಿಸಿದರೆ ಇಡೀ ದೇಶವೇ ಪ್ರಶಂಸೆಗೆ ಒಳಗಾಗುತ್ತದೆ. ಜಲಜೀವನ್ ಮಿಷನ್ ಅಡಿ ಈವರೆಗೆ ರೂ. 6 ಕೋಟಿ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದ್ದು, ಶೇ. 47 ರಷ್ಟು ಅಭಿವೃದ್ಧಿ ಸಾಧಿಸಲಾಗಿದೆ.

20220305 180727


ನೀರು ನಿರ್ವಹಣೆಗೆ ಸಮುದಾಯ ಭಾಗವಹಿಸುವಿಕೆ ಮುಖ್ಯ. ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶದ ಕೆಲ ಪ್ರದೇಶಗಳಲ್ಲಿ ಫ್ಲೋರೈಡ್ ನೀರಿನ ಸಮಸ್ಯೆಯಿದ್ದು, ಇದನ್ನು ಪರಿಹರಿಸಲು ಕ್ರಮಕ್ಕೆ ಸೂಚಿಸಲಾಗಿದೆ. ಅಂತೆಯೇ ಕರ್ನಾಟಕದಲ್ಲಿಯೂ ಈ ಸಮಸ್ಯೆಯನ್ನು ಪರಿಹಾರ ಮಾಡಲಾಗುವುದು. ಕೇಂದ್ರ ಇದಕ್ಕೆ ಎಲ್ಲಾ ರೀತಿಯ ಅನುದಾನ ಒದಗಿಸುತ್ತದೆ ಎಂದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಭಾರತ 2014 ರಲ್ಲಿ ಶೇ. 39 ರಷ್ಟು ಸಾಧನೆ ಮಾಡಿದ್ದು, 2019 ರಲ್ಲಿ ಶೇ. 100 ರಷ್ಟು ಸಾಧನೆ ಮಾಡಲಾಗಿದೆ. ಈ ಯೋಜನೆಯಡಿ ದೇಶದಲ್ಲಿ 10.28 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಎಲ್ಲಾ ರಾಜ್ಯಗಳು ಬಯಲು ಶೌಚಾಲಯ ಮುಕ್ತವೆಂದು ಘೋಷಿಸಿವೆ. ಇದರ ಎರಡನೇ ಹಂತದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲಾ ರೀತಿಯ ತ್ಯಾಜ್ಯಗಳ ನಿರ್ವಹಣೆಗೆ ಒತ್ತು ನೀಡಲಾಗುವುದು ಎಂದರು.
ಕರ್ನಾಟಕದಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಶೇ. 47 ರಷ್ಟು ಪೂರ್ಣಗೊಂಡಿದ್ದು, ಮುಂಬರುವ ದಿನಗಳಲ್ಲಿ ಶೇ. 100 ರಷ್ಟು ಗುರಿ ಸಾಧಿಸಲು ಪ್ರಯತ್ನಿಸಬೇಕು. ತೆಲಂಗಾಣ ಹಾಗೂ ಪುದುಚೇರಿ ರಾಜ್ಯಗಳು ಇದರಲ್ಲಿ ಶೇ. 100ರಷ್ಟು ಸಾಧನೆ ಮಾಡಿದೆ. ಎಲ್ಲಾ ರಾಜ್ಯಗಳಲ್ಲಿಯೂ ಕುಡಿಯುವ ನೀರು ಪರೀಕ್ಷಾ ಘಟಕ ತೆರೆಯಲು ಪ್ರೋತ್ಸಾಹಿಸಲಾಗುವುದು. ಈವರೆಗೆ ಇಂತಹ 588 ಘಟಕಗಳಿದ್ದು, ಅವುಗಳಲ್ಲಿ 136 ಘಟಕಗಳು ಮಾನ್ಯತೆ ಹೊಂದಿದೆ. ಈ 6 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 2.40 ಲಕ್ಷ ಮಹಿಳೆಯರಿಗೆ ಕಿಟ್ ಮೂಲಕ ಕುಡಿಯುವ ನೀರಿನ ಪರೀಕ್ಷೆಯನ್ನು ಮಾಡಲು ತರಬೇತಿ ನೀಡಲಾಗಿದೆ.

20220305 180720


ಸ್ವಚ್ಛ ಭಾರತ ಮಿಷನ್ ಯೋಜನೆ ಎರಡನೆ ಹಂತದಲ್ಲಿ ದೇಶದಲ್ಲಿ 66 ಲಕ್ಷ ಮನೆಗಳಿಗೆ ಶೌಚಾಲಯ ಹಾಗೂ 1.2 ಲಕ್ಷ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಸ್ವಚ್ಛ ಭಾರತ ಮಿಷನ್ ವಿಶ್ವದ ಅತಿ ದೊಡ್ಡ ಶೌಚಾಲಯ ಅಭಿಯಾನವಾಗಿದ್ದು ಇದರಲ್ಲಿ 6 ಲಕ್ಷ ಗ್ರಾಮಗಳು ಬಯಲು ಮುಕ್ತ ಶೌಚಾಲಯಗಳನ್ನಾಗಿ ಘೋಷಿಸಿವೆ. ದೇಶದಲ್ಲಿ ಅಂಗನವಾಡಿ, ಶಾಲೆ ಇತರೆ ಕಡೆಯಲ್ಲೂ ಶೌಚಾಲಯಗಳಿಗೆ ಆದ್ಯತೆ ನೀಡಲಾಗುವುದು ಮಹಿಳೆಯರಿಗೆ ಅಡುಗೆ ಅನಿಲ, ವಿದ್ಯುತ್ ಇತರ ಸೌಕರ್ಯ ಸಹ ಇದಕ್ಕೆ ಪೂರಕವಾಗಿ ಸಂಬಂಧಪಟ್ಟ ಇಲಾಖೆಗಳನ್ನು ಸಮನ್ವಯ ನೀಡುವಂತೆ ಕೋರಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ಗ್ರಾಮೀಣ ನೈರ್ಮಲ್ಯ ಇಲಾಖೆ ಕಾರ್ಯದರ್ಶಿ ವಿನಿ ಮಹಾಜನ್, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.