Screenshot 2022 03 06 22 07 48 258 com.google.android.apps .nbu .files

JD(S) :ಯಾರ ಜತೆಯೂ ಚುನಾವಣೆ ಮೈತ್ರಿ ಇಲ್ಲ…!

POLATICAL STATE

ಯಾರ ಜತೆಯೂ ಚುನಾವಣೆ ಮೈತ್ರಿ ಇಲ್ಲ: ಹೆಚ್‌ಡಿ ಕುಮಾರಸ್ವಾಮಿ

ಜೆಡಿಎಸ್‌ ರೈಟೂ ಅಲ್ಲ, ಲೆಫ್ಟೂ ಅಲ್ಲ, ಸ್ಟ್ರೈಟ್‌ ಆಗಿ ಹೋಗುತ್ತೇವೆ
ಅವಧಿಗೆ ಮುನ್ನವೇ ಚುನಾವಣೆ; ಮಾಜಿ ಸಿಎಂ ಹೇಳಿಕೆ
ಬಜೆಟ್‌ ಅಧಿವೇಶನದ ನಂತರ ಜನತಾ ಜಲಧಾರೆ ಆರಂಭ
*ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಮೂರುನಾಮ ಇಟ್ಟ ರಾಷ್ಟ್ರೀಯ ಪಕ್ಷಗಳು


ಕಲಬುರಗಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್‌ ವರಿಷ್ಠ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.

ಅವಧಿ ಮುಗಿಯುವ ಮುನ್ನವೇ ಚುನಾವಣೆ ಬರುವ ಸಾಧ್ಯತೆ ಇದೆ. ಚುನಾವಣೆ ಯಾವುದೇ ಕ್ಷಣದಲ್ಲಿ ಘೋಷಣೆಯಾದರೂ ಅದನ್ನು ಎದುರಿಸಲು ಜೆಡಿಎಸ್‌ ಸಿದ್ಧವಾಗಿದೆ ಎಂದರು ಅವರು.

ಕಲಬುರಗಿಯಲ್ಲಿಂದು ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು; ಚುನಾವಣೆ ಮೈತ್ರಿ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ನೇರ ಉತ್ತರ ನೀಡಿದ ಅವರು; “ನಾವು ಯಾರ ಜತೆಯೂ ಇಲ್ಲ. ನಮಗೆ ರೈಟೂ ಬೇಡ, ಲೆಫ್ಟೂ ಬೇಡ. ಸ್ಟ್ರೈಟ್‌ ಆಗಿ ಹೋಗೋಣ ಎಂಬ ತೀರ್ಮಾನ ಮಾಡಿದ್ದೇವೆ” ಎನ್ನುವ ಮೂಲಕ ಅವರು ಮೈತ್ರಿ ಮಾತಿಗೆ ತೆರೆ ಎಳೆದರು.

ಅವಧಿಗೆ ಮೊದಲೇ ಚುನಾವಣೆ ಬರಬಹುದು ಎನ್ನುವ ಕಾರಣಕ್ಕೇ ನಾವು ಪಕ್ಷ ಸಂಘಟನೆಯಲ್ಲಿ ಬಿಡುವಿಲ್ಲದೇ ತೊಡಗಿಸಿಕೊಂಡಿದ್ದೇವೆ. ಕೋವಿಡ್‌ ಕಾರಣದಿಂದ ಎರಡು ವರ್ಷ ಸಂಘಟನೆ ಕೆಲಸ ಮಂದಗತಿಯಲ್ಲಿತ್ತು. ಈಗ ಎಲ್ಲವೂ ವೇಗವಾಗಿದೆ. ಸೋಂಕು, ಮತ್ತಿತರೆ ಸಮಸ್ಯೆಗಳು ಇಲ್ಲದಿರುವುದರಿಂದ ಪಕ್ಷದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಬಿಜೆಪಿ ಬಗ್ಗೆ ನಿಮಗೆ ಸಾಫ್ಟ್‌ ಕಾರ್ನರ್‌ ಇದೆ ನಿಮಗೆ ಎಂದು ಆರೋಪವಿದೆಯಲ್ಲ? ಎನ್ನುವ ಪ್ರಶ್ನೆಗೆ; “ಬಿಜೆಪಿ ಬಗ್ಗೆ ಸಾಫ್ಟ್‌ ಕಾರ್ನರ್‌ ಇದೆಯೋ ಇಲ್ಲವೋ ಎಂಬುದಕ್ಕೆ ನನ್ನ ಹೇಳಿಕೆಗಳೇ ಉತ್ತರ” ಎನ್ನುವ ಮೂಲಕ ಬಿಜೆಪಿ ಬಗ್ಗೆ ಒಲವಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದರು.

ಅಧಿವೇಶನ ನಂತರ ಜನತಾ ಜಲಧಾರೆ:

ವಿಧಾನಮಂಡಲ ಬಜೆಟ್‌ ಅಧಿವೇಶನ ಮುಗಿದ ಕೂಡಲೇ ರಾಜ್ಯ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಮ್ಮಿಕೊಳ್ಳಲಾಗಿರುವ ʼಜನತಾ ಜಲಧಾರೆʼ ಗಂಗಾ ರಥಯಾತ್ರೆಯನ್ನು ಆರಂಭ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಅವರು ಹೇಳಿದರು.

ರಾಜ್ಯಾದ್ಯಂತ ನಡೆಯಲಿರುವ ʼಜನತಾ ಜಲಧಾರೆʼ ಗಂಗಾ ರಥಯಾತ್ರೆಯಲ್ಲಿ ವಿವಿಧ ಜೀವನದಿಗಳು ಉಗಮವಾಗುವ, ಸಂಗಮಗಳು, ಪುಣ್ಯಕ್ಷೇತ್ರಗಳು ಸೇರಿದಂತೆ 53 ಕಡೆಗಳಲ್ಲಿ ಜಲ ಸಂಗ್ರಹ ಮಾಡಲಾಗುವುದು. ಆ ಸಂದರ್ಭದಲ್ಲಿ ಕಳೆದ 75 ವರ್ಷಗಳಲ್ಲಿ ನಮ್ಮ ರಾಜ್ಯಕ್ಕೆ ಆಗಿರುವ ನೀರಾವರಿ ಅನ್ಯಾಯಗಳನ್ನು ತಿಳಿಸುವ ಹಾಗೂ ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಗಂಗೆಯ ಸಾಕ್ಷಿಯಾಗಿ ಸಂಕಲ್ಪ ಮಾಡಲಾಗುವುದು ಎಂದರು ಮಾಜಿ ಮುಖ್ಯಮಂತ್ರಿಗಳು.

ನೀರಾವರಿಗೆ ದ್ರೋಹ ಎಸಗಲಾಗಿದೆ:

ರಾಜ್ಯಕ್ಕೆ ಐದು ವರ್ಷ ಜಲ ಸಂಪನ್ಮೂಲ ಸಚಿವರಾಗಿಯೂ ಕೆಲಸ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಮುಂಗಡ ಪತ್ರದಲ್ಲೂ ನೀರಾವರಿ ಕ್ಷೇತ್ರವನ್ನು ಕಡೆಗಣಿಸಿ ದೊಡ್ಡಮಟ್ಟದ ದ್ರೋಹ ಎಸಗಲಾಗಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.

ಮೇಕೆದಾಟು: ಬಿಜೆಪಿ-ಕಾಂಗ್ರೆಸ್‌ʼಗೆ ತರಾಟೆ:

ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಕೇಂದ್ರದ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು, ಕರ್ನಾಟಕ ಮತ್ತು ತಮಿಳುನಾಡು ಸಿದ್ಧವಾದರೆ ಮಧ್ಯಸ್ಥಿಕೆ ವಹಿಸುವುದಾಗಿ ತಿಳಿಸಿದ್ದಾರೆ. ಆದರೆ, ಅದಕ್ಕೆ ಕಾಲಮಿತಿ ಹಾಕಿಕೊಳ್ಳಲು ಸಾಧ್ಯವಿಲ್ಲ. ಎರಡೂ ರಾಜ್ಯಗಳು ಒಮ್ಮತಕ್ಕೆ ಬನ್ನಿ ಆಂತಾರೆ ಅವರು. ಮುಖ್ಯಮಂತ್ರಿ ಮಾತ್ರ ಮೇಕೆದಾಟು ಯೋಜನೆಗೆ 1,000 ಕೋಟಿ ಇಟ್ಟಿರುವುಗಾಗಿ ಹೇಳುತ್ತಾರೆ. ಇನ್ನು ಕಾಂಗ್ರೆಸ್‌ ನಾಯಕರು ನಮ್ಮ ಪಾದಯಾತ್ರೆಯನ್ನು ನೋಡಿ ಹೆದರಿಕೊಂಡು ಇಷ್ಟು ಹಣ ಘೋಷಣೆ ಮಾಡಿದರು ಎಂದು ಹೇಳಿಕೊಳ್ಳುತ್ತಿದ್ದಾರೆ. ನಾವೇನು ಕಾಂಗ್ರೆಸ್‌ʼನವರಿಗೆ ಹೆದರಿ ಹಣ ಘೋಷಣೆ ಮಾಡಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಮೇಕೆದಾಟು ಯೋಜನೆಯನ್ನು ಆರಂಭ ಮಾಡುವ ಯೋಗ್ಯತೆ ಇವರಿಗಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ನಾಡಿನ ಜನರಿಗೆ ದ್ರೋಹ ಮಾಡಿವೆ ಎಂದು ಮಾಜಿ ಮುಖ್ಯಮಂತ್ರಿಗಳು ಟೀಕಾಪ್ರಹಾರ ನಡೆಸಿದರು.

ಕಾಳಿ ಹೆಸರಿನಲ್ಲಿ ನಾಟಕ:

ಈ ನಾಟಕ ಸಾಲದು ಎಂಬಂತೆ, 5 ಜಿಲ್ಲೆಗಳಿಗೆ ಕಾಳಿ ನದಿ ನೀರು ಕೊಡುತ್ತೇವೆ ಎಂದು ಇನ್ನೊಂದು ಯೋಜನೆಯನ್ನು ಸರಕಾರ ಘೋಷಣೆ ಮಾಡಿಕೊಂಡಿದೆ. ಸತ್ಯ ಸಂಗತಿ ಎಂದರೆ, ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೂಫಾ ಅಣೆಕಟ್ಟು ನೀರಿನ ಕೊರತೆ ಎದುರಿಸುತ್ತಿದೆ. ಒಂದು ಕಡೆ ಮಹದಾಯಿಯ 5 ಟಿಎಂಸಿ ನೀರನ್ನು ಸೂಫಾದಲ್ಲಿ ತುಂಬಿಡಲು ಅವಕಾಶ ಕೊಡಿ ಎಂದು ನ್ಯಾಯಾಧಿಕರಣಕ್ಕೆ ಮನವಿ ಮಾಡಲಾಗಿತ್ತು. ಆ ಬೇಡಿಕೆಯನ್ನು ನ್ಯಾಯಾಧಿಕರಣ ತಿರಸ್ಕರಿಸಿದೆ. ಹಾಗಾದರೆ, ನೀರಿನ ಕೊರತೆ ಇರುವ ಸೂಫಾ ಜಲಾಶಯದಿಂದ ಸರಕಾರ 5 ಜಿಲ್ಲೆಗಳಿಗೆ ನೀರನ್ನು ಎಲ್ಲಿಂದ ತರುತ್ತದೆ? ಎಂದು ಅವರು ಪ್ರಶ್ನೆ ಮಾಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್‌ʼನಲ್ಲಿ 5,000 ಕೋಟಿ ರೂ. ಘೋಷಣೆ ಮಾಡಿದ್ದಾರೆ. ಈ ಮಟ್ಟದಲ್ಲಿ ಹೋದರೆ ಆ ಯೋಜನೆಯನ್ನು ಪೂರ್ಣ ಮಾಡಲು ಇನ್ನೂ ಎಷ್ಟು ವರ್ಷ ಬೇಕು? ಇನ್ನು, ನವಿಲೆ ಯೋಜೆನೆಗೆ 1,000 ಕೋಟಿ ರೂ. ಎನ್ನುತ್ತೀರಿ. ಅದಕ್ಕೆ ಕೇಂದ್ರದ ಒಪ್ಪಿಗೆಯೇ ಸಿಕ್ಕಿಲ್ಲ. ದುಡ್ಡನ್ನು ಹೇಗೆ ಖರ್ಚು ಮಾಡುತ್ತೀರಿ ಎಂದು ಕುಮಾರಸ್ವಾಮಿ ಅವರು ಸರಕಾರವನ್ನು ನೇರವಾಗಿ ಕೇಳಿದರು.

ನೀರಾವರಿ ವಿಷಯದಲ್ಲಿ ಮೂರುವ ನಾಮ:

ಎಲ್ಲಿ ಯಾವ ಅಣೆಕಟ್ಟು ಕಟ್ಟಬೇಕು ಎಂದು ಡಿಪಿಆರ್‌’ಗಳು ಆಗಿಲ್ಲ. ತುಂಗಭದ್ರಾ ನದಿ ಪ್ರಾಧಿಕಾರ ತೀರ್ಮಾನ ಕೈಗೊಂಡಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಸೂಚನೆ ಹೊರಬಿದ್ದ ಮೇಲೆ ಇನ್ನೂ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಹಾಗಿದ್ದರೂ ನಮ್ಮ ಮುಖ್ಯಮಂತ್ರಿಗಳು ನಾನೇ ದೊಡ್ಡ ನೀರಾವರಿ ತಜ್ಞ ಎಂದು ಹೇಳಿಕೊಳ್ಳುತ್ತಾರೆ. ಬಿಜೆಪಿಯವರು ನೀರಾವರಿ ವಿಷಯದಲ್ಲಿ ರಾಜ್ಯದ ಜನರಿಗೆ ಮೂರು ನಾಮ ಹಾಕಲು ಹೊರಟಿದ್ದಾರೆ. ಯುವಜನರಿಗೆ ಉದ್ಯೋಗದ ವಿಷಯದಲ್ಲಿ ಈ ಬಜೆಟ್‌ʼನಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ. ಇವೆಲ್ಲ ವಿಷಯಗಳನ್ನು ಜನತಾ ಜಲಧಾರೆಯಲ್ಲಿ ಜನರ ಮುಂದೆ ಇಡುತ್ತೇನೆ ಎಂದರು ಅವರು.

ಈ ಸಂದರ್ಭದಲ್ಲಿ ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಬಂಡೆಪ್ಪ ಖಾಷೆಂಪೂರ್‌ ಹಾಗೂ ಕಲಬುರಗಿ ಜಿಲ್ಲೆಯ ಪಕ್ಷದ ಮುಖಂಡರು ಹಾಜರಿದ್ದರು.