ಜನತಾ ಜಲಧಾರೆ
ಬಯಲುಸೀಮೆ ಜಿಲ್ಲೆಗಳ ಮುಖಂಡರ ಜತೆ ಹೆಚ್.ಡಿ.ಕುಮಾರಸ್ವಾಮಿ ಚರ್ಚೆ
ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಸಭೆ
ಬೆಂಗಳೂರು: ವಿಧಾನಮಂಡಲ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆಯೇ ಜೆಡಿಎಸ್ ಜನತಾ ಜಲಧಾರೆ ಗಂಗಾ ರಥಯಾತ್ರೆಯನ್ನು ಆರಂಭ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದು, ಅದಕ್ಕೆ ಪೂರ್ವಭಾವಿಯಾಗಿ ಇಂದು ನಾಲ್ಕು ಜಿಲ್ಲೆಗಳ ಪೂರ್ವಭಾವಿ ಸಭೆ ನಡೆಸಿದರು.
ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಶಾಸಕರು, ಜಿಲ್ಲಾಧ್ಯಕ್ಷರು, ಅಭ್ಯರ್ಥಿಗಳು, ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು.
ನಾಲ್ಕು ಜಿಲ್ಲೆಗಳಲ್ಲಿ ಜಲಧಾರೆ ಕಾರ್ಯಕ್ರಮದ ರೂಪುರೇಷೆ, ಸಿದ್ಧತೆಗಳು, ಜಲ ಸಂಗ್ರಹ, ಮೆರವಣಿಗೆ, ಕಲಶ ಪೂಜೆ ಇತ್ಯಾದಿಗಳ ಬಗ್ಗೆ ಎಲ್ಲರಿಗೂ ಸೂಚನೆಗಳನ್ನು ಕೊಟ್ಟ ಕುಮಾರಸ್ವಾಮಿ ಅವರು, ಎಲ್ಲರೂ ಒಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಆಯಾ ಜಿಲ್ಲೆಯ ಪಕ್ಷದ ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರು ತಪ್ಪದೇ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಹಾಗೂ ಯುವಜನರು, ಮಹಿಳೆಯರು, ರೈತರು, ಕೃಷಿ ಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ಜನರು ಭಾಗಿಯಾಗುವಂತೆ ಪ್ರೆರೇಪಣೆ ನೀಡಬೇಕು ಎಂದು ಕುಮಾರಸ್ವಾಮಿ ಅವರು ಸೂಚಿಸಿದರು.
ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ಹಾಗೂ ನಾನು ಮುಖ್ಯಮಂತ್ರಿಯಾಗಿ ಈ ಜಿಲ್ಲೆಗಳಿಗೆ ಮಾಡಿರುವ ಜನ ಪರ, ರೈತಪರ ಕೆಲಸಗಳನ್ನು ಜನರಿಗೆ ತಿಳಿಸಿ. ಜತೆಗೆ, ಜಲಧಾರೆ ಕಾರ್ಯಕ್ರಮದ ಉದ್ದೇಶಗಳು, ಆ ಮೂಲಕ ರಾಜ್ಯದ ನೀರಾವರಿ ಸಮಸ್ಯೆಗಳನ್ನು ಬಗೆಹರಿಸಲು ಪಕ್ಷ ಮಾಡುತ್ತಿರುವ ಸಂಕಲ್ಪ, ಎಲ್ಲ ಜಿಲ್ಲೆಗಳಿಗೆ ಜಲ ಸಮಾನತೆ ತರುವ ಉದ್ದೇಶಗಳ ಬಗ್ಗೆ ಎಲ್ಲರ ಮನೆಮನೆಗೂ ಮಾಹಿತಿ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಮುಖಂಡರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಎಲ್ಲ ಜಿಲ್ಲೆಗಳ ಪೂರ್ವಭಾವಿ ಸಭೆಗಳು ಈಗ ನಡೆಯುತ್ತಿದ್ದು, ಅವೆಲ್ಲ ಮುಗಿದ ನಂತರ ಜಲಧಾರೆ ಆರಂಭದ ದಿನವನ್ನು ಘೋಷಣೆ ಮಾಡಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಶಾಸಕರಾದ ಡಿ.ನಾಗರಾಜಯ್ಯ, ಕೆ.ಎಂ.ಕೃಷ್ಣಾರೆಡ್ಡಿ, ಗೋವಿಂದರಾಜು. ಗೌರಿಶಂಕರ್, ಡಾ.ಶ್ರೀನಿವಾಸಮೂರ್ತಿ, ಕೆ ಎನ್ ತಿಪ್ಪೇಸ್ವಾಮಿ ಹಾಗೂ ಚೌಡರೆಡ್ಡಿ ತೂಪಲ್ಲಿ, ವಕ್ಕಲೇರಿ ರಾಮು, ಸಮೃದ್ಧಿ ಮಂಜುನಾಥ, ತಿಮ್ಮರಾಯಪ್ಪ, ಸುಧಾಕರ್ ಲಾಲ್, ಅಪ್ಪಯ್ಯಣ್ಣ, ಗುಬ್ಬಿ ನಾಗರಾಜ್, ನರಸಿಂಹ ಮೂರ್ತಿ, ಶ್ರೀನಾಥ ಮುಂತಾದವರು ಭಾಗಿಯಾಗಿದ್ದರು.