ನರೇಗಾ ಹಬ್ಬ ಉದ್ಘಾಟಿಸಿದ ಮುಖ್ಯಮಂತ್ರಿಗಳು
ಬಡತನದ ನಿರ್ಮೂಲನೆಗೆ ನರೇಗಾ ಅಸ್ತ್ರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ. ಬಡತನದ ನಿರ್ಮೂಲನೆಯಲ್ಲಿ ನರೇಗಾ ಎನ್ನುವ ಅಸ್ತ್ರ ಬಹಳ ದೊಡ್ಡ ಪಾತ್ರವ್ನನು ನಿರ್ವಹಿಸಲಿದೆ. ನರೇಗಾದಡಿ ಹಲವಾರು ಯೋಜನೆಗಳನ್ನು ಸೇರ್ಪಡೆಗೊಳಿಸಬೇಕು. ಒಂದು ವರ್ಷದ ದುಡಿಮೆಯನ್ನು ಸಂಭ್ರಮಿಸಲು ಆಚರಿಸುವ ನರೇಗಾ ಹಬ್ಬ ರಾಜ್ಯದ ಹಬ್ಬ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
ಅವರು ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಿದ್ದ ನರೇಗಾ ಹಬ್ಬ 2022 ನ್ನು ಉದ್ಘಾಟಿಸಿ ಮಾತನಾಡಿದರು.
ಅಧಿಕಾರ ವಿಕೇಂದ್ರೀಕರಣ ಜೇನುತುಪ್ಪದಂತಿರಬೇಕು:
ಮಹಾತ್ಮಾ ಗಾಂಧಿಯವರಿಂದ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಮೂಡಿತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಗ್ರಾಮ ಸ್ವರಾಜ್ಯದ ಜೊತೆಗೆ ಸೌಕರ್ಯಗಳಿರುವ ಗ್ರಾಮ ಸುರಾಜ್ಯವಿರಬೇಕು, ಅಭಿವೃದ್ಧಿಶೀಲ ಗ್ರಾಮಗಳಾಗಬೇಕು ಎಂದರು. ಮೊದಲು ಸ್ವರಾಜ್ಯ ನಂತರ ಸುರಾಜ್ಯದ ಕಲ್ಪನೆ ಮೂಡಿದೆ. ಅಧಿಕಾರ ವಿಕೇಂದ್ರೀಕರಣಗೊಳಿಸದಿದ್ದರೆ ಆಡಳಿತ ಹೆಪ್ಪುಗಟ್ಟುತ್ತದೆ. ಅಧಿಕಾರ ವಿಕೇಂದ್ರೀಕರಣ ಜೇನುತುಪ್ಪದಂತಿರಬೇಕು. ವಿಧಾನಸಭೆಯನ್ನು ಬಿಟ್ಟರೆ ನೇರವಾಗಿ ಫಲಾನುಭವಿಗೆ ತಲುಪಬೇಕು. ರಾಜಕೀಯ ವಿಕೇಂದ್ರೀಕರಣವಾಗಿದೆ. ಆಡಳಿತ ವಿಕೇಂದ್ರೀಕರಣವೂ ಸ್ವಲ್ಪಮಟ್ಟಿಗೆ ಆಗಿದೆ. ಅಭಿವೃದ್ಧಿಗೆ ಬೇಕಾಗಿರುವ ಆರ್ಥಿಕ ಸ್ವಾತಂತ್ರ್ಯ ನಮಗೆ ಅಗತ್ಯ ಎಂದರು.
ಗ್ರಾಮೀಣಾಭಿವೃದ್ಧಿಯಲ್ಲಿ ಕರ್ನಾಟಕ ಪ್ರಗತಿಶೀಲ ರಾಜ್ಯ:
ಸಂವಿಧಾನದ ವಿಕೇಂದ್ರೀಕರಣದ ಆಶಯದಂತೆ ನಡೆಯಲು ಇತರೆ ರಾಜ್ಯಗಳಗೆ ಹೋಲಿಸಿದರೆ, ಕರ್ನಾಟಕ ಬಹಳಷ್ಟು ಪ್ರಗತಿ ಸಾಧಿಸಿದೆ. ಸಂವಿಧಾನದ 73 ರ ತಿದ್ದುಪಡಿಯಾದ ಮೇಲೆ ನಮ್ಮದೇ ಪಂಚಾಯತ್ ರಾಜ್ ಕಾನೂನನ್ನು ನಾವು ಮಾಡಿಕೊಂಡಿದ್ದೇವೆ. ನರೇಗಾದಲ್ಲಿ ಕೆಲಸ ಮಾಡುವವರು ಆರ್ಥಿಕತೆಯನ್ನು ಮುನ್ನಡೆಸುತ್ತಿದ್ದಾರೆ ಎಂದರು. ವ್ಯವಸ್ಥೆಯ ಕೆಳಹಂತದಲ್ಲಿರುವವರ ದುಡಿಮೆಯಿಂದ ದೇಶದ ಆರ್ಥಿಕತೆ ಬೆಳೆಯುತ್ತಿದೆ ಎಂದರು.
ನರೇಗಾ – ಬದುಕಿಗೆ ಭರವಸೆ:
ದುಡಿಮೆಯೇ ದೊಡ್ಡಪ್ಪ ಎಂಬುದರಲ್ಲಿ ನಂಬಿಕೆ ಇಟ್ಟು ಈ ಬಾರಿಯ ಬಜೆಟ್‍ನಲ್ಲಿ ದುಡಿಯುವವರಿಗೆ, ದುಡಿಮೆಗೆ ಅಂದರೆ ಮಹಿಳೆಯರು, ರೈತರು, ಕೂಲಿಕಾರ್ಮಿಕರಿಗೆ ಅತಿಹೆಚ್ಚು ಮಹತ್ವವನ್ನು ನೀಡಲಾಗಿದೆ. ತಲಾವಾರು ಆದಾಯ ಹೆಚ್ಚಾಗಿ ರಾಜ್ಯದ ಜಿಡಿಪಿ ಹೆಚ್ಚಾಗಲು ಇವರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ನರೇಗಾದಡಿ ಗುರಿ ಮೀರಿ ಸಾಧನೆಯನ್ನು ಮಾಡಿರುವುದಕ್ಕಾಗಿ ಅಭಿನಂದಿಸಿದ ಮುಖ್ಯಮಂತ್ರಿಗಳು 16 ಕೋಟಿ ರೂಕ್.ಗಳ ಗುರಿ ನಿಗದಿ ಮಾಡಿಕೊಂಡಿರುವುದ್ದಕ್ಕಾಗಿ ಶ್ಲಾಘಿಸಿದರು. ಈ ಮೂಲಕ ತಳಹಂತದ ಜನರಿಗೆ ಬದುಕನ್ನು ಕೊಡಲಾಗುತ್ತಿದೆ. ಬದುಕಿಗೆ ನರೇಗಾ ಭರವಸೆಯಾಗಿದೆ. ದುಡಿಮೆಯ ಮುಖಾಂತರ ಬದುಕುವ ಏಕೈಕ ಯೋಜನೆ- ನರೇಗಾ ಎಂದರು. ಜನರನ್ನು ಗುರುತಿಸಿ, ಸ್ಥಳದಲ್ಲಿಯೇ ಕೆಲಸ ನೀಡಿ, ಆಸ್ತಿಯ ನಿರ್ವಹಣೆ ಮಾಡಿ ಗ್ರಾಮಗಳ ಅಭಿವೃದ್ಧಿಯನ್ನೂ ಮಾಡುತ್ತಿರುವುದು ನರೇಗಾ ಎಂದರು.
ಶಾಲೆಗಳ ದುರಸ್ತಿಗೆ ನರೇಗಾ:
ನರೇಗಾ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿದರೆ, ಇಡೀ ರಾಜ್ಯದ ಗ್ರಾಮೀಣಾಭಿವೃದ್ಧಿ ನಿರಂತರವಾಗಿ ಆಗಲು ಸಾಧ್ಯ. 1000 ಅಂಗನವಾಡಿಗಳನ್ನು ಕಟ್ಟಲು ಬಜೆಟ್‍ನಲ್ಲಿ 50 ಕೋಟಿ ರೂ.ಗಳ ಅನುದಾನ ಮೀಸಲಿರಿಸಿದೆ. ಅಗತ್ಯಬಿದ್ದರೆ, ಕೊರತೆಯಾಗದಂತೆ ಅನುದಾನ ಬಿಡುಗಡೆ ಳ್ಗೆ ವ್ಯವಸ್ಥೆ ಮಾಡಲಾಗುವುದು. ಈ ಗುರಿಯನ್ನು ನಾವು ಮುಟ್ಟಲೇಬೇಕು ಎಂದರು. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು ಶಾಲೆಗಳನ್ನು ಕಟ್ಟಲು ನರೇಗಾ ಅನುದಾನವನ್ನು ಬಳಕೆ ಮಾಡಬೇಕೆಂಬ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದು, ಶಾಲೆಗಳ ದುರಸ್ತಿಗೆ ಈ ಯೋಜನೆಯಡಿ ಅವಕಾಶ ಮಾಡಿಕೊಟ್ಟರೆ ದೊಡ್ಡ ಪ್ರಮಾಣದಲ್ಲಿ ದುಸ್ಥಿತಿಯಲ್ಲಿರುವ ಶಾಲಾ ಕೊಠಡಿಗಳ ದುರಸ್ತಿ ಕೈಗೊಳ್ಳಬಹುದು. ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸುವುದು ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಜಿಲ್ಲೆಯಲ್ಲಿ ನರೇಗಾ ಹಬ್ಬ
ಪ್ರತಿ ಜಿಲ್ಲೆಯಲ್ಲಿ ನರೇಗಾ ಹಬ್ಬ ಆಚರಿಸಬೇಕು. ಪ್ರತಿ ಗ್ರಾಮ ಪಂಚಾಯತಿ ಮೇಲೆ ಬರಬೇಕೆಂಬ ಉತ್ಸಾಹ ಮೂಡುತ್ತದೆ. ಕರ್ನಾಟಕ ಜಲಶಕ್ತಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಜಲಜೀವನ್ ಮಿಷನ್ ನಡಿಯೂ ಪ್ರಗತಿ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಹಾಗೂ ಮುಂದಿನ ವರ್ಷಕ್ಕೆ ತಲಾ 25 ಲಕ್ಷ ಮನೆಗಳಿಗೆ ಮನೆ ಮನೆಗೆ ನಲ್ಲಿ ಸಂಪರ್ಕ ಒದಗಿಸುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದ್ದೇವೆ. ಅದಕ್ಕಾಗಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವೂ ಕೈಜೋಡಿಸಿದೆ ಎಂದರು.