* ಕೃಷಿ ಕಾಯ್ದೆಗಳ ರದ್ದತಿ ಬಗ್ಗೆ ರೈತರಿಗೆ ಅನುಮಾನಗಳಿವೆ
ಪ್ರಧಾನಿ ಮೋದಿ ದೇಶಕ್ಕೆ ಸಮಜಾಯಿಷಿ ಕೊಡಬೇಕೆಂದ ಹೆಚ್.ಡಿ.ಕುಮಾರಸ್ವಾಮಿ
*ಕಾಯ್ದೆಗಳ ಜಾರಿಯೂ ಏಕಪಕ್ಷೀಯ; ವಾಪಸಾತಿಯೂ ಅನುಮಾನಾಸ್ಪದ!
* ಈ ಗೆಲುವನ್ನು ಹುತಾತ್ಮರಾದ ಎಲ್ಲ ಅನ್ನದಾತರಿಗೆ ಅರ್ಪಿಸೋಣ
****
ಬೆಂಗಳೂರು: ವಿವಾದಿತ ಕೃಷಿ ಕಾಯ್ದೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಾಪಸ್ ಪಡೆದಿರುವುದು ಸ್ವಾಗತಾರ್ಹವೇ ಆದರೂ, ದೇಶದ ರೈತರಲ್ಲಿ ಇನ್ನೂ ಇರುವ ಅನುಮಾನಗಳನ್ನು ಅವರು ನಿವಾರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ ಮಾಡಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ಉತ್ತರ ಪ್ರದೇಶವು ಸೇರಿ ಮುಂಬರುವ ಐದು ರಾಜ್ಯಗಳ ಚುನಾವಣೆಯನ್ನು ದೃಷ್ಟಿಯಲ್ಲಿತ್ತುಕೊಂಡು ಈ ನಿರ್ಧಾರ ಮಾಡಲಾಗಿದೆ. ಏನೇ ಆದರೂ ಕೇಂದ್ರ ಸರ್ಕಾರ ಅಂತಿಮವಾಗಿ ರೈತರ ಹೋರಾಟಕ್ಕೆ ಮಣಿದಿದೆ ಎಂದರು.
ಕೇಂದ್ರ ಸರಕಾರ ರೈತರ ಜತೆ ಚರ್ಚೆ ಮಾಡದೇ ಏಕಪಕ್ಷೀಯವಾಗಿ ಈ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತು. ಈಗ ಅದೇ ರೀತಿ ಚರ್ಚೆಯೇ ಇಲ್ಲದೆ ಕಾಯ್ದೆಗಳನ್ನು ವಾಪಸ್ ಪಡೆದುಕೊಂಡಿದೆ. ನಿಜಕ್ಕೂ ಸರಕಾರಕ್ಕೆ ಬದ್ಧತೆ, ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಕಾಯ್ದೆಗಳ ಜಾರಿಗೆ ಮುನ್ನವೇ ಕೃಷಿಕರ ಜತೆ ಮಾತುಕತೆ ನಡೆಸಬೇಕಾಗಿತ್ತು ಎಂದರು ಕುಮಾರಸ್ವಾಮಿ ಅವರು.
ಕೃಷಿ ಕಾಯ್ದೆಗಳ ವಾಪಸಾತಿ ವಿಷಯದಲ್ಲಿ ಯಾರೂ ರಾಜಕೀಯದ ಮೈಲೇಜ್ ತೆಗೆದುಕೊಳ್ಳುವ ಕೆಲಸ ಮಾಡಬಾರದು. ಕಾಯ್ದೆಗಳ ರದ್ದತಿ ರೈತ ಹೋರಾಟಕ್ಕೆ ಸಂದ ಜಯ. ಹುತಾತ್ಮ ಅನ್ನದಾತರಿಗೆ ಈ ವಿಜಯವನ್ನು ಅರ್ಪಣೆ ಮಾಡಬೇಕು. ಯಾವುದೇ ಪಕ್ಷಗಳು ಬೆನ್ನು ತಟ್ಟಿಕೊಳ್ಳುವ ಅಗತ್ಯವಿಲ್ಲ. ಇದೇನಿದ್ದರೂ ರೈತರ ಹೋರಾಟಕ್ಕೆ ಸಂದಿರುವ ಗೆಲುವು ಎಂದು ಅವರು ಹೇಳಿದರು.
ಮೊದಲೇ ಸ್ಪಂದಿಸಿದ್ದರೆ ಮುಜುಗರ ತಪ್ಪುತ್ತಿತ್ತು:
ರೈತರು ದೆಹಲಿ ಮತ್ತು ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ಶುರು ಮಾಡಿದ ಸಂದರ್ಭದಲ್ಲೇ ಸ್ಪಂದನೆ ಮಾಡಿದ್ದಿದ್ದರೆ ಸರಕಾರಕ್ಕೆ ಈ ಮಟ್ಟದ ಮುಜುಗರ ಆಗುತ್ತಿರಲಿಲ್ಲ. ಮೋದಿ ಅವರ ಏಕಾಎಕಿ ನಿರ್ಧಾರದಲ್ಲಿ ವಿಶ್ವಾಸದ ಕೊರತೆಯಿದೆ. ಚುನಾವಣೆಗಳ ಲಾಭ, ನಷ್ಟ ಇಟ್ಟುಕೊಂಡು ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೃಷಿ ಕಾಯ್ದೆಗಳ ಬಗ್ಗೆ ರೈತ ಮುಖಂಡರನ್ನು ಮಾತುಕತೆಗೆ ಕರೆಯದೇ, ತಜ್ಞರ ಬಳಿ ಕೂಡ ಚರ್ಚಿಸದೇ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ರೈತರಲ್ಲಿ ಅನುಮಾನಗಳು ಮೂಡಿವೆ. ಅವುಗಳನ್ನು ನಿವಾರಿಸಬೇಕಾದ ಹೊಣೆ ಕೇಂದ್ರ ಸರಕಾರದ್ದು ಎಂದು ಅವರು ಹೇಳಿದರು.
ಮಳೆಯಿಂದ ಜನ ಸಂಕಷ್ಟದಲ್ಲಿದ್ದಾರೆ; ಇಂಥ ಸಂಕಷ್ಟದ ಸಮಯದಲ್ಲಿ ಶಂಖ ಊದಿಕೊಂಡು ಹೋದರೆ ಸ್ವರಾಜ್ಯ ಸಿಗುತ್ತದಾ?
*ಬಿಜೆಪಿ ಜನ ಸ್ವರಾಜ್ಯ ಯಾತ್ರೆಗೆ ಹೆಚ್.ಡಿಕೆ ಟಾಂಗ್*
ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಕೂಡಲೇ ಸರಕಾರ ಪರಿಹಾರ ನೀಡಲು ಆಗ್ರಹ
****
ರಾಜ್ಯದಲ್ಲಿ ಮಹಾಮಳೆಯಿಂದ ಜನರು ಸಂಕಷ್ಟದಲ್ಲಿ ಸಿಲುಕಿದ್ದರೆ ಆಡಳಿತಾರೂಢ ಬಿಜೆಪಿ ಪಕ್ಷ ಶಂಖ ಊದಿಕೊಂಡು ಜನ ಸ್ವರಾಜ್ ಯಾತ್ರೆ ಅಂತ ಶುರು ಮಾಡಿಕೊಂಡಿದೆ. ಯಾರ ಸ್ವರಾಜ್ಯಕ್ಕಾಗಿ ಈ ಯಾತ್ರೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; “ಬಿಜೆಪಿಯವರು ಎಂಥದ್ದೋ ಶಂಖ ಊದೋಕೆ ಹೋಗಿದ್ದಾರೆ. ಶಂಖ ಊದಿದರೇ ಜನರಿಗೆ ಸ್ವರಾಜ್ಯ ಬರುತ್ತದಾ? ಇದರಿಂದ ರೈತರ ಸಮಸ್ಯೆ ಬಗೆಹರಿಯುತ್ತಾ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಹಾರ ನಡೆಸಿದರು.
ರಾಜ್ಯದಲ್ಲಿ ಅನೇಕ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಸರ್ಕಾರದ ಅಂದಾಜಿನ ಪ್ರಕಾರ 7 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ ಆಗಿದೆ. ಚಿಕ್ಕಮಗಳೂರು ಕಡೆ ಕಾಫಿ ತೋಟಗಳು ಹಾಳಾಗಿವೆ. ರಾಯಚೂರು ಜಿಲ್ಲೆಯಲ್ಲಿ ಭತ್ತ ಕೆಸರಿನಲ್ಲಿ ಮುಚ್ಚಿ ಹೋಗಿದೆ. ಚಿತ್ರದುರ್ಗ, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಎಲ್ಲಾ ಕಡೆ ಅನಾಹುತ ಆಗಿದೆ. ಬೆಂಗಳೂರಿನಲ್ಲೂ ರಸ್ತೆಗಳು ಹಾಳಾಗಿವೆ, ಹಲವಾರು ಸಮಸ್ಯೆಗಳು ಎದುರಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರಕಾರ, ಸಚಿವರು ತ್ವರಿತವಾಗಿ ಪರಿಹಾರ ಕೆಲಸ ಮಾಡುವುದು ಬಿಟ್ಟು ಶಂಖ ಊದಿಕೊಂಡು ಹೋದರೆ ಹೇಗೆ? ಎಂದು ಅವರು ಕಿಡಿ ಕಾರಿದರು.
ಕೋರೋನ ಸಂಕಷ್ಟದಿಂದ ಜನರ ಬದುಕು ಏನಾಗಿದೆ? ಅವರು ಬದುಕು ದಯನೀಯವಾಗಿ ಬದಲಾಗಿದೆ. ಹೆಜ್ಜೆ ಹೆಜ್ಜೆಗೂ ರೈತರು ಕಷ್ಟದಲ್ಲಿದ್ದಾರೆ. ಸರಕಾರ ಮತ್ತು ಸಚಿವರು ಏನು ಮಾಡುತ್ತಿದ್ದಾರೆ. ಮಳೆ ಅನೇಕ ದಿನಗಳಿಂದ ಬೀಳುತ್ತಿದ್ದರೂ ಅವರು ಜನರ ಕಡೆ ತಲೆ ಹಾಕುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದರು.
ಗೋವಿನ ಸಂರಕ್ಷಣೆ ಮಾಡುತ್ತೇವೆ ಎಂದು ಸರಕಾರ ಹೇಳಿ ಎಲ್ಲ ಕಡೆ ಗೋಶಾಲೆಗಳನ್ನು ತೆರೆಯುತ್ತವೆ ಎಂದು ಹೇಳಿತ್ತು. ಈಗ ನೋಡಿದರೆ ಗೋಶಾಲೆಗಳನ್ನು ತೆರೆಯಲು ಕೇವಲ 25 ಕೋಟಿ ರೂಪಾಯಿ ಕೊಡಲಾಗುವುದು ಎಂದು ಈಗ ಹೇಳುತ್ತಿದ್ದಾರೆ. ಗೋ ಶಾಲೆಗಳಿಗೆ ಹಣ ನೀಡುವುದಕ್ಕೂ ಸಾಕಾರಕ್ಕೆ ಆಗಿಲ್ಲ. ಬೆಳೆ ನಾಶದಿಂದ ಮೇವು ಕೊರತೆ ಉಂಟಾಗಿದೆ. ಇದೆಲ್ಲಾ ಒಂದಕ್ಕೊಂದು ಚೈನ್ ಲಿಂಕ್ ಇದೆ. ಸ್ಥಳೀಯ ಮಟ್ಟದಲ್ಲಿ ಡಿಸಿಗಳು ಇಷ್ಟೊತ್ತಿಗೆ ಸಮೀಕ್ಷೆ ಮಾಡಬೇಕಿತ್ತು. ಅದಾವುದೂ ಆಗಿಲ್ಲ. ಶಂಕ ಊದಿಕೊಂಡು ಹೋದರೆ ಇದೆಲ್ಲ ಬಗೆಹರಿಯುತ್ತಾ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆ ಮಾಡಿದರು.
ಮೊದಲು ಸರಕಾರ ಕಮೀಶನ್ ಹೊಡೆಯುವ ಕೆಲಸಗಳನ್ನು ನಿಲ್ಲಿಸಬೇಕು. ಈ ಬಗ್ಗೆ ಯಾರೋ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಪರ್ಸಂಟೇಜ್ ವ್ಯವಹಾರ ಇನ್ನಾದರೂ ನಿಲ್ಲಿಸಬೇಕು ಎಂದು ತೀಕ್ಷ್ಣವಾಗಿ ಹೇಳಿದ ಅವರು; ಕೇಂದ್ರ ಸರಕಾರದ ಮುಂದೆ ಅರ್ಜಿ ಇಡ್ಕೊಂಡು ಹೋದ್ರೆ ಆಗುತ್ತಾ? ಎಸ್ ಡಿಆರ್ ಎಫ್ ನಿಂದ ಕೂಡಲೇ ಹಣ ಬಿಡುಗಡೆ ಮಾಡಬೇಕು. ಕೂಡಲೇ ಜಿಲ್ಲಾ ಕೇಂದ್ರಗಳಲ್ಲಿ ಸಭೆಗಳನ್ನು ಮಾಡಿ, ಬೆಳೆ ಪರಿಹಾರ ನೀಡುವ ಬಗ್ಗೆ ತುರ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸೋಮವಾರ ಅಭ್ಯರ್ಥಿಗಳ ಪಟ್ಟಿ; ಅನ್ಯ ಪಕ್ಷಗಳಿಂದ ಬಂದವರಿಗೆ ಟಿಕೆಟ್ ಇಲ್ಲ
ಕಾಂಗ್ರೆಸ್ ಪಕ್ಷ ಬಿಜೆಪಿ ಸಿ ಟೀಮಾ ಎಂದು ಕೇಳಿದ ದಳಪತಿ
ವಿಧಾನ ಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಸೋಮವಾರ ಪ್ರಕಟಿಸಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು.
ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳಿಗೆ ಬರವಿಲ್ಲ. ಗೆಲ್ಲುವ ಶಕ್ತಿ ಇರುವವರು ಇದ್ದಾರೆ. ಆರರಿಂದ ಎಂಟು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡ್ತೇವೆ. ಕಾಂಗ್ರೆಸ್ ಬಿಜೆಪಿಯ ಅಸಮಧಾನಿತರಿಗೆ ಕಾದು ಕುಳಿತಿಲ್ಲ. ಈಗ ನಿರ್ಧಾರ ಮಾಡಿರುವ ಕ್ಷೇತ್ರಗಳಲ್ಲಿ ಬದಲಾವಣೆ ಇಲ್ಲ ಎಂದು ಅವರು ತಿಳಿಸಿದರು.
ಮಂಡ್ಯ ಅಭ್ಯರ್ಥಿಯಾಗಿ ದಿನೇಶ್ ಗೂಳಿಗೌಡ ಟಿಕೆಟ್ ಕೊಟ್ಟಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಸಚಿವರು ಒಬ್ಬರಿಗೆ ಸಹಾಯಕರಾಗಿದ್ದವರು. ನಂತರ ಬಿಜೆಪಿ ಸಚಿವರಿಬ್ಬರಿಗೆ ಸಹಾಯಕರಾಗಿದ್ದರು. ಅಂತಹವರನ್ನು ಕರೆದು ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಹಾಗಾದರೆ, ಕಾಂಗ್ರೆಸ್ ಪಕ್ಷವು ಬಿಜೆಪಿಯ ಸಿ ಟೀಂ ಆಗಿದ್ಯಾ ಎನ್ನುವುದನ್ನು ಅವರೇ ಹೇಳಬೇಕು ಎಂದು ಟಾಂಗ್ ಕೊಟ್ಟರು ಹೆ ಚ್ ಡಿಕೆ.