340 ಹೊಸ ಗ್ರಂಥಾಲಯ ಮಂಜೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾರ್ಚ್ 21 :
ರಾಜ್ಯದಲ್ಲಿ ಅಗತ್ಯವಿರುವ 340 ಹೊಸ ಗ್ರಂಥಾಲಯಗಳನ್ನು ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಜೂರಾತಿ ನೀಡುವುದಾಗಿ ಪ್ರಕಟಿಸಿ, ಆದೇಶವನ್ನು ಕೂಡಲೇ ನೀಡುವುದಾಗಿ ಘೋಷಿಸಿದರು.
ಇಂದು ಅವರು ಶಿಕ್ಷಣ ಫೌಂಡೇಶನ್, ಡೆಲ್ ಇಂಟರ್ನ್ಯಾಷನಲ್ ಸರ್ವೀಸ್ಸ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ” ಗ್ರಾಮ ಡಿಜಿ ವಿಕಾಸನ – 2022″ನ್ನು ಉದ್ಘಾಟಿಸಿ ಮಾತನಾಡಿದರು.
ಹೊಸ ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯತಿಗಳು ಆಗಬೇಕಿದ್ದು, ಅವುಗಳನ್ನು ಇದೆ ವರ್ಷ ಪ್ರಾರಂಭಿ ದಲಾಗುವುದು. ಇದೇ ವರ್ಷದಲ್ಲಿ 3409 ಗ್ರಂಥಾಲಯಗಳ ಡಿಜಿಟಲೀಕರಣವಾಗಬೇಕು ಎಂದರು.
ನವ ಕರ್ನಾಟಕದಿಂದ ನವ ಭಾರತ ನಿರ್ಮಾಣವಾಗಬೇಕಿದೆ. ಗ್ರಾಮೀಣ ಕರ್ನಾಟಕ ತನ್ನ ಸಂಪನ್ಮೂಲಗಳನ್ನು ಸದುಪಯೋಗ ಮಾಡಿಕೊಂಡರೆ ಎಲ್ಲಾ ರೀತಿಯಲ್ಲಿ ಸಾಧನೆ ಮಾಡಬಹುದು. ಗ್ರಾಮೀಣಾಭಿವೃದ್ಧಿ ಇಲಾಖೆ ಗುರಿಗಿಂತ ಹೆಚ್ಚಿನ ಸಾಧನೆ ಮಾಡಿ ದಾಖಲೆ ನಿರ್ಮಿಸಿದೆ ಎಂದರು.
ಕರ್ನಾಟಕ ಸರ್ಕಾರ ಶಿಕ್ಷಣ ಫೌಂಡೇಷನ್ ನೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಲು ಸಿದ್ಧವಿದೆ. ಗ್ರಾಮ ಪಂಚಾಯತಿಗಳು, ಅವುಗಳ ಗ್ರಂಥಾಲಯಗಳ ಆಧುನೀಕರಣ ಮಾಡುವುದರಿಂದ ಪ್ರತಿ ಗ್ರಾಮವನ್ನು ಸಂಪರ್ಕಿಸಲು ಸಾಧ್ಯವಿದೆ. ದೊಡ್ಡ ಬದಲಾವಣೆಯನ್ನು ತರಬಹುದಾಗಿದೆ ಎಂದರು.
ಜ್ಞಾನದ ಮೂಲಕ ವ್ಯಕ್ತಿತ್ವ ವಿಕಸನ :
ತಳಹಂತದ ಜನರಿಗೆ ತಂತ್ರಾಂಶ ಜ್ಞಾನ ಬಳಕೆಗೆ ಹಿಂಜರಿಕೆ ಇದೆ. ಡಿಜಿಟಲ್ ತಂತ್ರಾಜ್ಞಾನ ಮೊಬೈಲ್ಗಳಿಂದ ವೃದ್ಧಿಯಾಗಿದೆ. ಗ್ರಾಮೀಣ ಭಾಗದ ಜನರು ಜ್ಞಾನದ ಮೂಲಕ ವ್ಯಕ್ತಿ ವಿಕಸನವಾಗಲು ಪ್ರತಿಯೊಂದು ಗ್ರಾಮಪಂಚಾಯತಿ ಗ್ರಂಥಾಲಯಗಳನ್ನು ಡಿಜಿಟಲೈಸ್ ಮಾಡಲಾಗಿದೆ. ಡಿಜಿಟಲ್ ಗ್ರಂಥಾಲಯಗಳಲ್ಲಿ ಯಾವೆಲ್ಲಾ ವಿಷಯಗಳು ಮಕ್ಕಳಿಗೆ ಲಭ್ಯವಾಗಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇರಬೇಕು ಎಂದು ತಿಳಿಸಿದರು.
ಗ್ರಾಮ ಡಿಜಿ ವಿಕಸನ’ ಭದ್ರ ಭವಿಷ್ಯವನ್ನು ನಿರ್ಮಿಸುವ ಕಾರ್ಯಕ್ರಮ :
ಗ್ರಾಮೀಣ ಮಟ್ಟದಲ್ಲಿಯೂ ಡಿಜಿಲೀಕರಣವನ್ನು ತರುವ ಸರ್ಕಾರದ ನಿರ್ಣಯವನ್ನು ಕಾರ್ಯರೂಪಕ್ಕೆ ತರಲಾಗಿದೆ . ‘ಗ್ರಾಮ ಡಿಜಿ ವಿಕಸನ’ ಭದ್ರ ಭವಿಷ್ಯವನ್ನು ನಿರ್ಮಿಸುವ ಕಾರ್ಯಕ್ರಮವಾಗಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾರ್ಗದರ್ಶನ ನೀಡುವ ‘ಮುಖ್ಯಮಂತ್ರಿ ಮಾರ್ಗದರ್ಶಿನಿ’ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಡಿಜಿಲೀಕರಣಕ್ಕೆ ಒತ್ತು ನೀಡುವಂತಹ ಗ್ರಾಮ ಒನ್ ಕಾರ್ಯಕ್ರಮವನ್ನು ಸರ್ಕಾರ ಪ್ರಾರಂಭಿಸಿದೆ. ಗ್ರಾಮೀಣ ಜನರಿಗೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ, ಡಿಜಿಟಲೀಕರಣದ ಜ್ಞಾನ ನೀಡುವ ಗುರಿಯನ್ನು ಈ ತಂತ್ರಾಂಶ ವಾಹಿನಿಯ ಮೂಲಕ ಸಾಧಿಸಲಾಗುವುದು. ಈ ನಿಟ್ಟಿನಲ್ಲಿ ‘ಗ್ರಾಮ ಡಿಜಿ ವಿಕಸನ’ ವಿದ್ಯಾರ್ಥಿಗಳ ಹಾಗೂ ಗ್ರಾಮೀಣ ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಗ್ರಾಮೀಣಾಭಿವೃದ್ಧಿ ಮತ್ತು ಸಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವರಾದ ಸಿ.ಸಿ.ಪಾಟೀಲ್, ಆನಂದ್ ಸಿಂಗ್, ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥರು ಉಪಸ್ಥಿತರಿದ್ದರು.