ಐಟಿ ಬಿಟಿ ದಿಗ್ಗಜ ಕಂಪನಿಗಳ ಸಿಇಒಗಳೊಂದಿಗೆ 3 ಗಂಟೆಗಳ ಕಾಲ ಸಂವಾದ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ನಿಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತೇವೆ:ಸಿಎಂ ಬೊಮ್ಮಾಯಿ ಭರವಸೆ
ಬೆಂಗಳೂರು, ಏಪ್ರಿಲ್ 25: ನಮ್ಮ ಸರ್ಕಾರದ ಬಾಗಿಲು ತೆರೆದಿದೆ. ನನ್ನ ಹೃದಯದ ಬಾಗಿಲು ತೆರೆದಿದೆ. ನಿಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯುತ್ತೇವೆ. ಸರ್ಕಾರ ಸದಾ ನಿಮಗೆ ಸಹಕಾರ ನೀಡಲು ಸಿದ್ಧವಿದೆ.
ಇವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರು ಟೆಕ್ ಸಮ್ಮಿಟ್ 2022 ರ ಅಂಗವಾಗಿ ಬೆಂಗಳೂರಿನಲ್ಲಿರುವ ಐಟಿ ಬಿಟಿ ಕಂಪನಿಗಳ ಸಿಇಒಗಳಿಗೆ ನೀಡಿದ ಭರವಸೆಯ ನುಡಿಗಳು.
ನಮ್ಮ ಸರ್ಕಾರ ಐಟಿ ಬಿಟಿ ಉದ್ಯಮಕ್ಕೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆದು ಸರ್ವ ರೀತಿಯ ಸಹಾಯ ನೀಡಲಿದೆ. ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕನ ಸ್ಥಾನದಲ್ಲಿದ್ದುಕೊಂಡು ಕರ್ನಾಟಕ ದಾಪುಗಾಲು ಹಾಕುತ್ತಿದೆ. ಇಂಥ ಸಂದರ್ಭದಲ್ಲಿ ಬೆಂಗಳೂರು ಟೆಕ್ ಸಮಿಟ್ ಗೆ ೨೫ ವರ್ಷಾಚರಣೆ. ಈ ಮಹತ್ವದ ಸಂವಾದ ಕಾರ್ಯಕ್ರಮಕ್ಕೆ ಐಟಿ.ಬಿಟಿ, ಜೈವಿಕ ತಂತ್ರಜ್ಞಾನ, ಸ್ಪಾರ್ಟ್ ಅಪ್ ವಲಯದ ನೂರಕ್ಕೂ ಹೆಚ್ಚು ಮುಖ್ಯಸ್ಥರು ಮತ್ತು ಸಿಇಒಗಳು ಸಂವಾದದಲ್ಲಿ ಪಾಲ್ಗೊಂಡು ಸರ್ಕಾರ ಕೈಗೊಂಡಿರುವ ಹಲವಾರು ಉದ್ಯಮ ಸ್ನೇಹಿ ಕಾರ್ಯಕ್ರಮಗಳ ಬಗ್ಗೆ ಮೆಚ್ವುಗೆ ವ್ಯಕ್ತಪಡಿಸಿದರು.
ಬೆಂಗಳೂರು ಟೆಕ್ ಸಮ್ಮಿಟ್ ನ
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ನಾವೀನ್ಯತಾ ಕ್ಲಸ್ಟರ್‍ಗಳನ್ನು ಸೃಷ್ಟಿಸುವುದು, ಸಂಶೋಧನೆ, ಜಾಗತಿಕ ಮಟ್ಟದ ಅತ್ಯುನ್ನತ ಸಂಶೋಧನಾ ವಲಯವನ್ನು ಆಕರ್ಷಿಸಲು ಹಾಗೂ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಐಟಿ ಬಿಟಿ ಹಾಗೂ ವಿವಿಧ ವಲಯಗಳ ಕಂಪನಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯಲು ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅಭಿವೃದ್ಧಿಗೆ ಪೂರಕವಾಗಿರುವ ಆಸಕ್ತಿ
ಭಾರತ ದೇಶ ಪಾಶ್ಚಿಮಾತ್ಯ ದೇಶಗಳಿಗಿಂತಲೂ ವಿಭಿನ್ನವಾಗಿದ್ದು, ತನ್ನದೇ ಸಾಮಾಜಿಕ ಸಂಯೋಜನೆ ಮತ್ತು ರಚನೆಗಳಿವೆ. ಏಳಿಗೆಯಾಗಬೇಕೆನ್ನುವ ಹಸಿವು, ಆಸಕ್ತಿ ಮತ್ತು ಆತುರ ಮಾನವನ ಸಹಜ ಗುಣಧರ್ಮ. ಆಧುನಿಕ ಭಾರತದಲ್ಲಿ ಎಲ್ಲಾ ಕೈಗಾರಿಕಾ ಕ್ಷೇತ್ರಗಳ ಸಮಗ್ರ ಬೆಳವಣಿಗೆಗೆ ಆಸಕ್ತಿ ಕಂಡುಬರುತ್ತಿದ್ದು, ರಾಜ್ಯದ ಬೆಳವಣಿಗೆಗೆ ಇದು ಪೂರಕವಾಗಿದೆ ಎಂದರು.
ಬೆಂಗಳೂರು ವಿಶ್ವದಲ್ಲಿಯೇ ನಂಬರ್ 1 ಸಿಲಿಕಾನ್ ನಗರ ಎನಿಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲಾ ಕ್ಷೇತ್ರಗಳ ಬೆಳವಣಿಗೆ ಸರ್ಕಾರಕ್ಕೆ ಸವಾಲು ಮತ್ತು ಅವಕಾಶಗಳನ್ನು ಒಡ್ಡಿವೆ. ಸವಾಲು ಮತ್ತು ಅವಕಾಶಗಳನ್ನು ಚಿಮ್ಮುಹಲಗೆಯಂತೆ ಬಳಸಿ ಎತ್ತರಕ್ಕೆ ನಾವು ಹಾರಬಹುದಾಗಿದೆ. ಬೆಂಗಳೂರು ದೇಶಕ್ಕೆ ಕೊಡುಗೆ ನೀಡುವ ಸ್ಥಾನದಲ್ಲಿದ್ದು, ಕೊಡುಗೆ ನೀಡುವ ಸ್ಥಾನದಲ್ಲಿರುವವರು ನಾಯಕರಾಗಿರುತ್ತಾರೆ ಎಂದರು.
ನೀತಿ ನಿರೂಪಣೆ
ನೀತಿಗಳಲ್ಲಿ ಬದಲಾವಣೆ, ನಿಯಮಗಳ ಸರಳೀಕರಣ, ಕೌಶಲ್ಯಯುಳ್ಳ ಮಾನವ ಸಂಪನ್ಮೂಲದ ಅವಶ್ಯಕತೆ ಇದೆ ಎಂದು ವಿವಿಧ ಕಂಪನಿಗಳ ಸಿಇಒ ಹಾಗೂ ಅವರ ಪ್ರತಿನಿಧಿಗಳು ತಿಳಿಸಿದ್ದು, ಇವುಗಳನ್ನು ಬಗೆಹರಿಸಲು ನಮ್ಮದೇ ರೀತಿಯಲ್ಲಿ ಈಗಾಗಲೇ ಕೆಲಸ ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕೌಶಲ್ಯಯುತ ಮಾನವ ಸಂಪನ್ಮೂಲ ಬಹಳ ಮುಖ್ಯ. ಮೈಸೂರಿನ ಮಹಾರಾಜರು ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ನೀಡಿದ ಒತ್ತು, ಕರ್ನಾಟಕದಲ್ಲಿ ತಾಂತ್ರಿಕತೆಯ ಅಭಿವೃದ್ಧಿಗೆ ತಳಪಾಯ ಹಾಕಿತು. ಐಟಿ ಬಿಟಿ ವಲಯದ ಉಗಮ ಹೊಸ ಪೀಳಿಗೆಗೆ ನೂತನ ವೇಗ ಮತ್ತು ಆಯಾಮವನ್ನು ತಂದುಕೊಟ್ಟಿದೆ. ತಳಹಂತದವರೆಗೂ ತಂತ್ರಜ್ಞಾನ ಮುಟ್ಟುವಲ್ಲಿ ಸಫಲವಾಗಿದೆ. ತಂತ್ರಜ್ಞಾನದ ಉಪಯೋಗಗಳು ಮತ್ತು ಅವಕಾಶಗಳು ಏರುಗತಿಯನ್ನು ಕಂಡಿದ್ದು, ಇನ್ನಷ್ಟು ವೇಗ ಪಡೆಯಲು ಕರ್ನಾಟಕ ಅತ್ಯುತ್ತಮ ಸ್ಥಳವಾಗಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಬೆಂಗಳೂರಿನ ಹೆಚ್.ಎಸ್.ಆರ್ ಬಡಾವಣೆ, ಕೋರಮಂಗಲ, ಇಂದಿರಾನಗರಗಳಲ್ಲಿ ಐಟಿಬಿಟಿ ಕಂಪನಿಗಳ ಸಾಂದ್ರತೆ ಹೆಚ್ಚಿದೆ. ಈ ಪ್ರದೇಶಗಳು ತಂತ್ರಜ್ಞಾನ ಪ್ರದೇಶಗಳಾಗಿ ಪರಿವರ್ತನೆಯಾಗಿವೆ. ಆದರೆ ಇವು ಯೋಜಿತವಾದ ಬಡಾವಣೆಗಳಲ್ಲ. ಐಟಿ.ಬಿಟಿ, ಜೈವಿಕ ತಂತ್ರಜ್ಞಾನ, ಸಂಶೋಧನೆ, ಸ್ಪಾರ್ಟ್ ಅಪ್ ವಲಯಗಳನ್ನು ಉತ್ತೇಜಿಸಲು ಬೆಂಗಳೂರಿನ ಮೂಲಭೂತಸೌಕರ್ಯವನ್ನು ದೊಡ್ಡ ಮಟ್ಟದಲ್ಲಿ ಬದಲಾಯಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಈ ಬಾರಿಯ ಬಜೆಟ್‍ನಲ್ಲಿ 8 ಸಾವಿರ ಕೋಟಿ ರೂ.ಗಳ ಅನುದಾನವನ್ನು ಮೀಸಲಿರಿಸಿದ್ದು, ಮಳೆಗಾಲ ಮುಗಿದ ಕೂಡಲೇ ರಸ್ತೆಗಳ ಕೆಲಸ ಪ್ರಾರಂಭವಾಗಲಿದೆ ಎಂದರು. ಮೆಟ್ರೋ ಮೂರನೇ ಹಂತ, ಬೆಂಗಳೂರು ಉಪನಗರ ರೈಲ್ವೇ ಯೋಜನೆ, ಪೆರಿಫೆರಲ್ ರಿಂಗ್ ರಸ್ತೆ, ಎಸ್.ಟಿ.ಆರ್.ಆರ್. ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗುವುದು. ಬಿಯಾಂಡ್ ಬೆಂಗಳೂರು ಯೋಜನೆಯಡಿ ತುಮಕೂರು, ಮೈಸೂರು, ಹುಬ್ಬಳ್ಳಿ ಮತ್ತಿತರ ನಗರಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಕಂಪನಿಗಳುಒ ರಾಜ್ಯದಾದ್ಯಂತ ವ್ಯಾಪಿಸಲು ಅನುಕೂಲ ಮಾಡಿಕೊಡಲು ಸರ್ಕಾರ ಬದ್ಧವಾಗಿದೆ ಎಂದರು.
ಏಳು ತಿಂಗಳು ಮುನ್ನವೇ ಸಿದ್ಧತೆ ಆರಂಭ; ಸಿಎಂ ಸಮ್ಮುಖದಲ್ಲಿ ಸಿಇಒಗಳ ಜೊತೆ ಸಭೆ
ನ . 16ರಿಂದ ರಜತೋತ್ಸವ ವರ್ಷದ ` ಬೆಂಗಳೂರು ತಂತ್ರಜ್ಞಾನ ಶೃಂಗ ’ ಸಮಾವೇಶ
ದೇಶದ ಹಾಗೂ ಏಷ್ಯಾದ ಮಹತ್ವದ ತಂತ್ರಜ್ಞಾನ ಕಾರ್ಯಕ್ರಮವಾದ `ಬೆಂಗಳೂರು ತಂತ್ರಜ್ಞಾನ ಶೃಂಗ’ದ 25ನೇ ಆವೃತ್ತಿಯನ್ನು ನವೆಂಬರ್ 16, 17 ಮತ್ತು 18ರಂದು ವಿಶೇಷವಾದ ರೀತಿಯಲ್ಲಿ ನಡೆಸಲು ಈಗಿನಿಂದಲೇ ಸಿದ್ಧತೆ ಆರಂಭಿಸಲಾಗಿದೆ ಎಂದು ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಬಾರಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭೌತಿಕ ರೂಪದಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ (ಬಿಟಿಎಸ್) ಈಗಾಗಲೇ ತಯಾರಿ ಆರಂಭವಾಗಿದೆ. ಇದಕ್ಕೆ ಪೂರಕವಾಗಿ ಅಮೆರಿಕ, ಇಂಗ್ಲೆಂಡ್, ಜಪಾನ್ ಮುಂತಾದೆಡೆಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ತಿಳಿಸಿದರರು. ಬೆಳವಣಿಗೆ ತಂತ್ರಜ್ಞಾನ ಕ್ಷೇತ್ರವು ಅಗಾಧ ನೆರವು ನೀಡುತ್ತಿದೆ. ಪ್ರಧಾನಿ ಮೋದಿ ಅವರು ಘೋಷಿಸಿರುವ 5 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಗೆ ಕರ್ನಾಟಕವು 1.5 ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಗುರಿ ಇಟ್ಟುಕೊಂಡಿದೆ ಎಂದು ಅವರು ನುಡಿದರು.
ಹೋದ ಹಣಕಾಸು ವರ್ಷದಲ್ಲಿ ದೇಶಕ್ಕೆ ಹರಿದು ಬಂದಿರುವ ಒಟ್ಟು ವಿದೇಶೀ ಹೂಡಿಕೆಯಲ್ಲಿ ಶೇ 40ರಷ್ಟು ಪಾಲು ರಾಜ್ಯದಲ್ಲೇ ಹೂಡಿಕೆಯಾಗಿದ್ದು, ಇದರ ಮೊತ್ತವು 17.3 ಶತಕೋಟಿ ಡಾಲರುಗಳಷ್ಟಾಗಿದೆ. ಜತೆಗೆ, ರಾಜ್ಯವು ರಫ್ತು ವಹಿವಾಟಿನಲ್ಲೂ ದೇಶದಲ್ಲಿ ಅಗ್ರಸ್ಥಾನದಲ್ಲಿದ್ದು, 2021-22ರ ಮೊದಲ ಮೂರು ತ್ರೈಮಾಸಿಕ ಅವಧಿಗಳಲ್ಲಿ 91.4 ಶತಕೋಟಿ ಡಾಲರ್ ಮೊತ್ತದ ಸರಕು ಮತ್ತು ಸೇವೆಗಳನ್ನು ವಿದೇಶಗಳಿಗೆ ಪೂರೈಸಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ `ಕರ್ನಾಟಕ ಡೇಟಾ ಸೆಂಟರ್ ನೀತಿ-2022’ನ್ನು ಕೂಡ ಜಾರಿಗೆ ತರಲಾಗಿದ್ದು, ಮುಂದಿನ 5 ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ 10 ಸಾವಿರ ಕೋಟಿ ರೂ. ಬಂಡವಾಳವನ್ನು ಸೆಳೆಯಲಾಗುವುದು ಎಂದು ಸಚಿವರು ವಿವರಿಸಿದರು.
ಬಿಯಾಂಡ್ ಬೆಂಗಳೂರು’ ಉಪಕ್ರಮದಡಿ ಮೈಸೂರಿನಲ್ಲಿ ಸೈಬರ್ ಸೆಕ್ಯುರಿಟಿಗೆ, ಹುಬ್ಬಳ್ಳಿಯಲ್ಲಿ ಇಎಸ್ ಡಿಎಂ ಮತ್ತು ಕೃತಕ ಬುದ್ಧಿಮತ್ತೆ ಆಧರಿತ ಉದ್ದಿಮೆಗಳಿಗೆ, ಮಂಗಳೂರಿನಲ್ಲಿ ಫಿನ್-ಟೆಕ್ ವಲಯಕ್ಕೆ ಮತ್ತು ಬೆಳಗಾವಿಯಲ್ಲಿ ಏರೋಸ್ಪೇಸ್ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಇವೆಲ್ಲವೂ ಸುಗಮವಾಗಿ ನಡೆಯಬೇಕೆಂಬ ಉದ್ದೇಶದಿಂದ
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್’ ಸ್ಥಾಪಿಸಲಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯ ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ವಿದ್ಯುನ್ಮಾನ ಹಾಗೂ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಇಲಾಖೆಯ ನಿರ್ದೇಶಕಿ ಸಿ.ಎನ್.ಮೀನಾ ನಾಗರಾಜ್, ಜೈವಿಕ ತಂತ್ರಜ್ಞಾನ ಉದ್ಯಮಗಳ ಒಕ್ಕೂಟ(ಏಬಲ್)ದ ಅಧ್ಯಕ್ಷ ಜಿ.ಎಸ್. ಕೃಷ್ಣನ್, ಭಾರತೀಯ ಸಾಫ್ಟ್ವೇರ್ ಪಾರ್ಕ್ ಗಳ ಅಧ್ಯಕ್ಷ ಶೈಲೇಂದ್ರಕುಮಾರ್ ತ್ಯಾಗಿ, ಜಗದೀಶ್ ಪಟಣ್ಕರ್ ಉಪಸ್ಥಿತರಿದ್ದರು. ಬಿ.ಟಿ. ವಿಷನ್ ಗ್ರೂಪ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ವರ್ಚುವಲ್ ನಲ್ಲಿ ಭಾಗವಹಿಸಿದ್ದರು.