IMG 20220501 WA0016

ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರಲ್ಲಿ ಭಯದ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿದೆ…..!

POLATICAL STATE

ಬೆಂಗಳೂರು: ವಿಶ್ವ ಕಾರ್ಮಿಕ ದಿನ ಅಂಗವಾಗಿ ನಾಡಿನ ಸಮಸ್ತ ಕಾರ್ಮಿಕ ಬಂಧುಗಳಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ಹಾರ್ದಿಕ ಶುಭಾಶಯ ಗಳು.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಿಮಗೆ ನಿಮ್ಮ ಬದುಕನ್ನ ಯಾವ ರೀತಿ ಸಾಗಿಸಬೇಕೆಂದು ಅರ್ಥ ಮಾಡಿಕೊಳ್ಳಲು ಆಗಲಿಲ್ಲ.

ನಾವು ಬದುಕುತ್ತಿವೊ ಇಲ್ಲವೋ ಎಂಬ ಸಂಶಯ ಕಾಡುವಂತಹ ಪರಿಸ್ಥಿತಿಯನ್ನು ಪ್ರಕೃತಿ ನಮಗೆ ತಂದಿತು. ಆದರೂ ನಾವೆಲ್ಲ ಬದುಕಿದ್ದೇವೆ. ಈ ಕೋವಿಡ್ ಹೋರಾಟದಲ್ಲಿ ನಿಮ್ಮ, ನಮ್ಮೆಲ್ಲರ ಜೀವನವನ್ನು ಮುಡುಪಾಗಿಟ್ಟು ಕಾಂಗ್ರೆಸ್ ಪಕ್ಷದ ವತಿಯಿಂದ ಎಲ್ಲಾ ವರ್ಗದ ಜನರ ಸೇವೆ ಮಾಡಿದ್ದೇವೆ. ನಮ್ಮ ಕೈಲಾದಂತಹ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ.

ಇದಕ್ಕೆ ಸಹಕಾರ ಕೊಟ್ಟ ತಮ್ಮೆಲ್ಲರಿಗೂ ಕೂಡ ನಾನು ವೈಯಕ್ತಿಕವಾಗಿ ಹಾಗೂ ಪಕ್ಷದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಶಿಕ್ಷಕ, ಕೃಷಿಕ, ಕಾರ್ಮಿಕ, ಸೈನಿಕ ನಮ್ಮ ಸಮಾಜದ ಆಧಾರ ಸ್ತಂಭಗಳು. ಯಾರೂ ಸಹ ಒಬ್ಬರನ್ನು ಬಿಟ್ಟು ಒಬ್ಬರು ಬದುಕಲು ಸಾಧ್ಯವಿಲ್ಲ . ಕೃಷಿಕ ನಮಗೆ ತಿನ್ನಲು ಅನ್ನ ಕೊಟ್ಟರೆ, ಶಿಕ್ಷಕ ನಮಗೆ ಜ್ಞಾನವನ್ನು ಕೊಡುತ್ತಾರೆ, ಹಾಗೆ ದೇಶದ ಗಡಿಯಲ್ಲಿ ಸೈನಿಕ ಬಂದೂಕು ಹಿಡಿದು ನಮ್ಮೆಲ್ಲರ ರಕ್ಷಣೆ ಮಾಡುತ್ತಿದ್ದಾರೆ. ಇವರನ್ನು ಬಿಟ್ಟು ನಾವು ಬದುಕಲು ಸಾಧ್ಯವಿಲ್ಲ.

ಕಾರ್ಖಾನೆಯಲ್ಲಿ ಕೆಲಸ ಮಾಡುವವನು ಮಾತ್ರ ಕಾರ್ಮಿಕನಲ್ಲ, ತಾನು ಮಾಡುವ ವೃತ್ತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರುವವನು, ಸವಿತಾ ಸಮಾಜದವರು, ಬಟ್ಟೆಯನ್ನು ಹೊಲಿಯುವವರು, ಒಗೆಯುವವರು, ಡ್ರೈವರ್, ಮರಗೆಲಸದವರು, ಕಬ್ಬಿಣದ ಕೆಲಸದವರು – ಇಂತಹ ನೂರಾರು ವರ್ಗದವರು ಇದ್ದಾರೆ.

ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ 50 ರಷ್ಟು ಜನ ಕಾರ್ಮಿಕರು. ಪ್ಲಂಬರ್, ಪೇಂಟರ್, ಗಾರೆ ಕೆಲಸ ಮಾಡುವವರು – ಹೀಗೆ ಅನೇಕ ಕಾರ್ಮಿಕರು ಕೆಲಸ ಮಾಡುತ್ತಾರೆ. ಒಂದು ಮನೆಯಲ್ಲಿ ನಾವು ಐದಾರು ಜನ ವಾಸ ಮಾಡುತ್ತಿವೆಯಾದರೂ, ನಮ್ಮ ಬದುಕಿನಲ್ಲಿ ಹಲವು ಕಾರ್ಮಿಕರು ಭಾಗಿಯಾಗಿರುತ್ತಾರೆ.

ಕೋವಿಡ್ ಸಮಯದಲ್ಲಿ ಈ ಕಾರ್ಮಿಕರಿಗೆ ವಲಸೆ ಕಾರ್ಮಿಕರು ಎಂದು ಹೆಸರಿಟ್ಟರು. ಅವರು ತಮ್ಮ ತಮ್ಮ ಊರುಗಳಿಗೆ ಮರಳಲು ಸರ್ಕಾರ ಮೂರು ಪಟ್ಟು ಟಿಕೆಟ್ ದರವನ್ನು ವಸೂಲಿ ಮಾಡುವ ಮೂಲಕ ಅವರ ಸುಲಿಗೆ ಮಾಡಿತ್ತು.

ಆಗ ನಾನು ಸರ್ಕಾರಕ್ಕೆ ಬೆಳಗಿನವರೆಗೂ ಗಡುವು ಕೊಟ್ಟು ಇವರು ಕಾರ್ಮಿಕರಲ್ಲ, ರಾಷ್ಟ್ರನಿರ್ಮಾಣ ಮಾಡುವವರು ಎಂದು ಹೇಳಿ ಅವರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದೆ. ಅವರು ಉದ್ಯೋಗ ಕಳೆದುಕೊಂಡು ಆದಾಯ ಇಲ್ಲದೆ ಪರದಾಡುವ ಸ್ಥಿತಿಯಲ್ಲಿದ್ದರು.

ನಿಮ್ಮ ಕೈಯಲ್ಲಿ ಇದು ಸಾಧ್ಯವಾಗದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಒಂದು ಕೋಟಿ ರು. ನೀಡುವುದಾಗಿ ಸರ್ಕಾರಕ್ಕೆ ಹೇಳಿದ್ದೆ.

IMG 20220501 WA0015

ಕಾರ್ಮಿಕರ ಹಿತರಕ್ಷಣೆಗೆ ಕಾಂಗ್ರೆಸ್ ಪಕ್ಷ ಈ ನಿರ್ಧಾರ ಕೈಗೊಂಡಿತು. ರಾಯಚೂರು, ಗುಲ್ಬರ್ಗ, ಬೀದರ್ ಭಾಗಕ್ಕೆ ಹೋದಾಗ ಅಲ್ಲಿನ ಜನ ಕಷ್ಟಕಾಲದಲ್ಲಿ ನಮ್ಮ ಸೇವೆಯನ್ನು ನೆನೆಯುತ್ತಾರೆ.

ಈ ಭಾಗದ ಕಾರ್ಮಿಕ ಸಂಘಟನೆಗಳು ಸರಕಾರದ ಕಾರ್ಮಿಕ ವಿರೋಧ ನೀತಿಯನ್ನು ಪ್ರತಿಭಟಿಸಿದ್ದರು.

ಅಸಂಘಟಿತ ಕಾರ್ಮಿಕರು ಸಾಕಷ್ಟು ನೋವುಗಳನ್ನು ಅನುಭವಿಸುತ್ತಿದ್ದು, ಅವರ ರಕ್ಷಣೆಗೆ ಕಾಂಗ್ರೆಸ್ ನಿಲ್ಲಲಿದೆ.

ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದ್ದು, ಮುಂದಿನ ವರ್ಷ ಕಾರ್ಮಿಕರ ದಿನ ವೇಳೆಗೆ ಚುನಾವಣೆ ಮುಕ್ತಾಯವಾಗಿರುತ್ತದೆ. ಕಾಂಗ್ರೆಸ್ ಪಕ್ಷ ಎಲ್ಲಾ ಸಂಘಟಿತ ಕಾರ್ಮಿಕರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ನೀಡಲು ನಮ್ಮ ಪ್ರಣಾಳಿಕೆಯಲ್ಲಿ ಕಾರ್ಯಕ್ರಮ ರೂಪಿಸಲಿದೆ.

ಚಾಲಕರು, ಮನೆಗೆಲಸದವರು, ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಬಂದಿರುವ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಪ್ರತ್ಯೇಕ ವಸತಿ ಯೋಜನೆಯನ್ನು ಮಾಡಲಿದೆ ಎಂದು ಈ ಸಮಯದಲ್ಲಿ ಭರವಸೆ ನೀಡುತ್ತೇವೆ.

ನಾವು ನುಡಿದಂತೆ ನಡೆಯುತ್ತೇವೆ. ಸಿದ್ದರಾಮಯ್ಯ ಅವರ ಸರ್ಕಾರದ ಸಮಯದಲ್ಲಿ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಬಿಜೆಪಿ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ನೆರವು ನೀಡುತ್ತದೋ, ಬಿಡುತ್ತದೋ ಕಾಂಗ್ರೆಸ್ ಪಕ್ಷ ಮಾತ್ರ ಅವರ ಹಿತರಕ್ಷಣೆ ಮಾಡಲಿದೆ.

ಅಸಂಘಟಿತ ಕಾರ್ಮಿಕರೆಲ್ಲರೂ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು.

ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಬಯಲುಸೀಮೆ ಕರ್ನಾಟಕ – ಹೀಗೆ ಎಲ್ಲಾ ಭಾಗಗಳಲ್ಲಿ ಬೇರೆ, ಬೇರೆ ರೀತಿಯ ಕಾರ್ಮಿಕರು ಇದ್ದಾರೆ.

ಎಲ್ಲಾ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಕೆಲಸ ಮಾಡಲಿದೆ.

ಒಂದು ಕಾಲದಲ್ಲಿ ಬಸವಣ್ಣನ ನಾಡು, ಶಿಶುನಾಳ ಶರೀಫರ ಕರ್ನಾಟಕ, ಕುವೆಂಪು ಕರ್ನಾಟಕ, ಕನಕದಾಸರ ಕರ್ನಾಟಕ ಎಂದು ರಾಜ್ಯವು ಅನೇಕ ಇತಿಹಾಸಗಳನ್ನು ಹೊಂದಿದೆ.

ಈಗ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕೋಮು ದ್ವೇಷ ಹೆಚ್ಚಾಗಿದೆ. ಕುವೆಂಪು ಅವರ ಶಾಂತಿಯ ತೋಟ, ಬಸವಣ್ಣನವರ ಆಚಾರ, ವಿಚಾರ ಎಲ್ಲವೂ ನಶಿಸಿ ಹೋಗಿದೆ.

ಮುಂದಿನ ದಿನಗಳಲ್ಲಿ ರಾಜ್ಯವನ್ನು ಗ್ಲೋಬಲ್ ಕರ್ನಾಟಕವನ್ನಾಗಿ ಮಾಡಲು ನಾವೆಲ್ಲರೂ ಶ್ರಮಿಸಬೇಕು. ನಮ್ಮಲ್ಲಿರುವ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕಂಪನಿಗಳು ವಿಶ್ವವಿಖ್ಯಾತಿ ಪಡೆದಿವೆ.

ನಮ್ಮ ಕಾರ್ಮಿಕ ವಿಭಾಗವನ್ನು ಹಲವು ವರ್ಷಗಳಿಂದ ಮುನ್ನಡೆಸಿಕೊಂಡು ಬಂದಿದ್ದ ಪ್ರಕಾಶಂ ಅವರು ನಿನ್ನೆ ವಿಧಿವಶರಾಗಿದ್ದು, ನಾನು ಅವರ ಅಂತಿಮ ದರ್ಶನವನ್ನು ಪಡೆದು ಬಂದಿದ್ದೇನೆ.

IMG 20220501 WA0018
ಕಾಂಗ್ರೆಸ್ ಕಾರ್ಮಿಕರ ಸಮಾವೇಶ

ಇಂದಿನಿಂದ ಮತ್ತೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಆರಂಭವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಿ. ಹೆಚ್ಚಿನ ಕಾರ್ಮಿಕರನ್ನು ಪಕ್ಷದ ಸದಸ್ಯರನ್ನಾಗಿ ಮಾಡಬೇಕು.

ಇಂದಿರಾಗಾಂಧಿಯವರು ಒಂದು ಮಾತು ಹೇಳಿದ್ದಾರೆ. ಅದೇನೆಂದರೆ, ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ನಾವು ಶಕ್ತಿ ತುಂಬಬೇಕು. ಆ ರೀತಿ ನಾವು ಕೆಲಸ ಮಾಡಿದರೆ ಪ್ರತಿ ಬೂತ್ ಮಟ್ಟದಲ್ಲಿ ಪಕ್ಷ ಬಲಿಷ್ಠವಾಗಿ ಬೆಳೆಯಲಿದೆ. ನಾನು ಅದನ್ನು ನಂಬುತ್ತೇನೆ.

ನೀವು ಎಷ್ಟೇ ದೊಡ್ಡ ನಾಯಕರಾದರು ನಿಮ್ಮ ನಿಮ್ಮ ಬೂತ್ ಗಳಲ್ಲಿ ನೀವು ಸಂಘಟನೆ ಮಾಡಬೇಕು. ಸಮಾಜದಲ್ಲಿ ಎರಡು ವರ್ಗವಿದೆ. ಒಂದು ಅಲ್ಪಸಂಖ್ಯಾತ, ಮತ್ತೊಂದು ಬಹುಸಂಖ್ಯಾತ. ಅಲ್ಪಸಂಖ್ಯಾತರೆಂದರೆ ಶ್ರೀಮಂತರು, ಬಹುಸಂಖ್ಯಾತರು ಎಂದರೆ ಯುವಕರು ಹಾಗೂ ಬಡವರು. ನಾವು ಯುವಕರು, ಬಡವರ ಪರವಾಗಿ ಹೋರಾಟ ಮಾಡಬೇಕು. ಬಲಿಷ್ಠ ಭಾರತವನ್ನು ನಿರ್ಮಾಣ ಮಾಡಬೇಕಾದರೆ ಅಭಿವೃದ್ಧಿಶೀಲ ಕರ್ನಾಟಕ ನಿರ್ಮಾಣ ಅಗತ್ಯವಾಗಿದೆ. ಈ ಕೆಲಸವನ್ನು ನೀವು, ನಾವೆಲ್ಲರೂ ಸೇರಿ ಒಟ್ಟಿಗೆ ಮಾಡೋಣ.

ಮಾಧ್ಯಮಗಳಿಗೆ ಕೊಟ್ಟ ಪ್ರತಿಕ್ರಿಯೆ:

ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರಲ್ಲಿ ಭಯದ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿದೆ.

ರಾಜ್ಯದಲ್ಲಿ ಸೋಂಕಿನ ಸಂಖ್ಯೆ ಎಲ್ಲಿ ಹೆಚ್ಚಾಗಿದೆ, ಎಷ್ಟು ಜನ ಸತ್ತಿದ್ದಾರೆ? ಕೋವಿಡ್ ಹೆಸರಲ್ಲಿ ಬಿಜೆಪಿ ಸರ್ಕಾರ ಎಲ್ಲಾ ವರ್ಗದ ಜನರ ಬದುಕನ್ನು ಹಾಳು ಮಾಡಲು ಹೊರಟಿದೆ.

ಮೊದಲ ಹಾಗೂ ಎರಡನೆಯ ಅಲೆಯಲ್ಲಿ ಜನರು ತೊಂದರೆ ಅನುಭವಿಸಿದರು. ಆದರೆ ಮೂರನೇ ಅಲೆಯಲ್ಲಿ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿತು. ಅದೇ ರೀತಿ ಈಗಲೂ ಪ್ರಯತ್ನಿಸುತ್ತಿದೆ.

ಪಿಎಸ್ಐ, ಪಿಡಬ್ಲ್ಯೂಡಿ ಸೇರಿದಂತೆ ಎಲ್ಲ ಇಲಾಖೆಗಳಲ್ಲಿನ ನೇಮಕಾತಿ ಹಗರಣ ಮುಚ್ಚಿಹಾಕಲು ಈ ಬಾರಿ ಪ್ರಯತ್ನಿಸುತ್ತಿದೆ.

ನಾನು ಮುಖ್ಯಮಂತ್ರಿಗಳನ್ನು ದುರ್ಬಲ ಮುಖ್ಯಮಂತ್ರಿಯೆಂದು ಹೇಳಿಲ್ಲ. ಅವರ ಪಕ್ಷ ಹೇಳಿದಂತೆ ಅವರು ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಧರ್ಮದವರು ನಮ್ಮ ಅಣ್ಣ ತಮ್ಮಂದಿರು ಎಂದು ಯಡಿಯೂರಪ್ಪನವರು ಹೇಳಿಕೆ ನೀಡಿದ್ದಾರೆ. ಆದರೆ ಈ ಮಾತನ್ನು ಮುಖ್ಯಮಂತ್ರಿಗಳು ಯಾಕೆ ಹೇಳಲಿಲ್ಲ?

ನೈತಿಕ ಪೊಲೀಸ್ ಗಿರಿ, ವರ್ತಕರ ಮೇಲಿನ ದಾಳಿ, ಕೋಮು ಸೌಹಾರ್ದತೆಗೆ ಧಕ್ಕೆ, ಕೋಮುಗಲಭೆ ಹಿನ್ನೆಲೆಯಲ್ಲಿ ಉದ್ದಿಮೆದಾರರು, ಬೇರೆ ರಾಜ್ಯಗಳ ನಾಯಕರು ಮಾತನಾಡಿದಾಗ ನಮ್ಮ ಮುಖ್ಯಮಂತ್ರಿಗಳು ಯಾಕೆ ಧ್ವನಿಯೆತ್ತಲಿಲ್ಲ.

ಈ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಅವರ ಪಕ್ಷದ ಶಾಸಕರಾದ ಯತ್ನಾಳ್ ಅವರೇ ವಿವಿಧ ನೇಮಕಾತಿ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾತನಾಡಿದ್ದಾರೆ.

ಹೈಕೋರ್ಟ್ ನ್ಯಾಯಾಧೀಶರ ಮುಂದಾಳತ್ವದಲ್ಲಿ ಈ ಪ್ರಕರಣದ ತನಿಖೆ ನಡೆಸಲಿ. ಬಹಳ ಕಠಿಣ ಆಡಳಿತ ನಡೆಸಿದರೂ ತೊಂದರೆಯಾಗುತ್ತದೆ ಎಂದು ಹೇಳುವ ಮುಖ್ಯಮಂತ್ರಿಗಳೇ, ನಾವು ನಿಮ್ಮ ಬೆದರಿಕೆಗಳಿಗೆ ಹೆದರುವುದಿಲ್ಲ. ದೊಡ್ಡ ದೊಡ್ಡ ನಾಯಕರಿಂದ ನಾನು ಇಂತಹ ಬೆದರಿಕೆಗಳನ್ನು ಎದುರಿಸಿದ್ದೇನೆ. ಸಮಾಜದ ಎಲ್ಲಾ ವರ್ಗದವರನ್ನು ರಕ್ಷಣೆ ಮಾಡುತ್ತೇನೆ ಎಂದು ಸಂವಿಧಾನದ ಹೆಸರಲ್ಲಿ ನೀವು ಪ್ರಮಾಣ ಸ್ವೀಕರಿಸಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡಿ.

ನಿಮ್ಮ ನಾಯಕರ ಹೇಳಿಕೆಗಳನ್ನೇ ಆಧಾರವಾಗಿಟ್ಟುಕೊಂಡು ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ ಮಾಡಿಸಿ. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಅಕ್ರಮ ನಡೆದಿದ್ದರೆ ತನಿಖೆ ಮಾಡಿಸಿ. ಇದಕ್ಕೆ ಯಾರು ಬೇಡ ಎಂದಿದ್ದಾರೆ?

ಕೊರೋನಾ ಸಮಯದಲ್ಲಿ ನಿಮ್ಮ ಸರ್ಕಾರ ಎಷ್ಟು ಕಾರ್ಮಿಕರಿಗೆ ಪರಿಹಾರ ನೀಡಿದೆ. ಕಾರ್ಮಿಕರಿಗೆ ಒಂದು ತಿಂಗಳು ಎರಡರಿಂದ ಮೂರು ಸಾವಿರ ಪರಿಹಾರ ನೀಡುವುದಾಗಿ ಹೇಳಿದ್ದೀರಿ. ಆ ಪರಿಹಾರ ಅವರಿಗೆ ತಲುಪಿತೇ?

ರಾಜ್ಯದಲ್ಲಿ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದು ಸರ್ಕಾರ ಆ ಬಗ್ಗೆ ಗಮನಹರೀಸಿದೆಯೇ?

ಕಾರ್ಮಿಕರ ದಿನಾಚರಣೆ- ಬೊಮ್ಮಸಂದ್ರ