IMG 20220503 WA0005

ದೇವನಹಳ್ಳಿ :ಫಲವತ್ತಾದ ಕೃಷಿಭೂಮಿ ಸ್ವಾಧೀನ ಬೇಡ….!

Genaral STATE

ದೇವನಹಳ್ಳಿ ಬಳಿಯ ಚನ್ನರಾಯಪಟ್ಟಣಕ್ಕೆ ಹೆಚ್‌.ಡಿ.ಕುಮಾರಸ್ವಾಮಿ ಭೇಟಿ
ಭೂಸ್ವಾಧೀನ ವಿರೋಧಿಸಿ ಧರಣಿನಿರತ ರೈತರಿಗೆ ಬೆಂಬಲ ಘೋಷಣೆ
ಫಲವತ್ತಾದ ಕೃಷಿಭೂಮಿ
ಸ್ವಾಧೀನ ಬೇಡವೆಂದ ಮಾಜಿ ಮುಖ್ಯಮಂತ್ರಿ


ದೇವನಹಳ್ಳಿ: ತಾಲೂಕಿನ ಚನ್ನರಾಯಪಟ್ಟಣ ಸಮೀಪದ ಸುಮಾರು 18,00 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವ ಕರ್ನಾಟಕ ಪ್ರದೇಶಾಭಿವೃದ್ಧಿ ಕೈಗಾರಿಕಾ ಮಂಡಳಿ (ಕೆಐಎಡಿಬಿ) ವಿರುದ್ಧ ಕಳೆದ 29 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿರುವ ರೈತರನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಂದು ಭೇಟಿಯಾದರು.

ಯಾವುದೇ ಕಾರಣಕ್ಕೂ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳಬಾರದು ಎಂದು ಒತ್ತಾಯ ಮಾಡಿದ ಕುಮಾರಸ್ವಾಮಿ ಅವರು, ಒಮ್ಮೆ ಭೂಮಿಯನ್ನು ಕಳೆದುಕೊಂಡರೆ ಮತ್ತೆ ಗಳಿಸಲು ಸಾಧ್ಯವಿಲ್ಲ. ತಲೆತಲಾಂತರಗಳಿಂದ ಬಾಳಿಬದುಕಿದ ಭೂಮಿಯನ್ನು ಕಳೆದುಕೊಳ್ಳುವುದು ಪ್ರತಿಯೊಬ್ಬರಿಗೂ ನೋವಿನ ಸಂಗತಿಯೇ ಹೌದು. ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.

ಪ್ರತಿಭಟನೆಯ ಸ್ಥಳಕ್ಕೆ ಧಾವಿಸಿದ ಬಂದ ಮಾಜಿ ಮುಖ್ಯಮಂತ್ರಿಗಳು, ಪ್ರತಿಯೊಬ್ಬ ರೈತನ ಜತೆಯೂ ಚರ್ಚಿಸಿದರು. ಫಲವತ್ತಾದ ಕೃಷಿ ಭೂಮಿ ಕಿತ್ತುಕೊಳ್ಳುತ್ತಿರುವ ಸರಕಾರದ ವಿರುದ್ಧ ಅವರು ಟೀಕಾಪ್ರಹಾರ ನಡೆಸಿದಲ್ಲದೆ, ತಾವು ರೈತರ ಪರ ನಿಲ್ಲುವುದಾಗಿ ಘೋಷಿಸಿದರು.

ರೈತರ ಹೋರಾಟಕ್ಕೆ ರೈತರ ಪಕ್ಷವಾಗಿ ಜೆಡಿಎಸ್‌ ಬೆಂಬಲ ವ್ಯಕ್ತಪಡಿಸಿದೆ. ಸ್ವಾಧೀನಕ್ಕೆ ಗುರುತಿಸಲಾಗಿರುವ ಪ್ರದೇಶದಲ್ಲಿ ಮುಕ್ಕಾಲು ಪಾಲು ರೈತರು ಭೂಮಿ ಕೊಡಲು ತಯಾರಿಲ್ಲ. ಅವರದ್ದು ಫಲವತ್ತಾದ ಕೃಷಿಯೋಗ್ಯ ಭೂಮಿ, ತೋಟಗಾರಿಕೆಗೆ ಹೇಳಿ ಮಾಡಿಸಿದ ಭೂಮಿ. ಈಗಾಗಲೇ ವಿಮಾನ ನಿಲ್ದಾಣ, ಕೈಗಾರಿಕೆಗಳು, ಬಡಾವಣೆಗಳಿಗೆ ಎಂದು ಹೇಳಿ ಸಾವಿರಾರು ಎಕರೆ ಭೂಮಿಯನ್ನು ಕಿತ್ತುಕೊಳ್ಳಲಾಗಿದೆ. ಈಗ ಅಳಿದುಳಿದ ಭೂಮಿಯನ್ನೂ ಕಿತ್ತುಕೊಳ್ಳಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಕೆಲ ರೈತರು ಭೂಮಿ ಕೊಡಲಿಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ಬಂದಿದ್ದು, ಉಳಿದಂತೆ ಬಹಳಷ್ಟು ರೈತರು ಭೂಮಿ ಕೊಡಲು ಸಿದ್ಧರಿಲ್ಲ. ಆದರೆ ರೈತರ ನಡುವೆ ಭಿನ್ನಮತ ಎನ್ನುವುದು ಸರಿಯಲ್ಲ. ನೀವೆಲ್ಲ ಒಂದೆಡೆ ಕೂತು ಸಮಾಲೋಚನೆ ನಡೆಸಿ. ನಿಮ್ಮಲ್ಲಿ ಒಗ್ಗಟ್ಟು ಬರದೇ ಹೋದರೆ ಕಷ್ಟ ಎಂದು ಪ್ರತಿಭಟನಾಕಾರರಿಗೆ ಮಾಜಿ ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.

ಕೆಲ ದಲ್ಲಾಳಿಗಳು ಬಂದು ರೈತರಿಗೆ ಆಸೆ ಆಮಿಷ ಹುಟ್ಟಿಸಿ ತಲೆಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅಂಥವರ ಮಾತು ಕೇಳಬೇಡಿ. ದುಡುಕಿ ಒಮ್ಮೆ ಭೂಮಿ ಕಳೆದುಕೊಂಡರೆ ಮತ್ತೆ ಸಂಪಾದನೆ ಮಾಡುವುದು ಕಷ್ಟ ಎಂದು ಅವರು ರೈತರಲ್ಲಿ ಮನವಿ ಮಾಡಿದರು.

ರಾಜಧಾನಿ ಬೆಂಗಳೂರು ಅಭಿವೃದ್ಧಿಗಾಗಿ ನಗರದ ಸುತ್ತಮುತ್ತಲ ಜನರು ದೊಡ್ಡ ತ್ಯಾಗವನ್ನೇ ಮಾಡಿದ್ದಾರೆ. ಕೈಗಾರಿಕೆ, ಬಡಾವಣೆಗಳ ನಿರ್ಮಾಣ, ಅಭಿವೃದ್ಧಿ ಯೋಜನೆಗಳಿಗೆಲ್ಲ ರೈತರು ಭೂಮಿ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್‌ ನಾಯಕ ಮುನೇಗೌಡ, ರೈತ ಮುಖಂಡರು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.