IMG 20220503 WA0034

ಜ್ಞಾನವೇ ಯುವಜನರ ಶಕ್ತಿ: ಅಮಿತ್ ಶಾ

Genaral STATE

ಜ್ಞಾನವೇ ಯುವಜನರ ಶಕ್ತಿ: ಅಮಿತ್ ಶಾ
ಬೆಂಗಳೂರು, ಮೇ 03 (ಕರ್ನಾಟಕ ವಾರ್ತೆ): ಜ್ಞಾನವೇ ಜಗತ್ತಿನ ಅತ್ಯಧಿಕ ಶಕ್ತಿ. ಇದರಿಂದ ಯುವಜನತೆ ಅಪರಿಮಿತ ಯಶಸ್ಸನ್ನು ಸಾಧಿಸಬಹುದೆಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು ತಿಳಿಸಿದರು.
ಭಾರತ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದ ನೃಪತುಂಗ ರಸ್ತೆಯ ನೃಪತುಂಗ ವಿಶ್ವವಿದ್ಯಾಲಯ ಉದ್ಘಾಟನೆ ಮತ್ತು ಶೈಕ್ಷಣಿಕ ಸಮುಚ್ಛಯದ ಶಂಕುಸ್ಥಾಪನೆ, ಬಳ್ಳಾರಿಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ಹಾಗೂ ಸ್ಮಾರ್ಟ್ ಇ ಬೀಟ್ ಆ್ಯಪ್‌ನ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.
ಯುವಜನತೆ ನಮ್ಮ ದೇಶದ ಸಂಪತ್ತು, ಇವರಿಗೆ ಹೇರಳವಾದ ಉದ್ಯೋಗಾವಕಾಶ ಕಲ್ಪಿಸಿದಲ್ಲಿ ದೇಶವು ವಿಶ್ವಮಟ್ಟದಲ್ಲೇ ಪ್ರಗತಿ ಸಾಧಿಸುವುದರಲ್ಲಿ ಸಂಶಯವಿಲ್ಲ. ಜನರು ತೆರಿಗೆ ಸಕಾಲದಲ್ಲಿ ಪಾವತಿಸಿ, ಟ್ರಾಫಿಕ್ ನಿಯಮ ಪಾಲಿಸಿ, ಪ್ರಾಮಾಣಿಕರಾಗಬೇಕು ಎಂದರು.

IMG 20220503 WA0032


ಇಂದು ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ಹಬ್ಬಗಳ ಸಂಭ್ರಮದಲ್ಲಿದ್ದೇವೆ. 10ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲಾ ವರ್ಗದ ಜನರ ಏಳ್ಗೆಗಾಗಿ ತಮ್ಮ ವಚನಗಳ ಮೂಲಕ ಶಕ್ತಿ ತುಂಬಿದವರು. ಇವರ ಶಾಂತಿ ಸದ್ಭಾವ, ಲೋಕತಂತ್ರದ ಗುಣಗಳನ್ನು ಇಂದಿಗೂ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ದಿನ ನೃಪತುಂಗ ವಿಶ್ವವಿದ್ಯಾಲಯ ಲೋಕಾರ್ಪಣೆಯಾಗಿರುವುದು ಶೈಕ್ಷಣಿಕ ಕ್ಷೇತ್ರಕ್ಕೆ ಒಂದು ಮೈಲಿಗಲ್ಲು. ದೇಶಾದ್ಯಂತ ಈ ಮೂರು ವರ್ಷಗಳಲ್ಲಿ ಅನೇಕ ಹೊಸ ವಿಶ್ವವಿದ್ಯಾಲಯಗಳು ಸ್ಥಾಪನೆಗೊಂಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನಾವು ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಆಚರಣೆಯಲ್ಲಿದ್ದೇವೆ. ದೇಶಕ್ಕಾಗಿ ಪ್ರಾಣತೆತ್ತ ಯೋಧರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದವರ ತ್ಯಾಗ ಬಲಿದಾನಗಳನ್ನು ನಾವು ಎಂದೆಂದೂ ಸ್ಮರಿಸಬೇಕು.
ಬಳ್ಳಾರಿಯಲ್ಲಿ ಸ್ಥಾಪಿತಗೊಂಡ ಹೊಸ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಇಂದು ಉದ್ಘಾಟನೆಗೊಂಡಿದ್ದು, ಇದರಿಂದ ಅಪರಾಧಿಗಳಿಗೆ ತ್ವರಿತ ಶಿಕ್ಷೆ ಕೊಡಿಸುವಲ್ಲಿ ಹಾಗೂ ನ್ಯಾಯ ಎತ್ತಿ ಹಿಡಿಯುವಲ್ಲಿ ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ನೆರವೇರಿಸಿದ ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಆರಂಭಗೊಂಡ ಸರ್ಕಾರ ವಿಜ್ಞಾನ ಕಾಲೇಜು ಇಂದು ನೃಪತುಂಗ ವಿಶ್ವವಿದ್ಯಾಲಯವಾಗಿ ಬೃಹದೆತ್ತರ ನಿಂತಿದೆ. ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ನೀಗಿಸಿ ಅವರನ್ನು ಸ್ವಾವಲಂಬಿಗಳಾಗಿ ಮಾಡುವುದೇ ಈ ವಿಶ್ವವಿದ್ಯಾಲಯದ ಧ್ಯೇಯ ನವಕರ್ನಾಟಕ ಮತ್ತು ನವಭಾರತದ ಕಲ್ಪನೆಯನ್ನು ಕಟ್ಟುವಲ್ಲಿ ನಮ್ಮ ಯುವಜನರು ಮುನ್ನುಗ್ಗಬೇಕು. ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ಸಮಗ್ರ ಶಿಕ್ಷಣ ಪಡೆಯಲು ಸಾಧ್ಯ. ಇದರಿಂದ ತಮ್ಮ ಪ್ರತಿಭೆ, ಸಾಮರ್ಥ್ಯಕ್ಕೆ ತಕ್ಕದಾದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯುತ್ತದೆ. ರಾಜ್ಯದಲ್ಲಿ ಆರು ಹೊಸ ವಿಶ್ವವಿದ್ಯಾಲಯಗಳು ಉದ್ಘಾಟನೆಗೊಂಡಿದ್ದು ಇನ್ನೂ ಏಳು ವಿಶ್ವವಿದ್ಯಾಲಯಗಳು ಉದ್ಘಾಟನೆಗೊಳ್ಳಲಿವೆ. ಪ್ರತಿ ಜಿಲ್ಲೆಯಲ್ಲೂ ಒಂದು ವಿಶ್ವವಿದ್ಯಾಲಯ ತೆರೆಯುವುದು ನಮ್ಮ ಗುರಿ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ಅಪರಾಧಿಗಳಿಗೆ ಶಿಕ್ಷೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲು ಈ ಬಳ್ಳಾರಿಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಶ್ರಮಿಸುತ್ತಿದೆ. ಕರ್ನಾಟಕದಲ್ಲಿ ಇಂತಹ ಏಳು‌ ನ್ಯಾಯ ಪ್ರಯೋಗಾಲಯಗಳಿವೆ. ಮುಂಬರುವ ದಿನಗಳಲ್ಲಿ 50 ಎಕರೆಯಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಪ್ರಾರಂಭಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೆರವು ನೀಡಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕರ್ನಾಟಕದ ಭವಿಷ್ಯ ಭವ್ಯವಾಗಿದೆ. ಇದು ಬದಲಾವಣೆಯ ಪರ್ವ. ದೇಶದ ಶೇ 46 ರಷ್ಟು ಇರುವ ಯುವಜನರು ನಮ್ಮ ಆಸ್ತಿ. ಹೊಸ ಶಿಕ್ಷಣ ನೀತಿ ಅಳವಡಿಸಿರುವ ನಮ್ಮ ರಾಜ್ಯ ನಮ್ಮ ಹೆಮ್ಮೆ. 50 ಕೋಟಿ ವೆಚ್ಚದಲ್ಲಿ ಪ್ರಾರಂಭಗೊಂಡಿರುವ ನೃಪತುಂಗ ವಿಶ್ವವಿದ್ಯಾಲಯ ಶಿಕ್ಷಣ, ಉದ್ಯೋಗ ಹಾಗೂ ಸಶಕ್ತೀಕರಣಕ್ಕೆ ನಾಂದಿ ಹಾಕಲಿದೆ. ಮಹಿಳಾ ಸುರಕ್ಷತೆಗೆ 75 ಕೋಟೊ ವೆಚ್ಚದಲ್ಲಿ ನಿರ್ಭಯಾ ಯೋಜನೆ ಜಾರಿಗೊಂಡಿದೆ. ಪೊಲೀಸ್ ಇಲಾಖೆಯ ಸ್ಮಾರ್ಟ್ ಇ-ಬೀಟ್ ಆ್ಯಪ್ ಸಹ ಲೋಕಾರ್ಪಣೆಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಸಂಸದ ಪಿ‌.ಸಿ.ಮೋಹನ್, ಆರಕ್ಷಕ ಮಹಾನಿರೀಕ್ಷರಾದ ಪ್ರವೀಣ್ ಸೂದ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್.ಪಿ , ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶ್ರೀನಿವಾಸ್.ಎಸ್.ಬೆಳ್ಳಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.