12ನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕ ಬಸವಣ್ಣ…
ಪಾವಗಡ….. ಇಂದು ಪಟ್ಟಣದ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ 889 ನೇ ಬಸವ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ನಂತರ ಕಾರ್ಯಕ್ರಮ ಉದ್ದೇಶಿಸಿ ಬ್ಯಾಡನೂರು ಚನ್ನಬಸವಣ್ಣ ಮಾತನಾಡುತ್ತಾ, ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯಾ
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯಾ
ಕೂಡಲಸಂಗಮದೇವಾ ಕೇಳಯ್ಯಾ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಹೀಗೆ ಮನುಕುಲಕ್ಕೆ ಮಹಾ ಸಂದೇಶ ನೀಡಿದ ಮಹಾನ್ ವ್ಯಕ್ತಿ ಬಸವಣ್ಣ ಎಂದರು. ನಂತರ ಅಂತರಗಂಗೆ ಶಂಕರಪ್ಪ ಮಾತನಾಡುತ್ತಾ, 12ನೇ ಶತಮಾನದ ಬಹು ದೊಡ್ಡ ಸಮಾಜ ಸುಧಾರಕ ಬಸವಣ್ಣನವರು. ಮೇಲು ಕೀಳು, ಜಾತಿ ಧರ್ಮ, ಮಡಿಮೈಲಿಗೆ ತುಂಬಿದ್ದ ಸಮಯದಲ್ಲಿ ನೊಂದವರ, ದೀನದಲಿತರ ಉದ್ಧಾರಕ್ಕೆ ನಿಂತವರು. ಕೆಳವರ್ಗದವರನ್ನು ಮೇಲ್ವರ್ಗದವರು ಅತ್ಯಂತ ಹೀನಾಯವಾಗಿ ಕಾಣುತಿದ್ದ ಆ ಅನ್ಯಾಯವನ್ನು ಹೋಗಲಾಡಿಸಲೆಂದೇ ಬಸವಣ್ಣನವರ ಕಲ್ಯಾಣದಲ್ಲಿ ಕ್ರಾಂತಿಯ ಬೀಜ ಬಿತ್ತಿದರು. ಬಿಜ್ಜಳನ ವಿರುದ್ಧ, ಅಂಧಶ್ರದ್ಧೆಯ ವಿರುದ್ಧ ಸಿಡಿದು ನಿಂತು ಅನುಭವ ಮಂಟಪ ನಿರ್ಮಿಸಿದರು. ಅದರಡಿ ಎಲ್ಲ ವರ್ಗದವರನ್ನೂ ಬರ ಮಾಡಿಕೊಂಡರು. ಕಾಯಕವೇ ಕೈಲಾಸ ಎಂದು ಸಾರಿ, ಪ್ರತಿಯೊಬ್ಬರಲ್ಲೂ ದುಡಿದು ತಿನ್ನುವ ಹುಮ್ಮಸ್ಸು ತುಂಬಿದರು. ‘ವಸುದೈವ ಕುಟುಂಬಕಂ’ ಎನ್ನುತ್ತಾ ಎಲ್ಲರಲ್ಲೂ ಸಹೋದರತ್ವದ ಸಂದೇಶ ಸಾರಿದರುಮೂಢನಂಬಿಕೆ, ಮಡಿ ಮೈಲಿಗೆಯಿಂದ ತುಂಬಿದ್ದ ಸಮಾಜದ ನಡುವೆ ಬಸವಣ್ಣನವರ ವಚನಗಳು ಜೀವನವನ್ನು ಮತ್ತು ದೇವರನ್ನು ವಿಭಿನ್ನವಾಗಿ ನೋಡುವ ದೃಷ್ಟಿ ನೀಡಿದವು. ನಂತರ ಸಾಹಿತಿ ಸಣ್ಣ ನಾಗಪ್ಪ ಮಾತನಾಡುತ್ತಾ, ಜಾತಿರಹಿತ ಸಮಾಜದ ಕನಸನ್ನು ಕಂಡ ಬಸವಣ್ಣನವರು ಪ್ರತಿಯೊಬ್ಬರಿಗೂ ಜೀವನದಲ್ಲಿ ಏಳ್ಗೆ ಪಡೆಯಲು ಸಮಾನ ಅವಕಾಶ ಬೇಕೆಂದು ಬಯಸಿದರು. ತಮ್ಮೆಲ್ಲ ಈ ದೂರದೃಷ್ಟಿಯ ಸಮಾಜ ನಿರ್ಮಾಣಕ್ಕಾಗಿ ‘ಅನುಭವ ಮಂಟಪ’ವನ್ನು ಹುಟ್ಟು ಹಾಕಿದರು. ಈ ಅನುಭವ ಮಂಟಪದಲ್ಲಿ ಲಿಂಗಾಯತ ಮತ ನಂಬಿಕೆಯ ತತ್ವಜ್ಞಾನಿಗಳನ್ನು ಕಲೆ ಹಾಕಿ ಮನುಷ್ಯನ ನೈತಿಕತೆ ಮತ್ತು ಆದರ್ಶಗಳ ಬಗ್ಗೆ ನಿರಂತರ ಚರ್ಚೆಗಳನ್ನು ಹುಟ್ಟು ಹಾಕಲಾಯಿತು ಎಂದರು. ನಂತರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ಮಾತನಾಡುತ್ತಾ, ಕರ್ನಾಟಕದ ಗಾಂಧಿ ಎಂದು ಪ್ರಸಿದ್ಧರಾದ ಹರ್ಡೇಕರ ಮಂಜಪ್ಪನವರು 1913ರಲ್ಲಿ ಸಾರ್ವಜನಿಕವಾಗಿ ಬಸವ ಜಯಂತಿಯ ಆಚರಣೆ ಶುರು ಮಾಡಲು ನಿಶ್ಚಯಿಸಿದರು. ವೀರಶೈವ, ಲಿಂಗಾಯತ ಸಮಾಜದ ಸಂಘಟನೆಗಾಗಿ ಬಸವ ಜಯಂತಿ ಆಚರಿಸಲು ಹೊರಟ ಅವರಿಗೆ ಬಸವಣ್ಣ ಜನಿಸಿದ ದಿನಾಂಕ ತಿಳಿಯದಿರುವುದು ದೊಡ್ಡ ಗೊಂದಲವಾಯಿತು. ಆಗ ಮುರುಘಾಮಠದ ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು ಅಕ್ಷಯ ತದಿಗೆಯಂದು ಬಸವ ಜಯಂತಿ ಆಚರಿಸಲು ತಿಳಿಸಿದರು. ಅಂದಿನಿಂದಲೂ ಅಕ್ಷಯ ತೃತೀಯದಂದು ಬಸವ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಎಂದರು. ಕಾರ್ಯಕ್ರಮದಲ್ಲಿ ಬಸವರಾಜಪ್ಪ. ನಿವೃತ್ತ ಶಿಕ್ಷಕ ರಾಮಾಂಜನ ರೆಡ್ಡಿ , ಶಿಕ್ಷಕಿ ವಿಶಾಲಕ್ಷಮ್ಮ, ಡಾಕ್ಟರ್ ಮಂಜುನಾಥ್, ಕಾರ್ತಿಕ್ ರಾಜು ಇತರರು ಹಾಜರಿದ್ದರು.
ವರದಿ: ಶ್ರೀನಿವಾಸಲು ಎ