ಮಕ್ಕಳ ಕಲಿಕಾ ಗುಣಮಟ್ಟ
ಸುಧಾರಣೆಗೆ ಕಲಿಕಾ ಚೇತರಿಕೆ ಅನುಷ್ಠಾನ: ಶಿಕ್ಷಣ ಸಚಿವರು.
ತುಮಕೂರು: 16 ಮೇ, 2022.
ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗಿರುವ ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು ಮತ್ತು ಮಕ್ಕಳ ಕಲಿಕಾ ಗುಣಮಟ್ಟವನ್ನು
ಸುಧಾರಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮ ನೆರವಾಗುತ್ತದೆ ಎಂದು ಪ್ರಾಥಮಿಕ ಮತ್ತು
ಪ್ರೌಢ ಶಿಕ್ಷಣ ಸಚಿವರಾದ
ಬಿ.ಸಿ.ನಾಗೇಶ್ ತಿಳಿಸಿದರು.
ತುಮಕೂರಿನ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಆಡಿಟೋರಿಯಂನಲ್ಲಿ ಸಾರ್ವಜನಿಕ ಶಿಕ್ಷಣ
ಇಲಾಖೆ ವತಿಯಿಂದ ಏರ್ಪಡಿಸಿದ್ದ, 2022-23 ನೇ ಸಾಲಿನ ಶೈಕ್ಷಣಿಕ
ವರ್ಷದ ಪ್ರಾರಂಭೋತ್ಸವ, ಉಚಿತ ಪಠ್ಯಪುಸ್ತಕ ವಿತರಣೆ ಹಾಗೂ ‘ಕಲಿಕಾ ಚೇತರಿಕೆ’
ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವ ಬಿ.ಸಿ. ನಾಗೇಶ್ ಅವರು, ‘ಕೋವಿಡ್‌ನಿಂದ ಎರಡು ವರ್ಷಗಳ ಕಾಲ ಮಕ್ಕಳಿಗೆ ಭೌತಿಕ
ತರಗತಿ ಇಲ್ಲದೆ, ಕಲಿಕೆಯಲ್ಲಿ ಹಿನ್ನಡೆಯಾಗಿದೆ ಎಂದು ವಿವಿಧ ಸಮೀಕ್ಷೆಗಳಿಂದ ತಿಳಿದು ಬಂದಿದೆ. ಅದನ್ನು ಸರಿದೂಗಿಸಲು ‘ಕಲಿಕಾ ಚೇತರಿಕೆ’
ಕಾರ್ಯಕ್ರಮ ರೂಪಿಸಲಾಗಿದೆ. ಈ
ಕಾರ್ಯಕ್ರಮ ಅನುಷ್ಠಾನಕ್ಕೆಂದು
15 ದಿನಗಳ ಮುಂಚಿತವಾಗಿ ಶಾಲೆ ಆರಂಭಿಸಲಾಗಿದೆ. ಅದಕ್ಕೆ ಶಿಕ್ಷಕರು ಸಂಪೂರ್ಣ
ಸಹಕಾರ ನೀಡಿದ್ದಾರೆ. ಮಕ್ಕಳ
ವಿದ್ಯಾಭ್ಯಾಸವೇ ಮುಖ್ಯ ಎಂದು ತೀರ್ಮಾನಿಸಿ ಶಾಲಾರಂಭಕ್ಕೆ ಉತ್ಸಾಹ ತೋರಿದ್ದಾರೆ’ ಎಂದು ಶ್ಲಾಘಿಸಿದರು.
‘ಮಕ್ಕಳ ಕಲಿಕಾ ಗುಣಮಟ್ಟ
ಹೆಚ್ಚಿಸಲು ಮೊದಲ ಮೂರು ತಿಂಗಳು
‘ವಿದ್ಯಾ ಪ್ರವೇಶ’ ಕಾರ್ಯಕ್ರಮ ಜಾರಿ ಮಾಡಲಾಗಿದೆ. ಹಾಡು, ಕಥೆ, ನಾಟಕ ಮೊದಲಾದ
ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಶಾಲೆ
ಬಗ್ಗೆ ಆಸಕ್ತಿ ಮೂಡಿಸಲಾಗುವುದು.
ಹಾಗೆಯೇ 4 ರಿಂದ 9 ನೇ ತರಗತಿಯ ಮಕ್ಕಳ ಕಲಿಕಾ ಅಂತರ ಸರಿದೂಗಿಸಲು, ಹಿಂದಿನ 2 ವರ್ಷಗಳ ಕಲಿಕಾಂಶಗಳು ಮತ್ತು ಆಯಾ ತರಗತಿಯ ಕಲಿಕಾಂಶಗಳ ಜೊತೆ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಕೌಶಲ್ಯಗಳನ್ನು ಸೇರಿಸಿಕೊಂಡು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಇಡೀ ವರ್ಷ ನಡೆಸಲಾಗುತ್ತದೆ. 10 ನೇ ತರಗತಿಯ
ಮಕ್ಕಳಿಗೂ ಒಂದು ತಿಂಗಳ ಅವಧಿಯ ‘ಸೇತು ಬಂಧ’ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.
ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಅಗತ್ಯವಾದ ಶಿಕ್ಷಕರ ಕೈಪಿಡಿ ಮತ್ತು ವಿದ್ಯಾರ್ಥಿಗಳಿಗೆ ಕಲಿಕಾ ಹಾಳೆಗಳನ್ನು ಪೂರೈಸಲಾಗುತ್ತದೆ ಎಂದು ತಿಳಿಸಿದರು.
‘ಕೋವಿಡ್ ಸಾಂಕ್ರಾಮಿಕದಿಂದ ವ್ಯಾಪಾರಿಗಳು, ಉದ್ಯಮಿಗಳು ಸೇರಿದಂತೆ ಎಲ್ಲರೂ
ತೊಂದರೆಗೊಳಗಾದರು.
ಅದೇ ರೀತಿ ವಿದ್ಯಾರ್ಥಿಗಳ ಕಲಿಕೆಯ ಮೇಲೆಯೂ ಕೋವಿಡ್ ಗಂಭೀರ ಪರಿಣಾಮ ಬೀರಿತು.
ಇದಕ್ಕಾಗಿ ಮಕ್ಕಳ ಕಲಿಕಾ ಗುಣಮಟ್ಟವನ್ನು
ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿ ಅದರಂತೆ ಕಾರ್ಯಕ್ರಮ ರೂಪಿಸಿ ದೇಶದಲ್ಲೇ ಮೊದಲು ಜಾರಿಗೊಳಿಸಲಾಗುತ್ತಿದೆ. ಈ ಬಗ್ಗೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಅವರಿಗೆ ತಿಳಿಸಿದಾಗ, ಬಡ ಮಕ್ಕಳ ಕಲಿಕಾ ಗುಣಮಟ್ಟ
ಹೆಚ್ಚಿಸಲು ಸಂಪೂರ್ಣ ಸಹಕಾರ
ನೀಡುವುದಾಗಿ ತಿಳಿಸಿ, ಅದರಂತೆ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಅಗತ್ಯ ಅನುದಾನ ನೀಡಿದ್ದಾರೆ’ ಎಂದರು.
ಶಾಲೆಗಳ ಆರಂಭಕ್ಕೆ ಮುನ್ನ ಎಲ್ಲ ಸಿದ್ದತೆಗಳನ್ನು ಕೈಗೊಳ್ಳಲು ಮತ್ತು ಶಾಲಾ ಕಟ್ಟಡ, ಆವರಣವನ್ನು ಸಜ್ಜುಗೊಳಿಸುವಲ್ಲಿ ಎಲ್ಲ ಶಿಕ್ಷಕರು, ಎಸ್ಡಿಎಂಸಿ ಪದಾಧಿಕಾರಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಶ್ರಮದಾನ ಮಾಡಿದ್ದಕ್ಕೆ ಸಚಿವ ನಾಗೇಶ್ ಅವರು ಧನ್ಯವಾದ ತಿಳಿಸಿದರು.
ಗೃಹ ಸಚಿವರಾದ ಆರಗ ಜ್ಞಾನೇಂದ್ರ,
ಸಂಸದ ಜಿ.ಎಸ್.ಬಸವರಾಜು,
ಶಾಸಕರಾದ ಜ್ಯೋತಿ ಗಣೇಶ್,
ವಿಧಾನ ಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ,
ಚಿದಾನಂದಗೌಡ, ಶಿಕ್ಷಣ ಇಲಾಖೆ ಪ್ರಧಾನ
ಕಾರ್ಯದರ್ಶಿ ಸೆಲ್ವಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಆರ್.ವಿಶಾಲ್, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕಿ ಪಲ್ಲವಿ ಆಕುರತಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.