*ಕೋವಿಡ್ ನಿರ್ವಹಣೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಚಿವ ಡಾ.ಕೆ.ಸುಧಾಕರ್ ಸಭೆ*
*ಶ್ರವಣ ಕುಮಾರನಂತೆ ಹಿರಿಯರ ಸೇವೆಗೆ ತೊಡಗಿ, ಕೊರೋನದಿಂದ ವೃದ್ಧರನ್ನು ರಕ್ಷಿಸಿ – ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್*
*ಬೆಂಗಳೂರು – ಜುಲೈ 10, 2020*: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಹಿನ್ನೆಲೆಯಲ್ಲಿ ಹಾಸಿಗೆ ಹಂಚಿಕೆ ಸೇರಿದಂತೆ ಸಮರ್ಪಕ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಈ ಕುರಿತು ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಬೆಂಗಳೂರಿನಲ್ಲಿ ಸೋಂಕಿತರಿಗೆ ಹಾಸಿಗೆ ಕೊರತೆ ಆಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಮಾಧ್ಯಮ ಗೋಷ್ಠಿಯಲ್ಲಿ ಆರೋಗ್ಯ ಇಲಾಖೆಯ ಆಯುಕ್ತರು ಹಾಗೂ ವಿಕ್ರಂ ಆಸ್ಪತ್ರೆಯ ಮುಖ್ಯಸ್ಥ ಡಾ.ಸತೀಶ್ ಉಪಸ್ಥಿತರಿದ್ದರು.
*ಹಾಸಿಗೆಗಳ ಹಂಚಿಕೆಗೆ ಕೇಂದ್ರೀಕೃತ ವ್ಯವಸ್ಥೆ*
ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆಗೆ ಶೀಘ್ರದಲ್ಲೇ ಕೇಂದ್ರೀಕೃತ ವ್ಯವಸ್ಥೆ ಬರಲಿದ್ದು ಎಲ್ಲವನ್ನೂ ವ್ಯವಸ್ಥಿತವಾಗಿ ನಿರ್ವಹಿಸಲಾಗುವುದು ಎಂದು ಡಾ.ಕೆ.ಸುಧಾಕರ್ ಹೇಳಿದರು. ಬೆಂಗಳೂರಿನ ಹಾಗೂ ರಾಜ್ಯದ ಕೋವಿಡ್ ಅಂಕಿಅಂಶಗಳನ್ನು ನೀಡಿದ ಸಚಿವರು, ಒಟ್ಟು 1442 ಪ್ರಕರಣಗಳು ಶುಕ್ರವಾರದಂದು ಬೆಂಗಳೂರಿನಲ್ಲಿ ದಾಖಲಾಗಿವೆ. ಮತ್ತು 26 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ನಗರದಲ್ಲಿ ಸೋಂಕಿತರಿಗೆ ಹಾಸಿಗೆಗಳ ಕೊರತೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಶೇ.2% ರಷ್ಟು ಸೋಂಕಿತರಿಗೆ ಮಾತ್ರ ಐಸಿಯು ಅವಶ್ಯಕತೆ ಉಂಟಾಗಬಹುದು. ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹಂಚಿಕೆ ಮಾಡಲು ಪಾರದರ್ಶಕ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗುತ್ತಿದೆ. ಸಾರ್ವಜನಿಕರು ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ಇದೆ ಎಂದು ತಿಳಿಯಬಹುದು. ವೈಜ್ಞಾನಿಕ ಪದ್ಧತಿಯಲ್ಲಿ ಯಾರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಅವಶ್ಯಕತೆ ಇದೆ ಎಂದು ನಿರ್ಧರಿಸಿ ಹಾಸಿಗೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು. ಟೆಸ್ಟಿಂಗ್ ಹೆಚ್ಚಿಸುವ ನಿಟ್ಟಿನಲ್ಲಿ ಶನಿವಾರ ನಗರದಲ್ಲಿ 20000 ಆಂಟಿಜೆನ್ ಪರೀಕ್ಷೆ ಮಾಡಲಾಗುತ್ತಿದೆ, ಇನ್ನೂ 2 ಲಕ್ಷ ಟೆಸ್ಟ್ ಕಿಟ್ ಗಳಿಗೆ ಆರ್ಡರ್ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಕೋವಿಡ್ ಟೆಸ್ಟ್ ಮತ್ತಷ್ಟು ಹೆಚ್ಚಿಸಲಾಗುವುದು ಎಂದು ತಿಳಿಸಿದರು.
*ಶ್ರವಣ ಕುಮಾರನಂತೆ ಹಿರಿಯರ ರಕ್ಷಣೆಗೆ ನಿಲ್ಲಿ, ವೃದ್ಧರನ್ನು ಸೋಂಕಿನಿಂದ ಕಾಪಾಡಿ*
ಕೊರೋನ ಸೋಂಕಿಗೆ ಹೆಚ್ಚು ಅಪಾಯದಲ್ಲಿರುವ ಹಿರಿಯರ ರಕ್ಷಣೆಗೆ ಆಧುನಿಕ ಶ್ರವಣಕುಮಾರರಂತೆ ತೊಡಗಿಸಿಕೊಳ್ಳಬೇಕು ಎಂದು ಸಚಿವರು ಯುವಕರಿಗೆ ಕರೆ ನೀಡಿದ್ದಾರೆ. ಶ್ರವಣಕುಮಾರ ವೃದ್ಧ ತಂದೆ ತಾಯಿಯರನ್ನು ಹೊತ್ತು ಕಾಲ್ನಡಿಗೆಯಲ್ಲೇ ತೀರ್ಥಯಾತ್ರೆ ಮಾಡಿಸಿ ಜನ್ಮ ಸಾರ್ಥಕ ಮಾಡಿಕೊಂಡ. ಇಂದು ನಾವೆಲ್ಲಾ ತ್ರೇತಾ ಯುಗದ ಶ್ರವಣ ಕುಮಾರನಂತೆ ಕಷ್ಟಪಡಬೇಕಾಗಿಲ್ಲ. ಹಿರಿಯರನ್ನು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಹೋಗದಂತೆ ಎಚ್ಚರ ವಹಿಸಿದರೆ ಅದೇ ನಾವು ಅವರಿಗೆ ಮಾಡುವ ಸೇವೆ. ಆದ್ದರಿಂದ ಯುವಕರಲ್ಲಿ ನಾನು ಮಾಡುವ ಮನವಿ ಏನಂದರೆ ದಯವಿಟ್ಟು ಮನೆಯಲ್ಲಿರುವ ಹಿರಿಯರನ್ನು ಮನೆಯಲ್ಲೇ ಇರುವಂತೆ ನೋಡಿಕೊಂಡು ಅವರನ್ನು ರಕ್ಷಿಸಿ. ಸೋಂಕಿನಿಂದ ಕಾಪಾಡಿ ಎಂದು ಸಚಿವರು ಹೇಳಿದರು.