IMG 20220607 WA0030 1

ತಸ್ತೀಕ್‌ – ವರ್ಷಾಸನ ಅನುದಾನ ಬಳಕೆ ಸರಳೀಕರಣ….!

Genaral STATE


ತಸ್ತೀಕ್‌ ಮತ್ತು ವರ್ಷಾಸನ ಅನುದಾನದ ಬಳಕೆಯನ್ನು ಸರಳೀಕರಣಗೊಳಿಸಲು ಮುಜರಾಯಿ ಇಲಾಖೆಯಿಂದ ಅಧಿಕೃತ ಆದೇಶ: ಸಚಿವೆ ಶಶಿಕಲಾ ಜೊಲ್ಲೆ

  • ತಸ್ತೀಕ್‌ ಮತ್ತು ವರ್ಷಾಸನ ಅನುದಾನಗಳನ್ನು ಎರಡೇ ಕಂತುಗಳಲ್ಲಿ ಬಿಡುಗಡೆ ಮಾಡಲು ಅನುಮತಿ
  • ಈ ಸಂಬಂಧ ಬಿಲ್ಲುಗಳಿಗೆ ಜಿಲ್ಲಾಧಿಕಾರಿಗಳ ಮೇಲು ಸಹಿ ಪಡೆಯುವುದರಿಂದಲೂ ವಿನಾಯಿತಿ
  • ಅರ್ಚಕರ ಸಂಘದ ಹಲವಾರು ವರ್ಷಗಳ ಬೇಡಿಕೆ ಈಡೇರಿಕೆ

ಬೆಂಗಳೂರು ಜೂನ್‌ 7: ತಸ್ತೀಕ್‌ ಮತ್ತು ವರ್ಷಾಷನ ನಿಗದಿಯಾಗಿರುವ ಸಂಸ್ಥೆಗಳಲ್ಲಿ ಸೂಸೂತ್ರವಾಗಿ ಸಕಾಲದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಲು ಅನುಕೂಲವಾಗಲು ನೀಡಲಾಗುವ ಭತ್ಯೆಗಳನ್ನು ಸಕಾಲದಲ್ಲಿ ಪಾವತಿಸಬೇಕು ಹಾಗೂ ಈ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಬೇಕು ಎನ್ನುವ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಮಾನ್ಯ ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ.

ತಸ್ತೀಕ್‌ ಮತ್ತು ವರ್ಷಾಸನ ಅನುದಾನ ವೆಚ್ಚ ಭರಿಸುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ಅಲ್ಲದೇ, ನಾಲ್ಕು ಕಂತುಗಳಲ್ಲಿ ಬಿಡುಗಡೆಯಾಗುತ್ತಿದ್ದ ತಸ್ತಿಕ್‌ ಹಣವನ್ನು ಎರಡು ಕಂತುಗಳಲ್ಲಿ ಬಿಡುಗಡೆಗೊಳಿಸಬೇಕು. ಹಾಗೆಯೇ, ಈ ಹಣವನ್ನು ಪಡೆಯುವಂತಹ ಪ್ರಕ್ರಿಯೆ ಸರಳಗೊಳಿಸಬೇಕು ಎನ್ನುವ ಬೇಡಿಕೆಯನ್ನ ಹಲವಾರು ಬಾರಿ ಅರ್ಚಕರು ಹಾಗೂ ಅರ್ಚಕರ ಸಂಘದ ಪದಾಧಿಕಾರಿಗಳು ಮನವಿಯನ್ನು ಸಲ್ಲಿಸಿದ್ದರು. ಅಲ್ಲದೆ, ರಾಜ್ಯ ಸರಕಾರ ನೀಡುವ ತಸ್ತಿಕ್‌ ಹಣವನ್ನು ನಂಬಿಕೊಂಡು ಪೂಜಾಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಬಹಳಷ್ಟು ಅರ್ಚಕರ ಜೀವನ ಸುಧಾರಿಸಬೇಕು ಎನ್ನುವ ಮಹತ್ವದ ಉದ್ದೇಶ ನಮ್ಮದಾಗಿದೆ. ಈ ಹಿನ್ನಲೆಯಲ್ಲಿ ವಾರ್ಷಿಕ 48 ಸಾವಿರ ರೂಪಾಯಿಗಳಿಂದ 60 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡಿ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಮಾಡಿದ್ದ ಘೋಷಣೆ ಈಗಾಗಲೇ ಜಾರಿಯಾಗಿದೆ.

ಆದರೆ, ಆ ಹಣವನ್ನು ಪಡೆಯುವ ಪ್ರಕ್ರಿಯೆ ಬಹಳ ಕ್ಲಿಷ್ಟಕರವಾಗಿತ್ತು. ಈ ಹಿನ್ನಲೆಯಲ್ಲಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವಂತೆ ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡಲಾಗಿತ್ತು. ಈ ಸೂಚನೆಯ ಅನ್ವಯ ಇಂದು ಸುತ್ತೋಲೆಯನ್ನು ಹೊರಡಿಸಲಾಗಿದ್ದು, 2 ಕಂತುಗಳಲ್ಲಿ ತಸ್ತೀಕ್‌ ಮತ್ತು ವರ್ಷಾಸನವನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ, ಬಿಲ್ಲುಗಳಿಗೆ ಜಿಲ್ಲಾಧಿಕಾರಿಗಳ ಮೇಲು ಸಹಿ ಪಡೆಯುವುದಕ್ಕೂ ವಿನಾಯಿತಿ ನೀಡಲಾಗಿದೆ ಎಂದು ಮಾನ್ಯ ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾ ಅ ಜೊಲ್ಲೆ ತಿಳಿಸಿದರು.

ತಸ್ತೀಕ್‌ ಮತ್ತು ವರ್ಷಾಸನ ಅನುದಾನದ ಬಿಲ್ಲುಗಳನ್ನು ತಹಸೀಲ್ದಾರ್‌ ಹಂತದಲ್ಲಿ ತಯಾರಿಸಿ ಜಿಲ್ಲಾಧಿಕಾರಿಗಳ ಮೇಲು ಸಹಿ ಇಲ್ಲದೇ ನೇರವಾಗಿ ಖಜಾನೆಗೆ ಸಲ್ಲಿಸುವ ಮೂಲಕ ಅನುದಾನವನ್ನು ವಿಳಂಬಕ್ಕೆ ಆಸ್ಪದವಿಲ್ಲದೇ ವಿನಿಯೋಗಿಸಿಕೊಳ್ಳಲು ಅನುಮತಿ ನೀಡಲಾಗಿದೆ. ತಸ್ತೀಕ್‌ ಮೊತ್ತ ಆಯುಕ್ತರಿಂದ ಅನುದಾನ ಬಿಡುಗಡೆ ಮಾಡಿದ 15 ದಿನಗಳ ಒಳಗಾಗಿ ಖಜಾನೆಯಿಂದ ವಿನಿಯೋಗಿಸಿಕೊಳ್ಳಲು ಇಲಾಖೆ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.