ತಪ್ಪಿನಿಂದ ರಕ್ಷಣೆ ಪಡೆಯಲು ಇ.ಡಿ. ವಿರುದ್ಧ ಕಾಂಗ್ರೆಸ್ ಪಕ್ಷದ ಪ್ರತಿಭಟನೆ- ಡಾ|| ಸಿ.ಎನ್. ಅಶ್ವತ್ಥನಾರಾಯಣ
ಬೆಂಗಳೂರು: ಕಾಂಗ್ರೆಸ್ ಪಕ್ಷವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆದ ತಪ್ಪಿನಿಂದ ರಕ್ಷಣೆ ಪಡೆಯಲು ಇ.ಡಿ. ವಿರುದ್ಧ ಆಂದೋಲನ, ಹೋರಾಟ ಮಾಡುತ್ತಿದೆ. ಈ ಬ್ಲ್ಯಾಕ್‍ಮೇಲ್ ತಂತ್ರವನ್ನು ಖಂಡಿಸುವುದಾಗಿ ರಾಜ್ಯದ ಉನ್ನತ ಶಿಕ್ಷಣ, ಐಟಿ ಹಾಗೂ ಬಿಟಿ ಸಚಿವ ಡಾ|| ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಈ ವಿಚಾರದಲ್ಲಿ ಅನುಭವ ಉಳ್ಳವರು. ಇ.ಡಿ. ಯಿಂದ ತನಿಖೆಗೆ ಒಳಗಾದವರು ಎಂದ ಅವರು, ಇ.ಡಿ. ತನಿಖೆಗೆ ಕಾಂಗ್ರೆಸ್ ಪಕ್ಷ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಆರೋಪಗಳು ರಾಜಕೀಯ ಪ್ರೇರಿತವಾಗಿವೆ. ನಮ್ಮನ್ನು ಪ್ರಶ್ನಿಸಬೇಡಿ, ವಿಚಾರಣೆಗೆ ಕರೆಯಬೇಡಿ ಎಂದರೆ ಹೇಗೆ ಎಂದು ಕೇಳಿದರಲ್ಲದೆ, ಇದರ ವಿರುದ್ಧ ಜನಜಾಗೃತಿ ಮೂಡಿಸಲು ಈ ಪತ್ರಿಕಾಗೋಷ್ಠಿ ನಡೆಸಲಾಗುತ್ತಿದೆ ಎಂದರು.
ನಾವು ಭ್ರಷ್ಟಾಚಾರದ ವಿರುದ್ಧ ಇದ್ದೇವೆ. ಯಾವುದೇ ಪಕ್ಷದ ಭ್ರಷ್ಟಾಚಾರಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ ಹಾಗೂ ಅದರಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.
ಈ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, 60 ವರ್ಷ ಆಡಳಿತ ನಡೆಸಿದವರೆ ಕಾನೂನಿನ ಅರಿವಿಲ್ಲವೇ ಎಂದು ಪ್ರಶ್ನಿಸಿದರಲ್ಲದೆ, ಪ್ರತಿಭಟನೆ ನಡೆಸುವವರು ಮುಂದೆ ತಿಹಾರ್ ಜೈಲು ಸೇರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇ.ಡಿ. ಸ್ವಾಯತ್ತತೆ ಹೊಂದಿದ ಸಂಸ್ಥೆ. ಅದಕ್ಕೆ ಬೆದರಿಕೆ ಹಾಕುವುದು ಎಷ್ಟು ಸರಿ ಎಂದು ಅವರು ಕೇಳಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಕೈ ಬದಲಾವಣೆ, ಅಧಿಕಾರ ದುರ್ಬಳಕೆ ಕುರಿತಂತೆ ಇ.ಡಿ. ತನಿಖೆ ಆಗುತ್ತಿದೆ. ಈ ಪತ್ರಿಕೆ ಆರಂಭಕ್ಕೆ ಸಂಬಂಧಿಸಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಸಂಸ್ಥೆಯನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿಸಲಾಗಿತ್ತು. 5 ಸಾವಿರಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ಇದಕ್ಕೆ ಬಂಡವಾಳ ಹೂಡಿ ಷೇರು ಖರೀದಿಸಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ಕೊಡಲು ಈ ಪತ್ರಿಕೆ ಸ್ಥಾಪಿಸಲಾಗಿತ್ತು ಎಂದು ವಿವರಿಸಿದರು.
ಈ ಪತ್ರಿಕೆಯನ್ನು ಮತ್ತು ಕಚೇರಿಗಳನ್ನು 2008ರಲ್ಲಿ ಮುಚ್ಚಲಾಗಿತ್ತು. 2010ರಲ್ಲಿ ಯಂಗ್ ಇಂಡಿಯನ್ ಸಂಸ್ಥೆಯ ಮೂಲಕ ನ್ಯಾಷನಲ್ ಹೆರಾಲ್ಡ್ ಮತ್ತು ಎಜೆಎಲ್ ಅನ್ನು ಕೊಂಡುಕೊಳ್ಳಲಾಗಿತ್ತು. 2 ಸಾವಿರ ಕೋಟಿಗೂ ಹೆಚ್ಚು ಬೆಲೆಯ ಈ ಸಂಸ್ಥೆಯನ್ನು ಕೇವಲ 50 ಲಕ್ಷ ರೂಪಾಯಿಗೆ ಯಂಗ್ ಇಂಡಿಯನ್ ಸಂಸ್ಥೆಗೆ ಹಸ್ತಾಂತರ ಮಾಡಲಾಗಿತ್ತು ಎಂದು ತಿಳಿಸಿದರು.
ಯಂಗ್ ಇಂಡಿಯನ್ ಸಂಸ್ಥೆಯಲ್ಲಿ 74 ಶೇಕಡಾ ಷೇರುಗಳನ್ನು ಶ್ರೀಮತಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೊಂದಿದ್ದರೆ ಉಳಿದ 26 ಶೇಕಡಾ ಷೇರುಗಳನ್ನು ಮೋತಿಲಾಲ್ ವೋರಾ, ಸ್ಯಾಮ್ ಪಿತ್ರೋಡಾ ಮತ್ತು ಆಸ್ಕರ್ ಫರ್ನಾಂಡಿಸ್ ಹೊಂದಿದ್ದರು ಎಂದರು.
ಕಂಪನಿ ಲಪಟಾಯಿಸುವ ಪ್ರಯತ್ನ ನಡೆಯಿತು. ಇದರ ವಿರುದ್ಧ ಸುಬ್ರಹ್ಮಣ್ಯನ್ ಸ್ವಾಮಿ ಅವರು ಕೋರ್ಟ್‍ನಲ್ಲಿ ಪ್ರಶ್ನಿಸಿದರು. 2011ರಲ್ಲಿ ಇ.ಡಿ. ತನಿಖೆಗೆ ಆದೇಶ ಮಾಡಲಾಗಿದೆ. ಆಗ ಯು.ಪಿ.ಎ. ಸರಕಾರ ಅಧಿಕಾರದಲ್ಲಿ ಇತ್ತು. ಆದ್ದರಿಂದ ತನಿಖೆಯಲ್ಲಿ ಬಿಜೆಪಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಅಧಿಕಾರ ಹಸ್ತಕ್ಷೇಪದ ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಪಕ್ಷ. ಅವರಲ್ಲಿ ಪ್ರಾಮಾಣಿಕತೆ, ನೈತಿಕತೆ, ರಾಷ್ಟ್ರೀಯತೆ, ದೇಶಪ್ರೇಮ ಇಲ್ಲ. ಸಮನ್ಸ್ ವಿರುದ್ಧ ಬೀದಿಗಳಲ್ಲಿ ಪ್ರತಿಭಟನೆ ಮಾಡಿ ಏನು ಸಂದೇಶ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ನಾವು ಭ್ರಷ್ಟಾಚಾರ ಮಾಡಿದರೂ ನಮಗೇನೂ ಮಾಡಬಾರದು; ನಾವು ಕಾನೂನಿನಿಂದ ದೊಡ್ಡವರು ಎಂಬ ಧೋರಣೆ ಸರಿಯೇ ಎಂದು ಕೇಳಿದರು. ಆಂದೋಲನಗಳು ರಾಜಕೀಯ ಪ್ರೇರಣೆಯಿಂದ ಕೂಡಿವೆ ಎಂದು ಆಕ್ಷೇಪಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಅವರು ಈ ಸಂಬಂಧ ಪ್ರಶ್ನೆಗೆ ಉತ್ತರಿಸಿ, ಅಕ್ರಮಗಳನ್ನು ಯಾರೂ ತನಿಖೆ ಮಾಡಲೇಬಾರದು ಎಂಬ ಚಿಂತನೆ ಸರಿಯೇ ಎಂದು ಕೇಳಿದರು. ಇಲಾಖೆಯ ಬಾಯಿ ಮುಚ್ಚಿಸುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡಬಾರದು ಎಂದು ತಿಳಿಸಿದರು.
ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ತೋಟಗಾರಿಕಾ ಸಚಿವ ಎನ್.ಮುನಿರತ್ನ ಅವರು ಹಾಜರಿದ್ದರು.