IMG 20221220 WA0044

ಬೆಳಗಾವಿ:ಮೆಟ್ರೋ ರೈಲು ಯೋಜನೆ ಹಂತ-2ರ ಕಾಮಗಾರಿಯನ್ನು 2024ರೊಳಗೆ ಪೂರ್ಣಗೊಳಿಸಲು ಗಡುವು…!

Genaral STATE

*ಮೆಟ್ರೋ ರೈಲು ಯೋಜನೆ ಹಂತ-2ರ ಕಾಮಗಾರಿಯನ್ನು 2024ರೊಳಗೆ ಪೂರ್ಣಗೊಳಿಸಲು ಗಡುವು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಳಗಾವಿ, ಸುವರ್ಣಸೌಧ. ಡಿ.29 (ಕರ್ನಾಟಕ ವಾರ್ತೆ): ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2ರ ಕಾಮಗಾರಿಯನ್ನು 2024ರೊಳಗೆ ಪೂರ್ಣಗೊಳಿಸಲು ಗಡುವು ನೀಡಿ ಕ್ರಮವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು. 

ಪರಿಷತ್ತಿನಲ್ಲಿ ಇಂದು ಸದಸ್ಯ ಡಾ.ಕೆ.ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಮೆಟ್ರೋ ರೈಲು ಮಾರ್ಗವನ್ನು ವಿಮಾನನಿಲ್ದಾಣಕ್ಕೆ ಜೋಡಿಸುವ ಕಾರ್ಯವನ್ನು ವರ್ಷದೊಳಗೆ ಮಾಡಲು ಸೂಚಿಸಲಾಗಿದೆ. ಇನ್ನುಳಿದ ಕಾಮಗಾರಿಯನ್ನು ಸಹ ನಿಗದಿತ ಅವಧಿಯೊಳಗಡೆ ನಡೆಸಲು ಮತ್ತು ಸುವ್ಯವಸ್ಥಿತವಾಗಿ ಮೇಲ್ವಿಚಾರಣೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಲಾಕಡೌನ್ ಮತ್ತು ಇನ್ನೀತರ ಕೆಲವಿಷಯಗಳಿಂದಾಗಿ ಮೆಟ್ರೋ ಕಾಮಗಾರಿ ವಿಳಂಬವಾಗಿತ್ತು. ಪ್ರಸ್ತುತ 6 ಮಾರ್ಗಗಳಲ್ಲಿ 2 ಮಾರ್ಗಗಳನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದೆ. ಹಾಗೂ 3 ಮಾರ್ಗಗಳನ್ನು 2023ರಲ್ಲಿ ಕಾರ್ಯಾರಂಭ ಮಾಡಲು ಯೋಜಿಸಲಾಗಿದೆ. ಮತ್ತು ಬಾಕಿ ಉಳಿದ ಇನ್ನೊಂದು ಮಾರ್ಗವನ್ನು ಮಾರ್ಚ್-2025ರಲ್ಲಿ ಕಾರ್ಯಾರಂಭ ಮಾಡಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು. 

ಬಾಕಿ ಅನುದಾನ ನೀಡುತ್ತೇವೆ: ದಾವಣಗೆರೆ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಬಾಕಿ ಹಣ ಒದಗಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ. ಅಲ್ಪಸಂಖ್ಯಾತರ ಇಲಾಖೆಯ ಸಚಿವರು ಮತ್ತು ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೆಚ್ಚುವರಿಯಾಗಿ ಮತ್ತೊಂದು ಮೌಲಾನಾ ಆಜಾದ್ ಶಾಲೆಯನ್ನು ಮಂಜೂರಿ ಮಾಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು, ಸದಸ್ಯರಾದ ಕೆ.ಅಬ್ದುಲ್ ಜಬ್ಬರ್ ಅವರ ಪ್ರಶ್ನೆಗೆ ಉತ್ತರಿಸಿದರು. 

ತೊಡಕುಗಳ ಕಡಿವಾಣಕ್ಕೆ ಕ್ರಮ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನ ಪ್ರಕ್ರಿಯೆಯು ಸುಗಮವಾಗಿ ನಡೆಯುವಂತೆ ಮತ್ತು ತೊಡಕುಗಳಿಗೆ ಕಡಿವಾಣ ಹಾಕಲು ಕೆಲವು ನಿಯಮಗಳನ್ನು ಮಾಡಿದ್ದೇವೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ದಾಖಲಾದ ಕೆಲವು ಪ್ರಕರಣಗಳನ್ನು ಸಮರ್ಥವಾಗಿ ಎದುರಿಸುತ್ತೇವೆ. ಭೂಸ್ವಾಧೀನ ಪ್ರಕ್ರಿಯೆಯ ವಿಳಂಬಾತಿಗೆ ಕಾರಣ ಯಾರು ಎಂಬುದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ವಹಿಸುವುದಾಗಿ ಸದಸ್ಯರಾದ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದರು.