IMG 20220716 145455 scaled

ಕ್ರಿಕೆಟ್ : ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಗೆ ಚಾಲನೆ….!

SPORTS

ಆಗಸ್ಟ್‌ 7 ರಿಂದ ಮೈಸೂರಿನಲ್ಲಿ ಆರಂಭಗೊಳ್ಳಲಿರುವ ಕ್ರಿಕೆಟ್‌ ಸಂಭ್ರಮದಲ್ಲಿ ಒಟ್ಟು ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಬೆಂಗಳೂರು : ಯುವ ಕ್ರಿಕೆಟಿಗರಿಗೆ ಉತ್ತಮ ಅವಕಾಶವನ್ನು ಕಲ್ಪಿಸುವುದಕ್ಕೆ ಬದ್ಧವಾಗಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಯು ಮೈಸೂರಿನ ಮಹಾರಾಜರು, ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮಾಜಿ  ಅಧ್ಯಕ್ಷರೂ ಆಗಿದ್ದ  ಶ್ರಿಕಂಠದತ್ತ ನರಸಿಂಹರಾಜ ಒಡೆಯರ್‌ ಸ್ಮರಣಾರ್ಥ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸಲಿದೆ. ಟೂರ್ನಿಯು ಆಗಸ್ಟ್‌ 7 ರಿಂದ ಆಗಸ್ಟ್‌ 26ರ ವರೆಗೆ ನಡೆಯಲಿದೆ.

ರಾಜ್ಯ ಕ್ರಿಕೆಟ್‌ ಸಂಸ್ಥೆಯ ಗೌರವ ಅಧ್ಯಕ್ಷ ರೋಜರ್‌ ಬಿನ್ನಿ, ಗೌರವ ಕಾರ್ಯದರ್ಶಿ  ಸಂತೋಷ್‌ ಮೆನನ್‌ ಹಾಗೂ ಗೌರವ ಖಜಾಂಚಿ ವಿನಯ್‌ ಮೃತ್ಯುಂಜಯ ಅವರು ಟ್ರೋಫಿ ಹಾಗೂ ಲಾಂಚನ ಬಿಡುಗಡೆ ಮಾಡಿದರು.

IMG 20220716 145957

2005ರಲ್ಲಿ ಬ್ರಾಡ್ಮನ್‌ ಕಪ್‌ ಟೂರ್ನಿ ನಡೆಸುವ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಟಿ20 ಕ್ರಿಕೆಟ್‌ ಆಯೋಜಿಸಿದ ಕೀರ್ತಿಗೆ ಪಾತ್ರವಾಗಿರುವುದನ್ನು ನೆನಪಿಸಿಕೊಂಡ ರೋಜರ್‌ ಬಿನ್ನಿ, “ಕ್ರಿಕೆಟ್‌ನ ಎಲ್ಲ ಹೊಸ ಮಾದರಿಯಗೆ ಕೆಎಸ್‌ಸಿಎ ಮುನ್ನುಡಿ ಬರೆದಿದೆ, 2005ರಲ್ಲಿ ಬ್ರಾಡ್ಮನ್‌ ಕಪ್‌ ನಡೆಸುವ ಮೂಲಕ ಭಾರತಕ್ಕೆ ಟಿ20 ಕ್ರಿಕೆಟ್‌ನ ರುಚಿಯನ್ನು ನೀಡಿತು. ಅದೇ ರೀತಿ 2009ರಲ್ಲಿ ಕರ್ನಾಟಕ ಪ್ರೀಮಿಯರ್‌ ಲೀಗ್‌ ಆರಂಭಿಸಿ ಎಂಟು ಯಶಸ್ವಿ ವರ್ಷಗಳನ್ನು ನಾವು ಯಶಸ್ವಿಗೊಳಿಸಿ, ಹಲವಾರು ಪ್ರತಿಭಾವಂತ ಯುವ ಕ್ರಿಕೆಟಿಗರು ಮಿಂಚಿರುವುದನ್ನು ನಾವು ನೋಡಿದ್ದೇವೆ. ನಮ್ಮ ಕ್ರಿಕೆಟಿಗರಿಗೆ ನಿರಂತರ ಅವಕಾಶ ನೀಡುವುದು ಮತ್ತು ಅವರ ಕ್ರಿಕೆಟ್‌ ಬದುಕಿನಲ್ಲಿ ಉನ್ನತ ಹಂತಕ್ಕೆ ಸಜ್ಜಾಗಲು ವೇದಿಕೆ ನೀಡುವ ಉದ್ದೇಶದಿಂದ ನಾವು ಈ ಬಾರಿ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಆಯೋಜಿಸುತ್ತಿದ್ದೇವೆ,” ಎಂದರು.

1983ರ ಐಸಿಸಿ ವಿಶ್ವಕಪ್‌ ವಿಜೇತ ಭಾರತ ತಂಡದ ಆಲ್ರೌಂಡರ್‌ ಬಿನ್ನಿ ಅವರು ಇದೇ ಸಂದರ್ಭದಲ್ಲಿ ಲಾಂಚನ ಮತ್ತು ಮಹಾರಾಜ ವಿಷಯಾಧಾರಿತ ಟ್ರೋಫಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಲೋಹದಲ್ಲಿ ಅತ್ಯಂತ ಸೂಕ್ಮ್ಚವಾಗಿ ಕೆತ್ತಲಾಗಿರುವ ಈ ಟ್ರೋಫಿಯಲ್ಲಿ 11 ರೆಕ್ಕೆಗಳಿದ್ದು, ಇದು ಕ್ರಿಕೆಟ್‌ ತಂಡದಲ್ಲಿರುವ ಒಟ್ಟು ಆಟಗಾರರನ್ನು ಪ್ರತಿನಿಧಿಸುತ್ತದೆ.

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಮತ್ತು ಮಂಗಳೂರು ಸೇರಿದಂತೆ ಒಟ್ಟು ಆರು ತಂಡಗಳು ಪ್ರತಿಷ್ಠಿತ ಮಹಾರಾಜ ಟ್ರೋಫಿಗಾಗಿ ಹೋರಾಟ ನಡೆಸಲಿವೆ. “ಮಹಾರಾಜ ಟ್ರೋಫಿ ಟಿ20 ಟೂರ್ನಿಯು ಆಗಸ್ಟ್‌7 ರಂದು ಮೈಸೂರಿನಲ್ಲಿ ಆರಂಭಗೊಳ್ಳಲಿದೆ. ಮೊದಲ ಹಂತದ ಪಂದ್ಯಗಳು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅಂಗಣದಲ್ಲಿ ನಡೆಯಲಿದೆ. ಮೈಸೂರಿನಲ್ಲಿ ಒಟ್ಟು 18 ಪಂದ್ಯಗಳು ನಡೆಯಲಿದ್ದು, ಫೈನಲ್‌ ಸೇರಿಂದತೆ 16 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ,” ಎಂದು  ಕೆಎಸ್‌ಸಿಎ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಮೆನನ್‌ ಹೇಳಿದರು.  

IMG 20220716 WA0025

“35 ವರ್ಷ ವಯೋಮಿತಿಯ ಎಲ್ಲ ಉತ್ತಮ ಶ್ರೇಷ್ಠ ದರ್ಜೆಯ ಕ್ರಿಕೆಟಿಗರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ಆಟಗಾರರನ್ನು ಡ್ರಾಫ್ಟ್‌ ಮೂಲಕ ಆಯ್ಕೆ ಮಾಡಲಾಗುವುದು. ತಂಡಲಗಳಿಗೆ ನಾಯಕರು ಮತ್ತು ಉಪನಾಯಕರನ್ನು ಕೆಎಸ್‌ಸಿಎ ಶಿಫಾರಸುಗೊಳಿಸಲಿದೆ, ಪ್ರತಿಯೊಂದು ತಂಡಕ್ಕೂ ಸಹಾಯಕ ಸಿಬ್ಬಂದಿಯನ್ನು ನಾವು ನಿಯೋಜಿಸಲಿದ್ದೇವೆ,” ಎಂದು ಮೆನನ್‌ ಹೇಳಿದರು.

ಎರಡು ವಾರಗಳ ಕಾಳ ನಡೆಯುವ ಕ್ರಿಕೆಟ್‌ ಸಂಭ್ರಮದಲ್ಲಿ ರಾಜ್ಯದ ಉದಯೋನ್ಮುಖ ಆಟಗಾರರಿಗೆ ಉತ್ತಮ ವೇದಿಕೆ ಸಿಗಲಿದೆ. ಮನೆಯಂಗಣದ ಪ್ರೇಕ್ಷಕರ ಸಮ್ಮುಖದಲ್ಲಿ ಮಿಂಚುವ ಅವಕಾಶ ಇದಾಗಿದ್ದು, ಪ್ರತಿಯೊಂದು ಪಂದ್ಯವು ಸ್ಟಾರ್‌ ಸ್ಪೋರ್ಟ್ಸ್‌2 ಮತ್ತು ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡದಲ್ಲಿ ನೇರ ಪ್ರಸಾರವಾಗೊಳ್ಳಲಿದೆ. ಫ್ಯಾನ್‌ಕೋಡ್‌ ಆಪ್‌ನಲ್ಲಿಯೂ ನೇರಪ್ರಸಾರವಾಗಲಿದೆ. “ಸೈಕಲ್‌ ಅಗರ್‌ಬತ್ತಿಸ್‌, ಕಲ್ಯಾಣಿ ಮೋಟಾರ್ಸ್‌, ಜಿಂದಾಲ್‌ ಸ್ಟೀಲ್ಸ್‌, ಫಿಜಾ ಡೆವಲಪ್ಪರ್ಸ್‌ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್‌ ಪ್ರೈ. ಲಿ., ಗುಲ್ಬರ್ಗಾ ಮೆಗಾಸ್ಪೀಡ್‌ ಮತ್ತು ಮೈಕಾನ್‌ ಎಂಜಿನಿಯರ್ಸ್‌ (ಹುಬ್ಬಳ್ಳಿ) ಇವರು ಅನುಕ್ರಮವಾಗಿ, ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಮತ್ತು ರಾಯಚೂರು ತಂಡಗಳ ಪ್ರಾಯೋಜಕರಾಗಿರುತ್ತಾರೆ, ಶಿವಮೊಗ್ಗ ತಂಡದ ಪ್ರಾಯೋಜಕರನ್ನು ನಾವು ಸದ್ಯದಲ್ಲಿಯೇ ಅಂತಿಮಗೊಳಿಸಲಿದ್ದೇವೆ,” ಎಂದು ಕೆಎಸ್‌ಸಿಎ ಖಜಾಂಚಿ ವಿನಯ್‌ ಮೃತ್ಯುಂಜಯ ಹೇಳಿದರು.

“ಆಡುವ XI ಆಯ್ಕೆಯಲ್ಲಿ ಅಥವಾ ಆಟಕ್ಕೆ ಸಂಬಂಧಿಸಿದ ಇನ್ನಾವುದೇ ವಿಷಯದಲ್ಲಿ ತಂಡದ ಪ್ರಾಯೋಜಕರ ಹಸ್ತಕ್ಷೇಪ ಇರುವುದಿಲ್ಲ. ಎಲ್ಲ ವ್ಯಾವಹಾರಿಕ ಮತ್ತು ಕ್ರಿಕೆಟಿಗೆ ಸಂಬಂಧಿತ ಹಕ್ಕುಗಳು ಕೇವಲ ಕೆಎಸ್‌ಸಿಎಗೆ ಸೇರಿರುತ್ತದೆ,” ಎಂದು ವಿನಯ್‌ ಮೃತ್ಯುಂಜಯ ಹೇಳಿದರು.

ಕರ್ನಾಟಕ ಶ್ರೇಷ್ಠ ಕ್ರಿಕೆಟಿಗರಾದ ದೇವದತ್ತ ಪಡಿಕ್ಕಲ್‌, ಶೃೇಯಸ್‌ ಗೋಪಾಲ್‌, ಕೆ. ಗೌತಮ್‌, ಮನೀಶ್‌ ಪಾಂಡೆ, ಜೆ. ಸುಚಿತ್‌, ಕರುಣ್‌ ನಾಯರ್‌, ಮಯಾಂಕ್‌ ಅಗರ್ವಾಲ್‌, ಅಭಿನವ್‌ ಮನೋಹರ್‌, ಕೆ.ಸಿ. ಕಾರಿಯಪ್ಪ, ಪ್ರವೀಣ್‌ ದುಬೆ ಮತ್ತು ಅಭಿಮನ್ಯು ಮಿಥುನ್‌ ಮಹಾರಾಜ ಟ್ರೋಫಿಯಲ್ಲಿ ಆಡುವ ನಿರೀಕ್ಷೆ ಇದೆ.