4b9d41dd f88d 493d bf55 1e590c305d31

ಸೂತಕದಲ್ಲಿ ಸಂಭ್ರಮಾಚರಣೆಯೇ ಈ ಸರ್ಕಾರದ ಸಾಧನೆ- ಡಿಕೆಶಿ

STATE POLATICAL

ಬೆಂಗಳೂರು :-  ಬಿಜೆಪಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಅವರು ತಮ್ಮ ಸಾಧನೆ ಕುರಿತು ಬಣ್ಣ ಬಣ್ಣವಾಗಿ ಜಾಹೀರಾತು ನೀಡುತ್ತಿದ್ದಾರೆ. ಅವು ಕಿವಿಗೆ ಹಿಂಪಾಗಿದೆಯೇ ಹೊರತು ವಾಸ್ತವದಲ್ಲಿ ಅವರ ಸಾಧನೆ ಶೂನ್ಯ. ಸೂತಕದಲ್ಲಿ ಸಂಭ್ರಮಾಚರಣೆಯೇ ಈ ಸರ್ಕಾರದ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು  ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ತಿಳಿಸಿದರು.

– ಈ ಸರ್ಕಾರದ ಒಂದು ವರ್ಷದ ಆಟ ಹೇಗಿತ್ತು ಎಂದರೆ, ಮೊದಲ ತಿಂಗಳು ಮಂತ್ರಿ ಮಂಡಲವಿಲ್ಲದೇ ತಿಕ್ಕಾಟ, ಎರಡನೇ ತಿಂಗಳು ನೆರೆ ಪರಿಹಾರ ಇಲ್ಲದೇ ನರಳಾಟ, ಮೂರನೇ ತಿಂಗಳು, ಉಪ ಚುನಾವಣೆ ಬಯಲಾಟ. ನಾಲ್ಕನೇ ತಿಂಗಳು ಮಂತ್ರಿಮಂಡಲ ರಚನೆ ದೊಂಬರಾಟ, ಐದನೇ ತಿಂಗಳು ಮಂತ್ರಿಗಿರಿಗಾಗಿ ಕಿತ್ತಾಟ, ಏಳು-ಎಂಟನೇ ತಿಂಗಳಲ್ಲಿ ಕೊವಿಡ್- ಲಾಕ್ ಡೌನ್ ಎಂಬ ಅಲೆದಾಟ, ಒಂಬತ್ತು- ಹತ್ತರಲ್ಲಿ ಕೊರೋನಾ ಕೊರೋನಾ ಕಿರುಚಾಟ, ಹನ್ನೊಂದು-ಹನ್ನೆರಡರಲ್ಲಿ ಲೂಟಿಯ ಆಟ ನಡೆಯಿತು. ಇದು ಈ ಸರ್ಕಾರದ ಒಂದು ವರ್ಷದ ಸಾಧನೆ.

– ಇವತ್ತು ಅವರು ಬಿಡುಗಡೆ ಮಾಡಿರುವ ಸಾಧನೆ ಪಟ್ಟಿ ಕೇವಲ ಸುಳ್ಳಿನ ಸರಮಾಲೆ. ಅವರು ನೀಡಿರುವ ಪಟ್ಟಿಯಲ್ಲಿ ಯಾವುದೂ ಜನರನ್ನು ತಲುಪಿಲ್ಲ.

– ನೆರೆ ಪರಿಹಾರ ವಿಚಾರದಲ್ಲಿ ಯಾರಿಗೆ ಮನೆ ಕಟ್ಟುಕೊಡ್ತೀವಿ, ಹಣ ಕೊಡ್ತೀವಿ ಅಂದಿದ್ದರೋ ಈಗಲೂ ಆಭಾಗಕ್ಕೆ ಹೋಗಿ ನೋಡಿ ಯಾರಿಗೂ ಅದು ತಲುಪಿಲ್ಲ. ಮುಖ್ಯ ಕಾರ್ಯದರ್ಶಿಗಳು 33 ಸಾವಿರ ಕೋಟಿ ನಷ್ಟ ಆಗಿದೆ ಅಂತಾ ಹೇಳಿದರು. ಆದರೆ ಕೇಂದ್ರದಿಂದ ಬಂದಿದ್ದು, 1800 ಕೋಟಿ. ಅಮಿತ್ ಶಾ ಬಳಿ 5 ಸಾವಿರ ಕೋಟಿ ಮಧ್ಯಂತರ ಪರಿಹಾರ ಕೇಳಿದರು. ಅದು ಸಿಗಲಿಲ್ಲ. ಮುಖ್ಯಮಂತ್ರಿಗಳು 10 ನಿಮಿಷದಲ್ಲಿ ನೆರೆ ಪರಿಶೀಲನೆ ಮಾಡಿದ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

– ಕೊರೋನಾ ಸಂದರ್ಭದಲ್ಲಿ ಎಲ್ಲ ವರ್ಗದ ಜನರಿಗೆ ಸಹಾಯ ಮಾಡ್ತೀವಿ ಎಂದು ಬಿಜೆಪಿಯವರು ಹೇಳಿದರು. 1600 ಕೋಟಿ ಘೋಷಣೆಯಲ್ಲಿ ಯಾರಿಗೆ ಎಷ್ಟು ತಲುಪಿದೆ ಅಂತಾ ಪಟ್ಟಿ ಕೊಡಿ. ಜಾಹೀರಾತಿನಲ್ಲಿ ಎಲ್ಲರಿಗೂ ಹಣ ತಲುಪಿರುವ ರೀತಿ ಪ್ರಚಾರ ಪಡೆಯುತ್ತಿದ್ದೀರಲ್ಲಾ ಎಲ್ಲರಿಗೂ ಪರಿಹಾರ ಸಿಕ್ಕಿದೆಯೇ? ಅವರು ಸತ್ತ ಮೇಲೆ ಹಣ ಕೊಡ್ತೀರಾ?

– ರೈತರಿಗೆ ಸಾವಿರಾರು ಕೊಟಿ ನಷ್ಟ ಆಗಿದೆ. ನಿಮ್ಮ ಸಾಧನೆ ಪಟ್ಟಿಯಲ್ಲಿ ನೀವು ಯಾವ ರೈತನ ಬೆಳೆ ಖರೀದಿಸಿದ್ದೀರಿ, ಎಷ್ಟು ಜನರಿಗೆ ಪರಿಹಾರ ನೀಡಿದ್ದೀರಿ, ಯಾರಿಗೆ ಬೆಂಬಲ ಬೆಲೆ ನೀಡಿದ್ದೀರಿ ಅಂತಾ ಪಟ್ಟಿ ಕೊಡಿ.

– ವಿರೋಧ ಪಕ್ಷವಾಗಿ ನಾವು ಶ್ವೇತಪತ್ರ ಕೇಳುವುದು ತಪ್ಪಾ? ನೀವು ಮಾಡಿದ ಭ್ರಷ್ಟಾಚಾರಕ್ಕೆ ಲೆಕ್ಕ ಕೊಡಿ, ಉತ್ತರ ಕೊಡಿ ಎಂದು ಕೇಳೋದು ತಪ್ಪಾ? ನೀವು ಸಹಕಾರ ಕೊಡಿ ಅಂತಾ ಕೇಳುತ್ತಿದ್ದೀರಲ್ಲಾ ನಿಮ್ಮ ಭ್ರಷ್ಟಾಚಾರಕ್ಕೆ ನಾವು ಸಹಕಾರ ನೀಡಬೇಕಾಮುಖ್ಯಮಂತ್ರಿಗಳೇ?

– ಈ ದೇಶದ ಪ್ರಧಾನಿಗಳು ನಮ್ಮ ಸರ್ಕಾರವನ್ನು 10% ಸರ್ಕಾರ ಎಂದು ಹೇಳಿ ಹೋದರಲ್ಲಾ, ಕೊರೋನಾ ಸಂದರ್ಭದಲ್ಲಿ ನಿಮ್ಮ ಸಚಿವರುಗಳು ತಮ್ಮ ಇಲಾಖೆಯಲ್ಲಿ ಮಾಡಿರುವ ಭ್ರಷ್ಟಾಚಾರ 200, 300, 400% ರಷ್ಟು ತಲುಪಿದೆ. ಇದಕ್ಕೇನು ಹೇಳುತ್ತೀರಾ?

– ಕೇವಲ ನಿಮ್ಮದು ಮಾತ್ರವಲ್ಲ, ನಮ್ಮ ಐದು ವರ್ಷದ ಸರ್ಕಾರ ಹಾಗೂ ಒಂದು ವರ್ಷದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೂ ತನಿಖೆ ಮಾಡಿಸಿ. ನಾವು ಬೇಡ ಅನ್ನುವುದಿಲ್ಲ. ನಾವು ತಪ್ಪು ಮಾಡಿದ್ದರೂ ತಪ್ಪೇ, ನಮ್ಮನ್ನು ಶಿಕ್ಷೆಗೆ ಒಳಪಡಿಸಿ ಗಲ್ಲಿಗಾಕಿ ಯಾರು ಬೇಡ ಅಂದಿದ್ದಾರೆ? ನೀವು ಕೊರೋನಾ ಸಂದರ್ಭದಲ್ಲಿ ಪ್ರತಿ ಇಲಾಖೆಯಲ್ಲಿ ಮಾಡಿದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡುವುದಿಲ್ಲ ಎಂದರೆ ಹೇಗೆ?

– ನೀವು 10100 ಬೆಡ್ ಗಳು ಅಂತಾ ಜಾಹೀರಾತು ಹಾಕಿ ಪ್ರಚಾರ ಪಡೆಯುತ್ತೀರಿ. ಆದರೆ ನಿಮ್ಮ ಅಧಿಕಾರಿಗಳು 6500 ಬೆಡ್ ಗಳು ಅಂತಾ ಹೇಳುತ್ತಾರೆ. ಇದರ ಲೆಕ್ಕ ಕೇಳಬಾರದೇ?

– ಇವತ್ತಿನ ಪತ್ರಿಕೆಯಲ್ಲಿ ವೃದ್ಧಾಪ್ಯ ಹಾಗೂ ವಿಧವಾ ವೇತನಕ್ಕೆ ತಡೆ ಅಂತಾ ಲೇಖನ ಬಂದಿದೆ, ಐದು ತಿಂಗಳು ವಿಳಂಬ ಅಂತಾ ಬಂದಿದೆ ಇದು ನಿಮ್ಮ ಸಾಧನೆನಾ?

– ಎಲ್ಲ ಸಂದರ್ಭದಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ತಿಕ್ಕಾಟ. ನಾವು ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದಿಂದ ಯಾವ ನೆರವು ಸಿಕ್ಕಿದೆ? ನೆರೆ ಬಂದಾಗ ಪ್ರಧಾನಿಗಳು ಯಾಕೆ ಬರಲಿಲ್ಲ? ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಇದೆ ಅಂತಾ ಅಲ್ಲಿಗೆ ಹೋದರು. ಇಲ್ಲಿಗೆ ಯಾಕೆ ಬರಲಿಲ್ಲ?

– ನಮ್ಮ ಸರ್ಕಾರಗಳ ಎಲ್ಲ ಯೋಜನೆಗಳನ್ನು ರದ್ದು ಮಾಡಿದ್ದೇ ನಿಮ್ಮ ಸಾಧನೆ.

– ನಿಮ್ಮ ಸಚಿವರುಗಳ ಮಧ್ಯೆ ಹೊಂದಾಣಿಕೆ ಇದೆಯಾ?

– ನಮ್ಮ ಆರೋಪದ ನಂತರ ನೀವು 5 ಸಚಿವರು ಪತ್ರಿಕಾಗೋಷ್ಠಿ ನಡೆಸಿದಿರಿ. ಒಬ್ಬರು 350 ಕೋಟಿ ಅಂತಾರೆ, ಮತ್ತೊಬ್ಬರು 2000 ಕೋಟಿ ಅಂದರು. ಇನ್ನು ಹಣ ವಿನಿಯೋಗ ಮಾಡಬೇಕಿದೆಯಲ್ಲ ಅದು ಯಾವ ಲೆಕ್ಕಾ?

– ಚಿಕಿತ್ಸಾ ಉಪಕರಣ ಖರೀದಿ ವಿಚಾರದಲ್ಲಿ ಪ್ರಧಾನಮಂತ್ರಿಗಳು ಮಧ್ಯ ಪ್ರವೇಶಿಸಿ ತಾನು ಖರೀದಿಸಿರುವ ಮೊತ್ತ, ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯಗಳ ಖರೀದಿ ಹಾಗೂ ಕರ್ನಾಟಕದ ಖರೀದಿ ವಿಚಾರದಲ್ಲಿ ಹೋಲಿಕೆ ಮಾಡಿ ವರದಿ ಪ್ರಕಟಿಸಬೇಕು. ಅವರಿಗೆ ಸಿಕ್ಕದ್ದು ನಿಮಗೆ ಯಾಕೆ ಸಿಗಲಿಲ್ಲ?

– ಏಪ್ರಿಲ್ 21ರಂದು ವೈದ್ಯಕೀಯ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಆದೇಶವಿದೆ ನೋಡಿ. ಎನ್ 95 ಮಾಸ್ಕ್ ಖರೀದಿ ಮಾಡಿದ್ದು, ಇದರ ಮೊತ್ತ ತೆರಿಗೆ ಹೊರತಾಗಿ ಒಂದಕ್ಕೆ 280 ರೂಪಾಯಿ. ಸ್ಯಾನಿಟೈಸರ್ ಅನ್ನು ಸಮಾಜ ಕಲ್ಯಾಣ ಇಲಾಖೆ 600 ರೂಪಾಯಿಗೆ ಖರೀದಿಸಿದೆ. ಇದು ನಿಮ್ಮ ಸಾಧನೆನಾ? ಇದಕ್ಕೆ ನಮ್ಮ ಸಹಕಾರ ಬೇಕಾ?

– ಇವತ್ತು ರಾಜ್ಯದಲ್ಲಿನ ಭ್ರಷ್ಟಾಚಾರವನ್ನು ರಾಷ್ಟ್ರೀಯ ಮಾಧ್ಯಮಗಳಿಂದ ಹಿಡಿದು ರಾಜ್ಯ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಬಿಜೆಪಿ ಸರ್ಕಾರ ತನ್ನ ಭ್ರಷ್ಟಾಚಾರದಿಂದ ರಾಜ್ಯವನ್ನೇ ಬೆತ್ತಲು ಮಾಡುತ್ತಿದೆ.

– ರೈತರು, ಕಾರ್ಮಿಕರ ಪರಿಸ್ಥಿತಿ ಏನಾಗಿದೆ. 60 ಲಕ್ಷ ಜನ ಇವತ್ತು ಕೆಲಸ ಕಳೆದುಕೊಂಡಿದ್ದಾರೆ. ನೀವು ಸರಿಯಾಗಿ ನೋಡಿಕೊಳ್ಳದಿದ್ದಕ್ಕೆ ಎಲ್ಲರೂ ಬೆಂಗಳೂರು ಬಿಟ್ಟು ಊರು ಸೇರಿಕೊಂಡಿದ್ದಾರೆ. ಎಲ್ಲ ಶ್ರಮಿಕರು, ರಾಷ್ಟ್ರಕಟ್ಟುತ್ತಿದ್ದವರು ಇವತ್ತು ರಾಜ್ಯ ಬಿಟ್ಟು ಹೋಗಿದ್ದಾರೆ. ನೀವು ಅವರಿಗೆ ಧೈರ್ಯ ತುಂಬಿ, ಸರಿಯಾಗಿ ಕಿಟ್ ಕೊಟ್ಟಿದ್ದರೆ ಅವರೇಕೆ ಹೋಗುತ್ತಿದ್ದರು.

– ಈ ಸರ್ಕಾರ ಮಕ್ಕಳಿಗೆ, ಪೋಷಕರಿಗೆ, ನಿರುದ್ಯೋಗ ವಿಚಾರದಲ್ಲಿ, ಆಸ್ಪತ್ರೆಯವರಿಗೆ ಸರಿಯಾಗ ಮಾರ್ಗದರ್ಶನ ನೀಡಲು ಸಾಧ್ಯವಾಗಿಲ್ಲ.

– ಎರಡು ಮೂರು ತಿಂಗಳ ಕಾಲ ಆಶಾ ಕಾರ್ಯಕರ್ತರ ಬಳಿ ಸಮೀಕ್ಷೆ ಮಾಡಿಸಿಕೊಂಡರಲ್ಲಾ ಈಗ ಅವರ ಸಮಸ್ಯೆ ಆಲಿಸಿದ್ದೀರಾ? ಆದರೆ ಒಂದು ವರ್ಷದ ಸಾಧನೆ ಅಂತಾ ಅವರ ಫೋಟೋ ಹಾಕಿಕೊಂಡಿದ್ದೀರಲ್ಲಾ ನಾಚಿಕೆಯಾಗುವುದಿಲ್ಲವೆ?

– ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಈ ಸರ್ಕಾರದ ಸಾಧನೆ ಶೂನ್ಯ.ಭ್ರಷ್ಟಾಚಾರದ ಸರಮಾಲೆ. ಮೆಡಿಕಲ್ ಕಾಲೇಜು, ಖಾಸಗಿ ಆಸ್ಪತ್ರೆಗಳ ಜತೆ ಚರ್ಚೆ ಯಾಕೆ ಮಾಡಲಿಲ್ಲ. ಲಾಕ್ ಡೌನ್ ಅಲ್ಲಿ ತಯಾರಿ ಮಾಡಿಕೊಳ್ಳಲಿಲ್ಲ ಏಕೆ?

– ಯಾವ ಸಾಧನೆ ಮಾಡಿದ್ದೀರಿ ಅಂತಾ ಈ ಸಂಭ್ರಮ. ಉಪಚುನಾವಣೆ ಗೆದ್ದೆವು, ಆಪರೇಷನ್ ಕಮಲ ಯಶಸ್ವಿಯಾಯಿತು, ಅವರನ್ನು ಮಂತ್ರಿ ಮಾಡಿ ಮಾತು ಉಳಿಸಿಕೊಂಡೆ ಅಂತಾ ಹೇಳಿಕೊಳ್ಳಿ ಇವು ನಿಮ್ಮ ಸಾಧನೆ.

ಸರ್ಕಾರದ ಭ್ರಷ್ಟಾಚಾರದ ಬಗ್ಗೆ ರಾಜ್ಯಾದ್ಯಂತ ಬೆಳಕು ಚೆಲ್ಲುತ್ತೇವೆ
ಸರ್ಕಾರದ ಭ್ರಷ್ಟಾಚಾರ ಹಾಗೂ ವೈಫಲ್ಯದ ಕುರಿತಾಗಿ ಇದೇ ತಿಂಗಳು 30ರಿಂದ 2ನೇ ತಾರಿಕಿನವರೆಗೂ ನಾಲ್ಕು ದಿನ ಎಲ್ಲ ಜಿಲ್ಲೆಗಳಲ್ಲಿ ಮಾಧ್ಯಮಗೋಷ್ಠಿ ನಡೆಸಿ ಜನರಿಗೆ ಮಾಹಿತಿ ತಲುಪಿಸಲಾಗುವುದು. ಈ ಸರ್ಕಾರ ಕೊರೋನಾ ಹೆಣದಲ್ಲಿ ಹಣ ಮಾಡಲು ಹೊರಟಿದೆ ಅದನ್ನು ಜನರಿಗೆ ತಿಳಿಸುವ ಕೆಲಸ ನಮ್ಮ ನಾಯಕರು ಮಾಡುತ್ತಾರೆ.

ಕುಮಾರಸ್ವಾಮಿಗೆ ಬೇರೆ ಸಮಯದಲ್ಲಿ ಉತ್ತರ ನೀಡುತ್ತೇನೆ. ಇದು ಬಿಜೆಪಿ ಸರ್ಕಾರದ ವೈಫಲ್ಯದ ಬಗ್ಗೆ ಮಾತ್ರ ಮಾಡುವ ಉದ್ದೇಶದಿಂದ ಈ ಪತ್ರಿಕಾಗೋಷ್ಠಿ ಕರೆದಿದ್ದು, ಅದರ ಬಗ್ಗೆ ಮಾತ್ರ ಮಾತನಾಡುವೆ. ಈ ವಿಚಾರದಲ್ಲಿ ಜನರ ಮಧ್ಯೆ ಹೋಗುತ್ತಿದ್ದು, ಜನತಾ ನ್ಯಾಯಾಲಯವೇ ನೋಡಿಕೊಳ್ಳಲಿದೆ.

ಸರ್ಕಾರಕ್ಕೆ ಅಜೆಂಡಾ ಕೊಟ್ಟಿದ್ದೇ ಕಾಂಗ್ರೆಸ್:
ಆರಂಭದ ದಿನದಲ್ಲಿ ಸರ್ವ ಪಕ್ಷ ಸಭೆ ಕರೆಯಿರಿ ಎಂದು ಹೇಳಿದ್ದಾಗಿನಿಂದ, ರೈತರಿಗೆ ನೆರವಾಗಿ, ಕಾರ್ಮಿಕರಿಗೆ ನೆರವಾಗಿ, ಅವರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿ, ಶ್ರಮಿಕ ರೈಲು ಬಿಡುವಂತೆ, ಅಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದು ಎಲ್ಲ ಹಂತದಲ್ಲೂ ಸರ್ಕಾರಕ್ಕೆ ಅಜೆಂಡಾ ಮಾಡಿ ಕೊಟ್ಟಿರುವುದು ನಾವೇ. ವಿರೋಧ ಪಕ್ಷವಾಗಿ ನಾವು ನಮ್ಮ ಕರ್ತವ್ಯವನ್ನು ಮಾಡಿದ್ದೇವೆ.

ಅವರು ತನಿಖೆಗೆ ಆಗ್ರಹಿಸಿ ಧರಣಿ ಮಾಡಿರಲಿಲ್ಲವೇ:
ನಮ್ಮ ಸರ್ಕಾರ ಇದ್ದಾಗ ಎಲ್ಲ ವಿಚಾರಕ್ಕೂ ತನಿಖೆ ನಡೆಸಿ ಅಂತಾ ಕೇಳಿದ್ದಿರಿ? ಗಣಪತಿ, ರವಿ ಅವರ ಪ್ರಕರಣದಲ್ಲಿ ನಾವು ತನಿಖೆ ನಡೆಸಿಲಿಲ್ಲವೇ? ಸಚಿವರಾಗಿದ್ದ ಜಾರ್ಜ್ ಅವರು ರಾಜೀನಾಮೆ ಕೊಟ್ಟಿರಲಿಲ್ಲವೇ? ತನಿಖೆಗಾಗಿ ಅಹೋರಾತ್ರಿ ಧರಣಿ ಮಾಡಿದ್ದು ನೆನಪಿಲ್ಲವೇ? ಹೋರಾಟ ಮಾಡುವುದು, ತನಿಖೆಗೆ ಆಗ್ರಹಿಸುವುದು, ನೀವು ತಿಂದಿರುವುದನ್ನು ಕಕ್ಕಿಸಬೇಕಾಗಿರುವುದು ನಮ್ಮ ಕರ್ತವ್ಯ. ನಿಮ್ಮ ಬೆದರಿಕೆಗೆ ನಾವು ಹೆದರುವುದಿಲ್ಲ. ನಮ್ಮ ಅವಧಿಯನ್ನು ಸೇರಿಸಿ ತನಿಖೆ ಮಾಡಿಸಿ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ, ವಿಧಾನ ಪರಿಷತ್ ಸದಸ್ಯ ನಾರಾಯಮಸ್ವಾಮಿ, ಮಾಧ್ಯಮ ವಿಭಾಗ ಮುಖ್ಯಸ್ಥ ಬಿ.ಎಲ್ ಶಂಕರ್, ಉಪ ಮುಖ್ಯಸ್ಥ ಸುದರ್ಶನ್ ಉಪಸ್ಥಿತರಿದ್ದರು.