IMG 20220911 WA0026

ಬೆಂಗಳೂರು: ಅರಣ್ಯ ಹುತಾತ್ಮರಿಗೆ 50 ಲಕ್ಷ ಪರಿಹಾರ…!

Genaral STATE

ಅರಣ್ಯ ಹುತಾತ್ಮರ ಪರಿಹಾರ: 30 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳಿಗೆ ಏರಿಕೆ: ಸಿಎಂ ಬೊಮ್ಮಾಯಿ ಘೋಷಣೆ
ಬೆಂಗಳೂರು, ಸೆಪ್ಟೆಂಬರ್ 11: ಅರಣ್ಯ ಹುತಾತ್ಮರ ಕುಟುಂಬಕ್ಕೆ ಸ್ಥಿರತೆ ಮತ್ತು ಭದ್ರತೆ ನೀಡುವ ದೃಷ್ಟಿಯಿಂದ 30 ಲಕ್ಷ ರೂ.ಗಳಿದ್ದ ಪರಿಹಾರದ ಮೊತ್ತವನ್ನು 50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಅವರು ಇಂದು ಅರಣ್ಯ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ 2022 ರಲ್ಲಿ ಭಾಗವಹಿಸಿ ಹುತಾತ್ಮರಿಗೆ ಗೌರವ ಸಲ್ಲಿಸಿ ಮಾತನಾಡಿದರು.

ಹುತಾತ್ಮರಿಗೆ 20 ಲಕ್ಷ ರೂ.ಗಳಿದ್ದ ಪರಿಹಾರವನ್ನು 30 ಲಕ್ಷ ರೂ.ಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೆಚ್ಚಿಸಿದ್ದರು. ಹುತಾತ್ಮರ ನೇಮಕಾತಿ, ಕಲ್ಯಾಣ ಎಲ್ಲವನ್ನೂ ಸರ್ಕಾರ ಅತ್ಯಂತ ಸಹಾನುಭೂತಿಯಿಂದ ಮಾಡಲಿದೆ. ನೀವು ಅರಣ್ಯ ರಕ್ಷಣೆ ಮಾಡಿ, ಸರ್ಕಾರ ನಿಮ್ಮ ರಕ್ಷಣೆ ಮಾಡುತ್ತದೆ ಎಂದರು.

ಶೇ 21 ರಷ್ಟಿರುವ ಅರಣ್ಯ ಪ್ರದೇಶ ಶೇ 30 ರಷ್ಟು ನಮ್ಮ ಗುರಿ.

ರಾಜ್ಯದಲ್ಲಿ ನಾಲ್ಕು ಲಕ್ಷ ಹೆಕ್ಟೇರ್ ಗಿಂತ ಹೆಚ್ಚು ಬಂಜರು ಭೂಮಿ ಇದ್ದು
ಇದನ್ನು ನಾವು ಅರಣ್ಯೀಕರಣ ಮಾಡುವ ಮೂಲಕ ಅರಣ್ಯ ಪ್ರದೇಶ ಹೆಚ್ಚಿಸಬಹುದು. ಬಹಳಷ್ಟು ಗುಡ್ಡಗಾಡುಗಳಿವೆ. ಅಲ್ಲಿ ಮೂಲ ಗಿಡಗಳನ್ನು ಬೆಳೆಸುವ ಮೂಲಕ ಉತ್ತಮಗೊಳಿಸಬಹುದು. ಟಾಟಾ ಸಂಸ್ಥೆಯ ಕಬ್ಬಿಣದ ಅದಿರಿನ ಗಣಿಗಳು ಜಮ್ ಶೇಡ್ ಪುರದಲ್ಲಿದ್ದು, ಅಲ್ಲಿ ಎಲ್ಲೆಲ್ಲಿಯೂ ಹಸಿರಿನಿಂದ ತುಂಬಿದೆ. ಗಣಿಗಳಲ್ಲಿ ಮಾಡಬಹುದಾದರೆ ಗುಡ್ಡಗಾಡಿನಲ್ಲಿ ಸಾಧ್ಯವಿಲ್ಲವೇ. ಇಚ್ಚಾಶಕ್ತಿ ಇದ್ದರೆ ಅರಣ್ಯ ಪ್ರದೇಶ ಹೆಚ್ಚಿಸೋಣ. ಜನಾಂಗಕ್ಕೆ ಇದಕ್ಕಿಂತ ಹೆಚ್ಚಿನ ಕೊಡುಗೆ ಮತ್ತೊಂದಿಲ್ಲ ಎಂದರು.

ಪರಿಸರ ಬಜೆಟ್
ಒಂದು ವರ್ಷದಲ್ಲಿ ಆಗುವ ಪರಿಸರ ನಷ್ಟವನ್ನು ಅದೇ ವರ್ಷ ತುಂಬುವ ಕೆಲಸ ಮಾಡಬೇಕು. ಭಾರತದ ದೇಶದಲ್ಲಿ ಪರಿಸರ ಆಯವ್ಯಯ ರೂಪಿಸಿದ ಪ್ರಥಮ ರಾಜ್ಯ ನಮ್ಮದು. ನೂರು ಕೋಟಿ ರೂ.ಗಳನ್ನು ಇದಕ್ಕೆ ಮೀಸಲಿಡಲಾಗಿದೆ. ಈಗಾಗಲೇ ಪರಿಸರ ಆಯವ್ಯಯ ಮಾಡುವ ಬಗೆಯನ್ನು ಇಲಾಖೆ ರೂಪಿಸಿದೆ. ಸರ್ಕಾರ ಕ್ರಿಯಾಯೋಜನೆಗೆ ಅನುಮೋದನೆ ಕೂಡ ನೀಡಿದೆ. ಈ ವರ್ಷ 100 ಕೋಟಿ ರೂ.ಗಳಲ್ಲಿ ಅರಣ್ಯೀಕರಣ ಹೆಚ್ಚಿಗೆ ಮಾಡ ಲಾಗುವುದು. ಅರಣ್ಯ ಸೂಕ್ಷ್ಮ ಪ್ರದೇಶಗಳನ್ನು ಉಳಿಸಿಕೊಳ್ಳಲು ವಿಶೇಷ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಮಾಡಿದೆ. ಅರಣ್ಯ ಮತ್ತು ಪರಿಸರ ಇಲಾಖೆ ನೈಸರ್ಗಿಕ ಸಂಪತ್ತು ರಕ್ಷಿಸಿ, ಪರಿಸರ ನಷ್ಟವನ್ನು ತುಂಬುವ ಪ್ರಯತ್ನವನ್ನು ಆಸಕ್ತಿ ವಹಿಸಿ ಮಾಡುತ್ತಿದ್ದು, ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.ಈ ವರ್ಷ ಕ್ರಿಯಾಯೋಜನೆಯನ್ನು ಅನುಷ್ಠಾನ ಮಾಡುವ ಮೂಲಕ ಹೊಸ ಮಾದರಿಯನ್ನು ಸಿದ್ಧಪಡಿಸಿ ಬರುವ ದಿನಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಬಹುದು ಎಂದರು.

TSV 8737

ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಕಡಿಮೆ ಮಾಡುವತ್ತ ಶ್ರಮಿಸಬೇಕು

ಅರಣ್ಯ ಇಲಾಖೆ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಕಡಿಮೆ ಮಾಡುವತ್ತ ಶ್ರಮಿಸಬೇಕು. ಆನೆಗಳ ಕಾಟ ದೊಡ್ಡ ಪ್ರಮಾಣದಲ್ಲಿ ಇದೆ. ಅವುಗಳನ್ನು ರಕ್ಷಣೆ ಮಾಡಲು ಹೊಸ ವಿಧಾನ ಬಳಸಲು 100 ಕೋಟಿ ರೂ.ಗಳನ್ನು ಇದಕ್ಕಾಗಿಯೇ ಒದಗಿಸಲಾಗಿದೆ. ದಿವಂಗತ ಉಮೇಶ್ ಕತ್ತಿಯವರು ಬಹಳ ಆಸಕ್ತಿ ವಹಿಸಿದ್ದರು. ಬೇಲಿ ಹಾಕುವ ಹೊಸ ವಿಧಾನಗಳ ಬಗ್ಗೆ ಚರ್ಚೆ ಮಾಡಿ ಬಂಡೀಪುರದಲ್ಲಿ ಅದರ ಪ್ರಯೋಗವೂ ನಡೆಯುತ್ತಿದೆ. ಉಮೇಶ್ ಕತ್ತಿಯವರು ರಾಜ್ಯದ ಎಲ್ಲಾ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಅವರ ಕರ್ತವ್ಯವನ್ನು ಸೂಕ್ತವಾಗಿ ನಿರ್ವಹಿಸಿ ಯಾವುದೇ ರಾಜಿಯನ್ನು ಮಾಡಿಕೊಳ್ಳದ ವ್ಯಕ್ತಿಯಾಗಿದ್ದರು. ಒತ್ತಡಗಳಿಗೆ ಮಣಿಯಲಿಲ್ಲ. ಇನ್ನಷ್ಟು ದಿನ ಅರಣ್ಯ ಸಚಿವರಾಗಿ ಕೆಲಸ ಮಾಡಬೇಕಿತ್ತು. ಅಕಾಲಿಕವಾಗಿ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ನೆನಪು ಸದಾ ಕಾಲ ಮನದಾಳದಲ್ಲಿ ಇರುತ್ತದೆ ಎಂದರು.

ಅರಣ್ಯ ನಮ್ಮ ಬದುಕಿನ ಭಾಗ.
ಅರಣ್ಯ ಕೇವಲ ನಿಸರ್ಗದ ಭಾಗವಲ್ಲ ನಮ್ಮ ಬದುಕಿನ ಭಾಗ. ಅರಣ್ಯ ಮತ್ತು ನಾಗರೀಕತೆಗೆ ಸಂಬಂಧವಿಲ್ಲದಂತೆ ನಾವು ವರ್ತಿಸುತ್ತಿದ್ದೇವೆ. ಅರಣ್ಯ ನಮಗೆ ಮಳೆ, ಬೆಳೆ, ಆಹಾರ ಕೊಟ್ಟು ಶುದ್ಧವಾದ ಗಾಳಿಯನ್ನು ನೀಡುತ್ತದೆ. ಯಾವ ದೇಶಕ್ಕೆ ಅರಣ್ಯ ಇಲ್ಲವೋ ಅವು ಮರಳುಗಾಡಾಗಿದೆ. ನಮ್ಮ ಪುಣ್ಯ ನಮ್ಮ ದೇಶದಲ್ಲಿ ಅರಣ್ಯವಿದ್ದು, ಬೆಳೆಸಲೂ ಅವಕಾಶವಿದೆ. ಕರ್ನಾಟಕ ಮತ್ತು ಇತರ ದಕ್ಷಿಣದ ರಾಜ್ಯಗಳು ಪಶ್ಚಿಮ ಘಟ್ಟಗಳಲ್ಲದೆ ಊಹಿಸಲು ಸಾಧ್ಯವಿಲ್ಲ. ಪಶ್ಚಿಮ ಘಟ್ಟದಲ್ಲಿ ಹರಿ ಯುವ ಬಹುತೇಕ ನದಿಗಳು ಬಂಗಾಲ ಕೊಲ್ಲಿಗೆ ಸೇರುತ್ತವೆ. ರಾಜ್ಯದ ಉದ್ದಗಲಕ್ಕೂ ಕೂಡ ನೀರನ ಸಂಪತ್ತು ಲಭ್ಯವಿದೆ. ಮಳೆಯೂ ವಿಸ್ತೃತವಾಗಿ ಕರ್ನಾಟಕ, ಕೇರಳ, ಆಂದ್ರಪದೇಶ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಭಾಗಗಳಿಗೆ ಪಶ್ಚಿಮ ಘಟ್ಟಗಳಿಂದ ಬರುತ್ತದೆ. ಒಂದು ಪಶ್ಚಿಮ ಘಟ್ಟದಿಂದ ಇಷ್ಟೆಲ್ಲಾ ಅನುಕೂಲಗಳಿರುವಾಗ ಇತರ ಪ್ರದೇಶಗಳ ಅರಣ್ಯಗಳ ರಕ್ಷಣೆ ಅತ್ಯಗತ್ಯ. ಪರಿಸರ ಅಸಮತೋಲನ ನಮ್ಮ ಜೀವನಶೈಲಿಯಿಂದ ಆಗುತ್ತಿದೆ. ಹಲವಾರು ವರ್ಷಗಳಿಂದ ಮನುಷ್ಯ ತನ್ನ ಬೇಡಿಕೆಗೆ ಬಳಸುತ್ತಿರುವುದರಿಂದ ಆಗುತ್ತಿದೆ ಎಂದು ಸಂಶೋಧಕರೊಬ್ಬರು ಹೇಳಿದ್ದರು ಎಂದರು.

ಪ್ರಕೃತಿಗೆ ಹೊಂದಿಕೊಂಡು ಬದುಕಬೇಕು
ಪ್ರಕೃತಿಗೆ ಹೊಂದಿಕೊಂಡು ಬದುಕಿದ್ದಾಗ ಅದು ಶ್ರೀಮಂತವಾಗುತ್ತದೆ. ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡರೆ ನಿಸರ್ಗ ತನ್ನ ಇನ್ನೊಂದು ಸ್ವರೂ ಪವನ್ನು ತೋರುತ್ತದೆ. ಈಗ ಹವಾಮಾನ ಬದಲಾವಣೆ ಆಗುತ್ತಿದೆ. ನದಿಯಲ್ಲಿ ಪ್ರವಾಹ ಉಂಟಾಗುತ್ತಿದೆ. ಮಳೆಗಾಲ ಬದಲಾಗಿದೆ. ಕೆಲವು ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯನ್ನು ನೋಡುತ್ತಿದ್ದೇವೆ. ಅಸಮತೋಲನವನ್ನು ಸರಿಪಡಿಸಬೇಕಾಗಿದೆ. ಒಂದು ಅಧ್ಯಯನದ ಪ್ರಕಾರ ಕಳೆದ 2000 ವರ್ಷಗಳಲ್ಲಿ ಆಗಬೇಕಿದ್ದ ಬಳಕೆ ಕೇವಲ 20 ವರ್ಷಗಳಲ್ಲಿ ಆಗಿದೆ. ಅಷ್ಟು ವೇಗವಾಗಿ ನಿಸರ್ಗ ನಾಶವಾಗುತ್ತಿದೆ. ಇದನ್ನು ತಡೆಗಟ್ಟುವ ಅನಿವಾರ್ಯ ಮತ್ತು ಅವಶ್ಯಕತೆ ಇದೆ. ಭವಿಷ್ಯದ ದೃಷ್ಟಿಯಿಂದ ಮಾಡಲೇಬೇಕಾದ ಕೆಲಸ. ನಮ್ಮ ಹಿರಿಯರು ಇವುಗಳನ್ನು ಉಳಿಸಿ ನಮಗೆ ಬಳುವಳಿಯಾಗಿ ನೀಡಿದ್ದಾರೆ. ಅದನ್ನು ಮುಂದಿನ ಪೀಳಿಗೆಗೆ ದಾಟಿಸದಿದ್ದರೆ ನಮ್ಮದು ಕರ್ತವ್ಯ ಲೋಪವಾಗುತ್ತದೆ. ನಮ್ಮ ಮಕ್ಕಳ ಹಕ್ಕಾಗಿರುವ ಶುದ್ಧ ಗಾಳಿ, ಆಹಾರ, ಇದರಿಂದ ವಂಚಿತರಾಗುತ್ತಾರೆ. ಅವರ ಹಕ್ಕನ್ನು ನಾವು ಕಸಿದುಕೊಂಡಂತಾಗುತ್ತದೆ. ಭವಿಷ್ಯದಿಂದ ನಾವು ಕದ್ದಂತೆ ಆಗುತ್ತದೆ.ಆದ್ದರಿಂದ ಅರಣ್ಯದ ರಕ್ಷಣೆ ಮಾಡುವ ಅವಶ್ಯಕತೆ ಇದೆ. ನಮ್ಮ ಅರಣ್ಯ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಅರಣ್ಯ ಸಂರಕ್ಷಣೆ. ಮಾಡುವ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ದಿಟ್ಟತನ ತೋರಿ ಶೌರ್ಯದಿಂದ ಮೆರೆದಿದ್ದಾರೆ. ಕೆಲವು ಸಂದರ್ಭಗಳಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ. ಅವರ ತ್ಯಾಗ ನೆನೆಯದಿದ್ದರೆ ಅಪಚಾರವಾಗುತ್ತದೆ. ಅರಣ್ಯ, ನಿಸರ್ಗ, ಪರಿಸರದ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಗಿಡಗಳನ್ನು ನೆಟ್ಟು ಅವುಗಳ ರಕ್ಷಣೆ ಮಾಡಬೇಕು. ನಮ್ಮ ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕು. ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರಲು ಅಲ್ಲಿನ ಆಹಾರ ಕೊರತೆ ಕಾರಣ. ಮನುಷ್ಯ ಕಾಡಿನಲ್ಲಿರಲು ಪ್ರಯತ್ನಿಸಿದಾಗ ಅಲ್ಲಿರುವ ಪ್ರಾಣಿಗಳು ಕೂಡ ಹೊರ ಬರಲು ಪ್ರಯತ್ನಿಸುತ್ತವೆ. ಮನುಷ್ಯ ಮತ್ತು ಪ್ರಾಣಿಯ ಸಂಘರ್ಷವನ್ನು ಕಡಿಮೆ ಮಾಡಬೇಕು. ಮನುಷ್ಯ ಮತ್ತು ಪ್ರಾಣಿಗಳು ಸಹಬಾಳ್ವೆ ಮಾಡಬೇಕು ಎಂದರು.

ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್,ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್‌ ಕಿಶೋರ್‌ ಸಿಂಗ್ ಮೊದಲಾದವರು ಉಪಸ್ಥಿತರಿದ್ದರು.