ಮಾದದ್ರವ್ಯ ವಸ್ತುಗಳ ಬಳಕೆ, ಮಾರಾಟ ಹಾಗೂ ಜಾಲದ ವಿರುದ್ಧ ಸರಕಾರದ ನಿಲುವು ಕಠಿಣ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.
ಬೆಂಗಳೂರು, ಸೆಪ್ಟೆಂಬರ್ ೧೩
ಮಾದಕದ್ರವ್ಯ ವಸ್ತುಗಳ ಬಳಕೆ ಹಾಗೂ ಪೂರೈಸುವ ಜಾಲದ ವಿರುದ್ಧ ಸರಕಾರದ ನಿಲುವು “ಜೀರೋ ಟಾಲರೆನ್ಸ್ ” ಆಗಿದ್ದು ನಿರ್ದಾಕ್ಷಿಣ್ಯ ಹಾಗೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು ವಿಧಾನ ಪರಿಷತ್ತಿಗೆ ತಿಳಿಸಿದರು.
ಸದನದಲ್ಲಿ ಇಂದು, ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು ನಿಯಮ ೩೩೦ ರ ಅಡಿಯಲ್ಲಿ ಎತ್ತಿದ ವಿಷಯದ ಕುರಿತು ಉತ್ತರಿಸಿದ ಸಚಿವರು ಸಾಮಾಜಿಕ ಪಿಡುಗಾಗಿ ಬೆಳೆಯುತ್ತಿರುವ ಈ ಸಮಸ್ಯೆಯ ನಿಗ್ರಹಣೆಗೆ ಪೋಲೀಸರು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ ಮಾದಕದ್ರವ್ಯ ಸೇವನೆ, ಮಾರಾಟ ಹಾಗೂ ಸಾಗಾಟ ದಂಧೆಯಲ್ಲಿ ತೊಡಗಿರುವವರ ವಿರುದ್ಧ, ೧೪೦೪೨ ಪ್ರಕರಣಗಳನ್ನು ದಾಖಲು ಮಾಡಿ, ನೂರಾರು ಜನರನ್ನು ಬಂಧಿಸಲಾಗಿದೆ, ಎಂದರು.
ಯುವ ಸಮುದಾಯವನ್ನು ಗುರಿಯಾಗಿಸಿಕೊಂಡು, ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗಿದ್ದು, ಸಿಸಿಬಿ ಯಲ್ಲಿ ಈ ಜಾಲದ ವಿರುದ್ಧ ಪ್ರತ್ಯೇಕ ವಿಭಾಗವನ್ನು ತೆರೆದಿದ್ದೇವೆ.
ಸಾಮಾಜಿಕ ಪಿಡುಗಾಗಿ ಬೆಳೆದಿರುವ ಈ ಸಮಸ್ಯೆಯನ್ನು ಭೇರು ಸಮೇತ ಕಿತ್ತು ಹಾಕುವ ಕೆಲಸ ಆಗಬೇಕಿದ್ದು, ಸಮಾಜದ ಎಲ್ಲರೂ ಈ ಪೊಲೀಸರ ಜತೆ ಕೈಜೋಡಿಸಬೇಕು ಎಂದೂ ವಿನಂತಿಸಿದರು.
ಮಾದದ್ರವ್ಯ ವಸ್ತುಗಳ ವಿರುಧ್ದ ಹೋರಾಟದಲ್ಲಿ, ಹಲವಾರು ಸಂಘ ಸಂಸ್ಥೆಗಳು ಸಹಕರಿಸಿದ್ದು, ಕೆಲವು ಮಾಧ್ಯಮ ಹಾಗೂ ಸುದ್ದಿವಾಹಿನಿಗಳೂ ಕೈ ಜೋಡಿಸಿವೆ, ಎಂದು ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು.
ಹುಕ್ಕಾ ಬಾರ್ ಗಳು, ಮಾದಕ ವಸ್ತುಗಳ ಸೇವನೆಯ ಕೇಂದ್ರ ಗಳಾಗುತ್ತಿವೆ, ಎಂಬ ಸದಸ್ಯರ ಆತಂಕಕ್ಕೆ ಉತ್ತರಿಸಿದ ಸಚಿವರು, ಪೊಲೀಸರು ಈ ಬಗ್ಗೆಯೂ ನಿಗಾ ವಹಿಸಿದ್ದು, ಉಗ್ರ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಬಿಜೆಪಿ ಸದಸ್ಯರಾದ ಶ್ರೀಮತಿ ತೇಜಸ್ವಿನಿ ಗೌಡ, ಶ್ರೀಮತಿ ಭಾರತಿ ಶೆಟ್ಟಿ, ಕಾಂಗ್ರೆಸ್ ಪಕ್ಷದ ಶ್ರೀ ಸಲೀಂ ಅಹ್ಮದ್, ಪ್ರಕಾಶ್ ರಾಥೋಡ್ ಮತ್ತು ಮಂಜುನಾಥ್ ಭಂಡಾರಿ ಹಾಗೂ ಜೆಡಿಎಸ್ ನ ಶ್ರಿ ಮರಿತಿಬ್ಬೇ ಗೌಡ ಹಾಗೂ ಇತರರು, ಚರ್ಚೆಯಲ್ಲಿ ಪಾಲ್ಗೊಂಡು, ಮಾತನಾಡಿದರು.