*ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್*
*ಪ್ರಧಾನಿ ನರೇಂದ್ರ ಮೋದಿಯವರ ಮಾದರಿ ಅನುಸರಿಸಿ*
ಬೆಂಗಳೂರು, ಫೆಬ್ರವರಿ 7: – ಸರ್ಕಾರದ ಸಾಧನೆ, ವೈಯಕ್ತಿಕ ಸಾಧನೆ, ಯೋಜನೆಗಳ ಬಗ್ಗೆ ತಪ್ಪು ಕಲ್ಪನೆ ನಿವಾರಿಸಲು ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ, ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠದಿಂದ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಹಿಂದೆ ಪತ್ರಿಕೋದ್ಯಮವು ಸರ್ಕಾರವನ್ನೇ ಬದಲಿಸುವಷ್ಟು ಬಲವಾಗಿತ್ತು. ನಂತರ ಬಂದ ದೃಶ್ಯ ಮಾಧ್ಯಮ ಕೂಡ ಇನ್ನಷ್ಟು ಬಲವಾಗಿ ಬೆಳೆದಿದೆ. ಈಗ ಸಾಮಾಜಿಕ ಮಾಧ್ಯಮ ಬಲವಾಗಿ ಬೆಳದಿದೆ. ಇದರಲ್ಲಿ ಪ್ರತಿಯೊಬ್ಬರೂ ತಮ್ಮ ಸಂದೇಶವನ್ನು ನಿರ್ಭೀತಿಯಿಂದ ನೀಡಬಹುದು ಎಂದರು.
ರಾಜಕೀಯದಲ್ಲಿ ಸಾಮಾಜಿಕ ಜಾಲತಾಣವನ್ನು ಯಶಸ್ವಿಯಾಗಿ ಬಳಸಬಹುದು. ಚುನಾವಣೆ ಮಾತ್ರವಲ್ಲದೆ, ಬೇರೆ ಸಮಯದಲ್ಲೂ ಇದನ್ನು ಬಳಸಬಹುದು. ಜನಪ್ರತಿನಿಧಿ ತಾವು ಮಾಡುವ ಕೆಲಸಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ಹಂಚಿಕೊಳ್ಳಬೇಕು. ಕೆಲ ಮತದಾರರು ಸಂದರ್ಭಕ್ಕನುಗುಣವಾಗಿ ಮತ ಹಾಕುತ್ತಾರೆ. ಇಂತಹ ಮತದಾರರು 40% ರಿಂದ 50% ರಷ್ಟಿರುತ್ತಾರೆ. ಇಂತಹವರಿಗೆ ನಾವು ಮಾಡುವ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಬೇಕು ಎಂದರು.
ಬಿಜೆಪಿಯಲ್ಲಿ ಪಕ್ಷದ ಪ್ರಣಾಳಿಕೆಯೇ ನಮಗೆ ಭಗವದ್ಗೀತೆಯಾಗಿದ್ದು, ಅದನ್ನು ಈಡೇರಿಸದಿದ್ದರೆ ಜನರು ತಿರಸ್ಕರಿಸುತ್ತಾರೆ. ಜನರು ಬೆಳಗೆದ್ದರೆ ಮೊಬೈಲ್ ನೋಡುವುದು ಹವ್ಯಾಸವಾಗಿದ್ದು, ಎಲ್ಲರೂ ಸಾಮಾಜಿಕ ಜಾಲತಾಣ ಬಳಸುತ್ತಾರೆ. ಇದನ್ನು ಸಮಗ್ರವಾಗಿ ಬಳಸಿಕೊಂಡರೆ ಪಕ್ಷ ಹಾಗೂ ಮುಖಂಡರಿಗೆ ಚುನಾವಣೆಗೆ ನೆರವಾಗುತ್ತದೆ ಎಂದರು.
ನಾನು ಕೂಡ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತೇನೆ. ಪ್ರಧಾನಿ ಮೋದಿಯವರಿಗೆ ಸಾಮಾಜಿಕ ಜಾಲತಾಣದಲ್ಲಿ ಸುಮಾರು 10 ಕೋಟಿ ಫಾಲೋವರ್ಸ್ ಇದ್ದಾರೆ. ಇದು ನಮಗೆ ಮಾದರಿಯಾಗಬೇಕು. ಬಿಜೆಪಿ ಪಕ್ಷದಲ್ಲಿ ಮೋದಿಯವರಂತಹ ದಿಟ್ಟ ನಾಯಕತ್ವ, ಉತ್ತಮ ಕಾರ್ಯಕರ್ತರ ಪಡೆ ಇದೆ. ಇದನ್ನು ಜನರಿಗೆ ತಿಳಿಸಬೇಕು. ಕೃಷಿ ಕಾನೂನು ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ. ಇದು ರೈತ ವಿರೋಧಿಯಲ್ಲ ಎಂಬ ಮಾಹಿತಿಯನ್ನು ತಿಳಿಸಬೇಕು ಎಂದರು.