ಪಾವಗಡ: ಗೀತಾ ಸೊಗಡು ವೆಂಕಟೇಶ್ ರವರನ್ನು ರೊಪ್ಪ ಗ್ರಾ.ಪಂ.ಅಧ್ಯಕ್ಷರ ಸ್ಥಾನದಿಂದ ಕೈ ತಪ್ಪಿಸಲು ಕಾಂಗ್ರೆಸ್ ಪಾಳಯದಲ್ಲೇ ಪಿತೂರಿ ನಡೆದಿದೆ ಎಂದು ಮಾಜಿ ತಾ.ಪಂ.ಅಧ್ಯಕ್ಷರಾದ ಸೊಗಡು ವೆಂಕಟೇಶ್ ಆರೋಪಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಗೆ ಮೀಸಲಿದ್ದ ರೊಪ್ಪ ಗ್ರಾ.ಪಂ.ಸ್ಥಾನಕ್ಕೆ ಫೆ.4 ರಂದು ಚುನಾವಣೆ ನಡೆಯಿತು.
ಒಟ್ಟು 12 ಸ್ಥಾನಗಳ ಪೈಕಿ 7 ಕಾಂಗ್ರೆಸ್ ಬೆಂಬಲಿತ ಹಾಗೂ 5 ಜೆಡಿಎಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು.
7 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು ನನ್ನ ಶ್ರೀಮತಿ ಗೀತಾ ಸೊಗಡು ವೆಂಕಟೇಶ್ ಅಧ್ಯಕ್ಷರಾಗಿ ಆಯ್ಕೆಯಾಗಬಾರದೆಂದು ಕಾಂಗ್ರೆಸ್ ಬೆಂಬಲಿತ ಸದಸ್ಯರಿಬ್ಬರು ಓ.ರಾಮಾಂಜಿನೇಯ ಎಂಬುವವರಿಗೆ ಮತ ಚಲಾಯಿಸಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಮುಖಂಡರ ಕೈವಾಡ ಇದೆ.
ಕಾಂಗ್ರೆಸ್ ಪಕ್ಷದಲ್ಲಿ ಸ್ವಪಕ್ಷದವರನ್ನೇ ಸೋಲಿಸುವ ಹುನ್ನಾರ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇದು ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬೀಳಲಿದೆ ಎಂದರು.
ಸದಸ್ಯ ಹಾಗೂ ಪತ್ರಕರ್ತ ಜಿ.ಎನ್.ಹನುಮಂತರಾಯಪ್ಪ ಮತ್ತು ವೆಂಕಟೇಶ್ ಮೂರ್ತಿ ಎಂಬುವವರು ಚುನಾವಣೆ ದಿನ ಸಭಾಂಗಣದಲ್ಲಿ ಗಲಾಟೆ ಗೊಂದಲ ಸೃಷ್ಟಿಸಿ
ಸದಸ್ಯರ ಸ್ವತಂತ್ರ ಕಸಿದು ಚುನಾವಣಾಧಿಕಾರಿ ಅನಿಲ್ ಕುಮಾರ್ ರವರೇ ಮತ ಚಲಾಯಿಸಲು ಪ್ರಚೋದನೆ ನೀಡಿರುವುದು ಕಾನೂನು ಬಾಹಿರ ಈ ಮತಗಳು ಅಸಿಂಧು ಎಂದು ತಿಳಿಸಿದರು.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಪಂಚಾಯತ್ ರಾಜ್ ಅಧಿನಿಯಮ ಅಡಿಯಲ್ಲಿ ಮೊಕದ್ದಮೆ ದಾಖಲು ಮಾಡಿದ್ದೇನೆ.
ನಾನು ಹಲವು ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸಿದ್ದೇನೆ. ಆದರೂ ನನ್ನ ಶ್ರೀಮತಿ ಗೀತಾ ರವರಿಗೆ ಎಲ್ಲಾ ಅರ್ಹತೆಗಳಿದ್ದರೂ ಕೂಡ ಏನಾದರೂ ಮಾಡಿ ಇವರನ್ನು ಅಧ್ಯಕ್ಷ ಸ್ಥಾನದಿಂದ ಕೈ ತಪ್ಪಿಸಬೇಕು ಎನ್ನುವ ಒಳ ಸಂಚು ಪಾವಗಡ ಕಾಂಗ್ರೆಸ್ ಮುಖಂಡರು ರೂಪಿಸಿರುವುದು ಖಂಡನೀಯ.
ಒಂದು ವೇಳೆ ನಾನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ನನ್ನ ಮೇಲೆ ಕ್ರಮ ಕೈಗೊಳ್ಳಲಿ ಪಕ್ಷದಿಂದ ಉಚ್ಚಾಟನೆ ಮಾಡಲಿ ನಾನು ಬದ್ಧನಾಗಿರುತ್ತೇನೆ.
ಆದರೆ ಓ.ರಾಮಾಂಜಿನೇಯ ಅವರು ಜೆಡಿಎಸ್ ಪಕ್ಷದವರಾಗಿದ್ದು ಅವರಿಗೆ ಅಧ್ಯಕ್ಷ ಸ್ಥಾನ ನೀಡುವಲ್ಲಿ ನಮ್ಮ ಪಕ್ಷದ ಮುಖಂಡರು ಬೆನ್ನೆಲುಬಾಗಿ ನಿಂತರು.
ಓ.ರಾಮಾಂಜಿನೇಯ ಕಾಂಗ್ರೆಸ್ ಪಕ್ಷದವರಾ ಅಥವಾ ಜೆಡಿಎಸ್ ಪರನಾ? ಎನ್ನುವುದು ನಮ್ಮ ಪಕ್ಷದ ವರಿಷ್ಠರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮುಖಂಡರು ಸ್ಪಷ್ಟನೆ ನೀಡಬೇಕು ಎಂದು ಪ್ರಶ್ನಿಸಿದರು.