ಪಾವಗಡ: ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಉನ್ನತಿಯತ್ತ ಸಾಗಬೇಕು ಎಂದು ಆದಿಜನ ತಾಲೂಕು ಸಂಚಾಲಕ ನಾರಾಯಣಪ್ಪ ಕರೆ. ತಾಲ್ಲೂಕಿನ ಗಂಗಸಾಗರದಲ್ಲಿ ಸೋಮವಾರ ಆದಿ ಜನ ಪಂಚಾಯಿತಿ ಆಯೋಜಿಸಿದ್ದ `ಅಂಬೇಡ್ಕರ್ ನೂತನ ವರ್ಷಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಹುತೇಕ ತಳ ಸಮುದಾಯದವರು, ಹಿಂದುಳಿದ ವರ್ಗದವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹವರು ತಮ್ಮ ಕೆಲಸವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸದೆ ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಉನ್ನತಿಯತ್ತ ಸಾಗಬೇಕು ಎಂದರು.ಜಮೀನು ಇರುವವರನ್ನು ಮಾತ್ರ ಸರ್ಕಾರ ರೈತರೆಂದು ಪರಿಗಣಿಸಿ ಸೌಕರ್ಯ ಕಲ್ಪಿಸುತ್ತಿದೆ. ಇದರಿಂದ ಹೈನುಗಾರಿಕೆ, ಕುರಿ ಸಾಕಾಣಿಕೆ, ಇತ್ಯಾದಿ ಉಪ ಕಸುಬುಗಳನ್ನು ಮಾಡುವರಿಗೆ, ಕೃಷಿ ಕೂಲಿಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಕೂಡಲೆ ಉಪ ಕಸುಬುಗಳಲ್ಲಿ ತೊಡಗಿಕೊಂಡವರನ್ನು, ಕೃಷಿ ಕೂಲಿ ಕಾರ್ಮಿಕರನ್ನು ರೈತರು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಪಶು ಇಲಾಖೆ ಸಹಾಯಕ ನಿರ್ದೇಶಕ ಸಿದ್ದಗಂಗಯ್ಯ, ಚನ್ನಕೇಶವ, ಗಂಗಮ್ಮ, ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮಮ್ಮ, ಗೋವಿಂದರಾಜು, ಕೃಷ್ಣಾರೆಡ್ಡಿ, ಹೋಬಳಿ ಸಂಯೋಜಕಿ ಹನುಮಕ್ಕ ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸುಲು ಎ