ಇಂದು ಪಾವಗಡ ತಾಲ್ಲೂಕಿನ ಕುಗ್ರಾಮವಾದ ನಾಗಲಮಡಿಕೆ ಹೋಬಳಿಯ ವಳ್ಳೂರಿನಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಬೆಂಗಳೂರಿನಲ್ಲಿ ಕೂಲಿನಾಲಿ ಮಾಡುತ್ತಿದ್ದ ಕೆಲಸಗಾರರು ವಾಪಸ್ ವಳ್ಳೂರು ಗ್ರಾಮಕ್ಕೆ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರವೇ ಸರಿ. ಈ ನಿಟ್ಟಿನಲ್ಲಿ ಹಿಂದುಳಿದ ದೀನರ ಈ ಒಂದು ಗುಂಪಿಗೆ ದವಸ ಧಾನ್ಯ ಕಿಟ್‍ನ್ನು ವಿತರಿಸಲಾಯಿತು.
ಈ ವಿತರಣಾ ಕಾರ್ಯಕ್ರಮಕ್ಕೆ ಶ್ರೀ ಹನುಮಂತಪ್ಪ, ಹಿರಿಯ ನ್ಯಾಯಾಧೀಶರು, ಸಿವಿಲ್ ಮತ್ತು ಜೆ.ಎಂ.ಎಫ್.ಸಿ., ಶ್ರೀ ಜಗದೀಶ್ ಬಿಸೆರೊಟ್ಟಿ, ಪ್ರಧಾನ ನ್ಯಾಯಾಧೀಶರು, ಸಿವಿಲ್ ಮತ್ತು ಜೆ.ಎಂ.ಎಫ್.ಸಿ., ಶ್ರೀ ವಿ.ಮಂಜುನಾಥ್ ಮತ್ತು ಶ್ರೀ ಸಣ್ಣೀರಪ್ಪ, ಸರ್ಕಾರಿ ಸಹಾಯಕ ಅಭಿಯೋಜಕರು, ನ್ಯಾಯಾಲಯ, ಪಾವಗಡ ರವರು ಭಾಗವಹಿಸಿ ದಿನಸಿ ಕಿಟ್‍ಗಳನ್ನು ವಿತರಿಸಿದರು. ಮೊದಲಿಗೆ ಶ್ರೀ ಹನುಮಂತಪ್ಪ ರವರು, ಹಿರಿಯ ನ್ಯಾಯಾಧೀಶರು ಮಾತನಾಡಿ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಮಾರ್ಚ್ ತಿಂಗಳಿನಿಂದಲೇ ಕೋವಿಡ್19 ಯೋಜನೆಗಳನ್ನು ಕೈಗೆತ್ತಿಕೊಂಡು ಆರಂಭಿಸಿದ್ದು ಹಾಗೂ ಆ ಯೋಜನೆಗಳಲ್ಲಿ ಪಾವಗಡ ನ್ಯಾಯಾಲಯದ ಎಲ್ಲ ನ್ಯಾಯಮೂರ್ತಿಗಳು ಭಾಗವಹಿಸಿದ ವಿಚಾರವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಸ್ವಾಮಿ ಜಪಾನಂದಜೀ ರವರ ನೇತೃತ್ವದಲ್ಲಿ ನಡೆಯುತ್ತಿರುವ ಯೋಜನೆಗಳು ತಾಲ್ಲೂಕಿನ ಮೂಲೆ ಮೂಲೆಯಲ್ಲಿ ತಲುಪುತ್ತಿರುವುದನ್ನು ನಾವು ಸ್ವತಃ ಕಂಡಿದ್ದೇವೆ ಎಂದು ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್‍ನ ಕಾರ್ಯಯೋಜನೆಗಳನ್ನು ಶ್ಲಾಘಿಸಿ ಇಂದಿಗೂ ಆ ಯೋಜನೆ ನೆರವೇರುತ್ತಿರುವುದು ಒಂದು ಮಹಾನ್ ಮೈಲಿಗಲ್ಲು ಎನ್ನಬಹುದು ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಅತಿ ಬಡತನದಿಂದ ವಿಧವೆಯರು ಪಡುತ್ತಿರುವ ಕಷ್ಟಗಳನ್ನು ಆಲಿಸುತ್ತಾ ಆ ಕಷ್ಟಗಳಿಗೆ ನ್ಯಾಯಾಲಯ ಸರ್ವ ರೀತಿಯಲ್ಲಿ ಸಹಕಾರ ನೀಡಿ ಪಿಂಚಣಿ ದೊರೆಯುವಂತೆ ಅವಕಾಶವಿದೆ, ಆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ಮತ್ತೊಬ್ಬ ನ್ಯಾಯಾಧೀಶರಾದ ಶ್ರೀ ಜಗದೀಶ್ ಬಿಸೆರೊಟ್ಟಿ ರವರು ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಪಾವಗಡ ಹಾಗೂ ಸುತ್ತಮುತ್ತಲಿನ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಅದರಲ್ಲಿಯೂ ಮಹಾರಾಷ್ಟ್ರ, ಬಿಹಾರ, ಮಧ್ಯ ಪ್ರದೇಶ, ಒಡಿಸ್ಸಾ, ಪಶ್ಚಿಮ ಬಂಗಾಳದಿಂದ ಹಾಗೂ ಉತ್ತರ ಕರ್ನಾಟಕದಿಂದ ಬಂದಿದ್ದದಂತಹ ಕೂಲಿ ಕಾರ್ಮಿಕರಿಗೆ ಸಮಯೋಚಿತವಾಗಿ ಆಹಾರ ಪದಾರ್ಥಗಳ ಸರಬರಾಜನ್ನು ನಿರಂತರವಾಗಿ ಮಾಡಿದ್ದ ಸಂದರ್ಭದಲ್ಲಿ ತಾವು ಭಾಗಿಯಾಗಿದ್ದು ತಮ್ಮ ಅದೃಷ್ಟವೆಂದೇ ತಿಳಿಸಿದರು. ಇದೇ ಸಂದರ್ಭದಲ್ಲಿ ಹಿಂದುಳಿದ ಜನಾಂಗಕ್ಕೆ ಅದರಲ್ಲಿಯೂ ವೃದ್ಧರಿಗೆ, ವಿಧವೆಯರಿಗೆ ಅನೇಕ ರೀತಿಯ ಯೋಜನೆಗಳು ಪ್ರಸ್ತುತ ಚಾಲ್ತಿಯಲ್ಲಿರುವುದರಿಂದ ಈ ಯೋಜನೆಗಳನ್ನು ಉಪಯೋಗಿಸಿಕೊಳ್ಳಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಿದರು. ಕಾರ್ಯಕ್ರಮ ಸ್ಥಳೀಯ ಮುಖಂಡರಾದ ಸಿದ್ದಾರ್ಥ ಚಾರಿಟಬಲ್ ಟ್ರಸ್ಟ್‍ನ ಶ್ರೀ ನಾಗೇಶ್ ರವರು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಆಶ್ರಮದ ಸಂಯೋಜಕರಾದ ಶ್ರೀ ಪ್ರಕಾಶ್ ನಾಯಕ್, ಶ್ರೀ ಅನಿಲ್ ಕುಮಾರ್ ರವರುಗಳು ಭಾಗವಹಿಸಿದ್ದರು. ಒಟ್ಟಿನಲ್ಲಿ ಅತ್ಯಂತ ದುಃಸ್ಥಿತಿಯಲ್ಲಿರುವಂತಹ ಬಡ ಜನರಿಗೆ ಸದಾ ಕಾಲ ಸಹಾಯಹಸ್ತವನ್ನು ನೀಡುತ್ತಿರುವ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್‍ನ ಈ ಅದ್ಭುತ ಸಮಯೋಜಿತ ಯೋಜನೆಗಳು ಪಾವಗಡ ತಾಲ್ಲೂಕಿನ ಮೂಲೆ ಮೂಲೆಗೆ ತಲುಪುತ್ತಿರುವುದು ಅತ್ಯಂತ ಸಂತೋಷಕರವಾದ ವಿಚಾರವೇ ಸರಿ.