ಜಿಲ್ಲೆಗೆ ಅಗತ್ಯವಿರುವ ಸೌಲಭ್ಯಗಳ ಈಡೇರಿಕೆ ಮುಖ್ಯಮಂತ್ರಿಗಳಿಂದ ಒಪ್ಪಿಗೆ; ಸಚಿವ ಜೆ.ಸಿ.ಮಾಧುಸ್ವಾಮಿ
ಜೂನ್, ಜುಲೈನೊಳಗೆ ಎಲ್ಲಾ ತಾಲ್ಲೂಕುಗಳಲ್ಲಿ ಆಮ್ಲಜನಕ ಉತ್ಪಾದನೆಯಾಗಲಿದೆ
ಹೋಂ ಕ್ವಾರಂಟೈನ್ ಇರುವವರು ಕೋವಿಡ್ ಕೇರ್ ಸೆಂಟರ್ ಗೆ ಬರಬೇಕೆಂದು ಸೂಚನೆ
ತುಮಕೂರು(ಕವಾ)ಮೇ28: ಜಿಲ್ಲೆಗೆ ಅಗತ್ಯವಿರುವ ಸೌಲಭ್ಯಗಳ ಈಡೇರಿಕೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗಮನ ಹರಿಸಿದ್ದು, ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19 ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆಗೆ ತಾಯಿ ಮಕ್ಕಳು ಹೆರಿಗೆ ಆಸ್ಪತ್ರೆ ಬೇಕು. ಈಗಾಗಲೇ ಜಿಲ್ಲೆಗೆ ನೂರು ಹಾಸಿಗೆಯ ಆಸ್ಪತ್ರೆ ಮಂಜೂರಾತಿ ಆಗಿದೆ. ಆದರೆ ಇಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಹೆರಿಗೆಗಳಾಗುತ್ತಿವೆ. ಹಾಗಾಗಿ 200 ಹಾಸಿಗೆಗಳ ಆಸ್ಪತ್ರೆ ಬೇಕು ಎಂದು ಮನವಿ ಮಾಡಿದೆ. ಅದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದರು ಎಂದು ತಿಳಿಸಿದರು.
ಅದೇ ರೀತಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೂ ಒಂದು ವರ್ಷದ ಹಿಂದೆ ನೂರು ಕೋಟಿ ರೂ. ಹಣ ಮೀಸಲು ಇರಿಸಲಾಗಿದೆ. ಇದನ್ನೂ ಪ್ರಾರಂಭಿಸಬೇಕು ಎಂದು ಕೋರಿದಾಗ ಅದಕ್ಕೆ ಟೇಂಡರ್ ಕರೆದು ಕೂಡಲೇ ಕ್ರಮವಹಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಎರಡು ಕಡೆ ಸಿ.ಟಿ.ಸ್ಕ್ಯಾನ್ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕೇಳಿದಾಗ ಅದಕ್ಕೂ ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ಕೋವಿಡ್ ಅಲೆ ನಿರ್ವಹಣೆಗೆ ಅವಶ್ಯಕತೆ ಇರುವ ಶಿಶು ವೈದ್ಯರು ಮತ್ತು ಸಿಬ್ಬಂದಿ ಅವಶ್ಯಕತೆ ಇದೆ ಎಂಬುದರ ಬಗ್ಗೆಯೂ ಅವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ದಾನಿಗಳಿಂದ ಬಂದಿರುವ ಸುಮಾರು 600 ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ 30 ಸಾಂದ್ರಕಗಳನ್ನು ನೀಡಲಾಗುತ್ತಿದೆ. ಹಾಗೆಯೇ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗುತ್ತಿದೆ. ಇದರಿಂದ ಸೋಂಕು ನಿರ್ವಹಣೆ ಸಾಧ್ಯವಾಗಲಿದೆ ಎಂದರು.
ತುಮಕೂರು ಜಿಲ್ಲೆ ದೊಡ್ಡ ಜಿಲ್ಲೆಯಾಗಿ ಬೆಳೆಯುತ್ತಿದ್ದು, ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ಒತ್ತಾಯ ಮಾಡಲಾಗಿದೆ. ಜಿಲ್ಲೆಗೆ ಮೆಡಿಕಲ್ ಕಾಲೇಜ್ ಬರುವುರಿಂದ ಜಿಲ್ಲಾಸ್ಪತ್ರೆಗೆ ಅವಶ್ಯ ಚಿಕಿತ್ಸಾ ಕ್ರಮಗಳಿಗೆ ಅನುಕೂಲವಾಗುತ್ತದೆ. ಅಲ್ಲದೇ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಅದೇ ರೀತಿಯಾಗಿ ಜಿಲ್ಲೆಯಲ್ಲಿ 30 ಲಕ್ಷ ಜನ ಸಂಖ್ಯೆ ಇರುವುದರಿಂದ ಅವಶ್ಯಕ ಇರುವ ಲಸಿಕೆಯನ್ನು ಒದಗಿಸಲು ಸಮ್ಮತಿ ನೀಡಿದ್ದಾರೆ ಎಂದು ಹೇಳಿದರು.
ಇನ್ನೆರಡು ತಿಂಗಳಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹೊಂದಲಿವೆ. ಚಿಕ್ಕನಾಯಕನಹಳ್ಳಿ, ಶಿರಾ, ತಿಪಟೂರಿನಲ್ಲಿ ಸರ್ಕಾರದ ವತಿಯಿಂದ ಘಟಕ ನಿರ್ಮಾಣ ಪ್ರಾರಂಭಿಸಲಾಗಿದ್ದು,ಹೈಡಾಲ್ ಬರ್ಗ್ ಸಿಮೆಂಟ್ ಕಾರ್ಖಾನೆಯು ತುರುವೇಕೆರೆ, ರೋಟರಿಯವರು ಗುಬ್ಬಿ ಯಲ್ಲಿ, ಬಿಇಎಲ್ ಸಂಸ್ಥೆಯು ಕುಣಿಗಲ್ ತಾಲೂಕಿನಲ್ಲಿ, ವಿಪ್ರೋದವರು ಕೊರಟಗೆರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ನೆರವು ನೀಡುತ್ತಿದ್ದಾರೆ. ಪಾವಗಡದಲ್ಲಿ ಆಮ್ಲಜನಕವನ್ನು ಈಗಾಗಲೇ ಉತ್ಪಾದನೆ ಮಾಡಲಾಗುತ್ತಿದೆ. ಜೂನ್, ಜುಲೈನೊಳಗೆ ಎಲ್ಲಾ ತಾಲ್ಲೂಕುಗಳಲ್ಲಿ ಆಮ್ಲಜನಕ ಉತ್ಪಾದನೆಯಾಗಲಿದೆ ಎಂದು ತಿಳಿಸಿದರು.
ಜೂನ್ 7ರ ನಂತರ ಲಾಕ್ ಡೌನ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕೊರೋನಾ ಪಾಸಿಟಿವಿಟಿಯಲ್ಲಿ ಜಿಲ್ಲೆ ಕಿತ್ತಲೆ ವಲಯದಲ್ಲಿದೆ. ಹಸಿರು(ಗ್ರೀನ್) ವಲಯಕ್ಕೆ ಬಂದು ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ.10ರೊಳಗೆ ಇಳಿದರೆ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಗೊಳಿಸುವ ನಿರ್ಣಯ ಜಿಲ್ಲಾಡಳಿತ ಕೈಗೊಳ್ಳಲಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಈಗಿರುವ ಪರಿಸ್ಥಿತಿಯೇ ಮುಂದುವರಿಯಲಿದೆ ಎಂದರು.
ಹೋಂ ಕ್ವಾರಂಟೈನ್ ಗೆ ಅವಕಾಶ ಮಾಡಿಕೊಟ್ಟಿದ್ದ ಪರಿಣಾಮ ಮರಣ ಪ್ರಮಾಣ ಹೆಚ್ಚಾಗಲು ಕಾರಣವಾಯಿತು. ಮನೆಯಲ್ಲಿಯೇ ಸೋಂಕಿತರು ಉಳಿದು ಆಮ್ಲಜನಕ ಅವಶ್ಯಕತೆ ತೀವ್ರವಾದ ನಂತರ ಆಸ್ಪತ್ರೆಗೆ ಬಂದು ಚಿಕಿತ್ಸೆ ಫಲಿಸದೆ ಸಾವುಗಳು ಸಂಭವಿಸಿವೆ. ಕೋವಿಡ್ ಕೇರ್ ಸೆಂಟರ್ ನಲ್ಲಿದ್ದು ಸೋಂಕಿನ ತೀವ್ರತೆ ಹೆಚ್ಚಾಗಿ ವೆಂಟಿಲೇಟರ್, ಐ.ಸಿ.ಯುನಲ್ಲಿ ಚಿಕಿತ್ಸೆ ಪಡೆದ ಕೆಲವು ಸೋಂಕಿತರು ಪಾರಾಗಿದ್ದಾರೆ. ಆದ್ದರಿಂದ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಇರುವವರು ಕೋವಿಡ್ ಕೇರ್ ಸೆಂಟರ್ ಗೆ ಬರಬೇಕೆಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.