ಪಾಸಿಟಿವ್ ಪ್ರಮಾಣ ಶೇ.25.27% ಇದೆ. ಈ ಸೋಂಕಿನ ಪ್ರಮಾಣವನ್ನು ಶೇ.10ರೊಳಗೆ ಇಳಿಸಬೇಕಾಗಿದೆ
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಕೋವಿಡ್-19 ಎರಡನೇ ಅಲೆಯಲ್ಲಿ 67392 ಪ್ರಕರಣಗಳು ಕಂಡುಬಂದಿದ್ದು, 445 ಸೋಂಕಿತರು ಸಾವನ್ನಪ್ಪಿದ್ದಾರೆ. ಮರಣ ಪ್ರಮಾಣ ಶೇ.0.66 ಇದ್ದು, ಪಾಸಿಟಿವ್ ಪ್ರಮಾಣ ಶೇ.25.27% ಇದೆ. ಈ ಸೋಂಕಿನ ಪ್ರಮಾಣವನ್ನು ಶೇ.10ರೊಳಗೆ ಇಳಿಸಬೇಕಾಗಿದೆ ಎಂದರು.
ಎರಡನೇ ಅಲೆಯಲ್ಲಿ ಜಿಲ್ಲೆಯಲ್ಲಿರುವ ಎರಡು ಸರ್ಕಾರಿ ಆರ್ ಟಿಪಿಸಿಆರ್ ಲ್ಯಾಬ್ ಗಳನ್ನು ಬಳಸಿಕೊಂಡು 266645 ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಸೋಂಕು ದೃಢಪಟ್ಟವರಿಗೆ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿಯು ಚಿಕಿತ್ಸೆ ನೀಡಲಾಗಿದೆ. ಜಿಲ್ಲೆಗೆ 23ಕೆಎಲ್ ಆಮ್ಲಜನಕ ಪೂರೈಕೆ ಮಾಡಿ ಯಾವುದೇ ಸೋಂಕಿತರಿಗೆ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ನೋಡಲ್ ಅಧಿಕಾರಿಗಳನ್ನು ನೇಮಿಸಿ ಹಾಸಿಗೆಗಳ ನಿರ್ವಹಣೆ ಮಾಡಲಾಗಿದೆ. ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿಯೂ ಆಮ್ಲಜನಕ ಉತ್ಪಾದನೆ ಘಟಕ ಮಾಡಲು ಕ್ರಮ ವಹಿಸಲಾಗಿದೆ ಹಾಗೂ 566 ಆಮ್ಲಜನಕ ಸಾಂದ್ರಕಗಳನ್ನು ಪಡೆದು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಪಾವಗಡ ತಾಲೂಕಿನಲ್ಲಿ 100 ಎಲ್ ಪಿಎಂ ಆಮ್ಲಜನಕ ಉತ್ಪಾದನಾ ಘಟಕ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಪ್ರತಿಯೋರ್ವ ಸೋಂಕಿತನಿಗೂ ಅಗತ್ಯ ಔಷದೋಪಾಚಾರವನ್ನು ಒದಗಿಸಲಾಗುತ್ತಿದೆ. ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ಆಶಾ ಕಾರ್ಯಕರ್ತೆಯರು ಮತ್ತು ಅಧಿಕಾರಿಗಳಿಂದ ಕೋವಿಡ್ ಕಿಟ್ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿದೆ. ಸೋಂಕು ಇಳಿಕೆ ಸಮಾಧಾನ ತಂದಿದೆ. ಸೋಂಕಿನ ಪ್ರಮಾಣವನ್ನು ಶೇ.10ಕ್ಕೆ ಇಳಿಸಲು ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಎಲ್ಲಾ ರೀತಿಯಲ್ಲಿಯೂ ಸಹಕಾರ ಸಿಗಲಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ. ಏನೇನು ಸಾಧ್ಯವೋ ಅದನ್ನೆಲ್ಲವನ್ನೂ ಈಡೇರಿಸಲು ಸಮ್ಮತಿ ನೀಡಿದ್ದೇನೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು ಜನಪ್ರತಿನಿಧಿಗಳು ಸೇರಿದಂತೆ ವಿಶೇಷವಾಗಿ ಜಿಲ್ಲಾಡಳಿತ ಹಗಲು-ರಾತ್ರಿ ಶ್ರಮಿಸುತ್ತಿದೆ. ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸರ್ಕಾರದಿಂದ ಘೋಷಿಸಲಾಗಿರುವ ವಿಶೇಷ ಪ್ಯಾಕೇಜನ್ನು ಎಲ್ಲರಿಗೂ ತಲುಪಿಸುವ ಕಾರ್ಯ ಆರಂಭವಾಗಿದೆ. ಹಣವನ್ನು ಬಿಡುಗಡೆ ಮಾಡುತ್ತೇವೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಯಾವುದೇ ಕಾರಣಕ್ಕೂ ಘೋಷಿಸಲಾಗಿರುವ ಹಣವನ್ನು ಕೊಡುತ್ತೇವೆ. ಮೂರನೇ ಅಲೆ ನಿಯಂತ್ರಣಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಲಭ್ಯತೆ ಆಧಾರದಲ್ಲಿ 18-44 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುವುದು. ತುಮಕೂರು ಜಿಲ್ಲೆಗೂ ಹೆಚ್ಚು ಲಸಿಕೆ ನೀಡಲಾಗುವುದು ಎಂದು ಹೇಳಿದರು.