28 5 21 Srivyshnava Archakaru 1

ಪಾವಗಡ: ಅರ್ಚಕರುಗಳಿಗೆ ದಿನಸಿ ಕಿಟ್ ವಿತರಣೆ…!

DISTRICT NEWS ತುಮಕೂರು

ತಾಲ್ಲೂಕಿನ ಎಲ್ಲಾ ಅರ್ಚಕರುಗಳಿಗೆ ದಿನಸಿ ಕಿಟ್ , ಅಡುಗೆ ಎಣ್ಣೆ, ಅಕ್ಕಿ, ಸೋಪು ವಿತರಣೆ….

ಪಾವಗಡ:  ಇಂದು ಶ್ರೀ ವೈಷ್ಣವ ಮಹಾಸಭಾದ ತಾಲ್ಲೂಕಿನ ಎಲ್ಲಾ ಅರ್ಚಕರುಗಳಿಗೆ ದಿನಸಿ ಕಿಟ್ ಹಾಗೂ ಅಡುಗೆ ಎಣ್ಣೆ, ಅಕ್ಕಿ, ಸೋಪು ಇತ್ಯಾದಿಗಳನ್ನು ವಿತರಿಸಲಾಯಿತು. ಸರಿಸುಮಾರು 60ಕ್ಕೂ ಹೆಚ್ಚಿನ ಶ್ರೀ ವೈಷ್ಣವ ಸಂಪ್ರದಾಯದ ಅರ್ಚಕರುಗಳು ಸಾಂಪ್ರದಾಯಿಕ ತೊಡುಗೆಗಳನ್ನು ತೊಟ್ಟು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಸ್ತಿ ವಾಚನದ ಮೂಲಕ ಕಾರ್ಯಕ್ರಮ ಆರಂಭವಾಯಿತು. ಪೂಜ್ಯ ಸ್ವಾಮಿ ಜಪಾನಂದಜೀ ರವರು ನೆರೆದಿದ್ದ ಎಲ್ಲ ಅರ್ಚಕರುಗಳಿಗೆ ಗೌರವವನ್ನು ಸಮರ್ಪಿಸಿ ನಮ್ಮ ಸಂಸ್ಕೃತಿ ಪರಂಪರೆಯ ಅಡಿಪಾಯವೇ ಅರ್ಚಕ ವರ್ಗದವರು ಎಂದು ಅರ್ಚಕ ವೃತ್ತಿಯ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವಿವರಿಸಿದರು.

ಭಗವಂತನ ಸಮೀಪದಲ್ಲಿರುವ ಈ ವರ್ಗದವರು ಪ್ರತಿಯೊಂದು ಗ್ರಾಮದ, ಊರಿನ, ಪಟ್ಟಣದ, ನಗರದ ಕ್ಷೇಮಕ್ಕಾಗಿ ತಾವು ಪೂಜಿಸುತ್ತಿರುವ ಜಾಗೃತ ಮೂರ್ತಿಗೆ ಎಲ್ಲರ ಪರವಾಗಿ ಪ್ರಾರ್ಥಿಸಬೇಕೆಂದು ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ಅರ್ಚಕ ವೃತ್ತಿ ಬಹಳ ಪವಿತ್ರವಾದ ವೃತ್ತಿ. ಭಗವಾನ್ ಶ್ರೀರಾಮಕೃಷ್ಣರೂ ಸಹ ಅರ್ಚಕರಾಗಿದ್ದರು, ಆದರೆ ತಮ್ಮ ಕಠೋರ ಸಾಧನೆಯ ಮೂಲಕ ಇಂದು ಜಗತ್ತಿನಾದ್ಯಂತ ಅರ್ಚಿಸಲ್ಪಡುತ್ತಿದ್ದಾರೆ ಎಂಬುದನ್ನು ನಾವು ಮನಗಾಣಬೇಕು ಎಂದು ತಿಳಿಸಿದರು. ಮಂತ್ರ ಪಠಣೆ, ಸಂಪ್ರದಾಯ ಹಾಗೂ ಸಂಸ್ಕೃತಿಯ ಸಂಗಮವಾಗಿರುವ ಅರ್ಚಕರು ತಮ್ಮ ಜೀವನವನ್ನು ಕೇವಲ ಭಕ್ತರು ದೇವಸ್ಥಾನಕ್ಕೆ ಬಂದಾಗ ಮಾತ್ರ ಮಂತ್ರೋಪಚಾರಣೆ ಮಾಡುತ್ತಾ ಭಕ್ತರನ್ನು ಸಂತುಷ್ಟಿಗೊಳಿಸುವ ಮನಸ್ಸನ್ನು ಕಿತ್ತೊಗೆದು, ಭಗವಂತನನ್ನು ಸಂತೃಪ್ತಿಗೊಳಿಸುವ ಕೈಂಕರ್ಯವನ್ನು ಕೈಗೊಳ್ಳಬೇಕೆಂದು ಸೂಚ್ಯಕವಾಗಿ ತಿಳಿಸಿದರು.28 5 21 Srivyshnava Archakaru 2

ತಮ್ಮ ಪರಂಪರಾನುಗತವಾಗಿ ಬಂದಿರುವ ಅರ್ಚಕ ಪವಿತ್ರ ವೃತ್ತಿಯನ್ನು ಭಗವಂತನ ಸೇವೆಯೆಂದೇ ಪರಿಗಣಿಸಿ ಜನರು ದೇವಾಲಯಕ್ಕೆ ಬರಲಿ ಅಥವಾ ಬಿಡಲಿ, ಅದರ ಬಗ್ಗೆ ಹೆಚ್ಚು ಗಮನ ನೀಡದೆ ಭಗವಂತನನ್ನು ಸಾಕ್ಷಾತ್ಕಾರಗೊಳಿಸುವಂತಹ ದಿಕ್ಕಿನಲ್ಲಿ ಕೈಂಕರ್ಯ ನಡೆಸಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕೋವಿಡ್ ಮಾರಿಯನ್ನು ಹೊಡೆದೋಡಿಸುವ ಮೂರು ಸೂತ್ರಗಳನ್ನು ನಿಷ್ಠೆಯಿಂದ ತಾವು ಪರಿಪಾಲಿಸುವುದಲ್ಲದೆ ಇತರರೂ ಪರಿಪಾಲಿಸುವ ಹಾಗೆ ಮಾಡಿದ್ದೇ ಆದರೆ ಈ ದೇಶಕ್ಕೆ ನೀಡುವ ಮಹಾನ್ ಸೇವೆ ಎನ್ನಬಹುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಪ್ರಸನ್ನಮೂರ್ತಿ, ಶ್ರೀ ಜಯಸಿಂಹ, ಶ್ರೀ ಸುದೇಶ್ ಬಾಬು ರವರು ಸೇವಾಶ್ರಮ ಹಾಗೂ ಶ್ರೀಮತಿ ಸುಧಾಮೂರ್ತಿ ರವರ ಸಹಕಾರದಿಂದ ನಿತ್ಯ ನಿರಂತರವಾಗಿ ನಡೆಯುತ್ತಿರುವ ಸೇವೆಯಲ್ಲಿ ತಾವೂ ಸಹ ಭಾಗಿಯಾಗಲು ಅವಕಾಶ ನೀಡಿದ್ದಕ್ಕೆ ಸ್ವಾಮೀಜಿಯವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಕಾರ್ಯಕ್ರಮವು ಅತ್ಯಂತ ಶಿಸ್ತಿನಿಂದ ವಿವೇಕ ಬ್ರಿಗೇಡಿನ ಸದಸ್ಯರುಗಳ ಸಹಕಾರದಿಂದ ಯಶಸ್ವಿಯಾಗಿ ನೆರವೇರಿತು.