ಸರ್ಜಾಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಂತರ್ ರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ಅವರಿಂದ ಸುಮಾರು 40 ಲಕ್ಷ ರೂಪಾಯಿ ಬೆಲೆಯ 25 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಪೊಲೀಸ್ ಠಾಣೆ ವ್ಯಾಪ್ತಿಯ ಹಂದೇನಹಳ್ಳಿ ಗ್ರಾಮದ ರಸ್ತೆಯಲ್ಲಿರುವ ಕ್ರಾಂತಿ ಲೇಔಟ್ ಬಳಿ ದರೋಡೆ ಮಾಡಲು 5 ಜನ ಆರೋಪಿಗಳು ಸಂಚು ರೂಪಿಸಿದ್ದಾರೆ ಎಂಬ ಖಚಿತ ಮಾಹಿತಿ ಆದಾರದ ಮೇಲೆ ಸರ್ಜಾಪುರ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಮಂಜು ಮತ್ತು ಅವರ ತಂಡ ಆರೋಪಿಗಳ ಮೇಲೆ ದಾಳಿ ಮಾಡಿ ಅವರ ಬಳಿ ಇದ್ದ ಮಾರಾಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು ನಂತರ ಐದು ಆರೋಪಿಗಳ ಮೇಲೆ ಸರ್ಜಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನಂತರ ತನಿಖೆ ನಡೆಸಿದಾಗ ಆರೋಪಿಗಳಿಂದ 40 ಲಕ್ಷ ರೂಪಾಯಿ ಬೆಲೆಯ 25 ದ್ವಿಚಕ್ರ ವಾಹನಗಳನ್ನು ಸರ್ಜಾಪುರ ಪೋಲಿಸರು ಜಪ್ತಿ ಮಾಡಿಕೊಂಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ರವರು ಸರ್ಜಾಪುರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳು ತಮಿಳುನಾಡು ಮೂಲದ ಪ್ರಕಾಶ್ ರಾಜ್,ಗೋಪಿ,ನವೀನ್ ಕುಮಾರ್,ಹೊಸಕೋಟೆ ಮಹಮದ್ ಶಾಹಿದ್,ತಿರುಪಾಳ್ಯ ನಂದೀಶ್ ಆರೋಪಿಗಳು.ಇನ್ನು ಆರೋಪಿಗಳು ಸರ್ಜಾಪುರ, ಮಾಲೂರು,ಹೊಸಕೋಟೆ,ಹೊಸೂರು,ಬಾಗಲೂರು,ಮೂಲೂರು.ಸೂರ್ಯಸಿಟಿ ಪೋಲಿಸ್ ಠಾಣೆಗಳಲ್ಲಿ ಒಟ್ಟು 21 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ತನಿಖೆ ಯಿಂದ ತಿಳಿದು ಬಂದಿದೆ.
ಇಬ್ಬರು ಆರೋಪಿಗಳು ಈ ಹಿಂದೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಕೂಡ ಬಂದಿದ್ದಾರೆ ಜೊತೆಗೆ ಕದ್ದ ಬೈಕ್ ಗಳನ್ನು ಮಾರಾಟ ಮಾಡಿ ಅದರಿಂದ ಬರುತ್ತಿದ್ದ ಹಣದಿಂದ ಮೋಜು ಮಸ್ತಿ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಸರ್ಜಾಪುರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮಂಜು, ಸಬ್ ಇನ್ಸ್ ಪೆಕ್ಟರ್ ದುಂಡಪ್ಪ ಬಾರ್ಕಿ,ಪೋಲಿಸರಾದ ಪ್ರಭುಕುಮಾರ್,ಸಂತೋಷ್ ಕುಮಾರ್ ರವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ರವರು ಪ್ರಶಂಸೆ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ಎಂ.ಎಲ್. ಪುರುಷೋತ್ತಮ್, ಡಿವೈಎಸ್ಪಿ ಎ.ವಿ.ಲಕ್ಷ್ಮಿನಾರಾಯಣ್ ಮತ್ತು ಸರ್ಜಾಪುರ ಪೋಲಿಸರು ಹಾಜರಿದ್ದರು.
ವರದಿ: ಹರೀಶ್ -ಆನೇಕಲ್