DSC 6433 scaled

ವಿಧಾನಪರಿಷತ್: ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡುವ  ಪ್ರಸ್ತಾವನೆ ಪರಿಶೀಲನೆಯಲ್ಲಿ….!

Genaral STATE

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡುವ  
ಪ್ರಸ್ತಾವನೆ ಪರಿಶೀಲನೆಯಲ್ಲಿದೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಸೆಪ್ಟೆಂಬರ್ 15, (ಕರ್ನಾಟಕ ವಾರ್ತೆ) :
2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಶೂನ್ಯ ವೇಳೆಯಲ್ಲಿ ಮಂಡಿಸಿದ ಸೂಚನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು,  ರಾಜ್ಯದ ಪಂಚಾಯತ್ ಸಂಸ್ಥೆಗಳ ಆಡಳಿತ ವ್ಯವಸ್ಥೆಯಲ್ಲಿ ಮತ್ತಷ್ಟು ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ವೇಗವನ್ನು ಹೆಚ್ಚಿಸಲು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಲವಾರು ಪ್ರೋತ್ಸಾಹಕ ಕ್ರಮಗಳನ್ನು ಜಾರಿಗೆ ತರಲಾಗಿದೆ. ಇದರ ಭಾಗವಾಗಿ 2013-14 ರಿಂದ ಉತ್ತಮವಾಗಿ ಕಾರ್ಯನಿರ್ವಹಿಸುವ ಗ್ರಾಮ ಪಂಚಾಯತಿಗಳಿಗೆ ತಾಲ್ಲೂಕಿಗೆ ಒಂದರಂತೆ ಗಾಂಧಿ ಗ್ರಾಮ ಪುರಸ್ಕಾರ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ರಾಜ್ಯದಲ್ಲಿ ಉತ್ತಮ ಕಾರ್ಯ ಸಾಧನೆ ಮಾಡಿರುವ ಗ್ರಾಮ ಪಂಚಾಯತಿಗಳನ್ನು ಗುರುತಿಸಿ, ಅವುಗಳಿಗೆ ಪ್ರೋತ್ಸಾಹಕ ಅನುದಾನಗಳನ್ನು ಬಿಡುಗಡೆ ಮಾಡಿ, ಈ ಗ್ರಾಮ ಪಂಚಾಯತಿಗಳು ಮತ್ತಷ್ಟು ಉತ್ತಮ ಕೆಲಸಗಳನ್ನು ಹಾಗೂ ವಿಶೇಷ ಸಾಧನೆಗಳನ್ನು ಮಾಡಲು ಅವಕಾಶ ಮಾಡಿಕೊಡುವುದು ಈ ಯೋಜನೆಯ ಉದ್ದೇಶವಾಗಿದ್ದು, ಅಂತೆಯೇ ಈ ಗ್ರಾಮ ಪಂಚಾಯತಿಗಳ ಕಾರ್ಯ ಸಾಧನೆಯು ಮಾದರಿಯಾಗಿ ನಿಂತು, ಇತರೆ ಗ್ರಾಮ ಪಂಚಾಯತಿಗಳಿಗೂ ಸಹ ಪ್ರೇರಣೆಯಾಗಲಿ ಎಂದು ಆಶಿಸಲಾಗಿದೆ.

DSC 6453

ಗಾಂಧಿ ಗ್ರಾಮ ಪುರಸ್ಕಾರ ಯೋಜನೆಯನ್ನು 2013-14 ನೇ ಸಾಲಿನಿಂದ ಅನುಷ್ಟಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ಪ್ರತಿ ತಾಲ್ಲೂಕಿನಿಂದ ಉತ್ತಮ ಆಡಳಿತ ಮತ್ತು ಆರ್ಥಿಕ ಕಾರ್ಯ ಸಾಧನೆ ಮಾಡಿರುವ ಒಂದು ಗ್ರಾಮ ಪಂಚಾಯಿತಿಯನ್ನು ಗುರುತಿಸಿ, ತಲಾ ರೂ. 5.00 ಲಕ್ಷಗಳ ಪ್ರೋತ್ಸಾಹಕ ಅನುದಾನವನ್ನು ನೀಡಲಾಗುತ್ತಿದೆ.

2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪ್ರತಿ ತಾಲ್ಲೂಕಿಗೆ ಒಂದರಂತೆ ಒಟ್ಟು 176 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಪುರಸ್ಕಾರ ಅನುದಾನ ನೀಡಿರುವುದಿಲ್ಲ ಎಂದು ತಿಳಿಸಿದರು.