IMG 20220924 WA0055

ಬ್ಯಾಂಕ್ ಗಳಿಂದ ರೈತರ ಆಸ್ತಿಪಾಸ್ತಿ ಜಪ್ತಿಗೆ ನಿಷೇಧ…!

Genaral STATE

ಬ್ಯಾಂಕ್ ಗಳಿಂದ ರೈತರ ಆಸ್ತಿಪಾಸ್ತಿ ಜಪ್ತಿಗೆ ನಿಷೇಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಚಿತ್ರದುರ್ಗ, ಸೆಪ್ಟೆಂಬರ್ 25: ರೈತರು ಸಂಕಷ್ಟ ದಲ್ಲಿರುವ ಸಂದರ್ಭದಲ್ಲಿ ಬ್ಯಾಂಕ್ ಗಳು ರೈತರ ಆಸ್ತಿ ಜಪ್ತಿ ಮಾಡುವುದು ನೋಟೀಸ್ ಜಾರಿ ಮಾಡುವ ಕೆಲಸ ಮಾಡುತ್ತಿದೆ. ಇದಕ್ಕೆ ಅಂತ್ಯ ಹಾಡಲು ಕಾನೂನಿನ ತಿದ್ದುಪಡಿ ತಂದು ಅವರ ಆಸ್ತಿಪಾಸ್ತಿ ಜಪ್ತಿ ಮಾಡುವುದನ್ನು ನಿಷೇಧ ಮಾಡುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಅವರು ಇಂದು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಆಯೋಜಿಸಿದ್ದ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 30 ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಬದ್ಧತೆಯಿಂದ ಕೆಲಸ ಮಾಡುವ ಕ್ರಿಯಾಶಕ್ತಿಯೇ ಭಕ್ತಿಯ ಶಕ್ತಿ. ಗುರುಗಳಿಂದ ಪ್ರೇರಣೆ ಪಡೆದು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನಮ್ಮ ಪ್ರಯತ್ನ ಮಾಡಲಾಗುತ್ತಿದೆ.
ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರೈತರ ಮಕ್ಕಳಿಗೆ ವಿದ್ಯಾನಿಧಿ ರೂಪಿಸಲಾಯಿತು. 14 ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗಿದೆ. ರೈತ ಕೂಲಿಕಾರ ಮಕ್ಕಳಗೆ, ನೇಕಾರರಿಗೆ, ಮೀನುಗಾರರಿಗೆ, ಆಟೋ ರಿಕ್ಷಾ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರಿಗೆ ಯೋಜನೆ ವಿಸ್ತರಣೆಯಾಗಿದೆ. ಶಿಕ್ಷಣದಿಂದ ಉದ್ಯೋಗ ನೀಡಬಹುದೆಂದು ಯೋಜನೆ ರೂಪಿಸಿದೆ. ರಾಜ್ಯದ ಮಕ್ಕಳು ಹಣದ ಕೊರತೆಯಿಂದ ಓದು ನಿಲ್ಲಿಸಬಾರದು, ಅವರ ಭವಿಷ್ಯ ಉಜ್ವಲವಾಗಿ ನಿರ್ಮಾಣವಾಗಲಿ ಎಂದು ಈ ಕೆಲಸ ಮಾಡಲಾಗಿದೆ. ನೀರಾವರಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ. 3 ಲಕ್ಷ ದವರೆಗೆ ಬಡ್ಡಿರಹಿತ ಸಾಲ ನೀಡಿದರೂ ಅತಿವೃಷ್ಟಿ, ಅನಾವೃಷ್ಟಿ ಕಾರಣದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿದೆ. ಕೆರೆ ಕಟ್ಟೆ ತುಂಬಿ ನೀರು ಇನ್ನು 2-3 ವರ್ಷಗಳಿಗೆ ತೊಂದರೆ ಇಲ್ಲ. ಕೆಲವೆಡೆ ಪ್ರವಾಹವಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

IMG 20220924 WA0058

ರಾಷ್ಟ್ರೀಯ ಯೋಜನೆ
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುವ ಅಂತಿಮ ಘಟ್ಟದಲ್ಲಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಅದರ ಅನುಮೋದನೆ ದೊರೆತ ಕೂಡಲೇ 14 ಸಾವಿರ ಕೋಟಿ ರೂ.ಗಳ.ನೆರವು ನಮಗೆ ಬರಲಿದೆ. ಇದನ್ನು ಪೂರ್ಣ ಮಾಡಲು ಹಣಕಾಸಿನ ಶಕ್ತಿ ದೊರೆಯುತ್ತದೆ ಎಂದರು.

ದುಡ್ಡು ಸಂಬಂಧಗಳನ್ನು ಕೆಡಿಸುತ್ತದೆ. ಯಾವಾಗ ಬದುಕು ವ್ಯವಹಾರವಾಗುತ್ತದೆಯೋ ಆಗ ಸಂಬಂಧಗಳು ಉಳಿಯುವುದಿಲ್ಲ. ಬದುಕು ಬದುಕಾಗಿಯೇ ಇರಬೇಕು. ತತ್ವ ಜ್ಞಾನದಲ್ಲಿ ಪಾಪ ಪುಣ್ಯವಿದೆ. ವ್ಯಾಪಾರದಲ್ಲಿ ಲಾಭ ನಷ್ಟವಿದೆ.
ಗುರುಗಳು ತಮ್ಮ ಪುಸ್ತಕ ಹಣದ ಝೇಂಕಾರ, ಸಂಬಂಧಗಳಿಗೆ ಸಂಚಕಾರ ಪುಸ್ತಕದಲ್ಲಿ ಹೇಳಿದ್ದಾರೆ. ಬದುಕನ್ನು ಸುಧಾರಿಸಲು ಮಾಡಬೇಕಾದ ಅಂಶಗಳಿವೆ. ಪರರ ನಿಂದನೆಗೆ ವೃಥಾ ವ್ಯಾಕುಲ ಪಡಬೇಡ, ದ್ವೇಷಕ್ಕಾಗಿ ತೆಗಳಿಕೆ , ತೆಗಳಿಕೆ ಅಲ್ಲ. ಇವುಗಳ ಮಧ್ಯೆ ಸ್ಥಿತಪ್ರಜ್ಞಾನಾಗಿರಬೇಕು ಎನ್ನುವುದೇ ತರಳಬಾಳು ಭೃಹನ್ಮಠದ ತತ್ವ. ಸಮಕಾಲೀನ, ಪ್ರಗತಿ ಪರ ಚಿಂತನೆ, ಆಶೀರ್ವಾದ, ಹಿರಿಯ ಗುರುಗಳ ಆಶೀರ್ವಾದಗಳನ್ನು ಅಳವಡಿಸಿಕೊಂಡು ಸರ್ಕಾರ ಮುಂದುವರೆಯುತ್ತದೆ. ಸರ್ಕಾರ ಈ ತತ್ವಗಳಿಗೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡುತ್ತದೆ. ಮಠಕ್ಕೆ ಪ್ರೀತಿ ಪಾತ್ರರಾದ ರೈತರು, ದುಡಿಯುವ ವರ್ಗಕ್ಕೆ ಅತಿ ಹೆಚ್ಚು ಮಹತ್ವ ನೀಡಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು. ದುಡಿಮೆಯೇ ದೊಡ್ಡಪ್ಪ ಎಂಬ ಮಠದ ಮೂಲ ತತ್ವ, ಆದರ್ಶ ಗಳಂತೆ ನಡೆದುಕೊಳ್ಳಲಾಗುವುದು ಎಂದರು.

ಮನಸ್ಸಿನ ಶುದ್ದೀಕರಣ

ಪ್ರತಿ ವರ್ಷ ಹಿರಿಯ ಗುರುಗಳನ್ನು ಸ್ಮರಣೆ ಮಾಡುವ ದಿನದಂದು ಬಂದು ಹೋಗುವಾಗ ಆಗುವ ಅನುಭವ ನಮ್ಮ ಚಿಂತನೆ, ವಿಚಾರ, ಮನಸ್ಸಿನ ಭಾವನೆಗಳನ್ನು ಶುದ್ದೀಕರಣ ಮಾಡಿಕೊಳ್ಳುವ ಸಂದರ್ಭ ಎಂದು ಭಾವಿಸಿದ್ದೇನೆ ಎಂದರು.

ಮನಸ್ಸಿನ ಸರ್ವೀಸ್ ಮಾಡಲು ಇಲ್ಲಿಗೆ ಬರಬೇಕು. ಅಗತ್ಯವಿಲ್ಲದ ವಿಚಾರಗಳನ್ನು ತೊಳೆದು ಮತ್ತೆ ಸ್ವಚ್ಛ ಮನಸ್ಸಿನಿಂದ ಹೋಗುವ ಪ್ರಕ್ರಿಯೆ ಹಿರಿಯ ಶಿವಕುಮಾರ ಸ್ವಾಮಿಗಳ ಪುಣ್ಯ ಸ್ಮರಣೆ. ಹಿರಿಯ ಜಗದ್ಗುರು ಗಳ ಜೀವನ, ಬದುಕಿನಲ್ಲಿ ನಡೆದ ಘಟನೆಗಳು, ಎದುರಾದ ಸವಾಲುಗಳು, ದುಃಖ ದುಮ್ಮಾನಗಳು ಹತ್ತು ಹಲವಾರಿವೆ. ಆದರೆ ಅವೆಲ್ಲವನ್ನು ಲೆಕ್ಕಿಸದೆ, ಅವುಗಳನ್ನೇ ಮೆಟ್ಟಿಲಾಗಿಸಿಕೊಂಡು ಜನರ ದುಃಖದುಮ್ಮಾನಕ್ಕೆ ಹೆಚ್ಚು ಮಹತ್ವವನ್ನು ನೀಡಿದವರು. ಸಮಾಜದ ಅನಿಷ್ಟ ಪದ್ಧತಿಗಳು, ಮೂಢನಂಬಿಕೆಗಳನ್ನು ದೂರ ಮಾಡಲು ಹೋರಾಡಿದರು. ಒಂದೆಡೆ ಮಠದ ಸವಾಲುಗಳು, ಅವರ ಆಡಳಿತದ ಮೇಲಿನ ಸಾವಲು ಹಾಗೂ ಮತ್ತೊಂದೆಡೆ ಸಮಾಜವನ್ನು ಎತ್ತಿಹಿಡಿಯುವ ಸವಾಲು. ಈ ಎರಡರ ಆಯ್ಕೆಯಲ್ಲಿ ಸಮುದಾಯದತ್ತ ನಿರಂತರವಾಗಿ ಬದುಕಿ ಬಾಳಿ, ಸಮಾಜವನ್ನೇ ಉದ್ದಾರ ಮಾಡಿರುವ ಅತ್ಯಂತ ಶ್ರೇಷ್ಠ ಗುರುಗಳು. ಅವರ ಬದುಕೇ ನಮಗೆ ಮಾರ್ಗದರ್ಶನ. ಮುಂದಿಟ್ಟ ಹೆಜ್ಜೆಗಳನ್ನು ಎಂದಿಗೂ ಹಿಂದಿಡಲಿಲ್ಲ. ಎಂಥ ಸಮಸ್ಯೆ ಬಂದರೂ ಸತ್ಯವನ್ನು ನೆಚ್ಚಿಕೊಂಡವರು. ಒಂದು ಕಾಲದಲ್ಲಿ ಭಕ್ತಾದಿಗಳು ಪ್ರಶ್ನೆಗಳನ್ನು ಮಾಡಿದಾಗಲೂ ಧೃತಿಗೆಡದೆ ಸತ್ಯವನ್ನು ನೆಚ್ಚಿಕೊಂಡಾಗ ಇಡೀ ಜಗತ್ತೇ ಅವರನ್ನು ಒಪ್ಪಿಕೊಂಡಿತು. ರಾಜಕಾರಣಿಗಳು, ಸರ್ಕಾರ, ವ್ಯವಸ್ಥೆ ಗಳ ವಿರುದ್ಧ ಅವರು ತಮ್ಮ ಬದುಕು ಮತ್ತು ಮಠವನ್ನು ಕಟ್ಟುವ ಕೆಲಸ ಮಾಡಿದರು. ವೈಚಾರಿಕತೆಯಲ್ಲಿ ಯಾರಿಗೂ ಕಡಿಮೆ ಇಲ್ಲದೆ ಶ್ರೇಷ್ಠ ಗುರುಗಳಾಗಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ ಎಂದರು.

IMG 20220924 WA0056

ಅರಮನೆಗೂ, ಗುರುಮನೆಗೂ ಸಂಬಂಧವಿದೆ
ಗುರುಗಳು ಮತ್ತು ಆಡಳಿತ, ಅರಮನೆಗೂ, ಗುರುಮನೆಗೂ ಸಂಬಂಧವಿದೆ. ಸಮಾಜ ಗುರುವಿನತ್ತ ನೋಡುತ್ತದೆ. ಸರ್ಕಾರ ಸಮಾಜದತ್ತ ನೋಡುತ್ತದೆ. ಗುರುಗಳ ಮಾರ್ಗದರ್ಶನ ಸದ್ಭಕ್ತರಿಗೆ ಮತ್ತು ಸರ್ಕಾರಕ್ಕೆ ಯಾವ ರೀತಿಯಲ್ಲಿ ಇರುತ್ತದೆಯೋ ಅದರ ಮೇಲೆ ಆಡಳಿತ ಸೂತ್ರ ನಡೆದುಕೊಂಡು ಹೋಗುತ್ತದೆ. ಈ ವ್ಯವಸ್ಥೆ ಇಂದಿನದಲ್ಲ. ಜನರ ಮನಸ್ಸು ಗುರುಗಳಿಗೆ ತಲೆಬಾಗುತ್ತದೆ. ಗುರುಗಳಾಡುವ ಪ್ರತಿ ಮಾತು ಸಮಾಜದ ಮೇಲೆ ಪ್ರಭಾವ ಬೀರಿ ಸಮಾಜದ ಧ್ವನಿಯಾಗುತ್ತದೆ. ಸಮಾಜದ ಧ್ವನಿಯನ್ನು ಸರ್ಕಾರ ಕೇಳಿಸಿಕೊಳ್ಳಬೇಕಾಗುತ್ತದೆ. ಅರಮನೆಗೂ ಗುರುಮನೆಗೂ ಅಂದಿನ ಸಂಬಂಧ, ಪ್ರಜಾಪ್ರಭುತ್ವ ದಲ್ಲಿಯೂ ಮುಂದುವರೆದಿದೆ ಎನ್ನುವುದನ್ನು ನಮ್ಮ ಅನುಭವಗಳಿಂದ ತಿಳಿದುಕೊಳ್ಳಬೇಕು ಎಂದರು.

ರೈತರಿಗೆ ನ್ಯಾಯ ಒದಗಿಸುವ ಕೆಲಸ

ಅಂದಿನ ಗುರುಗಳು ಬದಲಾದ ಕಾಲಕ್ಕೆ, ಸಮಾಜ, ಭಕ್ತಾದಿಗಳಿಗೆ, ನ್ಯಾಯ ಒದಗಿಸುವ ಗುರುತರ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಭಕ್ತಾದಿಗಳು ರೈತಾಪಿ ವರ್ಗ ಎಂದು ಮನಗಂಡು ಅವರ ದುಡಿಮೆಗೆ ಗೌರವ, ಬೆಲೆ ಬರಬೇಕೆಂದು ರೈತರ ಬೆವರಿಗೆ ಬೆಲೆ ಬರುವಂಥ ಕೆಲಸ ಮಾಡುತ್ತಿದ್ದಾರೆ. ಮಧ್ಯ ಕರ್ನಾಟಕದಲ್ಲಿ ನೀರಿನಿಂದ ವಂಚಿತವಾಗಿದೆ. ಕೆರೆಗಳು ತುಂಬದೆ, ನೀರಾವರಿ ಇಲ್ಲದಿದ್ದರೂ ಫಲವತ್ತಾದ ಜಮೀನಿದೆ ಎನ್ನುವುದನ್ನು ಮನಗಂಡು ಸುಮಾರು 25 ವರ್ಷಗಳಿಂದ ಕೆರೆಗಳಿಗೆ ನೀರು, ನೀರಾವರಿ ಯೋಜನೆಗಳಿಗೆ ಮಹತ್ವ ನೀಡಲು ಗುರುಗಳು ಪ್ರಾರಂಭಿಸಿದರು. ಗುರುಗಳ ಇಚ್ಛಾಶಕ್ತಿ ಹಾಗೂ ಅವರ ಗುರುತ್ವದಲ್ಲಿರುವ ಅದಮ್ಯ ಶಕ್ತಿ ಸರ್ಕಾರವನ್ನು ಈ ಏತ ನೀರಾವರಿ ಯೋಜನೆಗಳನ್ನು ಮಾಡಲು ಪ್ರೇರೇಪಿಸಿದ್ದಾರೆ.ಗುರುಗಳ ಇಚ್ಛಾಶಕ್ತಿಗೆ ಕ್ರಿಯಾ ಶಕ್ತಿಯನ್ನು ನೀಡಿದವರು ಬಿ.ಎಸ್.ಯಡಿಯೂರಪ್ಪ ಅವರು. ಇದು ಸುಲಭದ ಮಾತಲ್ಲ. ನಾಯಕನಿಗೆ ಇಚ್ಛಾಶಕ್ತಿ ಇದ್ದರೆ ಏನೆಲ್ಲಾ ಮಾಡಲು ಸಾಧ್ಯವಿದೆ ಎಂದು ನಿರೂಪಿಸಿದ್ದಾರೆ. ಎಂ.ಬಿ.ಪಾಟೀಲ್ ಮತ್ತು ನಾವು ರಾಜ್ಯದ ವಿಚಾರ ಬಂದಾಗ ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂದರು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಎಲ್ಲಾ ದಿಕ್ಕುಗಳಲ್ಲಿಯೂ ಪಾದಯಾತ್ರೆ ಮಾಡಿದ್ದು ಅಲ್ಲಿ ಒಂದು ಯೋಜನೆ ಸಿದ್ಧವಾಗಿ ಕಾರ್ಯರೂಪಕ್ಕೆ ಬಂದಿದೆ ಎಂದು ವಿವರಿಸಿದರು.