ಮೈಸೂರು: – ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಸೆಪ್ಟೆಂಬರ್ 26, 2022) ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಯವರು, ಮೈಸೂರು ದಸರಾದ ಶುಭ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಶುಭಾಶಯಗಳನ್ನು ತಿಳಿಸಿದರು. ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಎಲ್ಲರಿಗೂ ಸದಾ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ನಮ್ಮ ದೇಶದ ಋಷಿಮುನಿಗಳು ಹಾಗೂ ಜನರು ಹಬ್ಬಗಳ ಮೂಲಕ ಶತಮಾನಗಳಿಂದಲೂ ಭಾರತೀಯ ಸಮಾಜವನ್ನು ಬೆಸೆದಿದ್ದಾರೆ ಎಂದು ರಾಷ್ಟ್ರಪತಿ ಹೇಳಿದರು. ರಾಮಾಯಣ, ಮಹಾಭಾರತ, ಪುರಾಣಗಳು, ಇತಿಹಾಸ ಮತ್ತು ಜಾನಪದ ಕಥೆಗಳ ದೈವಿಕ ಮತ್ತು ಮಾನವ ಪಾತ್ರಗಳನ್ನು ಆಧರಿಸಿದ ಹಬ್ಬಗಳನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಈ ಹಬ್ಬಗಳಲ್ಲಿ ವೈವಿಧ್ಯ ಹಾಗೂ ಏಕರೂಪತೆ ಇದೆ. ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಹೆಮ್ಮೆಯ ಹಬ್ಬವಾಗಿದೆ ಎಂದು ಅವರು ಹೇಳಿದರು.
ಕರ್ನಾಟಕದ ಅಭಿವೃದ್ಧಿ ಪಯಣದ ಕುರಿತು ಮಾತನಾಡಿದ ರಾಷ್ಟ್ರಪತಿಯವರು, 2021-22ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕವು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಒಟ್ಟು ವಿದೇಶಿ ನೇರ ಹೂಡಿಕೆಯ ಶೇಕಡಾ 53 ರಷ್ಟು ಬಂಡವಾಳವನ್ನು ಆಕರ್ಷಿಸಿದೆ ಎಂದು ಹೇಳಿದರು. ಬೆಂಗಳೂರನ್ನು ಭಾರತದ ಅಗ್ರ ನವೋದ್ಯಮ ಕೇಂದ್ರವೆಂದು ಪರಿಗಣಿಸಲಾಗಿದೆ. ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿಗಳು – ಭಾರತ ಸೂಚ್ಯಂಕ 2020-21 ರ ಪ್ರಕಾರ, ನಾವೀನ್ಯ ಸೂಚ್ಯಂಕದಲ್ಲಿ ಕರ್ನಾಟಕವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಕರ್ನಾಟಕ ಶೇ 100 ದಾಖಲಾತಿ ಗುರಿಯನ್ನು ಸಾಧಿಸಿದೆ. ಕರ್ನಾಟಕವು ‘ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ’ ಅಡಿಯಲ್ಲಿ 100 ಪ್ರತಿಶತ ಸಂಪರ್ಕದ ಗುರಿಯನ್ನು ಸಾಧಿಸಿದೆ ಎಂದು ಅವರು ಹೇಳಿದರು. ಇಂತಹ ಹಲವಾರು ಸಾಧನೆಗಳಿಂದ ಭಾರತ ಹೆಮ್ಮೆಪಡುವಂತೆ ಮಾಡಿರುವ ಕರ್ನಾಟಕ ಸರ್ಕಾರ ಮತ್ತು ಜನತೆಯ ಬಗ್ಗೆ ರಾಷ್ಟ್ರಪತಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ‘ಪೌರ ಸನ್ಮಾನ’ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, ನಗರದ ಎಲ್ಲ ನಿವಾಸಿಗಳಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ತಮ್ಮನ್ನು ಸನ್ಮಾನಿಸುವ ಮೂಲಕ ನೀವು ಭಾರತದ ರಾಷ್ಟ್ರಪತಿಯನ್ನು ಮಾತ್ರವಲ್ಲ, ಭಾರತದ ಎಲ್ಲ ಹೆಣ್ಣುಮಕ್ಕಳನ್ನು ಅಭಿನಂದಿಸಿದ್ದೀರಿ ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ಭಾರತದ ಭವ್ಯ ಇತಿಹಾಸದ ಭಾಗವಾಗಿದ್ದು, ಭಾರತದ ಸಾಂಸ್ಕೃತಿಕ ಭೂಪಟದಲ್ಲಿ ಅವುಗಳು ಗಮನಾರ್ಹ ಸ್ಥಾನ ಪಡೆದಿವೆ ಎಂದು ರಾಷ್ಟ್ರಪತಿಯವರು ಹೇಳಿದರು. ಉತ್ತರ ಕರ್ನಾಟಕ ಪ್ರದೇಶವು ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು, ವಿಜ್ಞಾನ, ಕಲೆ ಮತ್ತು ತಂತ್ರಜ್ಞಾನದ ಅನೇಕ ಹೆಸರಾಂತ ಶಿಕ್ಷಣ ಕೇಂದ್ರಗಳನ್ನು ಹೊಂದಿದೆ. ಬಹುಶಃ ಆ ಕಾರಣಕ್ಕಾಗಿಯೇ ಈ ಪ್ರದೇಶವನ್ನು ‘ವಿದ್ಯಾ-ಕಾಶಿ’ ಎಂದು ಕರೆಯಲಾಗುತ್ತದೆ ಎಂದು ಅವರು ಹೇಳಿದರು.
ನಂತರ ರಾಷ್ಟ್ರಪತಿಯವರು, ಧಾರವಾಡದಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯ ಹೊಸ ಕ್ಯಾಂಪಸ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಯವರು, ಧಾರವಾಡದ ಐಐಐಟಿಯು ಶಿಕ್ಷಣದ ಮೂಲಕ ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪುಗೊಳಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದರು. ಈ ಸಂಸ್ಥೆಯು ‘ರಾಷ್ಟ್ರೀಯ ಪ್ರಾಮುಖ್ಯದ ಸಂಸ್ಥೆ’ ವಿಭಾಗದಲ್ಲಿದೆ ಎಂಬುದನ್ನು ಗಮನಿಸಿದ ಅವರು. ಇದಕ್ಕಾಗಿ ಶ್ರಮಿಸಿದ ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಮತ್ತು ಇತರ ಭಾಗೀದಾರರ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ಐಐಐಟಿ ಧಾರವಾಡದ ಅಡಿಬರಹ “ಜ್ಞಾನ ವಿಕಾಸ” ಅಂದರೆ ಜ್ಞಾನದಿಂದ ಅಭಿವೃದ್ಧಿ ಮತ್ತು ಪ್ರಗತಿ ಸಾಧಿಸಬಹುದು ಎಂಬುದಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ಅಭಿವೃದ್ಧಿಯ ಗುರಿಯನ್ನು ಸಾಧಿಸಲು, ಈ ಸಂಪನ್ಮೂಲದ ಅವಿಭಾಜ್ಯ ಅಂಗವಾಗಿರುವ ನಮ್ಮ ಯುವಜನರು ಹೊಸ ವ್ಯವಸ್ಥೆಯ ತಾಂತ್ರಿಕ ಶಿಕ್ಷಣದಲ್ಲಿ ನೈಪುಣ್ಯವನ್ನು ಪಡೆಯುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಐಐಐಟಿ ಧಾರವಾಡದ ಪಠ್ಯಕ್ರಮವು ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಡೇಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಂತಹ ವಿಷಯಗಳನ್ನು ಹೊಂದಿದೆ ಎಂದು ಹೇಳಿದ ಅವರು, ಈ ಎಲ್ಲಾ ವಿಷಯಗಳು ನವ ಭಾರತ ನಿರ್ಮಾಣಕ್ಕೆ ಗಣನೀಯ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿವೆ ಎಂದರು.
ಜಗತ್ತು ವೇಗವಾಗಿ ಬದಲಾಗುತ್ತಿದೆ ಎಂದ ರಾಷ್ಟ್ರಪತಿಯವರು, ಡಿಜಿಟಲ್ ಇಂಡಿಯಾ ಮಿಷನ್ ಮೂಲಕ ನಮ್ಮ ದೇಶವೂ ಡಿಜಿಟಲ್ ಕ್ರಾಂತಿಯನ್ನು ಕಾಣುತ್ತಿದೆ. ಆದರೆ ಈ ಕ್ರಾಂತಿಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು, ನಾವು ನಮ್ಮ ಸಂಶೋಧನೆ ಮತ್ತು ನಾವೀನ್ಯ ಶೋಧವನ್ನು ಇನ್ನಷ್ಟು ಉತ್ತೇಜಿಸಬೇಕಾಗಿದೆ ಎಂದು ಹೇಳಿದರು. ಇಂದಿನ ಜಗತ್ತು ಮೆಟಾವರ್ಸ್‌ಗೆ ಸೇರಿದೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ವರ್ಧಿತ ವಾಸ್ತವತೆಯ ಬಲದ ಮೇಲೆ, ನಾವು ಅನೇಕ ಉಪಯುಕ್ತ ಬದಲಾವಣೆಗಳನ್ನು ಮಾಡಬಹುದು. ಜಗತ್ತು ಈಗ ನಾಲ್ಕನೇ ಕೈಗಾರಿಕಾ ಕ್ರಾಂತಿಯತ್ತ ಸಾಗುತ್ತಿದೆ, ಇದು ಆದಾಯ ಮಟ್ಟವನ್ನು ಹೆಚ್ಚಿಸುವ ಮತ್ತು ಜಗತ್ತಿನ ಜನಸಮುದಾಯದ ಜೀವನದ ಗುಣಮಟ್ಟವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ, ಈ ಕ್ರಾಂತಿಯಲ್ಲಿ ಕೊಡುಗೆ ನೀಡುವ ಮೂಲಕ ವಿಶ್ವ ವೇದಿಕೆಯಲ್ಲಿ ಭಾರತವು ಪ್ರಮುಖ ಸ್ಥಾನವನ್ನು ಪಡೆಯಲು ನಾವು ಅವಿರತ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದರು.