IMG 20230220 WA0153

JD(S) :ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ದಿಟ್ಟ ಉತ್ತರ ನೀಡಿ….!

POLATICAL STATE

ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ದಿಟ್ಟ ಉತ್ತರ ನೀಡಿ; ಕಾರ್ಯಕರ್ತರಿಗೆ ಧೈರ್ಯ ತುಂಬಿದ ಹೆಚ್.ಡಿ.ಕುಮಾರಸ್ವಾಮಿ

ಬೂತ್ ಮಟ್ಟದಲ್ಲಿ ಜೆಡಿಎಸ್ ಸಂಘಟನೆ; ಕಾರ್ಯಕರ್ತರ ಜತೆ ಮಾಜಿ ಸಿಎಂ ಮಾತು ಮಂಥನ

ಬೆಂಗಳೂರು: ಜೆಡಿಎಸ್ ಸಂಘಟನೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಗೆ ಭರದಿಂದ ಸಿದ್ಧತೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇಂದು ಬೆಂಗಳೂರಿನಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರ ಜತೆ ನೇರವಾಗಿ ಫೋನ್ ಕರೆಯಲ್ಲಿ ಮಾತನಾಡಿದರು.

ಇಂದು ಬೆಳಗ್ಗೆ 11ರಿಂದ 12 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ಕಾರ್ಯಕರ್ತರ ಜತೆ ಕಾನ್ಫರೆನ್ಸ್ ಕಾಲ್ ಮೂಲಕ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ವಚನ ನೀಡಿದ ಮಾಜಿ ಮುಖ್ಯಮಂತ್ರಿ ಅವರು, ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಎದೆಗುಂದಬೇಡಿ. ಯಾವುದೇ ಕ್ಷಣದಲ್ಲಿ ನಿಮಗೆ ತೊಂದರೆ ಆದರೆ, ನನ್ನನ್ನು ಕೂಡಲೇ ಸಂಪರ್ಕಿಸಿ. ನಿಮ್ಮ ನೆರವಿಗೆ ಧಾವಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಅವರ ಬಳಿ ಅಳಲು ತೋಡಿಕೊಂಡ ಅನೇಕ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರ ದೌರ್ಜನ್ಯ ಮೇರೆ ಮೀರಿದ್ದು, ಸುಳ್ಳು ಕೇಸುಗಳನ್ನು ತಮ್ಮ ಮೇಲೆ ಹಾಕಿ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು.

ಇದಕ್ಕೆ ಉತ್ತರ ನೀಡಿದ ಕುಮಾರಸ್ವಾಮಿ ಅವರು, ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆ ಇಲ್ಲ. ನಮ್ಮ ಕಾರ್ಯಕರ್ತರು ಇಂಥ ಬೆದರಿಕೆ, ಒತ್ತಡ ತಂತ್ರಗಳಿಗೆ ಅಂಜಬಾರದು. ಇಂಥ ಬೆದರಿಕೆಗಳಿಗೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಕುಮಾರಸ್ವಾಮಿ ಅವರು ಕಾರ್ಯಕರ್ತರಿಗೆ ಭರವಸೆ ನೀಡಿದರು.

IMG 20230220 WA0152

ಕಾರ್ಯಕರ್ತರಿಗೆ ಪಕ್ಷದ ಸದ್ಯದ ಚಟುವಟಿಕೆಗಳು, ಆಗುಹೋಗಗಳ ಬಗ್ಗೆ ಹಾಗೂ ಪಂಚರತ್ನ ಯೋಜನೆಗಳು, ಪಂಚರತ್ನ ರಥಯಾತ್ರೆ ಬಗ್ಗೆ ಕಾರ್ಯಕರ್ತರಿಗೆ ಮಾಹಿತಿ ನೀಡಿದ ಮಾಜಿ ಸಿಎಂ, ಎರಡು ಲಕ್ಷ ಮೂವತ್ತೈದು ಲಕ್ಷ ಕುಟುಂಬಗಳಿಗೆ ಸಾಲ ಮನ್ನಾ ಆಗಿಲ್ಲ, ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ ಹಣ ಬಿಜೆಪಿ ಸರಕಾರ ಕೊಟ್ಟಿಲ್ಲ. ಬೂತ್ ಮಟ್ಟದಲ್ಲಿ ಪ್ರತಿ ಮನೆಗೆ ಹೋಗಿ
ಯಾರಿಗೆ ಸಾಲ ಮನ್ನಾ ಆಗಿದೆ, ಯಾರಿಗೆ ಆಗಿಲ್ಲ ಎಂಬ ಮಾಹಿತಿ ಪಡೆಯಿರಿ, ಸಾಲ ಮನ್ನಾ ಆಗದಿರುವ ಕುಟುಂಬಗಳಿಗೆ ಸಾಲ ಮನ್ನಾ ಆಗುತ್ತದೆ ಎಂದು ಭರವಸೆ ನೀಡಿ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಉಳಿದವರ ಸಾಲ ಮನ್ನಾ ಮಾಡುತ್ತೇನೆ, ಈ ಬಗ್ಗೆ ಭರವಸೆ ಮೂಡಿಸಿ ಎಂದು ಕಾರ್ಯಕರ್ತ ಸಮೂಹಕ್ಕೆ ಮಾಜಿ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಪಕ್ಷಕ್ಕೆ ಕಾರ್ಯಕರ್ತರೇ ಆಧಾರ ಸ್ತಂಭ. ಮತಗಟ್ಟೆ ಪ್ರದೇಶದಲ್ಲಿ ನಮ್ಮ ಪಕ್ಷವನ್ನು ಕಾರ್ಯಕರ್ತರೇ ತೇರ್ಗಡೆ ಮಾಡಬೇಕು. ಕಾರ್ಯಕರ್ತರು ಇಲ್ಲದೆ ಪಕ್ಷ ನಡೆಯಲು ಸಾಧ್ಯ ಇಲ್ಲ. ನಾಯಕರು, ಜನರ ನಡುವಿನ ಅಂತರವನ್ನು ಕಡಿಮೆ ಮಾಡುವುದರ ಜತೆಗೆ ಪಕ್ಷವನ್ನು ಬೇರು ಮಟ್ಟದಲ್ಲಿಯೇ ಬೆಳೆಸುವ ಕೆಲಸವನ್ನು ಕಾರ್ಯಕರ್ತರು ಸಮರ್ಥವಾಗಿ ಮಾಡಬೇಕು.ಅದಕ್ಕೆ ಬೇಕಾದ ಎಲ್ಲ ಪ್ರಯತ್ನ ಮಾಡಿ, ನಿಮಗೆ ನನ್ನ ಮಾರ್ಗದರ್ಶನ ಇರುತ್ತದೆ ಎಂದು ಅವರು ಹೇಳಿದರು.

ಮತಗಟ್ಟೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಪಕ್ಷಗಳ ಅಬ್ಬರ ಆಮಿಷ ಜಾಸ್ತಿ ಇದೆ, ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದ ಕಾರ್ಯಕರ್ತ ಧರಣೀಶ್ ಅವರ ದೂರಿಗೆ ಉತ್ತರಿಸಿದ ಅವರು; ಮಾಡದೆ ಇರುವ ಕೆಲಸವನ್ನು ಮಾಡಿದ್ದೇವೆ ಎಂದು ಹೇಳಿದರೆ ಜನರು ನಂಬುವುದಿಲ್ಲ. ನಮ್ಮ ಪಕ್ಷದ ಕಟ್ಟಾಳುಗಳಾದ ನೀವು ಜನರಿಗೆ ಸತ್ಯ ಸಂಗತಿ ತಿಳಿಸಿ. ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿಯಾಗಿ ರಾಜ್ಯಕ್ಕೆ ನೀಡಿದ ಕೊಡುಗೆಗಳು ಹಾಗೂ ನಾನು ಮುಖ್ಯಮಂತ್ರಿಯಾಗಿ ಎರಡು ಅವಧಿಗಳಲ್ಲಿ ಮಾಡಿದ ಕೆಲಸಗಳ ಬಗ್ಗೆ ಜನರಿಗೆ ವಿವರವಾಗಿ ತಿಳಿಸಿ ಎಂದು ಕುಮಾರಸ್ವಾಮಿ ಅವರು ನಿರ್ದೇಶನ ನೀಡಿದರು.

ಯಾವ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು, ಇತರೆ ಪಕ್ಷಗಳು ನಡೆಸುತ್ತಿರುವ ಅಬ್ಬರದ ಪೊಳ್ಳು ಪ್ರಚಾರಕ್ಕೆ ಸಡ್ಡು ಹೊಡೆಯಲು ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ವಿಜಯಪುರ ಜಿಲ್ಲೆಯ ಶಾಂತೇಶ್ ಹೂಗಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು; ಪಂಚರತ್ನ ಯೋಜನೆಗಳ ಬಗ್ಗೆ ತಿಳಿಸಿ, ಉಚಿತ ಶಿಕ್ಷಣ, ಉಚಿತ ಆರೋಗ್ಯ, ಉಚಿತ ಮನೆ, ಕೃಷಿಗೆ ಉಚಿತ ವಿದ್ಯುತ್ 65 ವರ್ಷ ಮೀರಿದವರಿಗೆ ಮಾಸಿಕ 5000 ರೂ. ವೃದ್ದಾಪ್ಯ ವೇತನ, ವಿಕಲಚೇತನರು, ಅಶಕ್ತರು, ವಿಧವೆಯರಿಗೆ ಮಾಸಿಕ 2500 ರೂಪಾಯಿ ವಿಧವಾ ವೇತನ ಇತ್ಯಾದಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಎಂದು ಕುಮಾರಸ್ವಾಮಿ ಅವರು ಸೂಚನೆ ನೀಡಿದರು.

2023ಕ್ಕೆ ಜೆಡಿಎಸ್ ಸರಕಾರ ಬಂದರೆ, ಕಾರ್ಯಕರ್ತರಿಗೆ ಹೆಚ್ಚಿನ ಶಕ್ತಿ ತುಂಬಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಅಖಿಲ್ ರೆಡ್ಡಿ ನೀಡಿದ ಸಲಹೆಗೆ ಒಮ್ಮತ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿಗಳು, ಕಾರ್ಯಕರ್ತರಿಗೆ ಹೆಚ್ಚು ಮಹತ್ವ ನೀಡುತ್ತೇನೆ, ಪಂಚಾಯಿತಿ ಮಟ್ಟದಲ್ಲಿ ಐವರು ಕಾರ್ಯಕರ್ತರ ನೇತೃತ್ವದಲ್ಲಿ ಪಂಚರತ್ನ ಯೋಜನೆಗಳ ಜಾರಿಗೆ ಒಂದು ತಂಡ ಮಾಡುತ್ತೇನೆ, ಪಂಚರತ್ನಗಳ ಜಾರಿಗೆ ಅವರದೇ ಉಸ್ತುವಾರಿ ಇರುತ್ತದೆ. ಅಲ್ಲದೆಜ್ ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಗೆ ಪೂರ್ಣ ರಕ್ಷಣೆ ನೀಡುವುದು ನನ್ನ ಜವಾಬ್ದಾರಿ ಎಂದು ತಿಳಿಸಿದರು ಮಾಜಿ ಮುಖ್ಯಮಂತ್ರಿಗಳು.

IMG 20230220 WA0151

ಪ್ರತಿ ತಿಂಗಳು ಸಂವಾದ:

ಪಕ್ಷದ ಬಲವರ್ಧನೆಗೆ ಹಾಗೂ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಪ್ರತೀ ತಿಂಗಳು ಕಾರ್ಯಕರ್ತರಿಗೆ ಸಾಮೂಹಿಕ ಕರೆ ಮಾಡಿ ಮಾತನಾಡುತ್ತೇನೆ. ಸಮಸ್ಯೆ, ಸಲಹೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಕರೆ ನೀಡಿದರು.

ನಾಳೆಯಿಂದ ಪಂಚರತ್ನ ರಥಯಾತ್ರೆ ಪುನಾರಂಭ: ಭದ್ರಾವತಿಯಿಂದ 9 ಕ್ಷೇತ್ರಗಳಲ್ಲಿ ರಥಯಾತ್ರೆ

ಬೆಂಗಳೂರು: ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಪಂಚರತ್ನ ರಥಯಾತ್ರೆಗೆ ಬ್ರೇಕ್ ತೆಗೆದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಮಂಗಳವಾರದಿಂದ (ಫೆ.21) ರಥಯಾತ್ರೆಯನ್ನು ಮರು ಆರಂಭ ಮಾಡುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದಿಂದ ರಥಯಾತ್ರೆ ಶುರುವಾಗಿದ್ದು, 22ರಂದು ಶಿವಮೊಗ್ಗ ಗ್ರಾಮಾಂತರ, 23ರಂದು ಶಿವಮೊಗ್ಗ ಗ್ರಾಮಾಂತರ ಹಾಗೂ ಸೊರಬ, 24ರಂದು ಯಲ್ಲಾಪುರ ಮತ್ತು ತೀರ್ಥಹಳ್ಳಿ, 25ರಂದು ತೀರ್ಥಹಳ್ಳಿ ಹಾಗೂ ಕೊಪ್ಪ, 26ರಂದು ಶೃಂಗೇರಿ, ಕೊಪ್ಪ, 28ಕ್ಕೆ ಚಿಕ್ಕಮಗಳೂರು ಹಾಗೂ ಮಾರ್ಚ್ 1ರಂದು ಮೂಡಿಗೆರೆ ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ.

ಈ ತಿಂಗಳ 27ರಂದು ಪಕ್ಷದ ಬೃಹತ್ ಸಮಾವೇಶ ಇದ್ದು, ಅಂದು ಪಂಚರತ್ನ ರಥಯಾತ್ರೆಗೆ ಬಿಡುವು ಕೊಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.