IMG 20220716 WA0021

BJP:ಹಳೆ ಮೈಸೂರು, ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್, ಜೆಡಿ(ಎಸ್) ಪಕ್ಷದ ಹಲವು ಶಾಸಕರು ಬಿಜೆಪಿಗೆ…!

POLATICAL STATE


ಹಳೆ ಮೈಸೂರು, ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್, ಜೆಡಿಎಸ್
ಪಕ್ಷಗಳ ಹಲವು ಶಾಸಕರು ಬಿಜೆಪಿಗೆ- ಮಹೇಶ್ ಟೆಂಗಿನಕಾಯಿ
ಬೆಂಗಳೂರು: ಹಳೆ ಮೈಸೂರು ಹಾಗೂ ಕಲ್ಯಾಣ ಕರ್ನಾಟಕದ ಅನೇಕ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು, ನಾಯಕರು ಮತ್ತು ಹಿರಿಯರು ಈಗಾಗಲೇ ನಮ್ಮ ಹಿರಿಯರ ಸಂಪರ್ಕದಲ್ಲಿದ್ದಾರೆ. ಅವರನ್ನು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೆ ಮೈಸೂರು ಹಾಗೂ ಕಲ್ಯಾಣ ಕರ್ನಾಟಕದ ಭಾಗವನ್ನು ಆರು ವಲಯಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ, ಹಳೆ ಮೈಸೂರು ಮತ್ತು ಬೆಂಗಳೂರು ವಲಯ ಎಂದು ವಿಂಗಡಿಸಲಾಗಿದೆ. ಹಳೆ ಮೈಸೂರು ಹಾಗೂ ಕಲ್ಯಾಣ ಕರ್ನಾಟಕದತ್ತ ವಿಶೇಷವಾಗಿ ಗಮನ ಹರಿಸುವ ಮೂಲಕ ಭಾರತೀಯ ಜನತಾ ಪಾರ್ಟಿಯ ಶಕ್ತಿಯನ್ನು ವೃದ್ಧಿಸುವ ಕೆಲಸವನ್ನು ಮಾಡಲು ನಿರ್ಧರಿಸಲಾಗಿದೆ ಎಂದರು.
ಕಲ್ಯಾಣ ಕರ್ನಾಟಕದ ಒಟ್ಟು 41 ಶಾಸಕರ ಪೈಕಿ 15 ಬಿಜೆಪಿ ಶಾಸಕರಿದ್ದಾರೆ. ಇದನ್ನು ದ್ವಿಗುಣಗೊಳಿಸುವ ಕಡೆ ಕಾರ್ಯತಂತ್ರ ರೂಪಿಸಲಾಗುವುದು. ಹಳೆ ಮೈಸೂರು ಭಾಗದಲ್ಲಿ 51ರ ಪೈಕಿ 9 ಸ್ಥಾನಗಳನ್ನು 2018ರಲ್ಲಿ ಬಿಜೆಪಿ ಗೆದ್ದಿತ್ತು. ಆ ಭಾಗದಲ್ಲೂ ವಿಶೇóಷ ಗಮನ ಕೊಡಬೇಕು. ಈ ಎರಡು ವಲಯಗಳಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಪಕ್ಷವು ಮಿಷನ್ 150 ತಲುಪಬೇಕು ಎಂದು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

IMG 20220716 WA0022


ಮುಂಬರುವ 2023ರ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಮಿಷನ್ 150 ಬಗ್ಗೆ ಚಿಂತನ ಸಭೆಯು ನಿನ್ನೆ ನಡೆದಿದ್ದು, ಮುಂದಿನ ಕಾರ್ಯಯೋಜನೆ ಕುರಿತು ಚರ್ಚಿಸಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಡಿ.ವಿ. ಸದಾನಂದ ಗೌಡ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದÀರ್ಶಿ ಸಿ.ಟಿ. ರವಿ, ರಾಜ್ಯ ಸಹ ಪ್ರಭಾರಿ ಶ್ರೀಮತಿ ಡಿ.ಕೆ.ಅರುಣಾ ಹಾಗೂ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಸಭೆ ನಡೆದಿದೆ ಎಂದು ತಿಳಿಸಿದರು.

50 ಜನ ಪ್ರಮುಖರು ಸಭೆಗೆ ಆಹ್ವಾನಿತರಾಗಿದ್ದರು. ರಾಜ್ಯ ಸರಕಾರವು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ 1 ವರ್ಷ ಪೂರೈಸುವ ಸಂದರ್ಭದಲ್ಲಿ ಇದೇ 28ರಂದು ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಫಲಾನುಭವಿಗಳನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಅದೇ ರೀತಿ ಪ್ರತಿ ತಿಂಗಳು ಎರಡು ಸಮಾವೇಶಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸುವ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮನ ಹಾಗೂ ಮನೆಗಳನ್ನು ಮುಟ್ಟಿಸುವ ಕೆಲಸ ಮಾಡಲಿದ್ದೇವೆ. ಇದರಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಗಳಿಗೆ ಕೇಂದ್ರದ ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿದಂತೆ ಅನೇಕ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ರಾಜ್ಯದ ಆಯ್ದ 50 ವಿಧಾನಸಭಾ ಕ್ಷೇತ್ರಗಳಲ್ಲಿ ರ್ಯಾಲಿ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸವನ್ನು ನೆರವೇರಿಸುವರು. ಫಲಾನುಭವಿಗಳ ಸಭೆ ನಡೆಸಲಾಗುವುದು. ಈಗಾಗಲೇ ರಾಜ್ಯದಲ್ಲಿ ಮೂರು ತಂಡಗಳಲ್ಲಿ ಪ್ರವಾಸವನ್ನು ಮಾಡಿ 10 ವಿಭಾಗಗಳ ಅಧ್ಯಯನ ನಡೆಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ನೇತೃತ್ವದಲ್ಲಿ ಒಂದು ದಿನಕ್ಕೆ ಒಂದು ಜಿಲ್ಲೆ ನಮ್ಮ ಸಂಘಟನಾತ್ಮಕ 39 ಜಿಲ್ಲಾ ಕೇಂದ್ರಗಳಿಗೆ ಪ್ರವಾಸ ಮಾಡುವರು. ಅದರಲ್ಲಿ ಬೂತ್ ಪ್ರಮುಖರ ಸಮಾವೇಶ, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರದ ಸಮಾವೇಶ ನಡೆಸಲಿದ್ದೇವೆ ಎಂದು ವಿವರಿಸಿದರು.

ಪಕ್ಷದ 7 ಮೋರ್ಚಾಗಳ ಬೃಹತ್ ಸಮಾವೇಶವನ್ನು ರಾಜ್ಯದ ಬೇರೆ ಬೇರೆ ಭಾಗದಲ್ಲಿ ನಡೆಸಲಾಗುವುದು. ಬೂತ್ ಸಶಕ್ತಿಕರಣ ಅಭಿಯಾನ ಈಗಾಗಲೇ ನಡೆದಿರುತ್ತದೆ ಎಂದರು.
ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಆಗಸ್ಟ್ 9ರಿಂದ 15 ತನಕ “ಹರ್ ಘರ್ ತಿರಂಗಾ” ಕಾರ್ಯಕ್ರಮವನ್ನು ರಾಜ್ಯದ 312 ಮಂಡಲಗಳಲ್ಲಿ ನಡೆಸಲು ತೀರ್ಮಾನಿಸಿದ್ದು, ಕರ್ನಾಟಕದ ಲಕ್ಷಾಂತರ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವುದು ಹಾಗೂ ವಿಶೇಷವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಗಸ್ಟ್ 1-15 ತನಕ 224 ವಿಧಾನಸಭಾ ಕ್ಷೇತ್ರಗಳಲ್ಲಿ 75 ಕಿಮೀ ಬೈಕ್ ರ್ಯಾಲಿಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪಿಎಸ್‍ಐ ನೇಮಕಾತಿ ಹಗರಣದ ತನಿಖೆ ಚುರುಕಾಗಿ ನಡೆಯುತ್ತಿದೆ. ಇದರಲ್ಲಿ ಸರಕಾರ ಮಧ್ಯಪ್ರವೇಶ ಮಾಡುತ್ತಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ನಿಗಮ, ಮಂಡಳಿ ನೇಮಕಾತಿ ಕುರಿತು ಚರ್ಚೆ ಆಗಿಲ್ಲ ಎಂದು ಅವರು ಉತ್ತರಿಸಿದರು.

ರಾಜ್ಯದ ಬಿಜೆಪಿ ಸರಕಾರವು ಭ್ರಷ್ಟಾಚಾರದ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ (ಜೀರೊ ಟಾಲರೆನ್ಸ್) ಹೊಂದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಸ್ಪಷ್ಟಪಡಿಸಿದರು.

ಭಾರತ್ ಜೋಡೋ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಎನ್. ರವಿಕುಮಾರ್ ಅವರು, ಇದು ಕಾಂಗ್ರೆಸ್‍ನವರ ಬಾಯಿಯಲ್ಲಿ ಭಗವದ್ಗೀತೆಯಂತಿದೆ. ಇಷ್ಟು ದಿನ ಭಾರತ್ ಥೋಡೊ ಅಭಿಯಾನ ಮಾಡಿದ್ದರು ಎಂದು ಟೀಕಿಸಿದರು. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವುದು, ಜಾತಿ ಜಾತಿಗಳನ್ನು ಒಡೆಯುವುದು, ಭಯೋತ್ಪಾದನೆ ಬೆಳೆಸುವ ಮೂಲಕ ಭಾರತ ವಿಭಜನೆ ಕಾರ್ಯ ನಡೆದಿತ್ತು ಎಂದು ಆಕ್ಷೇಪಿಸಿದರು.

ಬಾಗಲಕೋಟೆ ಜಿಲ್ಲೆಯ ಕೆರೂರಿನ ಖಾಸಗಿ ಆಸ್ಪತ್ರೆಗೆ ಕಾಂಗ್ರೆಸ್‍ನ ಸಿದ್ದರಾಮಯ್ಯನವರು ನಿನ್ನೆ ಭೇಟಿ ಕೊಟ್ಟಿದ್ದಾಗ ಮುಸ್ಲಿಂ ಮಹಿಳೆಯೊಬ್ಬರಿಗೆ 2 ಲಕ್ಷ ನೀಡಿದ್ದು, ಮಹಿಳೆ ಅದನ್ನು ಸಿದ್ದರಾಮಯ್ಯರ ವಾಪಸ್ ಎಸೆದಿದ್ದಾರೆ. ಹಿಂದೂ ಕುಟುಂಬಕ್ಕೆ 50 ಸಾವಿರ ನೀಡಿದ್ದಾರೆ. ಹಿಂದೂ ಕುಟುಂಬಕ್ಕೆ 50 ಸಾವಿರ, ಮುಸ್ಲಿಂ ಕುಟುಂಬಕ್ಕೆ 2 ಲಕ್ಷ ಕೊಡುವುದೇಕೆ? ಇದು ಕಾಂಗ್ರೆಸ್ ಧೋರಣೆಯೇ? ಎಂದು ಪ್ರಶ್ನಿಸಿದರು.
ಈ ರೀತಿ ಸಮಾಜವನ್ನು ನೋಡುವ ದೃಷ್ಟಿಕೋನ ಕಾಂಗ್ರೆಸ್‍ನದು ಎಂದರಲ್ಲದೆ, ಕಾಂಗ್ರೆಸ್‍ನ ಈ ಧೋರಣೆಯನ್ನು ಖಂಡಿಸುತ್ತೇನೆ. ಕೂಡಲೇ ಸಿದ್ದರಾಮಯ್ಯ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಡಾ|| ಸಂದೀಪ್ ಕುಮಾರ್ ಕೆ.ಸಿ. ಅವರು ಉಪಸ್ಥಿತರಿದ್ದರು.